ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನಾ ಅಂಕಣ: ಗರ್ಭಧಾರಣೆಗೆ ಪಿಸಿಒಡಿ ಸಮಸ್ಯೆ ತೊಡಕಾಗಬಹುದೇ?

ಡಾ. ವೀಣಾ ಎಸ್ ಭಟ್ ಅವರ ಅಂಕಣ
Published 15 ಮಾರ್ಚ್ 2024, 23:57 IST
Last Updated 15 ಮಾರ್ಚ್ 2024, 23:57 IST
ಅಕ್ಷರ ಗಾತ್ರ

ನನ್ನ ಹೆಂಡತಿಗೆ ಪಿಸಿಒಡಿ ಸಮಸ್ಯೆ ಇದೆ. ಗರ್ಭದಲ್ಲಿ ಚಿಕ್ಕ ಚಿಕ್ಕ ನೀರು ಗುಳ್ಳೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಗರ್ಭಧಾರಣೆಗೆ ತೊಂದರೆಯಾಗುತ್ತದೆಯೇ ?

-ಹೆಸರು, ಊರು ತಿಳಿಸಿಲ್ಲ

ಪಿಸಿಒಡಿ ಆಧುನಿಕ ಜಗತ್ತಿನ ಜೀವನಶೈಲಿಗೆ ಸಂಬಂಧಿಸಿದ ಅತಿಸಾಮಾನ್ಯ ಸಮಸ್ಯೆ. ಆನುವಂಶೀಯ, ಜೀವನಶೈಲಿ, ಆಹಾರಪದ್ಧತಿ ಎಲ್ಲ ಕಾರಣಗಳಿಂದಲೂ ಈ ಸಮಸ್ಯೆ ಉಂಟಾಗಬಹುದು.  ನೂರರಲ್ಲಿ 20 ರಿಂದ 30 ಜನ ಮಹಿಳೆಯರನ್ನು ಈ ಸಮಸ್ಯೆ ಬಾಧಿಸುತ್ತದೆ.  ಪ್ರತಿ ಹೆಣ್ಣಿಗೂ ಸಂತಾನೋತ್ಪತ್ತಿ ವಯಸ್ಸಿನಲ್ಲಿ ಅಂಡಾಶಯದಿಂದ ಪ್ರತಿ ತಿಂಗಳು ಪ್ರಬಲಕೋಶಿಕೆಯೊಂದು ಬೆಳವಣಿಗೆಯಾಗಿ ಅಂಡಾಣು ಬಿಡುಗಡೆಯಾಗುತ್ತದೆ. ಆದರೆ, ಪಿಸಿಒಡಿ ಇರುವವರಲ್ಲಿ ಈಸ್ಟ್ರೋಜನ್‌ ಮತ್ತು ಆ್ಯಂಡ್ರೋಜನ್‌ ಹಾರ್ಮೋನ್‌ಗಳ ಹೆಚ್ಚಳದಿಂದಾಗಿ ಹಾರ್ಮೋನ್ ಬಿಡುಗಡೆಯಲ್ಲಿ ಅಸಮತೋಲನ ಉಂಟಾಗುತ್ತದೆ.  ಅಂಡಾಶಯದಿಂದ ಪ್ರತಿ ತಿಂಗಳು ನಿಗದಿತ ಅವಧಿಯಲ್ಲಿ ಅಂಡಾಣು ಬಿಡುಗಡೆಯಾಗುವ ಪ್ರಕ್ರಿಯೆ ಆಗುವುದೇ ಇಲ್ಲ ಹೀಗೆ ಅಂಡೋತ್ಪತ್ತಿಯಾಗದೇ, ಉಳಿದ ಅಪಕ್ವ ಕೋಶಿಕೆಗಳು (ಫಾಲಿಕಲ್ಸ್) ಅಂಡಾಶಯದ ತೊಗಟೆಯಲ್ಲಿ ಸ್ಕ್ಯಾನಿಂಗ್‌ನಲ್ಲಿ ಮುತ್ತು ಜೋಡಿಸಿದಂತೆ ಗೋಚರಿಸುತ್ತವೆ.

ಇದೇ ಪಿಸಿಒಡಿ ಸಮಸ್ಯೆ  ಕೇವಲ ಮೇಲ್ನೋಟಕ್ಕೆ ಗೋಚರಿಸುವ ಹಾಗೆ ಕೇವಲ ಅಂಡಾಶಯಕ್ಕಷ್ಟೇ ಸೀಮಿತವಾಗಿದ್ದರೆ ಅದನ್ನು ಪಿಸಿಒ ಅಥವಾ ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ ಎನ್ನುತ್ತೇವೆ.
ಇದು ಹದಿ ವಯಸ್ಸಿನಲ್ಲಿಯೇ ಆರಂಭವಾಗಿ, ಮುಟ್ಟು ನಿಲ್ಲುವವರೆಗೂ ಮುಂದುವರಿಯಬಹುದು. ಹದಿವಯಸ್ಸಿನಲ್ಲಿ ಋತುಚಕ್ರದ ಏರುಪೇರು, ಹೆಚ್ಚುವ ಮೊಡವೆಗಳು, ಅತಿಯಾದ ರಕ್ತಸ್ರಾವ, ಅನಗತ್ಯ ಜಾಗಗಳಲ್ಲಿ ಕೂದಲ ಬೆಳವಣಿಗೆ  ಉಂಟು ಮಾಡಬಹುದು.

ಸಂತಾನೋತ್ಪತ್ತಿ ವಯಸ್ಸಿನಲ್ಲಿ ಪಿಸಿಒಡಿ ಇಂದ ಬಂಜೆತನ (ಮಕ್ಕಳಾಗದೇ ಇರುವುದು). ಅಕಸ್ಮಾತ್ ಒಮ್ಮೆ ಕಷ್ಟಪಟ್ಟು ಗರ್ಭ ನಿಂತರೂ ಗರ್ಭಪಾತವಾಗುವುದು, ಇನ್ನಿತರ ಸಮಸ್ಯೆಗಳನ್ನು ಉಂಟುಮಾಡಬಹುದು.  ಮಧುಮೇಹ, ಹೃದ್ರೋಗ, ಗರ್ಭಾಶಯದ ಕ್ಯಾನ್ಸರ್, ನಿದ್ರೆಯಲ್ಲಿ ಉಸಿರಾಟದ ತೊಂದರೆ, ಬೊಜ್ಜು ಹೀಗೆ ಹಲವಾರು ದೀರ್ಘಾವಧಿ ಆರೋಗ್ಯ ಸಮಸ್ಯೆಗಳು ಉಂಟಾದರೆ ಅದನ್ನು ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಎನ್ನುತ್ತಾರೆ.

ಇದನ್ನೆಲ್ಲ ಓದಿ ಗಾಬರಿ ಆಗಬೇಡಿ. ಉತ್ತಮ ಜೀವನಶೈಲಿ ಅಳವಡಿಸಿಕೊಂಡರೆ ಪಿಸಿಒಡಿಯನ್ನು ಜಯಿಸಬಹುದು.  ಆಹಾರಕ್ರಮ, ಒಳ್ಳೆಯ ನಿದ್ರೆ,  ಸೂಕ್ತ ವ್ಯಾಯಾಮ, ಭಾವೋದ್ವೇಗ ನಿರ್ವಹಣೆ ಸಮರ್ಪಕವಾಗಿರಲಿ. ಪಿಸಿಒಡಿ ಶೇ.70ರಷ್ಟು ಮಹಿಳೆಯರಲ್ಲಿ ಬೊಜ್ಜು ಇರುತ್ತವೆ. ಇನ್ನು ಶೇಕಡ 20 ರಿಂದ 30ರಷ್ಟು ತೆಳ್ಳಗಿರುವ ಮಹಿಳೆಯರಲ್ಲೂ, ಆದರೆ ಅಂತಹವರಲ್ಲಿ ಉದರದ ಬೊಜ್ಜು ಅಂದರೆ ಹೊಟ್ಟೆಯ ಭಾಗದಲ್ಲಿರುವ ಬೊಜ್ಜು ಇದ್ದಾಗ ಕಂಡು ಬರಬಹುದು.   ಆಹಾರದಲ್ಲಿ ಹೆಚ್ಚು ಪ್ರೊಟೀನ್‌ ಅಂಶಗಳನ್ನು,  ಹಸಿರು ಸೊಪ್ಪು, ತರಕಾರಿ, ಮೊಳಕೆ ಕಾಳುಗಳು,  ಬೀಜಗಳು,  ಒಣ ಹಣ್ಣುಗಳಿರಲಿ.

ಕಾರ್ಬೋಹೈಡ್ರೇಟ್ ಸೇವನೆ ಕಡಿಮೆಮಾಡಿ. ಆಹಾರ ಸೇವನೆ ಕೆಲಸವನ್ನು ಗಮನವಿಟ್ಟು ಮಾಡಿ (ಮೈಂಡ್‌ಫುಲ್ ಈಟಿಂಗ್). ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಸೇವಿಸಿ. ಕನಿಷ್ಠ ಒಂದು ಗಂಟೆಯಾದರೂ ವ್ಯಾಯಾಮ ಮಾಡಿ. ದೀರ್ಘ ಉಸಿರಾಟ ಕ್ರಮ, ಸಕಾರಾತ್ಮಕ ಚಿಂತನೆಯಿಂದ ನಿಮ್ಮ ತೂಕ ನಿರ್ವಹಣೆ ಮಾಡಿಕೊಳ್ಳಬಹುದು. ಜೊತೆಗೆ ಅಂಡೋತ್ಪತ್ತಿ ಪ್ರಚೋದಕ ಔಷಧಗಳನ್ನು ನಿಮಗೆ ಬಳಸಲು ವೈದ್ಯರು ಸೂಚಿಸುತ್ತಾರೆ. ಸೂಕ್ತ ಸಮಯದಲ್ಲಿ ಅಂಡೋತ್ಪತ್ತಿಯಾಗುವ ಆಸುಪಾಸಿನ ದಿನಗಳಲ್ಲಿ ನೀವು ಲೈಂಗಿಕ ಸಂಪರ್ಕ ಮಾಡಲು ತಿಳಿಸುತ್ತಾರೆ ಇದರಿಂದ ಹೆಚ್ಚಿನವರಿಗೆ ಗರ್ಭಧಾರಣೆಯಾಗುತ್ತದೆ. ಚಿಂತಿಸಬೇಡಿ.

****

<div class="paragraphs"><p></p></div>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT