ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪಂದನ| ಡಿಂಭನಾಳಗಳ ಮರುಜೋಡಣೆ ಫಲಪ್ರದವೇ?

ಟ್ಯುಬೆಕ್ಟಮಿಯ ನಂತರ ಸಹಜ ಸಂತಾನೋತ್ಪತ್ತಿ ಸಾಧ್ಯವೇ?
Last Updated 10 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

1. ನನಗೆ 37 ವರ್ಷ. ಪತಿಗೆ 38 ವರ್ಷ. ನಮಗೆ 7 ಮತ್ತು4 ವರ್ಷದ ಹೆಣ್ಣು ಮಕ್ಕಳಿದ್ದಾರೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಆದರೆ ಈಗ ಇನ್ನೊಂದು ಮಗು ಬೇಕು ಅಂತ ಎನಿಸುತ್ತಿದೆ. ಐ.ವಿ.ಎಫ್ ಮೂಲಕ ಮಗು ಪಡೆಯಲು ಇಷ್ಟವಿಲ್ಲ. ಸಹಜವಾಗಿಯೇ ಗರ್ಭಧರಿಸುವ ಆಸೆ. ಮೊದಲನೆಯದು ಸಿಸೇರಿಯನ್‌ ಹೆರಿಗೆ. ಈಗ ನನಗೆ ಬಿಪಿ ಇದೆ. ಈ ನನ್ನ ನಿರ್ಧಾರ ಸರಿ ಇದೆಯೇ? ಇದರಿಂದ ಮುಂದೆ ಏನಾದರೂ ಸಮಸ್ಯೆಗಳು ಎದುರಾಗುತ್ತವೆಯೇ ? ತುಂಬಾ ಗೊಂದಲದಲ್ಲಿ ಇದ್ದೇನೆ. ಪರಿಹಾರ ತಿಳಿಸಿ ?

ಹೆಸರು, ಊರು ತಿಳಿಸಿಲ್ಲ.

ಉತ್ತರ: ನಿಮಗೆ ಈಗಾಗಲೇ ಎರಡು ಮಕ್ಕಳಿದ್ದಾರೆ ಎಂದು ಹೇಳಿದ್ದೀರಿ. ಏರು ರಕ್ತದೊತ್ತಡ (ಬಿಪಿ) ಇದೆ ಎಂದೂ ತಿಳಿಸಿದ್ದೀರಿ. ನಿಮಗೆ ಸಿಸೇರಿಯನ್‌ ಜೊತೆಗೆ, ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಆಗಿರುವುದರಿಂದ ನಿಮ್ಮ ಡಿಂಭನಾಳವನ್ನು(ಗರ್ಭನಾಳವನ್ನು)ಕತ್ತರಿಸಿ ತೆಗೆದುಹಾಕಿರುತ್ತಾರೆ. ನಿಮಗೀಗಾಲೇ ಸಹಜ ಸಂತಾನೋತ್ಪತ್ತಿ ಕ್ರಿಯೆಯ ಬಗ್ಗೆ ತಿಳಿದಿರಬೇಕಲ್ಲವೇ? ಪ್ರತಿತಿಂಗಳು ಅಂಡಾಶಯದಿಂದ ಬಿಡುಗಡೆಯಾಗುವ ಅಂಡವು ಡಿಂಭನಾಳದಿಂದ ಸೆಳೆಯಲ್ಪಟ್ಟು ಲೈಂಗಿಕ ಕ್ರಿಯೆಯಿಂದ ಗರ್ಭಕೋಶಕ್ಕೆ ಬರುವ ವೀರ‍್ಯಾಣುಗಳ ಜೊತೆ ಡಿಂಭನಾಳದಲ್ಲಿಯೇ ಫಲಿತವಾಗಿ ನಿಧಾನವಾಗಿ ಗರ್ಭಕೋಶದತ್ತ ಚಲಿಸಿ ನವಮಾಸದಲ್ಲಿ ಮಗುವಾಗಿ ಬೆಳೆಯುತ್ತದೆ. ಸಂತಾನ ಶಕ್ತಿ ಹರಣ ಚಿಕಿತ್ಸೆಯಲ್ಲಿ (ಟ್ಯೂಬೆಕ್ಟಮಿ) ಡಿಂಭನಾಳವನ್ನ ಎರಡೂಕಡೆ ಕತ್ತರಿಸಿ (ಒಂದು ಸೆಂ.ಮೀನಷ್ಟು) ತೆಗೆಯಲಾಗುತ್ತದೆ. ಹಾಗಾಗಿ, ನೀವು ನಿಮಗೆ ಸಹಜವಾಗಿ ನಿಮ್ಮಲ್ಲಿಯೇ ಸಂತಾನೋತ್ಪತ್ತಿ ಸಾಮರ್ಥ್ಯ ಮರುಕಳಿಸಬೇಕೆಂದರೆ (ಐ.ವಿ.ಎಫ್ ವಿಧಾನ ನೀವು ಬೇಡವೆಂದಿದ್ದೀರ) ಈ ಡಿಂಭನಾಳಗಳ ಮರುಜೋಡಣೆಯ ಶಸ್ತ್ರಚಿಕಿತ್ಸೆಗೇ (ಟ್ಯೂಬಲ್ ರೀ ಕ್ಯಾನಲೈಜೇಶನ್) ಮೊರೆ ಹೋಗಬೇಕು.

ಈ ಶಸ್ತ್ರಚಿಕಿತ್ಸೆಗೂ ಸಾಕಷ್ಟು ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಋತುಚಕ್ರ ಆರಂಭವಾಗಿ 7 ರಿಂದ10 ದಿನಗಳ ಒಳಗೆ ನಡೆಸುವಂತಹ ಶಸ್ತ್ರಚಿಕಿತ್ಸೆ ಇದು. ಇದನ್ನು ತಜ್ಞವೈದ್ಯರು ಉದರದರ್ಶಕದ ಮೂಲಕ ಅಥವಾ ತೆರೆದ ಸೂಕ್ಷ್ಮದರ್ಶಕದ ಮೂಲಕ ಶಸ್ತ್ರಚಿಕಿತ್ಸಾ ವಿಧಾನದಲ್ಲೂ ಮಾಡುತ್ತಾರೆ. ಸಾಕಷ್ಟು ಮುಂಜಾಗ್ರತೆವಹಿಸಿ ಸೂಕ್ಷ್ಮ‌ವಾದ ದಾರಗಳನ್ನ ಉಪಯೋಗಿಸಿ ಡಿಂಭನಾಳಗಳನ್ನು ಮರುಜೋಡಿಸುತ್ತಾರೆ. ಆದರೆ ಹೀಗೆ ಮಾಡುವ ಶಸ್ತ್ರಚಿಕಿತ್ಸೆಯು ಎಷ್ಟರಮಟ್ಟಿಗೆ ಫಲಪ್ರದವಾಗುತ್ತದೆ ಎಂಬುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ.

ಮರುಜೋಡಿಸಲ್ಪಟ್ಟ ಡಿಂಭನಾಳವೂ 8 ಸೆಂ.ಮೀ ಗಿಂತ ಹೆಚ್ಚು ಉದ್ದವಾಗಿದ್ದರೆ, ಮಕ್ಕಳಾಗುವ ಸಂಭವ ಹೆಚ್ಚು. ಲ್ಯಾಪ್ರೋಸ್ಕೋಪಿಕ್ ಉಂಗುರ ಅಳವಡಿಕೆ ವಿಧಾನದಲ್ಲಿ ಟ್ಯುಬೆಕ್ಟಮಿ ಮಾಡಿಸಿಕೊಂಡು ನಂತರ 5 ವರ್ಷದ ಒಳಗೆ ಮರುಜೋಡಣಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಗ ಮಕ್ಕಳಾಗುವ ಪ್ರಮಾಣ ಶೇಕಡ 60ಕ್ಕೂ ಹೆಚ್ಚು ಫಲಪ್ರದವಾಗುತ್ತದೆ. ನೀವು ಸಿಸೇರಿಯನ್ ಜೊತೆಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಂಡಿ ರುವುದರಿಂದ ಶಸ್ತ್ರಚಿಕಿತ್ಸೆಯ ಯಶಸ್ಸು ಶೇಕಡ 40ರಷ್ಟು ಇರಬಹುದು.

ಒಟ್ಟಾರೆ ಟ್ಯುಬೆಕ್ಟಮಿ ಮಾಡಿಸಿಕೊಂಡು 5 ರಿಂದ10 ವರ್ಷಗಳ ನಂತರ ಮರುಜೋಡಣಾ ಚಿಕಿತ್ಸೆ ಮಾಡಿಸಿ ಕೊಂಡರೆ ಶಸ್ತ್ರಚಿಕಿತ್ಸೆ ಯಶಸ್ಸು ಶೇಕಡ 16ಕ್ಕೂ ಕಡಿಮೆ ಇರುತ್ತದೆ. ಒಟ್ಟಾರೆ ಫಲಿತಾಂಶ ನಿಮ್ಮ ಸಮಗ್ರ ಆರೋಗ್ಯ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ‌‌

ನಿಮಗೀಗಾಲೇ 37ವರ್ಷಗಳಾಗಿರುವುರಿಂದ ಒಮ್ಮೆ ಗರ್ಭಧಾರಣೆಯಾದರೂ ಡೌನ್‌ಸಿಂಡ್ರೋಮ್ ಮಗುವಾಗುವ ಸಂಭವಹೆಚ್ಚಿದೆ. ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಧಾರಣೆಯಾದಾಗ ಟ್ಯೂಬಲ್‌ಪ್ರೆಗ್ನೆನ್ಸಿ (ನಳಿಕಾಗರ್ಭ)ಆಗುವ ಸಂಭವ ಹೆಚ್ಚಿರುತ್ತದೆ. ಆದು ಅಪಾಯಕರ ಸನ್ನಿವೇಶ ಉಂಟುಮಾಡುತ್ತದೆ. ಹಾಗಾಗಿ ನೀವು ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸಿ.

2. ನನ್ನ ಗಂಡ ಲೈಂಗಿಕ ಆಸಕ್ತಿ ಕುಂದಿದೆ ಎಂದು ಹೇಳುತ್ತಲೇ ಇದ್ದಾನೆ. ಆದರೆ, ನನ್ನ ಗೆಳತಿಯೊಂದಿಗೆ ಸಂಬಂಧವಿರಿಸಿಕೊಂಡಿದ್ದಾನೆ ಎಂಬ ಗುಮಾನಿ ಇದೆ. ಅವನಿಗೆ 35ವರ್ಷ ನನಗೆ 25ವರ್ಷ. ಈ ವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ಕುಂದುತ್ತದೆಯೇ? ಹಾಗೊಮ್ಮೆ ಕುಂದಿದ್ದರೆ ಅದಕ್ಕೆ ಯಾವ ರೀತಿಯ ವೈದ್ಯಕೀಯ ಪರಿಹಾರವಿದೆ ಎಂದು ದಯವಿಟ್ಟು ತಿಳಿಸಿ.

‌ಉತ್ತರ: ನೀವು ಮದುವೆಯಾಗಿ ಎಷ್ಟು ವರ್ಷವಾಗಿದೆ ಎಂದು ತಿಳಿಸಿಲ್ಲ ಈ ಮೊದಲು, ಲೈಂಗಿಕ ಆಸಕ್ತಿ ಸರಿಯಾಗಿತ್ತೆ? ಅದು ಈಗ ಕಡಿಮೆಯಾಗಿದೆಯೇ ಎನ್ನುವ ಬಗ್ಗೆ ನಿಮ್ಮ ಪ್ರಶ್ನೆಯಲ್ಲಿ ಸ್ಪಷ್ಟತೆ ಇಲ್ಲ. ಅದೆನೇ ಇರಲಿ 35 ವರ್ಷಕ್ಕೆ ಲೈಂಗಿಕ ಆಸಕ್ತಿ ಕುಂದಲು ಸಾಧ್ಯವಿಲ್ಲ. ಪುರುಷರಲ್ಲಂತೂ ದೈಹಿಕ, ಮಾನಸಿಕ, ಭಾವನಾತ್ಮಕವಾಗಿ, ಸಧೃಡವಾಗಿದ್ದರೆ 60ವರ್ಷದ ನಂತರವೂ ಲೈಂಗಿಕವಾಗಿ ಸಕ್ರಿಯವಾಗಿರುತ್ತಾರೆ. ಅವರಿಗೇನಾದರೂ ನಿಮಿರು ದೌರ್ಬಲ್ಯ ಅಥವಾ ಶೀಘ್ರಸ್ಖಲನವಾಗುವಿಕೆ ಇತ್ಯಾದಿ ಈ ಮೊದಲು ಇತ್ತಾ? ಮಧುಮೇಹ ಕಾಯಿಲೆ ಏನಾದರೂ ಅವರಿಗೆ ಬಂದಿದ್ದಲ್ಲಿ, ಅದರಿಂದಲೂ ಕೂಡಾ ಲೈಂಗಿಕ ಆಸಕ್ತಿ ಕುಂದಬಹುದು.

ನಿಮ್ಮಿಬ್ಬರಲ್ಲಿ ವೈಚಾರಿಕ ಭಿನ್ನಾಬಿಪ್ರಾಯ ಅಥವಾ ಪರಸ್ಪರ ಕೌಟುಂಬಿಕ ಮನಃಸ್ತಾಪ, ಮಾನಸಿಕ ಒತ್ತಡಗಳಿವೆಯೇ? ನಿಮಗೆ ಗೆಳತಿ ಆತ್ಮೀಯವಾಗಿಲ್ಲವೇ? ಇವೆಲ್ಲದರ ಬಗ್ಗೆ ಮಾಹಿತಿ ಬೇಕಾಗುತ್ತದೆ. ಆದ್ದರಿಂದ ನೀವು ತಜ್ಞವೈದ್ಯರನ್ನು ಕಂಡು ಆಪ್ತಸಮಾಲೋಚನೆ /ಚಿಕಿತ್ಸೆಗೊಳಗಾಗುವುದರಿಂದ ನಿಮಗೆ ಪರಿಹಾರ ಸಿಗುತ್ತದೆ.

3. ನನಗೆ ಈಗ 28ವರ್ಷ. ಮದುವೆಯಾಗಿ 2 ವರ್ಷ ಆಯಿತು. ಆದ್ರೆ ಇನ್ನೂ ಗರ್ಭಧರಿಸಿಲ್ಲ. ವೈದ್ಯರ ಬಳಿ ತಪಾಣೆ ಮಾಡಿಸಿದ್ದೇನೆ. ಸ್ಕ್ಯಾನಿಂಗ್, ರಕ್ತಪರೀಕ್ಷೆ ಎಲ್ಲ ಮಾಡಿಸಿದ್ದಾರೆ. ಎಲ್ಲವೂ ನಾರ್ಮಲ್ ಇದೆ ಅಂತಾರೆ. ಮಾತ್ರ, ಇಂಜೆಕ್ಷನ್ ಎಲ್ಲ ಕೊಡ್ತಿದ್ದಾರೆ. ಆದ್ರೆ ನಾನು ಇನ್ನೂ ಗರ್ಭಿಣಿ ಆಗ್ತಾಇಲ್ಲ. ಪತಿಯ ವೀರ್ಯಾಣುಗಳ ಸಂಖ್ಯೆ ಕೂಡ ನಾರ್ಮಲ್ ಇದೆ. ಸರಿಯಾಗಿ ಮುಟ್ಟಾಗುತ್ತಿದ್ದೇನೆ. ಇಷ್ಟೆಲ್ಲ ಇದ್ದರೂ ಗರ್ಭಿಣಿಯಾಗುತ್ತಿಲ್ಲ . ಏನ್ಮಾಡಬಹುದು ತಿಳಿಸಿ.

ಉತ್ತರ: ಆರೋಗ್ಯವಂತ ಮಗು ಜನಿಸಲು ಪ್ರತಿ ತಿಂಗಳು ನಿಮ್ಮಲ್ಲಿ ಸರಿಯಾಗಿ ಅಂಡಾಣು ಬಿಡುಗಡೆ ಆಗಬೇಕು. ಪತಿಯ ವೀರ‍್ಯಾಣುಗಳ ಸಂಖ್ಯೆ, ಚಲನಶೀಲತೆ, ಗುಣಮಟ್ಟ ಎಲ್ಲವೂ ಸರಿಯಾಗಿರಬೇಕು. ಜೊತೆಗೆ ಅಂಡಾಣು ಬಿಡುಗಡೆಯಾಗಿ 48 ಗಂಟೆಯೊಳಗಾಗಿ ಸತಿ–ಪತಿಯರ ನಡುವೆ ಲೈಂಗಿಕಕ್ರಿಯೆ ನಡೆದು, ಹೆಣ್ಣಿನ ಗರ್ಭನಾಳದಲ್ಲಿ ವೀರ‍್ಯಾಣುಗಳ ಸಮಾಗಮವಾಗಿ ಭ್ರೂಣವೂ ಗರ್ಭಕೋಶದೊಳಗೆ ಚಲಿಸಿ ಅಲ್ಲಿ ನವಮಾಸದಲ್ಲಿ ಮಗುವಾಗಿ ಬೆಳೆಯುತ್ತದೆ. ಹಾಗಾಗಿ ಗರ್ಭನಾಳಗಳು ಸರಿಯಾಗಿದೆಯೇ ಎನ್ನುವ ಬಗ್ಗೆ ಟ್ಯೂಬಲ್‌ಪೆಟೆನ್ಸಿ ಪರೀಕ್ಷೆ ಮಾಡಿಸಿ. ಕೆಲವೊಮ್ಮೆ ಶೇಕಡ 25ರಷ್ಟು ಸಂದರ್ಭಗಳಲ್ಲಿ ಎಲ್ಲಾ ಅಂಶಗಳು ಸರಿಇದೆ ಎಂದು ಸೂಕ್ತ ಪರೀಕ್ಷೆಗಳಿಂದ ದೃಢಪಟ್ಟರೂ ಕೂಡ ವಿವರಿಸಲಾಗದ ಬಂಜೆತನ ಎನ್ನುವ ಅಂಶವೂ (Un explain infertility) ಕಾರಣವಾಗುತ್ತದೆ. ಯಾವುದಕ್ಕೂ ಕೆಲವೇ ದಿನಗಳಮಟ್ಟಿಗೆ ಸಹಜವಾಗಿ ಮಕ್ಕಳಾಗುತ್ತದೆಯೇ ಎಂದು ಪ್ರಯತ್ನಿಸಿ ಮುಖ್ಯವಾಗಿ, ಮಕ್ಕಳಾಗುತ್ತಿಲ್ಲ ಎಂಬ ಮಾನಸಿಕ ಕೊರಗನ್ನ ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡು ಧೈರ್ಯ ದಿಂದಿದ್ದಾಗ ಕೆಲವೊಮ್ಮೆ ಮಗು ಬೇಗನೆ ಆಗುತ್ತದೆ. ನಿಮಗೂ ಹಾಗೇ ಆಗಲಿ ಎಂದು ಹಾರೈಸುತ್ತೇನೆ ಇಲ್ಲದಿದ್ದಲ್ಲಿ ಬಂಜೆತನ ತಜ್ಞರಲ್ಲಿ ಚಿಕಿತ್ಸೆ ಪಡೆದುಕೊಳ್ಳಿ.

ಮತ್ತಷ್ಟು ಪ್ರಶ್ನೋತ್ತರಗಳಿಗಾಗಿ www.prajavani.net/women ಜಾಲತಾಣಕ್ಕೆ ಭೇಟಿ ನೀಡಿ.

ಸ್ಪಂದನ

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT