ಗುರುವಾರ , ಅಕ್ಟೋಬರ್ 17, 2019
28 °C
ಪಾಕಿಸ್ತಾನದ ವಿಭಜನಕಾರಿ ಕಾರ್ಯಸೂಚಿ ಬಗ್ಗೆ ಜಗತ್ತನ್ನು ಭಾರತ ಎಚ್ಚರಿಸಿದೆ

ಇಮ್ರಾನ್‌ ಮಾತನ್ನು ಯಾರೂ ನಂಬುತ್ತಿಲ್ಲ!

ಎ. ಸೂರ್ಯ ಪ್ರಕಾಶ್
Published:
Updated:

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿಯ ಅಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ವಿಚಾರವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಎಬ್ಬಿಸಿರುವ ಗಲಾಟೆ, ‘ರಕ್ತಪಾತ ಆಗುತ್ತದೆ’ ಎಂದು ಹೇಳಿದ್ದು, ‘ಅಣ್ವಸ್ತ್ರ ಬಳಸಿ ಹತ್ಯಾಕಾಂಡ’ ಎಂಬ ಪದಗಳನ್ನು ಮಕ್ಕಳಾಟದ ರೂಪದಲ್ಲಿ ಬಳಸಿದ್ದು ಯಾರಲ್ಲೂ ಭೀತಿ ಮೂಡಿಸುವುದಿಲ್ಲ. ಸ್ವಾತಂತ್ರ್ಯ ಪಡೆದ ನಂತರ ಭಾರತವು ಇಂತಹ ಬೆದರಿಕೆಗಳನ್ನು ಪಾಕಿಸ್ತಾನದ ನಾಯಕರಿಂದ ಹಲವು ಬಾರಿ ಕೇಳಿಸಿಕೊಂಡಿದೆ. ಯಾವುದಕ್ಕೂ ಲಾಯಕ್ಕಿಲ್ಲದ ದೇಶದ ರಾಜಕೀಯದ ಮೇಲೆ ಹಿಡಿತ ಹೊಂದಿರುವ ಅನಾಗರಿಕ ವ್ಯಕ್ತಿಗಳು ಆಡುವ ಮಾತುಗಳು ಅವು ಎಂದು ನಿರ್ಲಕ್ಷಿಸಿದೆ ಕೂಡ.

ಕಾಶ್ಮೀರದಲ್ಲಿ ‘ನೋವು ಉಣ್ಣುತ್ತಿರುವ’ ಜನರೆಲ್ಲ ಮುಸ್ಲಿಮರು ಎಂಬ ಕಾರಣಕ್ಕಾಗಿ, ಸಂವಿಧಾನದ 370ನೇ ವಿಧಿಯ ಅಡಿ ನೀಡಲಾಗಿದ್ದ ಸ್ಥಾನಮಾನವನ್ನು ಹಿಂಪಡೆದ ಕ್ರಮದ ಬಗ್ಗೆ ವಿಶ್ವವು ಗಮನ ನೀಡುತ್ತಿಲ್ಲ ಎಂದು ಖಾನ್ ಅವರು ಈಚೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ಮಾಧ್ಯಮಗಳಿಗೆ ನೀಡಿದ ಸಂದರ್ಶನ ಗಳಲ್ಲಿಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಈ ರೀತಿ ದಿಗ್ಬಂಧನಕ್ಕೆ ಒಳಗಾದವರು ಯುರೋಪಿಯನ್ನರೋ, ಕ್ರೈಸ್ತರೋ, ಯಹೂದಿಗಳೋ ಅಥವಾ ಅಮೆರಿಕನ್ನರೋ ಆಗಿದ್ದಿದ್ದರೆ, ವಿಶ್ವ ಹೀಗೆ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ’ ಎಂದೂ ಅವರು ಹೇಳಿದ್ದಾರೆ.

ಕ್ರೈಸ್ತ ಕೋಮುವಾದಿಗಳಿಂದ, ಜನಾಂಗೀಯವಾದಿಗಳಿಂದ, ಯಹೂದಿಗಳ ಪರ ಅನುಕಂಪ ಹೊಂದಿರುವವರಿಂದ ಪಾಶ್ಚಿಮಾತ್ಯ ಜಗತ್ತು ತುಂಬಿಕೊಂಡಿದೆ ಎಂಬ ಚಿತ್ರಣವನ್ನು ನೀಡಲು ಖಾನ್ ಅವರು ಯತ್ನಿಸಿದ್ದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಏಕೆಂದರೆ, ಆಫ್ರಿಕಾ ಮತ್ತು ಅರೇಬಿಯಾದಿಂದ ವಲಸೆ ಬರುತ್ತಿರುವ ಲಕ್ಷಾಂತರ ಮಂದಿ ಮುಸ್ಲಿಮರಿಗೆ ತೆರೆದ ಮನಸ್ಸಿನ ಸ್ವಾಗತವನ್ನು ಯುರೋಪ್‌ ನೀಡಿದೆ.

ಅಷ್ಟೇ ಅಲ್ಲ, ಗೊಂದಲಗಳಲ್ಲಿ ಮುಳುಗಿದ್ದ ನೆಹರೂವಾದಿಗಳು ದೆಹಲಿಯನ್ನು ಆಳುತ್ತಿದ್ದಾಗಿನ ಸಂದರ್ಭ ಇದಲ್ಲ. ಕಾಶ್ಮೀರದ ವಿಚಾರ ಏನು ಎಂಬುದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿಶ್ವಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ಸು ಕಂಡಿರುವಂತೆ ಕಾಣುತ್ತಿದೆ. ಜಮ್ಮು ಮತ್ತು ಕಾಶ್ಮೀರವು ಇತರ 563 ಪ್ರಾಂತ್ಯಗಳು ಭಾರತದ ಜೊತೆ ವಿಲೀನವಾದ ರೀತಿಯಲ್ಲೇ ತಾನು ಕೂಡ ವಿಲೀನವಾಯಿತು, ಆ ಮೂಲಕ ಭಾರತದ ಅವಿಭಾಜ್ಯ ಅಂಗವಾಯಿತು ಎಂಬುದನ್ನು ಬೇರೆ ದೇಶಗಳು ಈಗ ಕಂಡುಕೊಂಡಿವೆ.

ಜಾತ್ಯತೀತ ಪರಂಪರೆಯ ಬಗ್ಗೆ ಯಾವ ಗೌರವವನ್ನೂ ಹೊಂದಿಲ್ಲದ ರಾಷ್ಟ್ರಕ್ಕೆ ಸೇರಿದವರು ಈ ಖಾನ್. ಅದರಲ್ಲೂ ಆ ದೇಶವು ಜನಾಂಗೀಯ ನಿರ್ಮೂಲನೆಯಲ್ಲಿ ವಿಶೇಷ ಪರಿಣತಿ ಹೊಂದಿದೆ. ಪಾಕಿಸ್ತಾನದ ಜನನ ಆದಾಗ ಹಿಂದೂಗಳು ಆ ದೇಶದ ಒಟ್ಟು ಜನಸಂಖ್ಯೆಯ ಶೇಕಡ 25ರಷ್ಟಿದ್ದರು. ಕಳೆದ ಏಳು ದಶಕಗಳ ಅವಧಿಯಲ್ಲಿ ಅಲ್ಲಿ ಹಿಂದೂ ಜನಸಂಖ್ಯೆಯ ಪ್ರಮಾಣ ಶೇಕಡ 1.64ರಷ್ಟಕ್ಕೆ ಕುಸಿದಿದೆ. ಹಿಂದೂಗಳನ್ನು ಒಂದೋ ಇಸ್ಲಾಂಗೆ ಮತಾಂತರ ಮಾಡಲಾಯಿತು ಅಥವಾ ಅವರನ್ನು ಕೊಲ್ಲಲಾಯಿತು. ಇದೇ ರೀತಿಯಲ್ಲಿ, ಕ್ರೈಸ್ತರು ಹಾಗೂ ಅಹಮದೀಯರ ಸಂಖ್ಯೆ ಕೂಡ ಅಲ್ಲಿ ತೀರಾ ನಗಣ್ಯ ಎಂಬ ಮಟ್ಟಕ್ಕೆ ಇಳಿದಿದೆ. ಒಟ್ಟಾರೆಯಾಗಿ ಅವರು ಆ ದೇಶದ ಒಟ್ಟು ಜನಸಂಖ್ಯೆಯ ಶೇಕಡ 3ರಷ್ಟಕ್ಕೆ ಸೀಮಿತರಾಗಿದ್ದಾರೆ. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 3.5 ಕೋಟಿ ಆಗಿತ್ತು. ಈಗ ಅದು 17.5 ಕೋಟಿಗೆ ಏರಿದೆ.

ಈ ವಿಚಾರ ವಿಶ್ವಕ್ಕೆ ಗೊತ್ತಿದೆ. ಪಾಕಿಸ್ತಾನವು ಧರ್ಮಾಧಾರಿತ ರಾಷ್ಟ್ರ, ಅಲ್ಲಿನ ಪ್ರಮುಖ ಸಾಂವಿಧಾನಿಕ ಹುದ್ದೆಗಳು ಮುಸ್ಲಿಮರಿಗೆ ಮಾತ್ರ ಮೀಸಲಾಗಿವೆ ಎಂದು ಸಂವಿಧಾನವೇ ಹೇಳುತ್ತದೆ ಎಂಬುದೂ ವಿಶ್ವಕ್ಕೆ ಗೊತ್ತಿದೆ. ಆದರೆ, ಭಾರತದ್ದು ಜಾತ್ಯತೀತ ಹಾಗೂ ಪ್ರಜಾತಂತ್ರದ ಪರ ಇರುವ ಸಂವಿಧಾನ. ಇಲ್ಲಿ ಎಲ್ಲರೂ ಉನ್ನತ ಹುದ್ದೆಯ ಬಯಕೆ ಹೊಂದಬಹುದು.

ಪಾಕಿಸ್ತಾನದ ಸಂವಿಧಾನದ ಪೀಠಿಕೆಯಲ್ಲಿ ಹೀಗೆ ಹೇಳಲಾಗಿದೆ: ‘ಪ್ರಜಾತಂತ್ರ, ಸ್ವಾತಂತ್ರ್ಯ, ಸಮಾನತೆ, ಸಹಿಷ್ಣುತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ಇಸ್ಲಾಂನಲ್ಲಿ ಹೇಳಿರುವಂತೆ ಪಾಲನೆಯಾಗಲಿವೆ’. ‘ಇಸ್ಲಾಂ ಇಲ್ಲಿನ ಪ್ರಭುತ್ವದ ಧರ್ಮ’ ಎಂದು ಅಲ್ಲಿನ ಸಂವಿಧಾನದ 2ನೇ ವಿಧಿ ಹೇಳುತ್ತದೆ. ‘ವ್ಯಕ್ತಿಯೊಬ್ಬ ಮುಸ್ಲಿಂ ಅಲ್ಲದಿದ್ದರೆ, ಆತನಿಗೆ 45 ವರ್ಷ ವಯಸ್ಸಾಗಿರದಿದ್ದರೆ ಆತ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ’ ಎಂದು ಅಲ್ಲಿನ ಸಂವಿಧಾನದ 41(2)ನೇ ವಿಧಿ ಹೇಳುತ್ತದೆ.

ಧಾರ್ಮಿಕ ಅಲ್ಪಸಂಖ್ಯಾತರನ್ನು ಓಡಿಸಿದ ಪಾಕಿಸ್ತಾನವು, ಭಾರತದಲ್ಲಿನ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ವಿಶ್ವ ನಂಬಬೇಕು ಎನ್ನುವ ಬಯಕೆ ಹೊಂದಿದೆ. ಹಾಗಾಗಿಯೇ, ಈಗ ಯಾರೊಬ್ಬರೂ ಇಮ್ರಾನ್‌ ಖಾನ್ ಅವರನ್ನು ನಂಬುತ್ತಿಲ್ಲ.

ಪಾಕಿಸ್ತಾನದ ಪ್ರಧಾನಿಯ ವಾದಗಳನ್ನು ಯಾರೂ ಒಪ್ಪದಿರುವುದಕ್ಕೆ ಇನ್ನೊಂದು ಕಾರಣವೂ ಇದೆ. ಜಮ್ಮು ಮತ್ತು ಕಾಶ್ಮೀರವು ಮೂರು ಪ್ರತ್ಯೇಕ ಭಾಗಗಳನ್ನು ಹೊಂದಿತ್ತು– ಮುಸ್ಲಿಂ ಬಾಹುಳ್ಯದ ಕಾಶ್ಮೀರ ಕಣಿವೆ, ಬೌದ್ಧರ ಪ್ರಭಾವ ಹೆಚ್ಚಿರುವ ಲಡಾಕ್‌ ಪ್ರದೇಶ ಮತ್ತು ಹಿಂದೂಗಳು ಬಹುಸಂಖ್ಯಾತರಾಗಿರುವ ಜಮ್ಮು ಪ್ರದೇಶ. ಈ ಮೂರೂ ಪ್ರದೇಶಗಳಲ್ಲಿನ ಮುಸ್ಲಿಮರು ಅಭಿವೃದ್ಧಿ ಹೊಂದಿದರು. ಆದರೆ, ಕಣಿವೆಯಲ್ಲಿ ವಾಸ ಮಾಡುತ್ತಿದ್ದ ನಾಲ್ಕು ಲಕ್ಷಕ್ಕೂ ಹೆಚ್ಚಿನ ಹಿಂದೂಗಳನ್ನು– ಅಂದರೆ, ಕಾಶ್ಮೀರಿ ಪಂಡಿತರನ್ನು– ಮೂವತ್ತು ವರ್ಷಗಳ ಹಿಂದೆ ಅಲ್ಲಿಂದ ಅಟ್ಟಲಾಯಿತು.

ಆ ಸಂದರ್ಭದಲ್ಲಿ ಅಲ್ಲಿನ ಬಹುಸಂಖ್ಯಾತ ಮುಸ್ಲಿಮರು ಹಾಗೂ ರಾಜಕೀಯ ನಾಯಕರು ಏನೂ ಕ್ರಮ ಕೈಗೊಳ್ಳಲಿಲ್ಲ. ಪಂಡಿತ ಸಮುದಾಯದವರು ಜಮ್ಮು ಪ್ರದೇಶದಲ್ಲಿ, ದೆಹಲಿ ಹಾಗೂ ಇತರ ಕಡೆಗಳಲ್ಲಿ ಆಶ್ರಯ ಪಡೆದರು. ಜಮ್ಮು ಮತ್ತು ಕಾಶ್ಮೀರದ ರಾಜಕೀಯದಲ್ಲಿ ಮುಸ್ಲಿಮರ ಹಿಡಿತ ಬಲವಾಗಿದ್ದ ಕಾರಣ, ಲಡಾಕ್‌ನ ಜನ ‘ತಮ್ಮನ್ನು ಅನ್ಯರಂತೆ ಕಾಣಲಾಗುತ್ತದೆ’ ಎಂದು ಭಾವಿಸಲು ಆರಂಭಿಸಿದರು. ಅವರು ಸ್ವಾಯತ್ತ ಸ್ಥಾನಕ್ಕಾಗಿ ದಶಕಗಳಿಂದಲೂ ಬೇಡಿಕೆ ಸಲ್ಲಿಸುತ್ತಿದ್ದರು.

ಜಮ್ಮು ಪ್ರಾಂತ್ಯದ ಹಿಂದೂಗಳಲ್ಲಿ ಕೂಡ ಇಂಥದ್ದೇ ಭಾವನೆ ಬೆಳೆದಿತ್ತು. ಇದಕ್ಕೆ ಕಾರಣ, ಕಣಿವೆಯ ರಾಜಕಾರಣಿಗಳು ತೋರುತ್ತಿದ್ದ ನ್ಯಾಯಯುತವಲ್ಲದ ಧೋರಣೆ ಹಾಗೂ ಜಮ್ಮು ಭಾಗದ ಜನರಿಗೆ ಅಧಿಕಾರದಲ್ಲಿ ಸಮಾನ ಪಾಲು ನೀಡಲು ನಿರಾಕರಿಸುತ್ತಿದ್ದುದು. ಕಣಿವೆಯ ಜನರಲ್ಲಿನ ಜಾತ್ಯತೀತ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳನ್ನು ಹಾಳುಗೆಡಹಿರುವುದಕ್ಕೆ ದೊಡ್ಡ ಹೊಣೆಯನ್ನು ಪಾಕಿಸ್ತಾನವೇ ಹೊರಬೇಕು.

ಭಾರತವನ್ನು ವಿಭಜಿಸಿ, ಪ್ರತ್ಯೇಕ ಮುಸ್ಲಿಂ ರಾಷ್ಟ್ರ ರಚಿಸುವ ಮಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತದ ಪರಿಣಾಮ ಇದು. ಹಾಗಾಗಿಯೇ, ಇಮ್ರಾನ್ ಖಾನ್ ಅವರು ಕಾಶ್ಮೀರದ ಬಗ್ಗೆ ಮಾತನಾಡುವಾಗ ಅವರು ಅಲ್ಲಿನ ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅವರಿಗೆ ಅಲ್ಲಿನ ಬೇರೆ ಸಮುದಾಯಗಳ ಜನರ ಬಗ್ಗೆ ಯಾವ ಕಾಳಜಿಯೂ ಇಲ್ಲ. ಆದರೆ, ಭಾರತದ ಪ್ರಧಾನಿ ಮೋದಿ ಅವರು ತಮ್ಮ ಗಮನವನ್ನು ಭಯೋತ್ಪಾದನೆ ಎಂಬ ದೊಡ್ಡ ಸಮಸ್ಯೆಯ ಮೇಲೆ ಕೇಂದ್ರೀಕರಿಸಿದರು. ಭಯೋತ್ಪಾದನೆಯ ವಿರುದ್ಧ ಜಗತ್ತು ಒಗ್ಗೂಡಬೇಕು ಎಂದು ಅವರು ನೀಡಿದ ಕರೆಗೆ ಹೆಚ್ಚಿನ ಸ್ಪಂದನ ದೊರೆಯಿತು.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ, ಯಾವುದೇ ಪಾಕಿಸ್ತಾನಿ, ಪ್ರಜಾತಂತ್ರ ಹಾಗೂ ಜಾತ್ಯತೀತತೆಯ ಬಗ್ಗೆ ಹೇಗೆ ತಾನೇ ದನಿ ಎತ್ತಬಲ್ಲ ಎಂಬ ಪ್ರಶ್ನೆ ಏಳುತ್ತದೆ. ಅದೇನೇ ಇದ್ದರೂ, ಪಾಕಿಸ್ತಾನದ ವಿಭಜನಕಾರಿ ಅಜೆಂಡಾ ವಿಚಾರದಲ್ಲಿ ಜಗತ್ತನ್ನು ಎಚ್ಚರಿಸುವಲ್ಲಿ ಭಾರತ ಯಶಸ್ಸು ಸಾಧಿಸಿದೆ. ಪಾಕಿಸ್ತಾನ ಹೆಣೆಯುವ ಬಲೆಗೆ ಬೇರೆ ದೇಶಗಳು ಬೀಳದಂತೆ ನೋಡಿಕೊಂಡಿದೆ.

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

Post Comments (+)