ಶುಕ್ರವಾರ, ಜುಲೈ 1, 2022
22 °C

ಸ್ಪಂದನ| ಸಂತಾನಹೀನತೆಗೆ ಪಿಸಿಒಡಿ ಕಾರಣವೇ?

ಡಾ. ವೀಣಾ ಎಸ್‌. ಭಟ್‌ Updated:

ಅಕ್ಷರ ಗಾತ್ರ : | |

ಪ್ರಶ್ನೆ: ನನಗೆ 27 ವರ್ಷ. ಮದುವೆಯಾಗಿ 4 ವರ್ಷ ಆಗ್ತಾ ಬಂತು. ಇನ್ನೂ ಮಗು ಆಗಿಲ್ಲ. ಪಿ.ಸಿ.ಒ.ಡಿ ಸಮಸ್ಯೆ ಇದೆ. ಆಸ್ಪತ್ರೆಗೆ ಹೋಗಿ ಹೋಗಿ ಸಾಕಾಗಿ ಈಗ ಮನೆ ಮದ್ದು ಅನುಸರಿಸುತ್ತಿದ್ದೇನೆ. ಇದರಿಂದ ಸಮಸ್ಯೆ ಆಗುತ್ತಾ? ಏನು ಮಾಡೋದು ತಿಳಿಯುತ್ತಿಲ್ಲ. ನನ್ನ ಗಂಡನಿಗೆ 28 ವರ್ಷಗಳು.

ಹೆಸರು, ಊರು ತಿಳಿಸಿಲ್ಲ

ಉತ್ತರ: ಪಿ.ಸಿ.ಒ.ಡಿ ಆಧುನಿಕ ಜಗತ್ತಿನಲ್ಲಿ ಮಹಿಳೆಯರನ್ನು ಕಾಡಿಸಿ ಹೆಣ್ತನವನ್ನೇ ಕಸಿಯುತ್ತಿರುವ ಬಹುದೊಡ್ಡ ಪಿಡುಗಾಗಿದೆ. ಅನಿಯಮಿತ ಋತುಚಕ್ರ, ಬಂಜೆತನ ಅಷ್ಟೇ ಅಲ್ಲ ಇನ್ಸುಲಿನ್‌ ಪ್ರತಿರೋಧತೆಯೂ ಹೆಚ್ಚಾಗಿ ಧೀರ್ಘಾವಧಿಯ ಆರೋಗ್ಯ ಸಮಸ್ಯೆಗಳೂ ಉಂಟಾದಾಗ ಈ ಸಮಸ್ಯೆಯನ್ನ ಪಿ.ಸಿ.ಒ.ಎಸ್ ಅನ್ನುತ್ತೇವೆ. ಇದಕ್ಕೆ ನಿರ್ದಿಷ್ಠ ಕಾರಣ ಹೇಳಲೂ ಸಾಧ್ಯವಿಲ್ಲದಿದ್ದರೂ ಅನುವಂಶೀಯ ಕಾರಣಗಳೊಂದಿಗೆ ತಪ್ಪು ಜೀವನಶೈಲಿ, ಎಗ್ಗಿಲ್ಲದೆ ನಮ್ಮ ಶರೀರವನ್ನು ಸೇರುತ್ತಿರುವ ರಾಸಾಯನಿಕಗಳು, (ಆಹಾರದ ಮೂಲಕವಾಗಿ, ಅತಿಯಾದ ಪ್ಲಾಸ್ಟಿಕ್‌ ಬಳಕೆಯಿಂದ, ಕೃತಕ ಸೌಂದರ್ಯವರ್ಧಕ ಬಳಕೆ ಇತ್ಯಾದಿಯಿಂದ) ಮಾನಸಿಕ ಒತ್ತಡ, ದೈಹಿಕ ಶ್ರಮವಿಲ್ಲದಿರುವಿಕೆ, ನಿದ್ರಾಹೀನತೆ, ಹೀಗೆ ಹಲವು ಕಾರಣಗಳಿಂದ ಉಂಟಾಗುವ ಹಾರ್ಮೋನು ಅಸಮತೋಲನದಿಂದ ಪಿ.ಸಿ.ಓ.ಡಿ ಸಮಸ್ಯೆ ಉಂಟಾಗುತ್ತದೆ. ಕಾರಣ ನಿರ್ಧಿಷ್ಟವಾಗಿಲ್ಲದಿರುವುದರಿಂದ ಚಿಕಿತ್ಸೆಯೂ ನಿರ್ದಿಷ್ಟವಾಗಿಲ್ಲ.

ಆದರೆ ಪಿ.ಸಿ.ಒ.ಡಿಯಲ್ಲಿ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವುದೇ ಚಿಕಿತ್ಸೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಆಹಾರ ಸೇವನೆಯಲ್ಲಿ ಪ್ರಕೃತಿದತ್ತವಾಗಿ ಸ್ಥಳೀಯವಾಗಿ ಸಿಗುವ ತಾಜಾ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಿ. ಹಸಿರು ಸೊಪ್ಪು ತರಕಾರಿಗಳನ್ನು, ಮೊಳಕೆಕಾಳುಗಳು, ಹಣ್ಣುಗಳನ್ನು ಧಾರಳವಾಗಿ ದಿನಾಲೂ ಸೇವಿಸಿ. ಮೊಬೈಲ್ ನೊಡುತ್ತಾ ಟಿ.ವಿ ನೋಡುತ್ತಾ ಆಹಾರ ಸೇವಿಸಬೇಡಿ. ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಿ. ಹಾಲು ಹಾಗೂ ಹೈನು ಪದಾರ್ಥಗಳ ಬಳಕೆ ಕಡಿಮೆ ಮಾಡಿ. ಪ್ರತಿದಿನ ಸೂರ್ಯನ ಬೆಳಕಿಗೆ 20 ನಿಮಿಷವಾದರೂ ಮೈ ಒಡ್ಡಿಕೊಳ್ಳಿ (ಬೆಳಿಗ್ಗೆ 11ರಿಂದ 3 ಗಂಟೆಯೊಳಗಾಗಿ) ರಾತ್ರಿ 6ರಿಂದ 8 ಗಂಟೆ ನಿದ್ರಿಸಿ. ಯೋಗ, ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡಿ ಒತ್ತಡ ಕಡಿಮೆ ಮಾಡಿಕೊಳ್ಳಿ. ದಿನಾಲೂ ಕನಿಷ್ಠ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆ (ಏರೋಬಿಕ್ಸ್, ಸ್ವಿಮ್ಮಿಂಗ್, ಡ್ಯಾನ್ಸಿಂಗ್, ಸೈಕ್ಲಿಂಗ್ ಇತ್ಯಾದಿ) ಮಾಡಲೇಬೇಕು. ಜೊತೆಗೆ ಧೂಮಪಾನ, ಮದ್ಯಪಾನದಿಂದ ದೂರವಿರಿ. ದಿನಾಲೂ 3 ರಿಂದ 4 ಲೀಟರ್ ನೀರನ್ನು ಸೇವಿಸಿ. ನೀವು ಬೇಸರಿಸದೆ, ಖಿನ್ನತೆಗೊಳಗಾಗದೆ ಮತ್ತೊಮ್ಮೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ. ನಿಮ್ಮ ಪತಿಯ ಪರೀಕ್ಷೆಯೂ ಆಗಲಿ.

ಪ್ರಶ್ನೆ: ಡಾಕ್ಟರ್ ನನಗೆ ಮದುವೆ ಆಗಿ 5 ವರ್ಷಗಳಾಗಿದೆ, ನನಗೆ 5 ತಿಂಗಳಲ್ಲಿ ಅಬಾರ್ಷನ್ ಆಯಿತು. ಮೊದಲು ಋತುಚಕ್ರ ಸರಿಯಾಗಿತ್ತು ಈಗ 4 ತಿಂಗಳಿಂದ ಸರಿಯಾಗಿ ಋತುಚಕ್ರ ಆಗುತ್ತಿಲ್ಲ. ಕಾರಣ ಪರಿಹಾರ ತಿಳಿಸಿ. ಈಗ ಮತ್ತೆ ಮಕ್ಕಳಿಗಾಗಿ ಪ್ರಯತ್ನಿಸುತ್ತಿದ್ದೇವೆ ಪರಿಹಾರ ತಿಳಿಸಿ.

ಗಿರಿಜಾ, ಊರು ತಿಳಿಸಿಲ್ಲ

ಉತ್ತರ: ಗಿರಿಜಾರವರೇ ನೀವು ನಿಮ್ಮ ವಯಸ್ಸೆಷ್ಟು ತೂಕವೆಷ್ಟು ಇತ್ಯಾದಿ ಯಾವ ವಿವರವನ್ನೂ ಕೊಟ್ಟಿಲ್ಲ. ಋತುಚಕ್ರ ಸರಿಯಾಗಿಲ್ಲದಿರುವುದಕ್ಕೆ ಕಾರಣ ಪಿ.ಸಿ.ಒ.ಡಿ ಸಮಸ್ಯೆಯೂ ಇರಬಹುದು. ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಪ್ರತಿ ತಿಂಗಳು ಅಂಡಾಶಯದಿಂದ ಒಂದೇ ಒಂದು ಅಂಡಾಣು ಬಿಡುಗಡೆಯಾಗುತ್ತದೆ. ಆದರೆ ಪಿ.ಸಿ.ಒ.ಡಿ ಸಮಸ್ಯೆಯಲ್ಲಿ ಅಂಡಾಣು ಬಿಡುಗಡೆಯಾಗುವುದೇ ಇಲ್ಲ. ಇದರಿಂದ ಋತುಚಕ್ರದಲ್ಲಿ ಕೂಡಾ ಏರುಪೇರಾಗುತ್ತದೆ. ಬಂಜೆತನವೂ ಉಂಟಾಗುತ್ತದೆ. ಇದಲ್ಲದೇ ಥೈರಾಯ್ಡ್‌ ಸಮಸ್ಯೆಯಿಂದಲೂ, ಅತಿಯಾದ ಒತ್ತಡದಿಂದಲೂ, ಬೊಜ್ಜಿನಿಂದಲೂ ಋತುಚಕ್ರ ಸರಿಯಾಗಿ ಆಗದೇ ಇರಬಹುದು. ನೀವು ತುರ್ತಾಗಿ ತಜ್ಞ ವೈದ್ಯರನ್ನುನ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಪಿ.ಸಿ.ಓ.ಡಿ ಸಮಸ್ಯೆಯಿದ್ದರೆ ಈ ಮೇಲೆ ತಿಳಿಸಿದ ಹಾಗೆ ಜೀವನಶೈಲಿ ಬದಲಾವಣೆ ಮಾಡಿಕೊಂಡರೆ ಉತ್ತಮ ಫಲಿತಾಂಶ ದೊರಕುವುದು.

ಪ್ರಶ್ನೆ: ವಯಸ್ಸು ಇವಾಗ 29, ನನ್ನ ತೂಕ 65 ಕೆ.ಜಿ. ನನಗೆ ಮದುವೆಯಾಗಿ 2 ವರ್ಷ ಆಯಿತು, 22 ರಿಂದ 25 ದಿನಕ್ಕೆ ಮುಟ್ಟು ಆಗುತ್ತದೆ. ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಥೈರಾಯ್ಡ್‌ ಸಮಸ್ಯೆ ಇದೆ ಎಂದು ತಿಳಿಸಿದ್ರು. ನಾನು ಥೈರಾಯ್ಡ್‌ 50 ಎಂ.ಜಿ ಮಾತ್ರೆ ದಿನಾಲೂ ತೆಗೆದುಕೊಳ್ಳುತ್ತೇನೆ. ನನಗೆ ಮಕ್ಕಳು ಆಗುತ್ತದೆಯೇ ಇಲ್ಲವೇ ಎಂದು ಚಿಂತೆ ಆಗಿದೆ. ನಮ್ಮ ಪತಿಯ ವೀರ್ಯಾಣು ಕೌಂಟ್ 120 ಮಿಲಿಯನ್ ಇದ್ದು ಚಲನೆ ಕೂಡಾ ಶೇ 70ರಷ್ಟು ಇದೆ ಎಂದು ತಿಳಿಸಿದ್ದಾರೆ. ದಯವಿಟ್ಟು ಪರಿಹಾರ ತಿಳಿಸಿ.

ಸಂಜನಾ, ಬಾಗಲಕೋಟ

ಉತ್ತರ: ಸಂಜನಾರವರೇ ನಿಮ್ಮ ಪತಿಯ ವೀರ್ಯ ತಪಾಸಣೆಯ ವರದಿ ಸರಿಯಾಗಿದೆ. ನೀವು ತೆಗೆದುಕೊಳ್ಳುತ್ತಿರುವುದು 50 ಮೈಕ್ರೋಗ್ರಾಂ ಥೈರಾಯ್ಡ್‌ (ಮಿಲಿಗ್ರಾಂ ಅಲ್ಲ) ಮಾತ್ರೆ ನಿಲ್ಲಿಸಬೇಡಿ. ವೈದ್ಯರ ಜೊತೆಗೆ ಆಗಾಗ ಪರೀಕ್ಷೆ ಮಾಡಿಸಿಕೊಳ್ಳುತ್ತಿ.ರಿ ಮಕ್ಕಳಾಗದಿರುವುದಕ್ಕೆ ಏನು ಕಾರಣವೆಂದು ತಜ್ಞ ವೈದ್ಯರ ಹತ್ತಿರ ಪರೀಕ್ಷಿಸಿಕೊಳ್ಳಿ. ಅಂಡಾಣು ಬಿಡುಗಡೆ ಪ್ರತಿತಿಂಗಳು ಸರಿಯಾಗುತ್ತದೆಯೆ ಇಲ್ಲವೇ, ಗರ್ಭಕೋಶ, ಗರ್ಭನಾಳ ಸರಿಯಾಗಿದೆಯೇ ಎಂದು ಎಲ್ಲವನ್ನೂ ಕೂಲಂಕಶವಾಗಿ ಅಭ್ಯಸಿಸಿ ಸೂಕ್ತಚಿಕಿತ್ಸೆಯನ್ನು ನಿರ್ಧರಿಸುತ್ತಾರೆ. ಥೈರಾಯ್ಡ್‌ ಗ್ರಂಥಿಯ ಕಾರ್ಯಕ್ಷಮತೆ ಹೆಚ್ಚಿಸಲು ನೀವು ಕಾಲಿಫ್ಲವರ್, ಕ್ಯಾಬೇಜ್, ಬ್ರೊಕೊಲಿ, ಇತ್ಯಾದಿ ಬ್ರಸಿಕಾ ಕುಟುಂಬದ ತರಕಾರಿಗಳನ್ನು ತ್ಯಜಿಸುವುದು ಒಳ್ಳೆಯದು. ಸೆಲಿನಿಯಂ ಅಂಶ ಇರುವ ಆಹಾರ ಸೇವನೆ ಮಾಡಿ (ಉದಾ: ಕೆಂಪಕ್ಕಿ, ಎಳ್ಳು, ಅಗಸೆ, ಸೂರ್ಯಕಾಂತಿಬೀಜ, ಬಸಳೆಸೊಪ್ಪು ಇತ್ಯಾದಿ) ಯೋಗತಜ್ಞರು ಸರ್ವಾಂಗಾಸನ, ಹಾಲಾಸನ, ಉಷ್ಟ್ರಾಸನ, ಧನುರಾಸನ, ಸೂರ್ಯನಮಸ್ಕಾರ ಇತ್ಯಾದಿ ನಿಯಮಿತವಾಗಿ ಮಾಡುವುದರಿಂದ ಕಪಾಲಭಾತಿ, ನಾಡಿಶೋಧನ, ಉಜ್ಜಯೀ ಪ್ರಾಣಾಯಾಮಗಳನ್ನು ಮಾಡುವುದರಿಂದ ಥೈರಾಯ್ಡ್‌ ಗ್ರಂಥಿಯ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಅವುಗಳನ್ನು ತಜ್ಞರಲ್ಲಿ ಕಲಿತು ದಿನನಿತ್ಯ ಮಾಡಿ. ತಜ್ಞವೈದ್ಯರ ಸಲಹೆ ಸೂಚನೆಗಳನ್ನು ಅನುಸರಿಸಿ. ನಿಮಗೆ ಖಂಡಿತ ಮಗುವಾಗುತ್ತದೆ. ಚಿಂತಿಸಬೇಡಿ.

ಪ್ರಶ್ನೆ: ನನಗೆ ಮದುವೆ ನಿಶ್ಚಯವಾಗಿದೆ. ಬೇಗನೆ ಮಗು ಹೊಂದುವ ಆಶಯವಿಲ್ಲ. ಆದರೆ ಲೈಂಗಿಕತೃಪ್ತಿ ಪಡೆಯಲು ಆಸಕ್ತಿ ಇದ್ದು ಮಗು ಪಡೆಯದೆ ಕೆಲವು ತಿಂಗಳುಗಳ ಕಾಲ ಉತ್ತಮ ಲೈಂಗಿಕ ಜೀವನ ಪಡೆಯಲು ಸೂಕ್ತ ದಾರಿ ಹಾಗೂ ಕ್ರಮಗಳ ಬಗ್ಗೆ ಮಾಹಿತಿ ನೀಡಿ.

ಅರುಣ್, ಸೊರಬ

ಉತ್ತರ: ಆರುಣ್‌ರವರೇ, ಮದುವೆಯಾಗಿ ಸುಂದರ ಜೀವನ ರೂಪಿಸಿಕೊಳ್ಳಲು ಹೊರಟ್ಟಿದ್ದೀರಿ, ಪರಸ್ಪರ ಅರ್ಥಮಾಡಿಕೊಂಡು, ಅರಿತುಕೊಂಡು ಆರ್ಥಿಕವಾಗಿಯೂ ಸಧೃಡವಾಗಿ ನಂತರವೇ ಮಗು ಪಡೆಯಬೇಕೆಂದು ನಿರ್ಧರಿಸಿದ್ದೀರಿ. ಅದಕ್ಕಾಗಿ ಅಭಿನಂದನೆಗಳು. ಉತ್ತಮ ಕುಟುಂಬವನ್ನು ಯೋಜಿಸ ಹೊರಟಿರುವ ನೀವು ಮದುವೆ ನಂತರ ಸ್ವತಃ ಉತ್ತಮ ದರ್ಜೆಯ ನಿರೋಧ್‌ ಅನ್ನು ಲೈಂಗಿಕ ಕ್ರಿಯೆ ಸಮಯದಲ್ಲಿ ಬಳಸುವುದು ಒಳ್ಳೆಯದು. ಅದು ನಿಮಗೆ ಸಾಧ್ಯವಾಗದೆ ಇದ್ದರೆ ಗರ್ಭನಿರೋಧಕ ಹಾರ್ಮೋನ್‌ ಮಾತ್ರೆಗಳನ್ನು ನಿಯಮಿತವಾಗಿ ನಿಮ್ಮ ಮಡದಿ ಒಂದು ದಿನವೂ ತಪ್ಪದೇ ನುಂಗಬೇಕಾಗುತ್ತದೆ. ಉಚಿತವಾಗಿ ಇವೆರಡೂ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ದೊರೆಯುತ್ತವೆ. ಸಂತಾನ ಪಡೆಯುವಿಕೆ ನಿಮಗೆ ಅಪೇಕ್ಷಿತ ಘಟನೆಯಾಗಬೇಕೇ ಹೊರತು ಅನಪೇಕ್ಷಿತ ಅವಘಡವಾಗದಿರುವ ಹಾಗೆ ಕಾಳಜಿವಹಿಸಿ. ಮಗುವಾಗದೆ ಇರುವವರೆಗೆ ನಿರೋಧ್‌ ಮತ್ತು ಓ.ಸಿ ಪಿಲ್ಸ್ ಇವೆರಡೇ ಉತ್ತಮ ಸಂತಾನ ನಿರೋಧಕ ಕ್ರಮಗಳು.

ಪ್ರಶ್ನೆ: ಅಮ್ಮನಿಗೆ ಈಗ 40 ವರ್ಷ ವಯಸ್ಸು. ಸುಮಾರು 7-8 ತಿಂಗಳಿಂದ ಸರಿಯಾಗಿ ಋತುಚಕ್ರ ಆಗುತ್ತಿಲ್ಲ.. ಕೆಲವೊಮ್ಮೆ 2 ತಿಂಗಳವರೆಗೆ ರಕ್ತಸ್ರಾವ ಆಗೋದೆ ಇಲ್ಲ. ಆದರೆ ಈಗ ಒಂದು ವಾರದಿಂದ ತುಂಬ ರಕ್ತಸ್ರಾವ ಆಗಿ ಸುಸ್ತಾಗಿದ್ದಾರೆ. ಇದು ಸಾಮಾನ್ಯ ಪ್ರಕ್ರಿಯೆಯೊ ಅಥವಾ ಇದರಿಂದ ಜೀವಕ್ಕೆ ಏನಾದರು ತೊಂದರೆಗಳು ಇದೆಯೇ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಉತ್ತರ: ನಿಮ್ಮ ಅಮ್ಮ ಮೊದಲು ಒಬ್ಬ ತಜ್ಞ ವೈದ್ಯರನ್ನು ಭೇಟಿಮಾಡಿ ಪರೀಕ್ಷಿಸಿಕೊಳ್ಳಲಿ. ಅವಶ್ಯವಿದ್ದರೆ ಅವರು ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸುತ್ತಾರೆ. ಅದರಲ್ಲಿ ಅಸಮರ್ಪಕ ಋತುಸ್ರಾವಕ್ಕೆ ಕಾರಣಗಳೇನೆಂದು ಪತ್ತೆಹಚ್ಚಬಹುದು. ಗರ್ಭಕೋಶದಲ್ಲಿ ನಾರುಗಡ್ಡೆಗಳು ಇದ್ದರೆ ಅಥವಾ ಹಾರ್ಮೋನ್‌ ಏರುಪೇರಿನಿಂದಾಗಿ ಲೋಳೆಪದರ (ಎಂಡೋಮೆಟ್ರಿಯಂ) ಅತಿಯಾಗಿ ಬೆಳೆದಿದ್ದರೆ ಕೂಡಾ ಈ ರೀತಿಯಾಗಿ ಅತಿಯಾದ ರಕ್ತಸ್ರಾವ ಉಂಟಾಗಬಹುದು. ರೋಗಿಯನ್ನು ನೋಡದೇ, ಸೂಕ್ತ ಪರೀಕ್ಷೆ ಮಾಡದೇ ನಿರ್ಧಿಷ್ಟವಾಗಿ ನಿಮ್ಮ ಸಮಸ್ಯೆ ಸಹಜವೋ ಅಸಹಜವೋ ಎಂದು ಕಾರಣ ಹೇಳುವುದು ಕಷ್ಟ. ಸುಸ್ತಾಗಿದ್ದಾರೆ ಎಂದು ತಿಳಿಸಿರುತ್ತೀರಾ, ಅತೀ ರಕ್ತಸ್ರಾವವಾದಾಗ ರಕ್ತಹೀನತೆಯಿಂದ ಹೀಗೆ ಸುಸ್ತಾಗುತ್ತದೆ. ಅದನ್ನು ತಜ್ಞ ವೈದ್ಯರ ಸಲಹೆಯ ಮೇರೆಗೆ ಕಬ್ಬಿಣಾಂಶ ಮಾತ್ರೆಯನ್ನು ಬರೆಸಿಕೊಂಡು ಸೇವಿಸಿ. ಜೊತೆಗೆ ಪೌಷ್ಟಿಕ ಆಹಾರ ಸೇವಿಸಿ ಸರಿಪಡಿಸಿಕೊಳ್ಳಿ.

ಪ್ರಶ್ನೆ: ನನಗೆ ಈಗ 33 ವರ್ಷ, ಗಂಡನಿಗೆ 38 ವರ್ಷ. ಮದುವೆ ಆಗಿ 7 ವರ್ಷ ಆಗಿದೆ. ಮಗುಗೋಸ್ಕರ 5 ವರ್ಷದಿಂದ ಪ್ರಯತ್ನ ಪಡ್ತಾ ಇದೀವಿ ಆದರೆ ಆಗ್ತಾ ಇಲ್ಲ. ಇದುವರೆಗೂ ಒಂದು ಸಲವೂ ಗರ್ಭಧಾರಣೆ ಆಗಿಲ್ಲ. ನನಗೆ ಸರಿಯಾಗಿ 26 ದಿನಕ್ಕೆ ಮುಟ್ಟು ಆಗುತ್ತದೆ. ಆದರೆ ಬ್ಲೀಡಿಂಗ್ ತುಂಬಾ ಕಡಿಮೆ ಆಗತ್ತದೆ (2ರಿಂದ ಎರಡೂವರೆ ದಿನ ಅಷ್ಟೆ). 2017 ರಲ್ಲಿ ವೈದ್ಯರು ನ್ಯಾಪೊರೆ ಗಡುಸಾಗಿದೆ ಎಂದು ಪೆಂಟೆನ್ಸ್ ಆಪರೇಶನ್ ಮಾಡಿದ್ರು. ಈ ಮಧ್ಯೆ 4 ಬಾರಿ ಐ.ಯು.ಐ ಮಾಡಿದರೂ ಅದೆಲ್ಲ ವಿಫಲವಾಯಿತು. ಸ್ತ್ರೀರೋಗ ತಜ್ಞರ ಪ್ರಕಾರ ನಮ್ಮ ಹತ್ತಿರ ಉಳಿದಿರೋ ದಾರಿ ಅಂದ್ರೆ ಐ.ವಿ.ಎಫ್. ಮಾತ್ರ. ನನ್ನ ಹಾಗೂ ನನ್ನ ಪತಿಯ ಎಲ್ಲಾ ವೈದ್ಯಕೀಯ ವರದಿಗಳನ್ನು ಲಗತ್ತಿಸಿದ್ದೇನೆ. ಪರಿಹಾರ ತಿಳಿಸಿ.

ಹೆಸರು ಇಲ್ಲ, ಬೆಂಗಳೂರು.

ಉತ್ತರ: ನೀವು ಲಗತ್ತಿಸಿದ ವರದಿಗಳ ಪ್ರಕಾರ ನಿಮ್ಮ ಪತಿಯ ವೀರ್ಯಾಣುಗಳ ಗುಣಮಟ್ಟ ಹಾಗೂ ಸಂಖ್ಯೆ ಸ್ವಲ್ಪ ಕಡಿಮೆಯಿದೆ. ನಿಮ್ಮ ಗರ್ಭನಾಳ ಹಾಗೂ ಅಂಡಾಶಯಗಳು ಮೆತ್ತಿಕೊಂಡಿರುವುದರಿಂದ ಮಗು ಆಗುವ ಪ್ರಕ್ರಿಯೆ ಕಷ್ಟವಾಗಬಹುದು. ಕೇವಲ ಎರಡು ಮೂರು ತಿಂಗಳು ಮಾತ್ರ ಸಹಜವಾಗಿ ಮಗು ಪಡೆಯಲು ಪ್ರಯತ್ನಿಸಿ ನಂತರ ಐ.ವಿ.ಎಫ್. ತಂತ್ರಜ್ಞಾನ ಅದರಲ್ಲೂ ಇಕ್ಸಿ (ಇಂಟ್ರಾ ಸೈಟೋಪ್ಲಾಸ್ಮಿಕ್ ಸ್ಪರ್ಮ ಇಂಜೆಕ್ಷನ್) ಎಂಬ ವಿಧಾನದಿಂದ ಮಗು ಪಡೆಯುವುದು ಹೆಚ್ಚು ಫಲಪ್ರದವಾಗಬಹುದು. ಬಂಜೆತನ ಚಿಕಿತ್ಸಾ ತಜ್ಞವೈದ್ಯರನ್ನು ಸಂಪರ್ಕಿಸಿ.

ಪ್ರಶ್ನೆ: ನನಗೆ ಸರಿಯಾಗಿ ಋತುಚಕ್ರ ಆಗುತ್ತಿಲ್ಲ. ಮಾತ್ರೆಯನ್ನು ತೆಗೆದುಕೊಂಡರೆ ಮಾತ್ರ ಆಗುತ್ತದೆ. ವ್ಯಾಯಾಮ ಮಾಡುತ್ತೇನೆ, ಮತ್ತೆ ಜಂಕ್‌ಫುಡ್ ಸೇವಿಸುವುದಿಲ್ಲ. ನನಗೆ ಮದುವೆಯಾಗಿದೆ. 3-4 ವೈದ್ಯರ ಹತ್ತಿರ ತೋರಿಸಿದರೂ ಏನು ಪ್ರಯೋಜನವಾಗಿಲ್ಲ. ನಾನು ತಿಂಗಳು ಸರಿಯಾಗಿ ಮುಟ್ಟಾಗಲು ಏನುಮಾಡಲಿ? ಮುಂದೆ ಮಗುವಾಗಲು ಏನಾದರು ತೊಂದರೆಯಿದೆಯೇ ತಿಳಿಸಿ?

ವಿದ್ಯಾ, ಮಂಗಳೂರು

ಉತ್ತರ: ವಿದ್ಯಾರವರೇ ನೀವು ಬರೆದಿರುವುದು ನೋಡಿದರೆ ನಿಮಗೆ ಪಿ.ಸಿ.ಒ.ಡಿ. ಸಮಸ್ಯೆಯಿದೆ ಎಂದು ಅನಿಸುತ್ತದೆ. ನೀವು ವೈದ್ಯರ ಹತ್ತಿರ ತೋರಿಸಿದ ಯಾವ ವರದಿಯನ್ನೂ ಲಗತ್ತಿಸಿಲ್ಲ. ನೀವು ತಿಂಗಳು ತಿಂಗಳು ಸರಿಯಾಗಿ ಮುಟ್ಟಾಗದಿರುವುದರಿಂದ ನಿಮಗೆ ಅಂಡಾಣು ಉತ್ಪತ್ತಿ ಸರಿಯಾಗಿ ಆಗುತ್ತಿಲ್ಲ. ಇದರಿಂದ ಮುಂದೆ ಮಗುವಾಗುವುದು ಕಷ್ಟವಾಗುತ್ತದೆ. ನೀವು ಮೇಲೆ ಪಿ.ಸಿ.ಒ.ಡಿ. ಸಮಸ್ಯೆಗೆ ತಿಳಿಸಿದ ಹಾಗೆ ಜೀವನ ಶೈಲಿ ಬದಲಿಸಿಕೊಂಡು, ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯನ್ನು ಪಾಲಿಸುತ್ತಾ, ಅಂಡಾಣು ಬಿಡುಗಡೆಯಾಗಲು ತಜ್ಞರು ಬರೆದ ಔಷಧಗಳನ್ನು ಸೇವಿಸಿ. ನಿಮಗೆ ಋತುಚಕ್ರವೂ ಸರಿಹೋಗುತ್ತದೆ ಜೊತೆಗೆ ಮಗುವು ಆಗುತ್ತದೆ. ಚಿಂತಿಸಬೇಡಿ.

ಪ್ರಶ್ನೆ: ನನಗೆ 25 ವರ್ಷ. ಸರಿಯಾಗಿ ಮುಟ್ಟು ಆಗುತ್ತಿಲ್ಲ, ಹಾರ್ಮೋನ್ ವ್ಯತ್ಯಾಸದಿಂದ ಈ ರೀತಿ ಆಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ, ಇದಕ್ಕೆ ಪರಿಹಾರ ತಿಳಿಸಿ.

ಕವಿತಾ, ಊರು ತಿಳಿಸಿಲ್ಲ.

ಕವಿತಾರವರೇ ನಿಮ್ಮ ತೂಕ, ನೀವು ವಿವಾಹಿತರೇ, ಎಷ್ಟು ದಿನಕ್ಕೊಮ್ಮೆ ಋತುಚಕ್ರ ಆಗುತ್ತದೆ ಎಂಬ ಯಾವ ಮಾಹಿತಿಯನ್ನೂ ತಿಳಿಸಿಲ್ಲ ನಿಮಗೆ ಪಿ.ಸಿ.ಓ.ಡಿ ಸಮಸ್ಯೆ ಇರಬಹುದು ಅನಿಸುತ್ತದೆ. ಆ ಬಗ್ಗೆ ನಾನು ಅಂಕಣದಲ್ಲಿನ ಪಿ.ಸಿ.ಒ.ಡಿ ಪ್ರಶ್ನೆಗೆ ಉತ್ತರಿಸಿದ್ದೇನೆ. ಅದನ್ನು ಅನುಸರಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು