ಸೋಮವಾರ, ಏಪ್ರಿಲ್ 19, 2021
23 °C
ಕೋವಿಡ್‌ ಇಲ್ಲದವರೇ ಕೊರೊನಾ ಮಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾದಾರು ಜೋಕೆ!

ನಾಗೇಶ ಹೆಗಡೆ ಲೇಖನ: ಶಕ್ತ ಭಾರತದ ಅಸ್ವಸ್ಥ ಮುಖಗಳು

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಈಗಿನ ಸಿ.ಡಿ ಪ್ರಕರಣದ ಅತಿ ದೊಡ್ಡ ಅಡ್ಡಪರಿಣಾಮ ಏನು ಗೊತ್ತೆ? ಜನರು ಕಾಯಿಲೆಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ಹೇಗೆಂದರೆ, ಕೋವಿಡ್‌– 19 ಕಾಯಿಲೆ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ, ಏಕಕಾಲಕ್ಕೆ 12 ಲಕ್ಷ ಜನರನ್ನು ಮಲಗಿಸುತ್ತಿರುವಾಗ ಅದನ್ನು ಕಡೆಗಣಿಸಿ ಈ ಕಿರುಪರದೆಯ ಸುದ್ದಿ ಮಾಧ್ಯಮಗಳು ಬೇರೆಯದೇ ಹಾಸಿಗೆಯ ರೋಚಕ ಧಾರಾವಾಹಿಯನ್ನೇ ಮುನ್ನಡೆಸು
ತ್ತಿವೆ. ಕಳೆದ ವರ್ಷ ಲಸಿಕೆಯೇ ಇಲ್ಲದಿದ್ದಾಗ ಇವು ಅಬ್ಬರಿಸಿ ಬೊಬ್ಬಿರಿದು ಕೊರೊನಾ ಕರಾಳತೆಯನ್ನು ಬಿಂಬಿ ಸುತ್ತಿದ್ದವು. ಈಗ, ಲಸಿಕೆ ನಮ್ಮ ಕೈಗೆಟಕುತ್ತಿರುವಾಗ, ಕೊರೊನಾ ಹಾವಳಿ ಇನ್ನೂ ಜಾಸ್ತಿ ಆಗುತ್ತಿರುವಾಗ, ಮಾಧ್ಯಮಗಳಲ್ಲಿ ಈ ಕಡೆ ಸಿ.ಡಿ, ಆ ಕಡೆ ದೀದಿ.

ನಮ್ಮ ಸರ್ಕಾರಗಳೂ ಅಷ್ಟೆ. ಕಳೆದ ವರ್ಷ ಏಪ್ರಿಲ್‌ 5ರಂದು ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ದೀಪ ಹೊತ್ತಿಸಿ ಸಾಮೂಹಿಕ ಜಾಗೃತಿ ಮೂಡಿಸಿ ಮಾರಿಯನ್ನು ಓಡಿಸಬೇಕೆಂದು ಪ್ರಧಾನಿಯವರು ಮಾಡಿದ 9 ನಿಮಿಷಗಳ ಭಾಷಣ ನಮಗೆಲ್ಲ ನೆನಪಿದೆ. ಮುಖವಸ್ತ್ರದ, ದೈಹಿಕ ಅಂತರದ ಅಗತ್ಯವನ್ನು ಒತ್ತಿ ಒತ್ತಿ ಹೇಳಿದ್ದ ಅವರು ಈಗಿನ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಅವನ್ನೆಲ್ಲ ಮರೆತರು. ನಾಲ್ಕು ರಾಜ್ಯಗಳಲ್ಲಿ ದಿನವೂ ಅದೆಷ್ಟೊ ಸಾವಿರ ಸಭಿಕರು ಒತ್ತೊತ್ತಾಗಿ, ಮುಖಗವಸು ಇಲ್ಲದೆ ಕೂತಿರುವಾಗ ಎಚ್ಚರಿಕೆಯ ಒಂದು ಮಾತೂ ಅವರಿಂದ ಬರಲಿಲ್ಲ. ದೀದಿಯನ್ನು, ಪ್ರತಿಪಕ್ಷಗಳನ್ನು ಛೇಡಿಸುವುದೇ ಆಯಿತು. ರಾಷ್ಟ್ರದ ಆಂತರಿಕ ಭದ್ರತೆಯ ಹೊಣೆ ಹೊತ್ತ ಗೃಹ ಸಚಿವರೂ ರ‍್ಯಾಲಿಗಳಲ್ಲಿ ಆ ಬಗ್ಗೆ ಸೊಲ್ಲೆತ್ತಲಿಲ್ಲ (ಗುಜರಾತಿನಲ್ಲಿ ಮಾಸ್ಕ್‌ ಹಾಕಿಕೊಳ್ಳದೇ ಓಡಾಡಿದವರಿಂದ ₹ 168 ಕೋಟಿ ವಸೂಲಿ ಮಾಡಲಾಗಿದೆ). ಇನ್ನು, ಚುನಾವಣಾ ಆಯೋಗವೂ ಅಷ್ಟೆ. ಮಹಾಮಾರಿಗೆ ಔತಣ ಕೊಡಬಲ್ಲ ಅಂಥ ಸಭೆಗಳನ್ನು ತಡೆಯುವ ಪರಮಾಧಿಕಾರ ಇದ್ದರೂ ಅದನ್ನು ಚಲಾಯಿಸಲಿಲ್ಲ. ನಮ್ಮ ಮುಖ್ಯಮಂತ್ರಿಯವರೋ ವೈದ್ಯತಜ್ಞರ ಖಡಕ್‌ ಸಲಹೆ ಗಿಂತ ಸಿನಿಮಾದವರ, ಜಿಮ್‌ನವರ ಕಣ್ಣೀರಿಗೆ ಮಿಡಿದರು.

ಇಷ್ಟರಮಟ್ಟಿಗೆ ಜನನಾಯಕರ ವಿವೇಕವನ್ನು ನುಂಗಿ ನೊಣೆಯುವ ತಾಕತ್ತು ಈ ವೈರಸ್‌ಗೆ ಬಂತು ಹೇಗೊ? ಅಥವಾ ಬುದ್ಧಿಗೆ ಮಂಕು ಕವಿಯಬಲ್ಲ ಇನ್ನೊಂದು ಬಗೆಯ ಮೈಂಡ್‌ ವೈರಸ್‌ (ಅದಕ್ಕೆ ‘ಮೀಮ್‌’ ಎನ್ನುತ್ತಾರೆ) ನಮ್ಮಲ್ಲಿ ಹಾಸುಹೊಕ್ಕಾಗಿದೆಯೆ? ನಿನ್ನೆಯ ‘ವಿಶ್ವ ಆರೋಗ್ಯ ದಿನ’ದಂದು ಯಾವ ಆರೋಗ್ಯತಜ್ಞರೂ ಇಂಥ ಮೀಮ್‌ ಬಗ್ಗೆ ಎಚ್ಚರಿಸಿಲ್ಲ ಯಾಕೊ?

ಇದೇ ವೈದ್ಯತಜ್ಞರು ಮುಂದೊಡ್ಡುವ ಅಂಕಿಸಂಖ್ಯೆಗಳ ಪ್ರಕಾರ, ಭಾರತದ ಜನಾರೋಗ್ಯ ತೀರ ಗಂಭೀರ ಸ್ಥಿತಿಯನ್ನು ತಲುಪುತ್ತಿದೆ. ನಮ್ಮ ದೇಶ ಕೋವಿಡ್‌ ಕಾಯಿಲೆಯ ಜಾಗತಿಕ ದಾಖಲೆಯನ್ನು ಮೀರುತ್ತಿದೆ. ತುಸು ಹಿಂದಷ್ಟೆ ಬ್ರಝಿಲ್‌ ದೇಶದಲ್ಲಿ ಏಕಕಾಲಕ್ಕೆ 13 ಲಕ್ಷ ಜನ ಹಾಸಿಗೆ ಹಿಡಿದಿದ್ದು ವಿಶ್ವದಾಖಲೆ ಆಗಿತ್ತು. ಈಗ ನಮ್ಮ ದೇಶದಲ್ಲಿ ಅಂಥವರ ಸಂಖ್ಯೆ 12.7 ಲಕ್ಷಕ್ಕೆ ಬಂದಿದೆ. ಸದ್ಯವೇ ವಿಶ್ವದಾಖಲೆ ನಮ್ಮದಾಗಲಿದೆ. ಅತ್ತ ಅಮೆರಿಕ ಇನ್ನೊಂದು ರೀತಿಯ ದಾಖಲೆ ಮಾಡಿತ್ತು: ಪ್ರತಿದಿನ ಒಂದು ಲಕ್ಷ ಹೊಸ ರೋಗಿಗಳು ಸೃಷ್ಟಿಯಾಗುತ್ತಿದ್ದರು. ಆ ಸಂಖ್ಯೆಯನ್ನು ತಲುಪಿದ ಎರಡನೇ ದೇಶವಾಗಿ ಇಂಡಿಯಾ ಹೊಮ್ಮುತ್ತಿದೆ. ಒಟ್ಟೂ ಮರಣದ ಸಂಖ್ಯೆಯಲ್ಲೂ ನಾವು ಅವೆರಡರ ನಂತರ ಮೂರನೇ ಸ್ಥಾನಕ್ಕೆ (166 ಸಾವಿರ) ಏರಿದ್ದೇವೆ. ಚೀನಾದಲ್ಲಿ ಗತಿಸಿದವರು ಕೇವಲ 4636.

ಹಾಗೆ ನೋಡಿದರೆ ನಾವು ತುಂಬ ಗಟ್ಟಿ ಜನ. ಅಮೆರಿಕದಲ್ಲಿ ಪ್ರತಿ ಲಕ್ಷ ಜನರಿಗೆ 170 ಸಾವು, ಬ್ರಝಿಲ್‌ನಲ್ಲಿ 157 ಆದರೆ ನಮ್ಮಲ್ಲಿ ಬರೀ 12 ಅಷ್ಟೆ. ಅತ್ತ ಇಂಗ್ಲೆಂಡ್‌, ಇಟಲಿ, ಫ್ರಾನ್ಸ್‌ಗಳಲ್ಲಿ ಸಾವಿನ ಪ್ರಮಾಣ ಅಮೆರಿಕಕ್ಕಿಂತ ಹೆಚ್ಚಿಗೆ ಇದೆ. ಝೆಕ್‌ ದೇಶ ಬಿಡಿ, ಲಕ್ಷಕ್ಕೆ 250 ಸಾವು. ಭಾರತದಲ್ಲಿ ಕೋವಿಡ್‌ ಸಾವಿನ ಸಂಖ್ಯೆ ತೀರ ಕಡಿಮೆ ಯಾಕೆ ಅನ್ನೋದರಲ್ಲೂ ಒಂದು ವ್ಯಂಗ್ಯ ಇದೆ: ಯಾವ ದೇಶದಲ್ಲಿ ಆರೋಗ್ಯ ಸೇವಾ ವ್ಯವಸ್ಥೆ ತುಂಬ ಚೆನ್ನಾಗಿದೆಯೊ ಅಲ್ಲಿ 80- 90 ಮೀರಿದ ಹಿರಿಯರ ಸಂಖ್ಯೆಯೂ ಸಹಜವಾಗಿ ಜಾಸ್ತಿಯೇ ಇದೆ/ಇತ್ತು. ಹಾಗಾಗಿ ಅಲ್ಲಿ ಕೋವಿಡ್‌ ಸಾವಿನ ಪ್ರಮಾಣವೂ ಜಾಸ್ತಿ ಇದೆ. ನಮ್ಮಲ್ಲಿ ಅನುಕೂಲಸ್ಥ ವರ್ಗ ಬಿಟ್ಟರೆ, ಇನ್ನಿತರ ವರ್ಗಗಳಲ್ಲಿ ಹಿರಿಯರ ಪ್ರಮಾಣ ಹೆಚ್ಚಿಗೆ ಇಲ್ಲ. ಅವರೆಲ್ಲ ಸ್ವಾಸ್ಥ್ಯ ಸೌಕರ್ಯಗಳ ಅಭಾವದಿಂದಾಗಿ ಮೊದಲೇ ಹೊರಟು ಹೋಗಿದ್ದಾರೆ. ಈಗ ಏನಿದ್ದರೂ 60- 70ರ ಕಿರಿಯ ವೃದ್ಧರು, ಅದರಲ್ಲೂ ಕಾಯಿಲೆಪೀಡಿತರು ತುಂಬ ಹುಷಾರಾಗಿರಬೇಕು. ಇನ್ನುಳಿದವರೂ ಲಸಿಕೆ ಹಾಕಿಸಿಕೊಳ್ಳದಿದ್ದರೆ ಗೃಹಬಂಧನ, ಆಸ್ಪತ್ರೆವಾಸ, ಗಳಿಕೆ ಇಳಿತಗಳ ಸಾಲು ಸಂಕಟಗಳು ತಪ್ಪಿದ್ದಲ್ಲ.

ಲಸಿಕೆನೂ ಹಾಕಿಸಿಕೊಂಡಿಲ್ಲ; ಮುಖಗವಸೂ ಇಲ್ಲ; ದೈಹಿಕ ಅಂತರವನ್ನೂ ಕಾಪಾಡಿಕೊಳ್ಳುವುದಿಲ್ಲ- ಅಂಥ ನಿಷ್ಕಾಳಜಿಯ ಜನರಿಂದಾಗಿ ದೇಶದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಇವರಿಗೆ ಜಾಗ ಸಾಲುತ್ತಿಲ್ಲವೆಂದು ದೊಡ್ಡ ಆಸ್ಪತ್ರೆಗಳ ಇತರ ರೋಗಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ. ಕೋವಿಡ್‌ ಅಂಟಿಸಿಕೊಂಡವರು ಆಸ್ಪತ್ರೆಯಲ್ಲಿ ವಿರಮಿಸಿ ವಾಸಿಯಾಗಿ ಮನೆಗೆ ಬರುತ್ತಾರೆ. ಆದರೆ ಅವರಿಗಾಗಿ ಬೆಡ್‌ ಖಾಲಿ ಮಾಡಬೇಕಾದ ಹೃದ್ರೋಗಿಗಳು, ಕಿಡ್ನಿ-ಶ್ವಾಸಕೋಶ ಕಾಯಿಲೆಯವರು, ಶಸ್ತ್ರಚಿಕಿತ್ಸೆ, ಡಯಾಲಿಸಿಸ್‌ಗಾಗಿ ಕಾದಿದ್ದವರು, ಅಪಘಾತ- ಆಕಸ್ಮಿಕದಿಂದಾಗಿ ಆಸ್ಪತ್ರೆ ಸೇರಿದವರು ಅರ್ಧಕ್ಕೇ ಮನೆಗೆ ಹೋಗಬೇಕಾಗುತ್ತದೆ, ಕೋವಿಡ್‌ ಅಂಟಿಸಿಕೊಂಡೇ ಹಿಂದಿರುಗಬಹುದು! ಜೀವ ಕಳೆದುಕೊಳ್ಳಲೂಬಹುದು. ಈಗ ಕಂಡಿತೆ ಇನ್ನೊಂದು ವ್ಯಂಗ್ಯ? ಕೋವಿಡ್‌ ಕಾಯಿಲೆಯಿಂದಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಷ್ಟಕ್ಕೀಡಾ ಗುವವರು, ಸಾಯುವವರು ಯಾರೆಂದರೆ ಕೋವಿಡ್‌ ಇರದಿದ್ದ ಇತರ ರೋಗಿಗಳು!


–ನಾಗೇಶ ಹೆಗಡೆ

ಈ ವಿಕ್ಷಿಪ್ತ ಸಂದರ್ಭದಲ್ಲೂ ಲಸಿಕೆಯ ಕುರಿತು ಅಪಪ್ರಚಾರದ ಗುಸುಗುಸು ಹೆಚ್ಚಾಗುತ್ತಿದೆ. ವಾಸ್ತವ ಏನೆಂದರೆ, ಲಸಿಕೆ ಎಂದರೆ (ಉದಾ: ಅದು ಕೋವಿಶೀಲ್ಡ್‌ ಆಗಿದ್ದರೆ) ಅದರಲ್ಲಿ ಲಕ್ಷಾಂತರ ಬಂಜೆ ಕೊರೊನಾ ಇರುತ್ತವೆ. ಅವು ನಮ್ಮ ದೇಹದೊಳಕ್ಕೆ ಹೋಗಿ ಮರಿ ಹಾಕಲಾರವು; ಆದರೆ ತಂತಮ್ಮ ಅಂಟುಮುಳ್ಳುಗಳ ಪ್ರೋಟೀನನ್ನು ಮಾತ್ರ ಉತ್ಪಾದನೆ ಮಾಡುತ್ತವೆ. ಈ ಪ್ರೋಟೀನನ್ನು ನೋಡಿದಾಕ್ಷಣ ನಮ್ಮ ರಕ್ತಕಣಗಳು ಪ್ರಬಲ ಕೊರೊನಾದ ಅಂಟುಮುಳ್ಳುಗಳನ್ನೂ ತರಿದು ಹಾಕಬಲ್ಲ ಹೊಸ ಶಸ್ತ್ರಾಸ್ತ್ರಗಳನ್ನು ಸಜ್ಜು ಮಾಡುತ್ತವೆ. ಅದರ ಅಡ್ಡ ಪರಿಣಾಮಗಳು ‘ತೀರ ಕಮ್ಮಿ; ತೀರ ತಾತ್ಕಾಲಿಕ’ ಎಂದು ವೈದ್ಯತಜ್ಞರು ಹೇಳುತ್ತಿದ್ದಾರೆ. ಅವರನ್ನು ನಂಬೋಣ. ಹಾಗಿದ್ದರೆ, ಲಸಿಕೆ ಹಾಕಿಸಿಕೊಂಡು ಮುಖವಸ್ತ್ರವಿಲ್ಲದೆ ಓಡಾಡಬಹುದೆ? ಊಂಹೂ. ಆಗಲೂ ನಿಮ್ಮ ಕೈ, ಉಗುಳು, ಸಿಂಬಳಕ್ಕೆ ತಾಜಾ ಕೊರೊನಾ ಅಂಟಿಕೊಂಡು ಇತರರಿಗೆ ಮರುಪ್ರಸಾರ ಮಾಡಬಹುದು. ಹುಷಾರಾಗಿರಿ.

ಇದನ್ನೆಲ್ಲ ಮತ್ತೆ ಯಾಕೆ ಇಲ್ಲಿ ಹೇಳಬೇಕಾಯಿತು ಗೊತ್ತೆ? ನಿನ್ನೆ ‘ವಿಶ್ವ ಆರೋಗ್ಯ ದಿನ’ವಾಗಿದ್ದರೂ ಜನಜಾಗೃತಿಯ ಯಾವ ವಿಶೇಷ ಕಾರ್ಯಕ್ರಮವನ್ನೂ ಸರ್ಕಾರ ಹಾಕಿಕೊಂಡಿರಲಿಲ್ಲ. ಕೊರೊನಾ ಮಾರಿಯ ಅಬ್ಬರದ ಮರುಕುಣಿತದ ಕುರಿತು ಸರಳ ತಿಳಿವಳಿಕೆಯ ಒಂದಾದರೂ ಜನಹಿತದ ಜಾಹೀರಾತು ನಿನ್ನೆ ಬರಲಿಲ್ಲ.

ಈಗ ಈ ಇಡೀ ಅಪಧ್ಯಾಯದ ಕೊನೆಯ ವ್ಯಂಗ್ಯಕ್ಕೆ ಬರೋಣ: ಕೋವಿಡ್‌ ಹೇಗೆ ಪ್ರಜೆಗಳ ದುರ್ಬಲ ಅಂಗಾಂಗಗಳ ಮೇಲೆ ದಾಳಿ ಮಾಡುತ್ತದೋ ಅದೇ ರೀತಿ ಸರ್ಕಾರದ ಕೋವಿಡ್‌ ಪ್ರತಿಬಂಧಕ ಕ್ರಮಗಳೂ ಸಮಾಜದ ದುರ್ಬಲ, ಶ್ರಮಿಕ ವರ್ಗವನ್ನೇ ಹಿಂಡಿ ಹಿಪ್ಪೆ ಮಾಡಿವೆ. ಇತ್ತ ಸರ್ಕಾರ ನೀಡಿದ ‘ತುರ್ತುಚಿಕಿತ್ಸೆ’ಯ ಫಲವಾಗಿ ಶ್ರೀಮಂತರ ಸಂಪತ್ತು ಇದೇ ಅವಧಿಯಲ್ಲಿ 43 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. 38 ಹೊಸ ಕೋಟ್ಯಧೀಶರು ಸೃಷ್ಟಿಯಾಗಿದ್ದಾರೆ. ನಾವೀಗ ಎರಡು ಕಾರಣಗಳಿಂದ ಹುಷಾರಾಗಿರಬೇಕು: ಒಂದು, ಕೊರೊನಾದ ಕರಾಳ ಹೆಡೆ; ಇನ್ನೊಂದು, ಪ್ರಭುತ್ವದ ನಿರಾಳ ನಡೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು