ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ: ಇತಿಹಾಸ ಕಾಂಗ್ರೆಸ್ಸಿಗೆ ಪೂರಕವಾಗಿಲ್ಲ

Published 4 ಏಪ್ರಿಲ್ 2024, 0:01 IST
Last Updated 4 ಏಪ್ರಿಲ್ 2024, 0:01 IST
ಅಕ್ಷರ ಗಾತ್ರ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಮೇಲಿನ ಹಿಡಿತವನ್ನು ಉಳಿಸಿಕೊಳ್ಳಬೇಕು ಎಂದಾದರೆ, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು ಭಗೀರಥ ಪ್ರಯತ್ನವನ್ನೇ ನಡೆಸಬೇಕಾದೀತು ಎಂಬುದನ್ನು ಕರ್ನಾಟಕದ ಮತದಾರರು ವಿಧಾನಸಭಾ ಚುನಾವಣೆಗಳಲ್ಲಿ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಮತ ಚಲಾಯಿಸುವ ಬಗೆಯು ಹೇಳುತ್ತಿದೆ. ಅಂದರೆ, ರಾಜ್ಯದ ಚುನಾವಣಾ ಇತಿಹಾಸವು ಕಾಂಗ್ರೆಸ್ಸಿಗೆಅನುಕೂಲಕರವಾಗಿ ಇಲ್ಲ. ರಾಜ್ಯದ ಮತದಾರರ ಮೇಲೆ ಹಿಡಿತವನ್ನು ಉಳಿಸಿಕೊಳ್ಳಬೇಕು ಎಂದಾದರೆ ಕಾಂಗ್ರೆಸ್ ಪಕ್ಷವು ಹಿಂದೆಲ್ಲ ಆಗಿದ್ದನ್ನು ಮೀರಿ ನಿಲ್ಲುವ ಕೆಲಸ ಮಾಡಬೇಕು.

ಐದು ಗ್ಯಾರಂಟಿಗಳ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಳ್ಳೆಯ ಸಾಧನೆ ತೋರಿತು. ಆ ಹೊತ್ತಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಯಾವ ಚುರುಕುತನವೂ
ಕಾಣುತ್ತಿರಲಿಲ್ಲ. ಬಿಜೆಪಿಗೆ ತನ್ನ ಪ್ರಮುಖ ಎದುರಾಳಿ ಕಾಂಗ್ರೆಸ್ಸನ್ನು ಎದುರಿಸುವ ವಿಶ್ವಾಸ ಇದ್ದಂತೆ ಕಾಣುತ್ತಿರಲಿಲ್ಲ.ಆದರೆ ಲೋಕಸಭಾ ಚುನಾವಣೆಯು ಭಿನ್ನ. ಕಾಂಗ್ರೆಸ್ ಪಕ್ಷವು ಬಹಳ ಆತ್ಮವಿಶ್ವಾಸದಿಂದ ಇರುವ ಹಾಗೂ ಶಕ್ತಿಶಾಲಿಯಾದ ನರೇಂದ್ರ ಮೋದಿ ಅವರನ್ನು ಎದುರಿಸಬೇಕಿದೆ. ಹಾಗೆಯೇ, ಹಿಂದಿನ ಎರಡು ಚುನಾವಣೆಗಳು ತೋರಿಸಿರುವಂತೆ, ‘ಮೋದಿಯ ಗ್ಯಾರಂಟಿ’ಗಳು ಮತದಾರರಿಗೆ ಹೆಚ್ಚು ಮಹತ್ವದ್ದಾಗಿರುವಂತೆ ಕಾಣುತ್ತವೆ.

ಒಕ್ಕೂಟ ಸರ್ಕಾರದ ಆಯ್ಕೆಯಲ್ಲಿ ಹಾಗೂ ರಾಜ್ಯದ ಆಡಳಿತ ನಡೆಸುವ ಸರ್ಕಾರದ ಆಯ್ಕೆಯಲ್ಲಿ ಭಿನ್ನ ನಿಲುವನ್ನು ಮತದಾರರು ಮೊದಲು ತೋರಲು ಆರಂಭಿಸಿದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಒಂದು. ಇದನ್ನು 1984–85ರಲ್ಲಿ ಮತದಾರರು ಬಹಳ ಸ್ಪಷ್ಟವಾಗಿ ತೋರಿಸಿದರು. 1984ರ ಡಿಸೆಂಬರ್‌ನಲ್ಲಿ, ಇಂದಿರಾ ಗಾಂಧಿ ಅವರ ಹತ್ಯೆಯ ನಂತರದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ದಾಖಲೆಯ ಗೆಲುವನ್ನು ಸಾಧಿಸಿತು. ಅದು ಲೋಕಸಭೆಯಲ್ಲಿ 404 ಸ್ಥಾನಗಳನ್ನು ಗೆದ್ದುಕೊಂಡಿತು, ಒಟ್ಟು ಶೇಕಡ 49.01ರಷ್ಟು ಮತಗಳನ್ನು ಪಡೆದುಕೊಂಡಿತು. ಇಂದಿರಾ ಅವರ ಹತ್ಯೆಯು ಕರ್ನಾಟಕದ ಮತದಾರರನ್ನು ಕೂಡ ಸ್ತಂಭೀಭೂತರನ್ನಾಗಿಸಿತ್ತು. ಅವರು ಇಂದಿರಾ ಅವರ ಉತ್ತರಾಧಿಕಾರಿ, ಅವರ ಮಗ ರಾಜೀವ್ ಅವರಿಗೆ ಭಾರಿ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಶೇ 52ರಷ್ಟು ಮತಗಳನ್ನು ಪಡೆದುಕೊಂಡಿತು, ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 24ರಲ್ಲಿ ಕಾಂಗ್ರೆಸ್ ಜಯ ಸಾಧಿಸಿತು. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರ ಪಕ್ಷವು ಬರೀ ಶೇ 35ರಷ್ಟು ಮತಗಳನ್ನು ಪಡೆಯಿತು, ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕಡೆ ಮಾತ್ರ ಗೆಲುವು ಕಂಡಿತು.

ರಾಜಕೀಯ ತಂತ್ರಗಾರಿಕೆಯಲ್ಲಿ ಅದ್ಭುತ ಪರಿಣತಿ ಸಾಧಿಸಿದ್ದ ಹೆಗಡೆ ಅವರು ಚುನಾವಣಾ ಫಲಿತಾಂಶವನ್ನು ತಮಗೆ ಜನಾದೇಶ ಇಲ್ಲವಾಗಿರುವುದರ ಸೂಚನೆ ಎಂದು ಪರಿಗಣಿಸಿದರು. ಆಗ ಅವರು ಜನತಾ ಪಕ್ಷ – ಕರ್ನಾಟಕ ಕ್ರಾಂತಿ ರಂಗ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿದ್ದರು. ಹೆಗಡೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು, ರಾಜ್ಯ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಯಬೇಕಾಯಿತು. ಮೂರು ತಿಂಗಳ ನಂತರ, ಅಂದರೆ 1985ರ ಮಾರ್ಚ್‌ ತಿಂಗಳಲ್ಲಿ, ಚುನಾವಣೆ ನಡೆಯಿತು. ಈ ಬಾರಿ ಮತದಾರರು ಹೆಗಡೆ ಅವರ ಪರ ಒಲವುವ್ಯಕ್ತಪಡಿಸಿದರು. ಅವರ ಪಕ್ಷವು ರಾಜ್ಯ ವಿಧಾನಸಭೆಯ 224 ಸ್ಥಾನಗಳ ಪೈಕಿ 139 ಸ್ಥಾನಗಳಲ್ಲಿ ಗೆಲುವು ಕಂಡಿತು. ಲೋಕಸಭಾ ಚುನಾವಣೆಯಲ್ಲಿ ಶೇ 52ರಷ್ಟು ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಶೇ 41ರಷ್ಟು ಮತಗಳನ್ನು ಮಾತ್ರ ಪಡೆದುಕೊಂಡಿತು.

ಮತದಾರರ ಅನುಕಂಪವು ಹೆಗಡೆ ಅವರ ಕಡೆ ಕೆಲವೇ ತಿಂಗಳುಗಳಲ್ಲಿ ತಿರುಗಿದೆ ಎಂಬುದು ಚುನಾವಣಾ ಪ್ರಚಾರ ಅಭಿಯಾನದ ಸಂದರ್ಭದಲ್ಲಿಯೇ ಗೊತ್ತಾಗುವಂತೆ ಇತ್ತು. ಲೋಕಸಭಾ ಚುನಾವಣೆಯಲ್ಲಿ ತಾವು ಕಾಂಗ್ರೆಸ್ಸಿನ ಪರವಾಗಿ ಮತ ಚಲಾಯಿಸಿದ್ದರೂ ಅದು ಹೆಗಡೆ ಅವರ ಬಗ್ಗೆ ಅವಿಶ್ವಾಸ ತೋರಿದ ನಡೆ ಅಲ್ಲವೇ ಅಲ್ಲ ಎಂಬ ಭಾವನೆಯುಹೆಚ್ಚಿನವರಲ್ಲಿ ಎದ್ದು ಕಾಣುತ್ತಿತ್ತು. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಜನರು ಬಹಳ ಸಹಜವಾಗಿ ಹೆಗಡೆ ಅವರನ್ನೇ ಆಯ್ಕೆ ಮಾಡಿದರು. ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಭಿನ್ನ ಬಗೆಯಲ್ಲಿ ತಮ್ಮ ಒಲವು ವ್ಯಕ್ತಪಡಿಸುವುದು ಕರ್ನಾಟಕದಲ್ಲಿ ಶುರುವಾಯಿತು. ಈಗ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಜನ ಭಿನ್ನ ರೀತಿಯಲ್ಲಿ ತಮ್ಮ ತೀರ್ಮಾನ ಹೇಳುತ್ತಿರುವುದು ಬಹುತೇಕ ರಾಜ್ಯಗಳಲ್ಲಿ ಕಾಣುತ್ತಿದೆ.

ಈ ಪ್ರವೃತ್ತಿಯು ಈಚಿನ ವರ್ಷಗಳಲ್ಲಿ ಮುಂದುವರಿದಿರುವಂತೆ ಕಾಣುತ್ತಿದೆ. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕೇವಲ 40 ಸ್ಥಾನಗಳಿಗೆ ಕುಸಿಯಿತು. ಅದಕ್ಕೂ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಪಕ್ಷವು 122 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಿತು. ಯಡಿಯೂರಪ್ಪ ಅವರು ಬಿಜೆಪಿ ಬಗ್ಗೆ ಅಸಮಾಧಾನಗೊಂಡು, ಪಕ್ಷ ತೊರೆದು, ತಮ್ಮದೇ ಆದ ಪ್ರಾದೇಶಿಕ ಪಕ್ಷವನ್ನು ಕಟ್ಟಿದ್ದ ಕಾರಣದಿಂದಾಗಿ ಬಿಜೆಪಿಯ ಮತ ಗಳಿಕೆ ಪ್ರಮಾಣವು 2013ರಲ್ಲಿ ಶೇ 19.9ಕ್ಕೆ ಕುಸಿದಿತ್ತು. ಅದಾದ ಒಂದು ವರ್ಷದಲ್ಲಿ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದರು, ಜನರ ಒಲವು ಕೂಡ ಬದಲಾಗಿತ್ತು. ಹಿಂದಿನ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸೋಲು ಕಂಡಿದ್ದ ಬಿಜೆಪಿ, 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 17 ಸ್ಥಾನಗಳನ್ನು ಗೆದ್ದುಕೊಂಡಿತು, ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆಲುವು ಕಂಡಿತು.

ಬಿಜೆಪಿಯ ಪುನಶ್ಚೇತನವು ಬಹಳ ತ್ವರಿತವಾಗಿ ಆಗಿತ್ತು. ಇದಕ್ಕೆ ಎರಡು ಕಾರಣಗಳು ಕೆಲಸ ಮಾಡಿದ್ದವು. ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದ್ದುದು ಹಾಗೂ ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು ಆ ಕಾರಣಗಳು. 2014ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಮೋದಿ ಅವರನ್ನು ರಾಷ್ಟ್ರನಾಯಕನನ್ನಾಗಿಮೊದಲ ಬಾರಿಗೆ ಕಾಣಲು, ಅವರ ಮಾತುಗಳನ್ನು ಆಲಿಸಲು ಸಾಧ್ಯವಾಯಿತು. ರಾಜ್ಯದ ಮತದಾರರ ಮೇಲೆ ಮೋದಿ ಅವರು ಪ್ರಭಾವ ಬೀರಿರುವುದು ಆಗಲೇ ಕಾಣುತ್ತಿತ್ತು.

2018ರಲ್ಲಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಬಿಜೆಪಿ 104 ಸ್ಥಾನಗಳನ್ನು ಮಾತ್ರ ಪಡೆಯಿತು. ಕಾಂಗ್ರೆಸ್ 80 ಹಾಗೂ ಜೆಡಿಎಸ್ 37 ಸ್ಥಾನಗಳನ್ನು ಪಡೆದವು. ಎರಡೂ ಪಕ್ಷಗಳು ಅಸ್ಥಿರ ಮೈತ್ರಿ ಸರ್ಕಾರ ರಚಿಸಿದವು, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಆಡಳಿತಾರೂಢ ಮೈತ್ರಿಕೂಟದ 16 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ, ಇಬ್ಬರು ಪಕ್ಷೇತರ ಶಾಸಕರು ಬಿಜೆಪಿಗೆ ನಿಷ್ಠೆ ತೋರಿಸಿದ ಪರಿಣಾಮವಾಗಿ ಸರ್ಕಾರವು 14 ತಿಂಗಳಲ್ಲಿ ಪತನಗೊಂಡಿತು. ಯಡಿಯೂರಪ್ಪ ಅವರು ಮತ್ತೆ ಅಧಿಕಾರ ಹಿಡಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಹಳ ಸ್ಪಷ್ಟವಾದ ಜನಾದೇಶ ನೀಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡವು. ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಒಂದು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಸುಮಲತಾ ಅಂಬರೀಷ್ ಗೆಲುವು ಕಂಡರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 2019ರ ಲೋಕಸಭಾ ಚುನಾವಣೆಯಲ್ಲಿ ತಾನು ತೋರಿದ್ದ ಕಳಪೆ ಸಾಧನೆಯನ್ನು ಮರೆಯಲು ಸಾಧ್ಯವಾಯಿತು. ಆ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಕಂಡಿತು. ಅಧಿಕಾರಕ್ಕೆ ಮರಳಿತು. ಬಿಜೆಪಿಗೆ ಆಗ ಸಿಕ್ಕಿದ್ದು 66 ಸ್ಥಾನಗಳು ಮಾತ್ರ. 

ಮತದಾರರ ಈ ಪ್ರವೃತ್ತಿಯು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲ ಕಲ್ಪಿಸುವಂತೆ ಇದೆ. ಅಲ್ಲದೆ, ಕೆಲವು ಪ್ರಮುಖ ಸಂಗತಿಗಳು ಬಿಜೆಪಿಗೆ ಬಲ ತಂದುಕೊಡುವ ಕೆಲಸ ಮಾಡಿವೆ. ಎಚ್.ಡಿ. ದೇವೇಗೌಡರ ಜೆಡಿಎಸ್‌ ಪಕ್ಷವು ರಾಷ್ಟ್ರೀಯ ಪ‍್ರಜಾಸತ್ತಾತ್ಮಕ ಮೈತ್ರಿಕೂಟವನ್ನು (ಎನ್‌ಡಿಎ) ಸೇರಿ, ಬಿಜೆಪಿ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿರುವುದು, ಬಿಜೆಪಿಯಿಂದ ಹೊರನಡೆದಿದ್ದ ಜಗದೀಶ ಶೆಟ್ಟರ್ ಅವರಂತಹ ನಾಯಕರು ಈಚಿನ ತಿಂಗಳುಗಳಲ್ಲಿ ಪಕ್ಷಕ್ಕೆ ವಾಪಸಾಗಿರುವುದು ಅಂತಹ ಸಂಗತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT