ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸಿವೆ ಹೊಲಗಳ ಮೇಲೆ ವಿಷಗಾಳಿ ಬೀಸುತ್ತಿದೆ...

Last Updated 30 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ವಾರಿಸ್ ಶಾಹ್‌ನಿಗೆ ಇಂದು ಬೇಡುತ್ತಿರುವೆ

ಗೋರಿಯೊಳಗಿಂದಲೇ ಮಾತಾಡಲು

ಪ್ರೇಮದ ಪುಸ್ತಕದಿಂದ

ಹೊಸ ಪುಟವೊಂದ ತೆರೆಯಲು!

ಪಂಜಾಬದ ಒಬ್ಬ ಮಗಳು ಅತ್ತಾಗ

ನೀನು ಒಂದು ಮಹಾಕಾವ್ಯವನ್ನೇ ಬರೆದೆ

ಇಂದು ಲಕ್ಷಾಂತರ ಹೆಂಗಳೆಯರು ಕಂಬನಿಗರೆಯುತ್ತಿರುವರು

ಎಲ್ಲಿರುವೆ ವಾರಿಸ್ ಶಾಹ್!

ಅವರ ನೋವಿಗೆ ದನಿಯಾಗು ಬಾ…

ಇಂಥದ್ದೊಂದು ಹೃದಯಸ್ಪರ್ಶಿ ಕವಿತೆ ಬರೆದದ್ದು ಪಂಜಾಬಿನ ಸುಪ್ರಸಿದ್ಧ ಕವಯಿತ್ರಿ ಅಮೃತಾ ಪ್ರೀತಂ.

ಭಾರತ ವಿಭಜನೆಯಾದಾಗ ಪಂಜಾಬ್‌ ಹರಿದು ಹಂಚಿಹೋಗಿ, ಕೋಮು ದ್ವೇಷದ ದಳ್ಳುರಿಯಲ್ಲಿ ಪಂಚ ನದಿಗಳ ನೀರು ಕೆನ್ನೀರಾಗಿ ಊರಿಗೆ ಊರೇ ಸ್ಮಶಾನವಾಗಿತ್ತು. ಎಲ್ಲಿ ನೋಡಿದರಲ್ಲಿ ಹೆಣಗಳ ರಾಶಿ. ಆಗಸದ ತುಂಬ ಹದ್ದುಗಳ ಹಾರಾಟ. ಊರು– ಮನೆಗಳು ಅಲ್ಲೇ ಉಳಿದವು, ಜನ ಚದುರಿಹೋದರು. ಲಾಹೋರ್ ತೊರೆದು ಬದುಕನರಸಿ ದೆಹಲಿಗೆ ಬರುವ ಅಮೃತಾ, ಹದಿನೆಂಟನೆಯ ಶತಮಾನದ ಸೂಫಿ ಸಂತ ವಾರಿಸ್ ಶಾಹ್‌ನಲ್ಲಿ ಮೊರೆಯಿಡುತ್ತಾರೆ. ಕರುಳು ಸೀಳುವ ದುಃಖವು ಕವಿತೆಯಾಗಿ ಉಮ್ಮಳಿಸುತ್ತದೆ.

ಹಿಂದೂ ಮುಸ್ಲಿಂ ಭ್ರಾತೃತ್ವವನ್ನು, ಸಮರಸದ ಬದುಕನ್ನು, ವಿಶ್ವಮಾನವ ಪ್ರೇಮವನ್ನು ಸಾರಿದವರು ನಮ್ಮ ಸೂಫಿ ಸಂತರು. ವಾರಿಸ್ ಶಾಹ್, ಪ್ರಪಂಚದ ಸುಪ್ರಸಿದ್ಧ ಪ್ರೇಮಕಥೆಗಳಲ್ಲೊಂದಾದ ‘ಹೀರ್ ರಾಂಝಾ’ ಬರೆದ ಕೃತಿಕಾರ.

ಆ ದುರಿತ ಕಾಲದಲ್ಲಿ, ‘ಆಜ ಆಖಾಂ ವಾರಿಸ್ ಶಾ ನೂ’ ಕವಿತೆಯು ನೊಂದ ಪಂಜಾಬಿಗಳ ಗೀತೆಯಾಯ್ತು. ಮನೆ ಮನೆಗಳ ಪ್ರಾರ್ಥನೆಯಾಗಿತ್ತು. ಗಾಸಿಗೊಂಡ ಎರಡು ದೇಶಗಳ ಜನರು ಪ್ರಕಟಗೊಂಡ ಕವಿತೆಯ ಪ್ರತಿಯನ್ನು ಜೇಬಿನಲ್ಲಿಟ್ಟುಕೊಂಡು ಓದಿ ಓದಿ ಕಣ್ಣಿರೀಡುತ್ತಿದ್ದುದನ್ನು ಉರ್ದು ಕವಿ ಅಹಮದ್ ನದೀಮ್ ಕಾಸ್ಮಿ, ಫೈಜ್ ಅಹಮದ್ ಫೈಜ್ ಅವರ ಪುಸ್ತಕಕ್ಕೆ ಬರೆದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ. ಇಪ್ಪತ್ತನೇ ಶತಮಾನದಲ್ಲಿ ತಮ್ಮ ಪ್ರಖರವಾದ ಕವಿತೆ, ಕಥೆ, ಕಾದಂಬರಿಗಳ ಮೂಲಕ ಜನಮನಗಳಲ್ಲಿ ನೆಲೆಸಿಹೋದ ಅಮೃತಾ ಪ್ರೀತಮ್ ಹುಟ್ಟಿದ್ದು ಆಗಸ್ಟ್ 31, 1919ರಲ್ಲಿ ಪಂಜಾಬ್‌ನ ಗುಜರನ್ ವಾಲಾದಲ್ಲಿ (ಈಗಿನ ಪಾಕಿಸ್ತಾನದಲ್ಲಿದೆ). ಬದುಕಿದ್ದರೆ ಈಗ ತೊಂಬತ್ತೊಂಬತ್ತರ ಹೊಸಿಲು ದಾಟಿರುತ್ತಿದ್ದರು.

ಗೋಧಿ ಬೆಳೆಯುವ ಪಂಜಾಬ್, ಶ್ರೀಮಂತ ರಾಜ್ಯ. ಅಲ್ಲಿಯವರು ‘ಖಾವೋ ಪಿಯೋ ಐಷ್ ಕರೋ’ ಎಂಬ ಮನೋಭಾವದ ‘ಬಿಂದಾಸ್’ ಪ್ರವೃತ್ತಿಯ ಜನ. ಇಂದು ಮಾದಕ ದ್ರವ್ಯದ ವ್ಯಸನಕ್ಕೆ ಪಂಜಾಬ್‌ನ ಲಕ್ಷಾಂತರ ಯುವಜೀವಗಳು ಬಲಿಯಾಗಿ, ಇಡೀ ಪಂಜಾಬ್ ತತ್ತರಿಸುತ್ತಿರುವಾಗ ಅಮೃತಾ ನೆನಪಾಗುತ್ತಾರೆ.

ಹೇ... ದೀನ ದುಃಖಿತರ ಬಂಧುವೇ

ಪಂಜಾಬಿನ ದುಃಸ್ಥಿತಿ ನೋಡು

ಜಗುಲಿಗಳು ಶವಗಳಿಂದ ತುಂಬಿವೆ

ಕೆಂಪಗೆ ಹರಿದಿದೆ ಚೆನಾಬ್ ನದಿ

ಯಾರೋ ಪಂಚ ನದಿಗಳಿಗೆ ವಿಷ ಬೆರೆಸಿದ್ದಾರೆ

ಮತ್ತು ಇದೇ ನೀರು ಭೂಮಿಯನ್ನು ತಣಿಸುತ್ತಿದೆ

ಫಲವತ್ತಾಗಿದ್ದ ಭೂಮಿಯಲಿ ಮೊಳಕೆಯೊಡೆದಿವೆ ವಿಷಸಸ್ಯಗಳು

ಕೆಂಪಗಾಗಿದೆ ದಿಗಂತ, ಮುಗಿಲು ಮುಟ್ಟಿದೆ ಶಾಪ...’

ಎಪ್ಪತ್ತು ದಶಕಗಳ ಹಿಂದೆ ಅಮೃತಾ ಬರೆದ ಈ ಸಾಲುಗಳು ಇಂದಿನ ಪಂಜಾಬಿನ ಸ್ಥಿತಿಗೆ ಪ್ರಸ್ತುತವೆನಿಸುತ್ತವೆ. ಮಾದಕದ್ರವ್ಯದಂಥ ವಿಷಕಾರಿ ಪಾಚಿ ನಿಧಾನಕ್ಕೆ ದೇಶದ ತುಂಬ ಹಬ್ಬುತ್ತಿದೆ. ಒಂದೊಂದಾಗಿ ದೊಡ್ಡ ದೊಡ್ಡ ನಗರಗಳು, ಸಣ್ಣಪುಟ್ಟ ಊರುಗಳು ‘ಉಡತಾ ಪಂಜಾಬ್’ ಆಗುತ್ತ ಆತಂಕ ಹುಟ್ಟಿಸುತ್ತಿವೆ.

ಪಾಕಿಸ್ತಾನ್ ಮತ್ತು ಅಫ್ಗಾನಿಸ್ತಾನದ ಸರಹದ್ದಿಗೆ ಅಂಟಿಕೊಂಡ ಪಂಚನದಿಗಳ ಪಂಜಾಬ್ ಚರಸ್, ಗಾಂಜಾ, ಅಫೀಮ್, ಹೆರಾಯಿನ್ ನಂತಹ ಮಾದಕವಸ್ತುಗಳ ಕಳ್ಳ ಸಾಗಾಣಿಕೆಯ ಕೇಂದ್ರವಾಗಿದೆ. ಅಫ್ಗಾನಿಸ್ತಾನದಿಂದ ಕೆ.ಜಿ.ಗೆ ₹ 1ಲಕ್ಷ ಬೆಲೆಯಲ್ಲಿ ಖರೀದಿಸಿದ ಹೆರಾಯಿನ್, ಪಂಜಾಬ್ ಮೂಲಕ ದೇಶದ ನಾನಾ ಭಾಗಗಳಲ್ಲಿ ಕೆ.ಜಿ.ಗೆ ₹ 30 ಲಕ್ಷದಂತೆ ಮಾರಾಟವಾಗುತ್ತದೆ. ಈ ಪುಟ್ಟ ರಾಜ್ಯದಲ್ಲಿ ಈಗಾಗಲೇ ಶೇ 75 ರಷ್ಟು ಯುವಕರು ಡ್ರಗ್ ಅಡಿಕ್ಟ್‌ಗಳಾಗದ್ದಾರೆ ಎಂದು ಸಮೀಕ್ಷೆಯೊಂದು ಹೇಳುತ್ತದೆ.

ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಸ್ಥರ ಪ್ರಮುಖ ಉದ್ಯೋಗ ಕೃಷಿ ಮತ್ತು ಡ್ರಗ್ ಸಾಗಾಣಿಕೆ. ರಾಬಿ ಮತ್ತು ಸಟ್ಲೆಜ್ ನದಿಗಳೆ ಗಡಿರೇಖೆಗಳಾಗಿರುವ ಪ್ರದೇಶಕ್ಕೆ ಬೇಲಿಯಿಲ್ಲ. ಇದೇ ಕಳ್ಳಸಾಗಾಣಿಕೆದಾರರ ಮುಖ್ಯ ದ್ವಾರ. ಹಳ್ಳಿಗರ ಸಾಝೀದಾರಿಯೂ ಇದೆ. ಹೆಚ್ಚಿನವರಿಗೆ ಈ ಜಾಲ ಹಣಗಳಿಕೆಯ ಮಾರ್ಗ. ಅನಕ್ಷರಸ್ಥರು, ಉದ್ಯೋಗರಹಿತ ಗ್ರಾಮಸ್ಥರು ಸಣ್ಣ ಪ್ರಮಾಣದ ಕಳ್ಳಸಾಗಾಣಿಕೆ ಜಾಲದಲ್ಲಿ ಕೆಲಸ ಮಾಡಿ ಕುಟುಂಬವನ್ನು ನಿರ್ವಹಿಸುತ್ತಾರೆ. ಕೆಲ ಸಮೀಕ್ಷೆಗಳು ‘ಪಾಕಿಸ್ತಾನವು ಉದ್ದೇಶಪೂರ್ವಕವಾಗಿಯೇ ಡ್ರಗ್ಸ್ ಸರಬರಾಜನ್ನು ಪ್ರೋತ್ಸಾಹಿಸುತ್ತಿದೆ’ ಎಂಬುದನ್ನೂ ಸಾರುತ್ತವೆ.

ಪಂಜಾಬ್‌ನ ಮಾದಕ ದ್ರವ್ಯ ಮಾಫಿಯಾಕ್ಕೆ ಪಾಕಿಸ್ತಾನ ಒಂದೇ ಕಾರಣವಲ್ಲ. ಉತ್ತರಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾ
ಖಂಡ ಕಡೆಯಿಂದಲೂ ಹೆರಾಯಿನ್ ಪೂರೈಕೆಯಾಗುತ್ತದೆ. ಅತಿ ಹೆಚ್ಚು ಆಫೀಮನ್ನು ಬೆಳೆಯುವ ಅರುಣಾಚಲ ಪ್ರದೇಶದಲ್ಲಿ ಸುಮಾರು 2,530 ಹೆಕ್ಟೇರುಗಳಷ್ಟು ಪ್ರಮಾಣದ ಅಫೀಮು ಕೃಷಿಯನ್ನು ಎನ್‌ಸಿಬಿ (Narcotics Control Bureau) 2014ರಲ್ಲಿ ನಾಶಗೊಳಿಸಿತ್ತು. ಅಫೀಮು ಕೃಷಿ ಮತ್ತು ಕಳ್ಳಸಾಗಾಣಿಕೆಯನ್ನು ಬೇರು ಸಹಿತ ಕಿತ್ತೊಗೆಯಲು ಸತತ ಪ್ರಯತ್ನ ನಡೆಯುತ್ತಲೇ ಇದೆ. ಮಧ್ಯಪ್ರದೇಶದ ಮಂದಸೋರ್, ನಿಮೂಚ್ ಪ್ರದೇಶಗಳಲ್ಲಿ ಔಷಧೀಯ ಕಂಪನಿಗಳ ಪೂರೈಕೆಗಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಭೂಪ್ರದೇಶಗಳಲ್ಲಿ ಕಾನೂನುಬದ್ಧವಾಗಿ ಆಫೀಮನ್ನು ಬೆಳೆಯಲಾಗುತ್ತದೆ. ಆದರೆ ರೈತರಿಗೆ ಸುಖವಿಲ್ಲ. ಸ್ಥಳೀಯ ಆಡಳಿತ ಮತ್ತು ಪೊಲೀಸರ ಕೈಗೆ ಸಿಕ್ಕ ಕೃಷಿಕನ ನೆತ್ತಿ ಮೇಲೆ ಸದಾ ಕಳ್ಳಸಾಗಾಣಿಕೆಯ ಅಪವಾದ, ಸುಳ್ಳು ಆರೋಪದ ಭೀತಿ, ಕೊಲೆ, ಸುಲಿಗೆಯ ಕತ್ತಿ ತೂಗುತ್ತಿರುತ್ತದೆ!

ವ್ಯಾಪಕವಾದ ಡ್ರಗ್ ಮಾಫಿಯಾ ಜಾಲದಲ್ಲಿ ದೊಡ್ದ ದೊಡ್ದ ಕುಳಗಳಿದ್ದಾರೆ. ಸರ್ಕಾರಿ ಏಜೆನ್ಸಿಗಳೂ ಇವೆ. ಬಿಎಸ್ಎಫ್, ನಾರ್ಕೋಟಿಕ್ಸ್ ಇಂಟೆಲಿಜೆನ್ಸ್‌ ನಿರ್ದೇಶನಾಲಯ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಇಂಟೆಲಿಜನ್ಸ್ ಬ್ಯೂರೋ, ಪಂಜಾಬ್ ಪೊಲೀಸ್ ವ್ಯವಸ್ಥೆ, ಔಷಧ ವ್ಯಾಪಾರಿಗಳು, ವಿತರಕರು ಹೀಗೆ ಒಂದು ಕ್ರಮಬದ್ಧ ವ್ಯವಸ್ಥೆಯೇ ಇದೆ. ಬೇಲಿಯೇ ಎದ್ದು ಹೊಲ ಮೇಯುವ ಸ್ಥಿತಿ ಇಲ್ಲಿದೆ. ಹಣದ ಲೋಲುಪತೆ, ಮಾದಕ ಪದಾರ್ಥಗಳ ದಂಧೆಗೆ ಇಡೀ ಪಂಜಾಬ್ ವಶವಾಗಿದ್ದು ದುರದೃಷ್ಟ. ದಿನಕ್ಕೊಂದು ಸಾವು ಮನೆ ಮನೆಗಳ ಕದ ತಟ್ಟುತ್ತಿದೆ. ಮಾದಕ ದ್ರವ್ಯ ಮಾರಾಟ ಮತ್ತು ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ಪಂಜಾಬ್‍ ಒಂದರಲ್ಲಿಯೇ 14,483 ಪ್ರಕರಣಗಳು ದಾಖಲಾಗಿವೆ. ರಾಜ್ಯದ 3.25ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಉದ್ದೀಪನ (ಡೋಪಿಂಗ್) ಪರೀಕ್ಷೆ ಮಾಡುವುದು ಕಡ್ಡಾಯವೆಂಬ ನಿಯಮ ರೂಪಿಸಲಾಗಿದೆ. ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಸರ್ಕಾರವು ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮತ್ತು ಅದರ ದಂಧೆಯಲ್ಲಿ ತೊಡಗಿದವರಿಗೆ ಮರಣದಂಡನೆಯಂಥ ಕಠಿಣ ಶಿಕ್ಷೆಯನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರದ ಮುಂದಿಟ್ಟಿದೆ.

ಡ್ರಗ್ ಕಾರಣಕ್ಕೆ ಕುಖ್ಯಾತಿ ಹೊತ್ತುಕೊಂಡ ಪಂಜಾಬಿನಲ್ಲಿ ಡ್ರಗ್ ಅಡಿಕ್ಟ್ ಪುರುಷರ ಕಥೆಗಳು ಸದ್ದು ಮಾಡುತ್ತವೆ. ಆದರೆ ಗಂಟಲಲ್ಲಿಯೇ ಸಿಕ್ಕಿಕೊಂಡ ಸದ್ದಿಲ್ಲದ ಹೆಂಗಸರ ಕಥೆಗಳೂ ಇವೆ. ‘ಬದನಾಮಿ’ ಮತ್ತು ಸಮಾಜದ ಕೆಂಗಣ್ಣಿನ ಭೀತಿಯಿಂದ ಅವರ ಕಥೆಗಳು ಬೆಳಕಿಗೆ ಬರುವುದಿಲ್ಲ. ಮಾದಕ ಪದಾರ್ಥಗಳ ಗೀಳಿನಿಂದ ಮುಕ್ತರಾಗಲು ಇಷ್ಟವಿದ್ದರೂ ಅವಮಾನವಾಗುವುದೆಂಬ ಭಯದಿಂದ ಆರೋಗ್ಯ ಮತ್ತು ಪುನರ್ವಸತಿ ಕೇಂದ್ರಗಳಿಗೆ ಹೋಗುವುದಿಲ್ಲ. ಮೊದ ಮೊದಲು ವೇಶ್ಯಾವಾಟಿಕೆಗಳಿಗಷ್ಟೇ ಸೀಮಿತವಾಗಿದ್ದ ಮಾದಕ ದ್ರವ್ಯದ ವ್ಯಸನವು ಇಂದು ವಿದ್ಯಾರ್ಥಿಗಳು, ಗೃಹಿಣಿಯರು, ನರ್ಸ್, ಆರ್ಕೆಸ್ಟ್ರಾ ಡಾನ್ಸರುಗಳು, ನಟಿಯರು, ಹಾಡುಗಾರರು... ಯಾರನ್ನೂ ಬಿಟ್ಟಿಲ್ಲ. ಮರ್ಯಾದೆಗೆ ಅಂಜುವ ಹೆಣ್ಣುಮಕ್ಕಳು ತಮ್ಮ ಡ್ರಗ್ಸ್‌ ವ್ಯಸನದ ಬಗ್ಗೆ ಎಲ್ಲೂ ಬಾಯಿ ತೆರೆಯಲಾರರು.

‘ಪ್ರೇಮಗೀತೆಯನುಸುರುತ್ತಿದ್ದ ಕೊಳಲು ಎಲ್ಲಿ ಕಳೆದುಹೋಯಿತು

ನುಡಿಸುವ ಕಲೆಯನೇ ಮರೆತಿರುವರು ರಾಂಝಾನ ಸೋದರರು

ಭೂಮಿಯ ಮೇಲೆ ನೆತ್ತರು ಹರಿದು ಗೋರಿಗಳು ಉರುಳತೊಡಗಿದವು

ಪ್ರೇಮಕಣಿವೆಯ ರಾಜಕುಮಾರಿಯರು ಮಸಣದಲಿ ಬಿಕ್ಕುತಲಿಹರು

ನಾನೆಲ್ಲಿಂದ ಹುಡುಕಿ ತರಲಿ ಇನ್ನೊಬ್ಬ ವಾರಿಸ್ ಶಾಹ್ ನನ್ನು…’

ಮತ್ತೊಮ್ಮೆ ಹುಟ್ಟಿಬನ್ನಿ ಅಮೃತಾ ಜೀ... ನಿಮ್ಮ ಪ್ರೀತಿಯ ಪಂಜಾಬನ್ನು ನೋಡಬನ್ನಿ… ಹಸಿರು ತುಳುಕುವ ಸಾಸಿವೆ ಹೊಲಗಳ ಮೇಲೆ ವಿಷಗಾಳಿ ಬೀಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT