ಗುರುವಾರ , ಸೆಪ್ಟೆಂಬರ್ 24, 2020
21 °C

ನೀಲಮ್ಮನ ನಿಜದ ಕಥೆ

ಕೆ.ಎಸ್‌. ರತ್ನಪ್ರಭಾ Updated:

ಅಕ್ಷರ ಗಾತ್ರ : | |

ಒಂದಷ್ಟು ಆಸಕ್ತಿ, ಮಾನವೀಯ ಮೌಲ್ಯಗಳಿದ್ದರೆ ‘ಆಡಳಿತದಲ್ಲಿರುವವರು ಜನರ ಸೇವೆಗೆ ಇರುವವರು’ ಎಂಬ ವಿಶ್ವಾಸ ಮೂಡಿಸಲು ಬಹಳ ಶ್ರಮಪಡಬೇಕಾಗಿಲ್ಲ. ಒಂದೆರಡು ಪತ್ರ ವ್ಯವಹಾರ ಮಾಡಿದರೂ ಒಬ್ಬೊಬ್ಬರ ಜೀವನ ಸುಸೂತ್ರವಾಗುತ್ತದೆ. ಈ ಮಾತನ್ನು ಪುಷ್ಟೀಕರಿಸಲು ಕೂಡಲೇ ನೆನಪಾಗುತ್ತಿರುವುದು ನೀಲಮ್ಮನ ಕಥೆ.

ಆ ಮನವಿ ನನ್ನ ಕೈಗೆ ಬಂದು ತಲುಪಿದಾಗ ಗಾಬರಿಯಾಯಿತು. ಪಿಂಚಣಿಗಾಗಿಯೇ ಒಂದು ಕುಟುಂಬ ಏಳೆಂಟು ವರ್ಷ ಓಡಾಡಿತ್ತು. ಆದರೂ ವ್ಯವಸ್ಥೆಯ ಮೇಲಿನ ಅವರ ನಂಬಿಕೆ ಅಲುಗಾಡಿರಲಿಲ್ಲ. ಇಂದಲ್ಲ ನಾಳೆ ಸಿಗುವುದೆಂಬ ಅವರ ಭರವಸೆಗೆ ಆ ಕುಟುಂಬದ ಅಸಹಾಯಕತೆಯೂ ಕಾರಣವಾಗಿರಬೇಕು. ಅಪ್ಪನನ್ನು ಕಳೆದುಕೊಂಡಿರುವ ಕುಟುಂಬ.

ಹಾಸಿಗೆ ಹಿಡಿದ ಅಮ್ಮ, ಕುಟುಂಬವನ್ನು ಪೊರೆಯಲು ಕಷ್ಟ ಪಡುವ ಮಕ್ಕಳು. ಔಷಧಿಗಾಗಿ ಪಿಂಚಣಿಯ ಹಣವೇ ಆಧಾರವಾಗಿರುವುದು ಆ ಬರಹದಲ್ಲಿ ಸ್ಪಷ್ಟವಾಗಿತ್ತು. ಇನ್ನೂ ಬಂದಿರದ ಪಿಂಚಣಿಗಾಗಿ ಮತ್ತೆ ಮತ್ತೆ ಅಲೆಯುವುದೂ ಅವರಿಂದ ಅಸಾಧ್ಯವಾಗಿತ್ತು. ಏನಾದರೂ ಆಗಬಹುದು ಎಂಬ ನಿರೀಕ್ಷೆಯ ಧಾಟಿಯಲ್ಲಿತ್ತು ಆ ಪತ್ರ. ಯಾರನ್ನೂ ದೂರದ, ಯಾವ ವ್ಯವಸ್ಥೆಯನ್ನೂ ದೂಷಿಸದ ಆ ಪತ್ರ ನನ್ನನ್ನು ಕಾಡಿತ್ತು.

ಇದು ಕನಕಪುರ ಪಟ್ಟಣದ ನೀಲಮ್ಮ ಎನ್ನುವವರ ಕಥೆ. ನೀಲಮ್ಮ 80ರ ಅಜ್ಜಿ. ಆಹಾರಕ್ಕಿಂತಲೂ ಹೆಚ್ಚಿನ ಖರ್ಚು ಔಷಧಿ, ಮಾತ್ರೆಗಳಿಗೆ ಆಗುತ್ತದೆ. ಇದಕ್ಕೆ ಆದಾಯದ ಮೂಲವೆಂದರೆ ಅವರ ಪತಿಯ ಪಿಂಚಣಿ. ಪತಿ ಚೂಡಯ್ಯ ಕುರುಪೇಟೆಯ ಜ್ಯೋತಿ ಕಾಲೋನಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕರಾಗಿ 45 ವರ್ಷ ಸೇವೆ ಸಲ್ಲಿಸಿದ್ದರು. ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದರು. ನೀಲಮ್ಮ ಅವರಿಗೆ ಕುಟುಂಬ ಪಿಂಚಣಿ ಯೋಜನೆಯಲ್ಲಿ 2,850 ರೂಪಾಯಿ ಪಿಂಚಣಿ ನೀಡಲಾಗುತ್ತಿತ್ತು.

ಈ ಪಿಂಚಣಿಯ ಜೊತೆಗೆ ಅವರ ಕುಟುಂಬದವರು ಕಷ್ಟಪಟ್ಟು ದುಡಿದು ಒಂದಿಷ್ಟು ಹಣವನ್ನು ಸಂಪಾದಿಸುತ್ತಿದ್ದರು. ಅವರಿಗೆ ಬರುತ್ತಿರುವ ಪಿಂಚಣಿ 2009ರಲ್ಲಿ ಇದ್ದಕ್ಕಿದ್ದಂತೆ ನಿಂತುಹೋಯಿತು. ಬ್ಯಾಂಕಿಗೆ ಹೋದರೆ ಇನ್ನೊಂದು ಇಲಾಖೆಗೆ ಹೋಗಲು ತಿಳಿಸುತ್ತಿದ್ದರು. ಯಾವುದೂ ಸ್ಪಷ್ಟವಾಗಿರಲಿಲ್ಲ. ಮಕ್ಕಳು ಈ ಪಿಂಚಣಿಗಾಗಿ ಪ್ರಯತ್ನಿಸುತ್ತಲೇ ಇದ್ದರು. ನೀಲಮ್ಮನನ್ನು ಕರೆದೊಯ್ಯಲು ಆಗುತ್ತಿರಲಿಲ್ಲ. ವೈದ್ಯಕೀಯ ವೆಚ್ಚ ಆ ಕುಟುಂಬಕ್ಕೆ ಭಾರವೆನಿಸುತ್ತಿತ್ತು.

ವರ್ಷಗಳು ಉರುಳುತ್ತಲೇ ಇದ್ದವು. ಪಿಂಚಣಿಗೆ ಅಲೆದಾಟವೂ ನಿಂತಿರಲಿಲ್ಲ. ಏನು ಮಾಡಬೇಕು ಎಂದು ತೋಚದೆ, ನೀಲಮ್ಮ ಅವರ ಮಗ ಎಂ.ಸಿ. ಶಿವಲಿಂಗಯ್ಯ ಅವರ ನೆರವನ್ನು ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ಹೀಗೆ ಆ ಪತ್ರ ನನ್ನನ್ನು ತಲುಪಿತ್ತು. ಸಾಮಾನ್ಯವಾಗಿ ದೂರುಗಳೇ ನಮಗೆ ಬರುತ್ತವೆ. ಸಹಾಯ ಕೋರುವುದಕ್ಕಿಂತ ಹೆಚ್ಚಾಗಿ ವ್ಯವಸ್ಥೆಯನ್ನು ದೂರುವವರೇ ಬಹಳ.

ಈ ಪತ್ರ ಓದಿದ ಕೂಡಲೇ ಮಹಾಲೇಖಪಾಲರ ಕಚೇರಿಗೆ ಒಂದು ಪತ್ರ ಬರೆದೆ. ಇನ್ನೊಂದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ಗೂ. ಎರಡೂ ಕಡೆ ಹಲವಾರು ಪತ್ರವ್ಯವಹಾರಗಳಾದವು. ಎರಡೂ ಕಡೆಯಿಂದ ಸಕಾರಾತ್ಮಕ ಸ್ಪಂದನೆ ದೊರೆಯಿತು. ತಪ್ಪಿದ್ದೆಲ್ಲಿ ಎನ್ನುವ ಅವಲೋಕನದೊಂದಿಗೆ ಪಿಂಚಣಿಯನ್ನು ಪುನರಾರಂಭಿಸಲು ಎಲ್ಲ ಕ್ರಮಗಳನ್ನೂ ತ್ವರಿತವಾಗಿ ಕೈಗೊಳ್ಳಲಾಯಿತು.

2017ರಿಂದ ನೀಲಮ್ಮಗೆ ಪಿಂಚಣಿ ಪುನರಾರಂಭವಾಯಿತು. ಅಷ್ಟೇ ಅಲ್ಲ, ಆ ಎಂಟು ವರ್ಷ ಅವಧಿಯ ಪಿಂಚಣಿಯ ಬಾಕಿಯನ್ನೂ ನೀಡಲಾಯಿತು. ಒಮ್ಮೆ ಒಂದು ಸಮಸ್ಯೆಯ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದೆನಿಸಿದರೆ ಆ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಸರ್ಕಾರದ ಬಳಿ ಬರುವ ಎಲ್ಲ ಅರ್ಜಿ, ಮನವಿಗಳೂ ಆ ಕೂಡಲೇ ವಿಲೇವಾರಿ ಆಗುವಂತಾಗಬೇಕೆಂದರೆ ಪ್ರತಿಯೊಬ್ಬರೂ ಮಾನವೀಯ ನೆಲೆಯಲ್ಲಿ ಚಿಂತಿಸಬೇಕು. ಅಧಿಕಾರ ವ್ಯಾಪ್ತಿಯಲ್ಲಿದ್ದುಕೊಂಡೇ ಸಹಾಯ ಮಾಡಬೇಕು. ಜನರಿಗೆ ನಮ್ಮ ಮೇಲಿನ ನಂಬಿಕೆ ಬಲಗೊಳ್ಳುತ್ತ ಹೋಗುತ್ತದೆ.

ಸರ್ಕಾರದ ಯೋಜನೆಗಳೇನೇ ಇರಲಿ, ಅವು ಸೂಕ್ತ ಫಲಾನುಭವಿಗಳಿಗೆ ತಲುಪಿದರಷ್ಟೇ ಸಾರ್ಥಕವಾಗುತ್ತದೆ. ಯಾವುದೇ ಇಲಾಖೆಯಿರಲಿ, ಸಿಬ್ಬಂದಿ ಸಕಾರಾತ್ಮಕವಾಗಿ ಸ್ಪಂದಿಸುತ್ತಲಿದ್ದರೆ ಜನರ ಬದುಕು ಬದಲಾಗುತ್ತದೆ. ನಮ್ಮ ಕರ್ತವ್ಯದ ಬಗ್ಗೆ ಒಂದಷ್ಟು ಬದ್ಧತೆ, ಇನ್ನೊಂದಷ್ಟು ಮಾನವೀಯ ಮೌಲ್ಯಗಳಿದ್ದರೆ ಇದು ಕಷ್ಟವೆನಿಸದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.