ಶುಕ್ರವಾರ, ಜನವರಿ 22, 2021
26 °C
ನರಮೇಧ, ಪಕ್ಷಿಮೇಧ, ಯುರೋಪ್‌ನಲ್ಲಿ ಮಿಂಕ್‌ಮೇಧ... ಮುಂದೇನು?

ವಿಜ್ಞಾನ ವಿಶೇಷ: ಅಂಗೈ ಹುಣ್ಣಿಗೆ ಸೂಕ್ಷ್ಮದರ್ಶಕ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಇದು ಪಕ್ಷಿವಲಸೆಯ ಋತು. ಕರ್ನಾಟಕದ ಪಕ್ಷಿವೀಕ್ಷಕರು ದುರ್ಬೀನ್‌ ಹಿಡಿದು ಮೈಸೂರು, ಮದ್ದೂರು, ಮಂಡ್ಯಗಳ ಕೆರೆ ಕಟ್ಟೆಗಳ ಸುತ್ತ ಓಡಾಡುತ್ತಿದ್ದಾರೆ. ಇತ್ತ ಇತರ ಹತ್ತು ರಾಜ್ಯಗಳಲ್ಲಿ ಹಕ್ಕಿಜ್ವರ ಹಾವಳಿ ಎಬ್ಬಿಸುತ್ತಿದೆ. ಜ್ವರದಿಂದ ಸತ್ತು ಬಿದ್ದ ಪಕ್ಷಿಗಳನ್ನು ಹುಡುಕಿ, ಹೆಕ್ಕಿ, ಹೊಂಡ ತೋಡಿ ಹೂಳುವ ಕೆಲಸ ಭರದಿಂದ ನಡೆಯುತ್ತಿದೆ. ಇದೇ ವೇಳೆಗೆ, ದುಬೈಯಿಂದ ಅರಬ್‌ ರಾಜಕುಲೀನರು ಬಸ್ಟರ್ಡ್‌ ಪಕ್ಷಿಗಳ ಬೇಟೆಗೆಂದು ಪಾಕಿಸ್ತಾನಕ್ಕೆ ಮೊನ್ನೆ ಬಂದಿಳಿದಿದ್ದಾರೆ. ಅವರ ಕೈಯಲ್ಲೂ ದುರ್ಬೀನುಗಳಿವೆ, ಲಾಂಗ್‌ರೇಂಜ್‌ ರೈಫಲ್‌ ಇವೆ. ಪಕ್ಷಿಬೇಟೆಯಲ್ಲಿ ತರಬೇತಿ ಪಡೆದ ಗಿಡುಗಗಳನ್ನೂ ತಂದಿದ್ದಾರೆಂದು ಪಾಕಿಸ್ತಾನದ ಡಾನ್‌ ಪತ್ರಿಕೆ ವರದಿ ಮಾಡಿದೆ. ಬೇಟೆಗಾರರ ಜೊತೆಗೆ ಪಾಕಿಸ್ತಾನದ ಸಶಸ್ತ್ರ ಬೆಂಗಾವಲು ಪಡೆಯೂ ಇದೆ. ಬೇಟೆಯ ರೋಮಾಂಚನದ ಜೊತೆ, ಅವುಗಳ ಮಾಂಸ ಸೇವನೆಯಿಂದ ಪೌರುಷ ಹೆಚ್ಚುತ್ತದೆಂದು ಅರಬ್ಬರು ನಂಬುತ್ತಾರೆ.

ಬಸ್ಟರ್ಡ್‌ ಪಕ್ಷಿಗಳೆಂದರೆ ಪಕ್ಷಿಲೋಕದ ರಾಜಾರಾಣಿಗಳಿದ್ದಂತೆ. ಮೂವತ್ತು ಕಿಲೊ ತೂಕದ ಅವು ಎರಡು ಮೀಟರ್‌ ಅಗಲದ ರೆಕ್ಕೆ ಬಿಚ್ಚಿ ಹಾರುತ್ತವೆ. ಅವುಗಳ ಸಂತತಿ ಅವಸಾನದ ತೀರ ಅಂಚಿಗೆ ಬಂದಿದ್ದು, ಬೇಟೆಗೆ ಎಲ್ಲೆಡೆ ನಿಷೇಧವಿದೆ. ಕಳೆದ ವರ್ಷ ಬಸ್ಟರ್ಡ್‌ ಪಕ್ಷಿಗಳ ಮೊಟ್ಟೆಗಳ ಹುಡುಕಾಟಕ್ಕೆ ಅಬುಧಾಬಿಯಿಂದಲೂ ನಮ್ಮ ರಾಜಸ್ತಾನದ ಜೈಸಲ್ಮೇರ್‌ ಜಿಲ್ಲೆಗೆ ಜನ ಬಂದಿದ್ದರು. ಆದರೆ ಬೇಟೆಗಲ್ಲ. ಈ ಪಕ್ಷಿಗಳು ಮೊಟ್ಟೆ ಇಟ್ಟರೆ ಅವು ಹಾವುಹಲ್ಲಿಗಳಿಗೆ ತುತ್ತಾಗುವ ಮೊದಲೇ ಹುಷಾರಾಗಿ ಎತ್ತಿ ಒಯ್ದು ಕೃತಕ ಕಾವು ಕೊಟ್ಟು ಮರಿ ಮಾಡುವುದು ಅವರ ಉದ್ದೇಶವಾಗಿತ್ತು.

ಬೇಟೆಗೆ ಎಂಥ ನಿಷೇಧವಿದ್ದರೂ ಅರಬ್‌ ರಾಜಮನೆತನದವರಿಗೆ ಪಾಕಿಸ್ತಾನದಲ್ಲಿ ಸ್ವಾಗತವಿದೆ. ಏಕೆಂದರೆ ಕೆಲವು ಜನಕಲ್ಯಾಣ ಯೋಜನೆಗಳಿಗೆ ಅವರಿಂದ ನೆರವು ಸಿಗುತ್ತಿದೆ. ಪಂಜ್‌ಗೌರ್‌ ಜಿಲ್ಲೆಯಲ್ಲಿ ಬಸ್ಟರ್ಡ್‌ ಪಕ್ಷಿಗಳ ಆವಾಸಸ್ಥಾನದ ಸುತ್ತಮುತ್ತಲಿನ ಬುಡಕಟ್ಟು ಸಮುದಾಯಗಳಿಗೆ ಶಾಲೆ, ರಸ್ತೆ, ಕುಡಿಯುವ ನೀರು ಇತ್ಯಾದಿಗಳಿಗೆ ಯುಎಇ ಧನಸಹಾಯ ಸಿಗುತ್ತಿದೆ.

ಅನುಕೂಲಸ್ಥರ ತೆವಲುಗಳಿಂದಾಗಿ ಜಗತ್ತಿಗೆ ಏನೆಲ್ಲ ಸಂಕಟಗಳು ಬರುತ್ತಿವೆ. ಕಳೆದ ಒಂದೂವರೆ ತಿಂಗಳಲ್ಲಿ ಡೆನ್ಮಾರ್ಕ್‌ ದೇಶವೊಂದರಲ್ಲೇ ಒಂದೂವರೆ ಕೋಟಿ ಮಿಂಕ್‌ ಪ್ರಾಣಿಗಳನ್ನು ಕೊಂದು ಹೂಳಲಾಗಿದೆ. ಮಿಂಕ್‌ ಎಂದರೆ ನಮ್ಮ ನೀರನಾಯಿ ಥರಾ ತೋಳುದ್ದದ ಪಾಪದ ಮುದ್ದು ಪ್ರಾಣಿ. ಉತ್ತರದ ಹಿಮಪ್ರದೇಶಗಳಲ್ಲಿ ನೀರಿನ ತಡಿಗಳಲ್ಲಿ ಜೀವಿಸುವ ಅವುಗಳಿಗೆ ತುಂಬಾ ಮೃದುವಾದ ತುಪ್ಪಳವಿದೆ. ಮನುಷ್ಯರು ತಾವೂ ಬೆಚ್ಚಗಿರಲೆಂದು ತುಪ್ಪಳಕ್ಕಾಗಿ ಮಿಂಕ್‌ಗಳನ್ನು ಕೊಲ್ಲುತ್ತ ಅವು ಬಹುತೇಕ ನಿರ್ವಂಶವಾಗುವ ಹೊತ್ತಿಗೆ ಒಂದು ಮಿಂಕ್‌ ಕೋಟಿನ ಬೆಲೆ ಐದು ಲಕ್ಷ ರೂಪಾಯಿಗಳಷ್ಟಾಯಿತು. ಅಂಥ ಕೋಟನ್ನು ಧರಿಸಿ ಓಡಾಡುವುದು ಶ್ರೀಮಂತಿಕೆಯ ದ್ಯೋತಕವಾಯಿತು. ಮಿಂಕ್‌ಗಳ ಕೃತಕ ಸಂಗೋಪನೆ ದೊಡ್ಡ ಉದ್ಯಮವಾಗಿ ಬೆಳೆಯಿತು. ನೀರಂಚಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದ ಮಿಂಕ್‌ಗಳು ಒಂದು ಮೇಜಿನಷ್ಟಗಲದ ಪಂಜರದಲ್ಲಿ ಹುಟ್ಟಿ ಬೆಳೆದು ತುಪ್ಪಳಗಳಾಗಿ ಫ್ಯಾಶನ್‌ ಪರೇಡ್‌ಗಳಲ್ಲಿ ಮಿಂಚುವಂತಾದವು. ಕೃತಕ ಮಿಂಕ್‌ ಉಡುಪುಗಳು ಬಂದಿವೆಯಾದರೂ ಇಂದು ಯುರೋಪ್‌, ರಷ್ಯಾ, ಅಮೆರಿಕಗಳಲ್ಲಿ ಮಿಂಕ್‌ ಸಾಕಣೆಯ ಸಾವಿರಾರು ಕೇಂದ್ರಗಳಿವೆ. ಚೀನಾದ ನವಶ್ರೀಮಂತರು ಮಿಂಕ್‌ ಕೋಟುಗಳಿಗೆ ಮುಗಿಬೀಳುತ್ತಾರೆ.

ಮೂರು ತಿಂಗಳ ಹಿಂದೆ ಕೋವಿಡ್‌ ಜ್ವರಪೀಡಿತನ ಮೂಲಕ ಮಿಂಕ್‌ಗಳಿಗೂ ಕೊರೊನಾ ವೈರಾಣು ತಗುಲಿಕೊಂಡು ಬೇರೆಯದೇ ರೂಪ ತಾಳಿದ್ದನ್ನು ವಿಜ್ಞಾನಿಗಳು ಗಮನಿಸಿದರು. ಈ ಹೊಸ ವೈರಾಣು ಮತ್ತೆ ಮನುಷ್ಯರಿಗೆ ಬಂದರೆ ಭಾರೀ ದೊಡ್ಡ ಹೊಸ ಅಪಾಯ ಬಂದೀತೆಂದು ಎಲ್ಲ ಮಿಂಕ್‌ಗಳನ್ನೂ ಕೊಂದು ಹೂಳಲೆಂದು ಮಿಲಿಟರಿಯ ಸಹಾಯ ಪಡೆದು ದಿನವೂ 15-20 ಲಕ್ಷಗಳಂತೆ ವಾರವಿಡೀ ಮಿಂಕ್‌ಮೇಧ ನಡೆಯಿತು. ಈ ಕಾರ್ಯಾಚರಣೆಯನ್ನು ನೋಡುತ್ತ ಡೆನ್ಮಾರ್ಕಿನ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಕಣ್ಣೀರಿಟ್ಟ ವಿಡಿಯೊಗಳು ಎಲ್ಲೆಡೆ ಹರಿದಾಡಿದವು. ‘ಈಕೆಯ ಕಣ್ಣೀರು ಮಿಂಕ್‌ಗಳ ದುಃಸ್ಥಿತಿ ನೋಡಿ ಹರಿದಿದ್ದಲ್ಲ, ಮಿಂಕ್‌ ಸಾಕಣೆದಾರರ ಆರ್ಥಿಕ ನಷ್ಟಕ್ಕೆ ಮೆಟ್ಟಿಯ ಕಂಬನಿ’ ಎಂದು ಡಾಯಿಷ್‌ ವೆಲ್‌ (DW) ಜಾಲಪತ್ರಿಕೆ ವರದಿ ಮಾಡಿತು.

ನಂತರದ ವಿದ್ಯಮಾನಗಳು ಭೂತಾಕಾರ ತಾಳಿದವು. ಒಂದೆರಡು ಮೀಟರ್‌ ಆಳದಲ್ಲಿ ಹೂತಿದ್ದರೂ ಸಾವಿರಾರು ಮಿಂಕ್‌ಗಳು ಮೇಲೆದ್ದು ಬಂದವು. ಅದೇಕೆಂದು ನೋಡಲು ವಿಜ್ಞಾನಿಗಳು ದೌಡಾಯಿಸಿದರು. ಆಗಿದ್ದೇನೆಂದರೆ, ಹೂತ ಮಿಂಕ್‌ಗಳಲ್ಲಿ ಕೆಲವು ಕೊಳೆತು ಅಲ್ಲಿನ ಅನಿಲದ ಒತ್ತಡದಿಂದ ನೆಲ ಬಿರಿದು ಇಡಿ ಇಡೀ ಮೃತದೇಹಗಳು ಸಿಡಿದೆದ್ದವು. ಅಷ್ಟು ಸ್ಪಷ್ಟೀಕರಣ ಬಂದಿದ್ದೇ ತಡ, ಆ ಅನಿಲದಿಂದ ಕೊರೊನಾ ವೈರಾಣು ವಿರಾಟ್‌ ರೂಪದಲ್ಲಿ ಹೊರಹೊಮ್ಮಿ, ವಾಯುಮಂಡಲಕ್ಕೂ ಅಂತರ್ಜಲಕ್ಕೂ ವ್ಯಾಪಿಸಿತೆಂದು ಹುಯಿಲೆಬ್ಬಿತು. ಈಗ ವೈದ್ಯವಿಜ್ಞಾನಿಗಳು ಧಾವಿಸಿ ಬಂದು ಮಣ್ಣು, ನೀರು, ಗಾಳಿಯನ್ನೆಲ್ಲ ವಿಶ್ಲೇಷಣೆ ಮಾಡಬೇಕಾಯಿತು.

ಯುರೋಪ್‌ನಲ್ಲಿ ತಲೆಯೆತ್ತಿದ ಹೊಸ ಕೊರೊನಾಕ್ಕೂ ಮಿಂಕ್‌ ಪ್ರಾಣಿಗಳಿಗೂ ಸಂಬಂಧ ಇದೆಯೆ? ವಿಶ್ವ ಸ್ವಾಸ್ಥ್ಯ ಸಂಸ್ಥೆಯ (ವಿಸ್ವಾಸಂ) ವರದಿಯ ಪ್ರಕಾರ, ನವೆಂಬರಿನಲ್ಲಿ ಒಟ್ಟು 214 ಜನರು ಮಿಂಕ್‌ ಮೂಲಕವೇ ಕೋವಿಡ್‌ ಜ್ವರಕ್ಕೆ ತುತ್ತಾಗಿದ್ದು, ಅವರಲ್ಲಿ ಹನ್ನೆರಡು ಜನರಿಗೆ ಹೊಸ ತಳಿಯ ಕೊರೊನಾ ಸೋಂಕು ತಗುಲಿದೆ. ಬ್ರಿಟನ್ನಿಗೆ ಬಂದಿದ್ದು ಅದೇ ತಳಿಯ ವೈರಾಣು ಹೌದೆ ಅಲ್ಲವೆ ಎಂಬುದನ್ನು ವಿಜ್ಞಾನಿಗಳು ಸ್ಪಷ್ಟ ಹೇಳುತ್ತಿಲ್ಲವಾದರೂ ಡೆನ್ಮಾರ್ಕಿನ ವಿಮಾನಗಳಿಗೆ ಎರಡು ತಿಂಗಳ ಹಿಂದೆಯೇ ನಿಷೇಧ ಹೇರಲಾಗಿದೆ. ಆರು ರಾಷ್ಟ್ರಗಳಲ್ಲಿನ ಎಲ್ಲ 2,750 ಮಿಂಕ್‌‌ ಸಾಕಣೆ ಕೇಂದ್ರಗಳನ್ನೂ ಸ್ಥಗಿತಗೊಳಿಸಲಾಗಿದೆ.

ಈ ಮಧ್ಯೆ ಅಮೆರಿಕದ ಸ್ಯಾನ್‌ಡೀಗೊ ಮೃಗಾಲಯದ ಎಂಟು ಗೊರಿಲ್ಲಾಗಳಿಗೆ ಕೋವಿಡ್‌ ಸೋಂಕು ತಗುಲಿದ ವರದಿ ಬರುತ್ತಿದೆ. ಮನುಷ್ಯನಿಂದಾಗಿ ಮೃಗಾಲಯಗಳಲ್ಲಿರುವ ಚಿರತೆ, ಹುಲಿ, ಸಿಂಹಗಳಿಗೂ ಕೊರೊನಾ ವೈರಾಣು ಜಿಗಿಯುತ್ತಿರುವ ಸುದ್ದಿ ಕಳೆದ ಆರು ತಿಂಗಳಿಂದ ಆಗಾಗ ಬರುತ್ತಿದೆಯಾದರೂ ಅದೇನೂ ಅಂಥ ಚಿಂತೆಯ ಸಂಗತಿಯಲ್ಲ. ಏಕೆಂದರೆ ಈ ಪ್ರಾಣಿಗಳೆಲ್ಲ ಅದಾಗಲೇ ಕ್ವಾರಂಟೈನ್‌ ಸ್ಥಿತಿಯಲ್ಲಿವೆ. ಅಂಥ ಪ್ರಾಣಿಗಳಲ್ಲಿ ಸಹಜ ಬದುಕಿರುವ ವೈರಾಣುಗಳ ಜೊತೆ ಕೊರೊನಾ ಸೇರಿಕೊಂಡು ಹೊಸ ರೂಪ ಪಡೆದು ಮತ್ತೆ ಮನುಷ್ಯರಿಗೆ ಸೋಂಕಿದರೆ ಮಾತ್ರ ಅಪಾಯಕಾರಿ. ಹಾಗಾಗುವುದು ನಿಸರ್ಗದಲ್ಲಿ ತೀರಾ ಅಪರೂಪ. ಹಿಂದೆ 2009ರಲ್ಲಿ ಜ್ವರಪೀಡಿತನೊಬ್ಬ ಹಂದಿಗೂಡಿಗೆ ಹೋಗಿದ್ದಾಗ ಅವನಲ್ಲಿದ್ದ ವೈರಾಣುವೊಂದು ಹಂದಿಯೊಳಕ್ಕೆ ಸೇರಿಕೊಂಡಿತು. ಆ ಹಂದಿಯ ದೇಹದಲ್ಲಿ ಆಗಲೇ ಪಕ್ಷಿಯ ವೈರಾಣು, ಯುರೋಪ್‌ ಮತ್ತು ಅಮೆರಿಕದ ಹಂದಿಗಳ ಎರಡು ಬಗೆಯ ವೈರಾಣು ಮನೆಮಾಡಿದ್ದವು. ಅವುಗಳ ಜೊತೆಗೆ ಮನುಷ್ಯನದೂ ಸೇರಿ ಎಚ್‌1ಎನ್‌1 ಎಂಬ ಹೊಸ ವೈರಾಣು ಮತ್ತೆ ಮನುಷ್ಯನ ದೇಹಕ್ಕೆ ಸೇರಿ ಒಂದೇ ವರ್ಷದಲ್ಲಿ ಐದೂವರೆ ಲಕ್ಷ ಜನರ ಪ್ರಾಣ ತೆಗೆದಿತ್ತು.

ಸಹಜ ಜಗತ್ತಿನಲ್ಲಿ ಹೀಗೆ ಒಂದು ಜೀವಪ್ರಭೇದದಿಂದ ಇನ್ನೊಂದು ಪ್ರಭೇದಕ್ಕೆ ವೈರಸ್‌ಗಳು ಜಿಗಿಯುವ ಸಂಭವ ತೀರ ಕಡಿಮೆ ಇತ್ತು. ಏಕೆಂದರೆ ನಿಸರ್ಗದ ಕಟ್ಟುಪಾಡುಗಳಿದ್ದವು. ಅವನ್ನು ಮೀರಿ ವುಹಾನ್‌ನಲ್ಲಿ ಹೇಗೋ ಮನುಷ್ಯನಿಗೆ ಜಿಗಿದ ವೈರಾಣು ಈ ಒಂದು ವರ್ಷದಲ್ಲಿ ಸುಮಾರು ಇಪ್ಪತ್ತು ಲಕ್ಷ ಜನರ ಬಲಿ ತೆಗೆದುಕೊಂಡ ಮೇಲೆ- ಇದೀಗ ಕಟ್ಟುಗಳು ಎಲ್ಲೆಲ್ಲಿ ಸಡಿಲವಾಗಿವೆ ಎಂಬುದರ ಅವಲೋಕನ ಆರಂಭವಾಗುತ್ತಿದೆ. ಕೊರೊನಾ ವಿ2 ವೈರಾಣುವಿನ ಉಗಮ ಹೇಗಾಗಿತ್ತು ಎಂಬುದನ್ನು ನೋಡಲೆಂದು ಇಂದು, ಗುರುವಾರ, ಮೊದಲ ಬಾರಿಗೆ ವಿಸ್ವಾಸಂ ತಜ್ಞರ ತಂಡ ವುಹಾನ್‌ಗೆ ಭೇಟಿ ಕೊಡುತ್ತಿದೆ. ಸೂಕ್ಷ್ಮದರ್ಶಕದಡಿ ಅಂಗೈ ಹುಣ್ಣಿನ ಪರೀಕ್ಷೆ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು