ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಶ ಹೆಗಡೆ ಬರಹ | ಇಐಎ ಕರಡಿಗೆ ಎಲ್ಲೆಲ್ಲೂ ಕೆಂಬಾವುಟ

ಬೀದಿಗಿಳಿಯದೆಯೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಒಂದು ಪ್ರತಿರೋಧದ ಕಥನ ಇಲ್ಲಿದೆ
Last Updated 12 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಆರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವದ ದಿನ ಕೆಂಪುಕೋಟೆಯ ಭಾಷಣದಲ್ಲಿ ಉದ್ಯಮಿಗಳಿಗೆ ದನಿಯೆತ್ತಿ ಕರೆ ಕೊಟ್ಟಿದ್ದರು: ‘ಝೀರೊ ಡಿಫೆಕ್ಟ್‌, ಝೀರೊ ಇಫೆಕ್ಟ್‌’ ಇರುವಂಥ ಉತ್ಪನ್ನಗಳು ನಿಮ್ಮದಾಗಬೇಕು ಎಂದಿದ್ದರು. ಅಂದರೆ, ನಮ್ಮ ಫ್ಯಾಕ್ಟರಿಗಳ ಉತ್ಪನ್ನಗಳಲ್ಲಿ ತುಸುವೂ ದೋಷ ಇರಬಾರದು; ಮತ್ತು ಆ ಉತ್ಪನ್ನಗಳ ತಯಾರಿಕೆಯಿಂದ ಪರಿಸರಕ್ಕೆ ತುಸುವೂ ದುಷ್ಪರಿಣಾಮ ಆಗಬಾರದು ಎಂದು. ಅವರ ಕರೆಯ ಮೊದಲರ್ಧ ಭಾಗಕ್ಕೆ ಎಲ್ಲರೂ ಸ್ಪಂದಿಸಿರಬೇಕು, ಆದರೆ ಉತ್ತರಾರ್ಧ ಭಾಗ ಮಾತ್ರ ಯಾರ ಕಿವಿಗೂ ಬಿದ್ದಂತಿಲ್ಲ. ಏಕೆಂದರೆ ಪರಿಸರ ಮಾಲಿನ್ಯದ ವಿಷಯ ಬಂದಾಗ ಭಾರತ ಇಂದು ತೀರಾ ತೀರಾ ನಾಚಿಕೆಗೇಡಿ ಸ್ಥಿತಿಯಲ್ಲಿದೆ.

ಈಚೆಗಷ್ಟೆ ಪ್ರಕಟವಾದ ಜಾಗತಿಕ ‘ಪರಿಸರ ಪರಿಣಾಮ ಸೂಚ್ಯಂಕ’ದ ಪ್ರಕಾರ, ಸಮೀಕ್ಷೆ ನಡೆಸಿದ 180 ದೇಶಗಳಲ್ಲಿ ನಮ್ಮದು 168ನೇ ಸ್ಥಾನಕ್ಕೆ ಕುಸಿದಿದೆ. ಅಂಕಪಟ್ಟಿಯ ಪ್ರಕಾರ, ಭಾರತಕ್ಕೆ 27.6% ಅಂಕಗಳು ಬಂದಿದ್ದವು. ನಮ್ಮ ನೆರೆ ಹೊರೆಯ ಎಲ್ಲ ದೇಶಗಳೂ ನಮಗಿಂತ ಹೆಚ್ಚಿಗೆ ಅಂಕಗಳಿಸಿವೆ. ಬುರುಂಡಿ, ಹೈಯಿಟಿ, ಗಿನಿ, ಸಿಯೆರಾ ಲಿಯೋನ್‌, ಅಫ್ಗಾನಿಸ್ತಾನ ಮುಂತಾದ ಹನ್ನೊಂದು ದಟ್ಟದರಿದ್ರ ದೇಶಗಳು ಮಾತ್ರ ನಮಗಿಂತ ಕೆಳಗಿನ ಸ್ಥಾನದಲ್ಲಿವೆ.

ನಾವೆಲ್ಲ ತಲೆತಗ್ಗಿಸಬೇಕಾದ ಈ ಸ್ಥಿತಿಗೆ ಏನು ಕಾರಣ? ‘ಉತ್ತಮ ಆಡಳಿತ ಎಲ್ಲಿದೆಯೋ ಅಲ್ಲಿನ ಪರಿಸರವೂ ಉತ್ತಮವಾಗಿರುತ್ತದೆ’ ಎನ್ನುತ್ತಾರೆ, ಈ ಜಾಗತಿಕ ಸೂಚ್ಯಂಕವನ್ನು ಸಿದ್ಧಪಡಿಸುವ ಸಂಸ್ಥೆಯ ನಿರ್ದೇಶಕ ಝಾಕ್‌ ವೆಂಡ್ಲಿಂಗ್‌. ಅವರು ಇನ್ನೂ ಕೆಲವು ಅಂಶಗಳನ್ನು ಹೇಳುತ್ತಾರೆ: ಕಾನೂನುಗಳನ್ನು ರೂಪಿಸುವಾಗ ಜನಾಭಿಪ್ರಾಯ ಕೇಳಬೇಕು; ಕಾನೂನುಗಳನ್ನು ರೂಪಿಸಿದವರು ಅದಕ್ಕೆ ಬದ್ಧರಾಗಿರಬೇಕು. ನಾಗರಿಕ ಸಂಘಟನೆಗಳು ಅಕ್ರಮಗಳ ಮೇಲೆ ಸದಾ ಕಣ್ಣಿಟ್ಟಿರಬೇಕು. ಮಾಧ್ಯಮಗಳು ಕ್ರಿಯಾಶೀಲವಾಗಿರಬೇಕು, ಇವೆಲ್ಲ.

ನಮ್ಮಲ್ಲಿ ಈ ಎಲ್ಲವೂ ಹದಗೆಟ್ಟಿವೆ ಎಂಬುದು ಎಲ್ಲರ ಅನುಭವಕ್ಕೆ ದಿನದಿನವೂ ಬರುತ್ತಿದೆ. ಬಹಳಷ್ಟು ಮಾಧ್ಯಮಗಳು ಉದ್ಯಮಗಳ ಮತ್ತು ಪ್ರಭುತ್ವದ ಕೈಗೊಂಬೆಗಳಂತೆ ತೋರುತ್ತಿವೆ. ಕಾನೂನಿನ ಬಗ್ಗೆ ನೇತಾರರೇ ಉಡಾಫೆ ತೋರಿಸುವುದನ್ನು ನಾವು ನೋಡುತ್ತಿರುತ್ತೇವೆ. ಪರಿಸರ ಸಂರಕ್ಷಣೆ ಬಗ್ಗೆ ಮಾತಾಡುವ ನಾಗರಿಕ ಸಂಘಟನೆಗಳ ಪ್ರತಿನಿಧಿಗಳನ್ನು ಜರಿಯುವ, ಬೆದರಿಸುವ, ಜೈಲಿಗಟ್ಟುವ ಯತ್ನಗಳು ಸದಾ ಜಾರಿಯಲ್ಲಿವೆ (ಇದರ ಈಚಿನ ಉದಾಹರಣೆಯೊಂದು ಇಲ್ಲೇ ತುಸು ಮುಂದೆ ಸಿಗಲಿದೆ). ಇನ್ನು, ಪರಿಸರ ಸಂರಕ್ಷಣೆಯ ನಿಯಮಗಳನ್ನು ರೂಪಿಸುವಾಗ ಸರ್ಕಾರವು ನಾಗರಿಕರನ್ನು ಹೇಗೆ ದಾರಿ ತಪ್ಪಿಸಲು ಯತ್ನಿಸುತ್ತದೆ ಎಂಬುದನ್ನು ಈಗ ಇಲ್ಲಿ ನೋಡೋಣ.

ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಪರಿಸರ ರಕ್ಷಣೆಗೆ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಒಂದಿಷ್ಟು ಸೂತ್ರಗಳನ್ನು ಕೇಂದ್ರ ಸರ್ಕಾರ 1994ರಲ್ಲೇ ನೇಯ್ದಿದೆ. ಅದಕ್ಕೆ ‘ಪರಿಸರ ಪರಿಣಾಮಗಳ ಮೌಲ್ಯಮಾಪನ’ (Environmental Impact Assessment– EIA) ಎನ್ನುತ್ತಾರೆ. ಗಣಿಗಾರಿಕೆ, ಹೆದ್ದಾರಿ, ಜಲಾಶಯ ನಿರ್ಮಾಣ, ಕಾರ್ಖಾನೆಯ ಸ್ಥಾಪನೆಗೆ ಮುಂಚೆ ಅವುಗಳ ಪರಿಣಾಮ ಏನೇನಾದೀತು ಎಂಬುದರ ಅಧ್ಯಯನ ಮಾಡಿ, ಪರಿಹಾರ ಕ್ರಮಗಳನ್ನು ಮುಂಚಿತವಾಗಿ ಯೋಜಿಸಬೇಕು. 1992ರಲ್ಲಿ ರಿಯೊ ನಗರದಲ್ಲಿ ನಡೆದ ಮೊದಲ ಜಾಗತಿಕ ಶೃಂಗಸಭೆಯ ಒಪ್ಪಂದದ ಪ್ರಕಾರ ಎಲ್ಲ ದೇಶಗಳೂ ಇಂಥ ಸೂತ್ರಗಳನ್ನು ಜಾರಿಗೆ ತಂದಿವೆ. ಭಾರತ ರೂಪಿಸಿದ ಇಐಎ ಸೂತ್ರಗಳಲ್ಲಿ ಹೆಚ್ಚಿನವು ಉದ್ಯಮಿಗಳ ಪರವಾಗಿದ್ದವು. ಸ್ಥಳೀಯ ಜನರ ಅನಿಸಿಕೆಗಳನ್ನು ದಾಖಲಿಸುವ ಮಾತೇ ಇರಲಿಲ್ಲ. ಅಂಥವುಗಳನ್ನೆಲ್ಲ ಪಟ್ಟಿ ಮಾಡಿ 2006ರಲ್ಲಿ ಹೊಸದೊಂದು ಇಐಎ ರೂಪುಗೊಂಡಿತು. ಜನಾಭಿಪ್ರಾಯ ಕೇಳಬೇಕೆಂಬ ಅಂಶವನ್ನು ಅದರಲ್ಲಿ ಸೇರಿಸಿದ್ದು ಬಿಟ್ಟರೆ, ತಪ್ಪಿತಸ್ಥರು ನುಣುಚಿಕೊಳ್ಳಬಲ್ಲ ಅನೇಕ ಕಿಂಡಿಗಳು ಇನ್ನೂ ದೊಡ್ಡದಾದವು. ಪರಿಸರ ಸಂಘಟನೆಗಳು ಕೋರ್ಟ್‌ ನೆರವಿನಿಂದ 40ಕ್ಕೂ ಹೆಚ್ಚು ಕಿಂಡಿಗಳನ್ನು ಮುಚ್ಚಿಸಿದವು.

ಇದೀಗ ಹೊಚ್ಚ ಹೊಸ ‘2020ರ ಇಐಎ’ ತರುತ್ತೇವೆಂದು ಹೇಳಿ ಪರಿಸರ ಸಚಿವ ಪ್ರಕಾಶ್ ಜಾವಡೇಕರ್‌ ಅದರ ಕರಡು ಪ್ರತಿಯನ್ನು ಎಲ್ಲರ ವೀಕ್ಷಣೆಗೆ (ಲಾಕ್‌ಡೌನ್‌ ಆಗುವ ಒಂದು ದಿನ ಮುಂಚೆ) ಜಾಲತಾಣಗಳಲ್ಲಿ ಬಿಡುಗಡೆ ಮಾಡಿದರು. ಅದಕ್ಕೆ ಆಕ್ಷೇಪಣೆ ಅಥವಾ ತಿದ್ದುಪಡಿಗಳನ್ನು 60 ದಿನಗಳ ಒಳಗೆ ಸೂಚಿಸಬಹುದು ಎಂದು ತಿಳಿಸಿದರು. ಅದು ಇಂಗ್ಲಿಷ್‌ನಲ್ಲಿತ್ತು. ಲಾಕ್‌ಡೌನ್‌ ಕಾರಣ, ಅದನ್ನು ಚರ್ಚಿಸಲೆಂದು ಸಭೆ ಸೇರುವಂತಿರಲಿಲ್ಲ. ಜನರಿಂದ ಮುಚ್ಚಿಡಲು ಬೇಕಂತಲೇ ಸರ್ಕಾರ ಹೀಗೆ ಸಂಚು ಮಾಡಿದೆಯೆಂದು ದೇಶದಾದ್ಯಂತ ಹುಯಿಲೆದ್ದಿತು. ‘ಅದನ್ನು ಸ್ಥಳೀಯ ಭಾಷೆಗಳಿಗೆ ತರ್ಜುಮೆ ಮಾಡಿಸಿ; ಚರ್ಚೆಗೆ ಜಾಸ್ತಿ ಟೈಮ್‌ ಕೊಡಿ’ ಎಂದು ಒತ್ತಾಯಿಸಿ ಕೆಲವರು ನ್ಯಾಯಾಲಯಕ್ಕೆ ಹೋದರು. ಗಡುವನ್ನು ಆಗಸ್ಟ್‌ 11ರವರೆಗೆ ವಿಸ್ತರಿಸಲು ದಿಲ್ಲಿಯ ಹೈಕೋರ್ಟ್‌ ಆಜ್ಞೆ ಮಾಡಿತು. ಈ ಕರಡು ಇಐಎಯನ್ನು ಸ್ಥಳೀಯ ಭಾಷೆಯಲ್ಲೂ ಪ್ರಕಟಿಸಬೇಕೆಂದು ಕರ್ನಾಟಕ ಮತ್ತು ಮದ್ರಾಸ್‌ ಹೈಕೋರ್ಟ್‌ಗಳು ಆಜ್ಞೆ ಮಾಡಿದವು.

ಅನೇಕ ಪರಿಸರ ಸಂಘಟನೆಗಳು ಇಂಗ್ಲಿಷ್‌ ಇಐಎಯನ್ನೇ ಓದಿ, ಅದರಲ್ಲಿ ಉದ್ಯಮಿಗಳನ್ನು ಓಲೈಸುವ ಏನೇನು ಅಂಶಗಳಿವೆ ಎಂಬುದರ ಪಟ್ಟಿ ಮಾಡಿ ಹರಿಬಿಟ್ಟವು. ಹುಯಿಲು ಜೋರಾಯಿತು. ‘ಈ ಇಐಎ ಬೇಡವೇ ಬೇಡ’ ಎಂದು ಆಕ್ಷೇಪಣೆಗಳ ಸುರಿಮಳೆ ಪರಿಸರ ಸಚಿವಾಲಯಕ್ಕೆ ಬಂದಿತು. ಸ್ವೀಡಿಶ್‌ ಹುಡುಗಿ ಗ್ರೇತಾ ಥನ್‌ಬರ್ಗ್‌ ಆರಂಭಿಸಿದ ‘ಫ್ರೈಡೇಸ್‌ ಫಾರ್‌ ಫ್ಯೂಚರ್‌’ ಸಂಘಟನೆಯ ಭಾರತದ ಶಾಖೆಯೊಂದು ಜಾಲತಾಣದ ಮೂಲಕ ಲಕ್ಷಾಂತರ ಎಳೆಯರಿಂದ ಆಕ್ಷೇಪಣೆಗಳ ಪ್ರವಾಹವನ್ನೇ ಹರಿಸಿತು. ಕ್ರುದ್ಧಗೊಂಡ ಸಚಿವಾಲಯದವರು ಸೈಬರ್‌ ಪೊಲೀಸರ ಮೂಲಕ ಜಾಲತಾಣವನ್ನು ಸ್ಥಗಿತಗೊಳಿಸಿ, ಎಳೆಯರ ಮೇಲೆ ಉಗ್ರಕ್ರಮ ಕೈಗೊಳ್ಳುವುದಾಗಿ ಬೆದರಿಸಿದರು. ಅದಕ್ಕೂ ಟೀಕೆ ವ್ಯಾಪಕವಾದಾಗ ಬೆದರಿಕೆಯನ್ನು ಹಿಂತೆಗೆದುಕೊಂಡರು.

ಕಳೆದ ನೂರು ದಿನಗಳಿಂದ ಈ ಹೊಸ ಇಐಎ ಕರಡಿನ ವಿರುದ್ಧ ಎಲ್ಲೆಡೆ ಭಾರೀ ಚರ್ಚೆ, ಕಾನೂನು ತಜ್ಞರ ಲೇಖನ‌, ಪರಿಸರ ಪ್ರೇಮಿಗಳ ಸಹಿ ಸಂಗ್ರಹ ಅಭಿಯಾನ, ಪತ್ರಿಕೆಗಳ ಸಂಪಾದಕೀಯ, ಜಾಲಗೋಷ್ಠಿ ಎಲ್ಲ ನಡೆದವು. ಸರ್ವೋಚ್ಚ ನ್ಯಾಯಾಲಯದ ದೀಪಕ್‌ ಗುಪ್ತಾರಂಥ ನಿವೃತ್ತ ನ್ಯಾಯಮೂರ್ತಿಗಳು, ಎಮ್‌.ಕೆ.ರಮೇಶರಂಥ ಪರಿಸರ ನ್ಯಾಯವಾದಿಗಳು, ಲಿಯೊ ಸಾಲ್ಡಾನಾರಂಥ ಹೋರಾಟಗಾರರು, ಕಾಂಚಿ ಕೊಹ್ಲಿಯಂಥ ಪರಿಸರ ವಿಜ್ಞಾನಿಗಳು ದನಿ ಎತ್ತಿದರು. ಕಾಂಗ್ರೆಸ್‌ ಕಾಲದ ಪರಿಸರ ಸಚಿವರಾಗಿದ್ದ ಜೈರಾಮ್‌ ರಮೇಶ್‌ ಮತ್ತಿತರ ಪ್ರತಿಪಕ್ಷಗಳ ರಾಜಕಾರಣಿಗಳೂ ಈ ಅಧಿಸೂಚನೆಯನ್ನು ಖಂಡಿಸಿದರು.

ಈ ಆಕ್ರೋಶಕ್ಕೆ ಕಾರಣ ಏನೆಂದರೆ ಅಭಿವೃದ್ಧಿಯ ಹೆಸರಿನಲ್ಲಿ ಉದ್ಯಮಿಗಳ, ಗುತ್ತಿಗೆದಾರರ ಮಾರ್ಗಗಳನ್ನು ಇನ್ನಷ್ಟು ಸಲೀಸು ಮಾಡುವ ಅನೇಕ ಕಲಮುಗಳು ಅದರಲ್ಲಿ ಅಡಕವಾಗಿದ್ದವು. ಇಂತಿಂಥ ಕೆಲಸಗಳಿಗೆ ಸಡಿಲ ಇಐಎ ಸಾಕು, ಇಂತಿಂಥವಕ್ಕೆ ಇಐಎ ಬೇಕಾಗಿಯೇ ಇಲ್ಲ; ಇಂತಿಂಥ ಯೋಜನೆಗಳಿಗೆ ಜನರ ಅಹವಾಲನ್ನೂ ಕೇಳಬೇಕಾಗಿಲ್ಲ ಎಂದೆಲ್ಲ ಅದರಲ್ಲಿದ್ದವು. ಎಲ್ಲಕ್ಕಿಂತ ಹೆಚ್ಚಿನ ಆಕ್ಷೇಪಣೆ ‘ಕೃತ್ಯೋತ್ತರ ಪರಿಹಾರ’ ಎಂಬ ಕಲಮಿಗೆ ಬಂತು. ಇದರ ಪ್ರಕಾರ, ಸರ್ಕಾರದ ಅನುಮತಿಯನ್ನೇ ಕೇಳದೆ ಯಾರಾದರೂ ಉದ್ಯಮ ಸ್ಥಾಪಿಸಿದರೆ, ಅದರಿಂದ ಪರಿಸರಕ್ಕೆ ಧಕ್ಕೆ ಬಂತೆಂದು ಭವಿಷ್ಯದಲ್ಲಿ ಯಾರಾದರೂ ಸಾಬೀತು ಮಾಡಿದರೆ, ಆ ಉದ್ಯಮಿ ತನ್ನ ತಪ್ಪಿಗೆ ದಂಡ ಕಟ್ಟಿದರೆ ಸರಿ; ಬಾರಾ ಖೂನ್‌ ಮಾಫ್‌!

ಪರಿಸರ ಸಂಕಟಗಳು ತಾಪಮಾನ ಏರಿಕೆಯಿಂದಾಗಿ ಜಗತ್ತಿನಾದ್ಯಂತ ಹೆಚ್ಚುತ್ತಿರುವಾಗ ಪರಿಸರ ಕಾನೂನುಗಳನ್ನು ಬಿಗಿ ಮಾಡುವ ಬದಲು ದುರ್ಬಲಗೊಳಿಸುವುದೇಕೊ? ಈ ಪರಿಯ ಪ್ರತಿಭಟನೆಯಿಂದ ಅಪ್ರತಿಭರಾದ ಪರಿಸರ ಸಚಿವ ಜಾವಡೇಕರ್,‌ ‘ಅದಕ್ಯಾಕಿಷ್ಟು ಉದ್ವಿಗ್ನರಾಗುತ್ತೀರಿ? ಇದು ಬರೀ ಕರಡು ಕಣ್ರೀ! ಆಕ್ಷೇಪಣೆಗಳನ್ನು ಪರಿಶೀಲಿಸಿ ದೋಷಗಳನ್ನು ಸರಿಪಡಿಸಿ ಪಕ್ಕಾ ಮಾಡುತ್ತೇವೆ’ ಎಂದು ನಿನ್ನೆ ಹೇಳಿದ್ದಾರೆ.

ಸರಿಪಡಿಸಿದ ನಂತರವಾದರೂ ಇಐಎ ಅನ್ನೋದು ‘ಝೀರೊ ಡಿಫೆಕ್ಟ್‌, ಝೀರೊ ಇಫೆಕ್ಟ್‌’ ನೇಯ್ಗೆಯಾದೀತೆ? ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT