ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಶೇಷ: ಬಿಸಿತುಪ್ಪವಾಗಿ ಪರಮಾಣು ಬೆಸುಗೆ

ರಷ್ಯಾದ ಇಂಧನ ಪ್ರಾಬಲ್ಯವನ್ನು ತಗ್ಗಿಸುವ ಹೊಸ ಯತ್ನದಲ್ಲಿ ರಷ್ಯಾವೂ ಪಾಲುದಾರ!
Last Updated 11 ಮೇ 2022, 22:30 IST
ಅಕ್ಷರ ಗಾತ್ರ

ಯುದ್ಧಕ್ಕೂ ಕಾಳ್ಗಿಚ್ಚಿಗೂ ಅದೆಷ್ಟು ಸಾಮ್ಯ ನೋಡಿ: ಗಿಡಮರಗಳ ಹಾಗೆ ಶಸ್ತ್ರಾಸ್ತ್ರಗಳು ಉರಿದು ಹೋಗಿ ಹೊಸದು ಬರುತ್ತವೆ. ಧ್ವಂಸಗೊಂಡ ಕಾಡಿನ ಹಾಗೆ ನಗರಗಳೂ ನಾಳೆ ನವನವೀನವಾಗುತ್ತವೆ. ಕಾಳ್ಗಿಚ್ಚಿನಿಂದ ಮೇಲೆದ್ದ ಹೊಗೆ, ಮಸಿ, ಹಾರುಬೂದಿಯೆಲ್ಲ ಮಳೆಯಾಗಿ ಸುರಿದು ದೂರದ ಭೂಭಾಗವನ್ನು ಇನ್ನಷ್ಟು ಸಮೃದ್ಧಗೊಳಿಸುತ್ತವೆ. ಹಾಗೇ ಯುದ್ಧಕ್ಕೀಡಾದ ರಾಷ್ಟ್ರದ ನೆರೆಹೊರೆಯವರೂ ಉದ್ಧಾರವಾಗುತ್ತಾರೆ. ಬೆಂಕಿಯ ಝಳದಿಂದ ಸದ್ಯ ಪಾರಾದ ಸಶಕ್ತ ಜೀವಿಗಳು ಆಮೇಲೆ ಸ್ವಸ್ಥಾನಕ್ಕೆ ಹಿಂದಿರುಗಿ ಇನ್ನೂ ಬಲಿಷ್ಠವಾಗುತ್ತವೆ.

ಉಕ್ರೇನ್‌ ಧಗಧಗಿಸುತ್ತಿದೆ. ರಷ್ಯಾದ ಶತಕೋಟ್ಯಧೀಶರು ಗುಂಪುಗುಂಪಾಗಿ ಗುಳೆ ಎದ್ದು ದುಬೈಯಲ್ಲಿ ಬೇರು ಬಿಡುತ್ತಿದ್ದಾರೆ. ಅತ್ತ ಯುರೋಪ್‌, ಅಮೆರಿಕದ ಆಗರ್ಭ ಶ್ರೀಮಂತರು ವಿದ್ಯುತ್‌ ಶಕ್ತಿಯ ಹೊಸ ಮೂಲಗಳಿಗೆ ಹಣ ಹೂಡಲು ಹೊರಟಿದ್ದಾರೆ. ರಷ್ಯಾದ ಇಂಧನವನ್ನೇ ಅವಲಂಬಿಸಿದ್ದ ಬಹುಪಾಲು ಐರೋಪ್ಯ ರಾಷ್ಟ್ರಗಳಲ್ಲಿ ಈಗ ಪರಮಾಣು ಬೆಸುಗೆಯ ತಂತ್ರಜ್ಞಾನಕ್ಕೆ ಭರಪೂರ ಬಂಡವಾಳ ಹರಿಯತೊಡಗಿದೆ. ಈ ಹೊಸ ವಿಧಾನದ ವಿದ್ಯುತ್ ಕೈಗೆಟುಕಿದರೆ ರಷ್ಯಾದ ತೈಲ, ಅನಿಲ, ಕಲ್ಲಿದ್ದಲು ಯಾವುದೂ ಬೇಕಾಗುವುದಿಲ್ಲ. ಅಷ್ಟೇ ಅಲ್ಲ, ಬಿಸಿಪ್ರಳಯದ ಬೇಗುದಿಯಲ್ಲಿರುವ ಭೂಮಿಗೆ ಹೊಸದೊಂದು ಸ್ವಚ್ಛ, ನಿರಂತರ ಶಕ್ತಿಮೂಲ ಸಿಕ್ಕಂತಾಗುತ್ತದೆ. ಜಗತ್ತಿನ ಬಲಾಢ್ಯ ತೈಲದೊರೆಗಳನ್ನು, ಕಲ್ಲಿದ್ದಳಪತಿಗಳನ್ನು ಮೂಲೆಗೊತ್ತಿದಂತಾಗುತ್ತದೆ.

ಪರಮಾಣುವಿನ ಮಾಯೆಯೇ ಅಂಥದ್ದು. ಅದನ್ನು ಒಡೆದರೆ ಶಕ್ತಿ ಹೊರಕ್ಕೆ ಸೂಸುತ್ತದೆ. ಅದಕ್ಕೆ ವಿದಳನ ಅಥವಾ ‘ನ್ಯೂಕ್ಲಿಯರ್‌ ಫಿಶನ್‌’ ಎನ್ನುತ್ತಾರೆ. ಒಡೆಯುವುದು ಸುಲಭ. ಯುರೇನಿಯಂ ಪರಮಾಣುವಿಗೆ ಆಘಾತ ಕೊಟ್ಟರೆ ಅದು ಸಿಡಿಯುತ್ತದೆ; ಬಾಂಬ್‌ ತಯಾರಿಸಬಹುದು. ವಿದ್ಯುತ್‌ ಉತ್ಪಾದನೆ ಮಾಡಬಹುದು. ಆದರೆ ತುಸು ಹೆಚ್ಚುಕಮ್ಮಿಯಾದರೆ ಪರಮಾಣು ಸ್ಥಾವರಗಳೇ ಸಿಡಿಯಬಹುದು. ಅದಕ್ಕೆ ವ್ಯತಿರಿಕ್ತವಾಗಿ, ಎರಡು ಪರಮಾಣುಗಳನ್ನು ಬಲಾತ್ಕಾರವಾಗಿ ಮಿಲನ ಮಾಡಿಸಿದರೂ ಅಪಾರ ಶಕ್ತಿ ಹೊಮ್ಮುತ್ತದೆ. ಅದಕ್ಕೆ ‘ನ್ಯೂಕ್ಲಿಯರ್‌ ಫ್ಯೂಶನ್‌’ ಎನ್ನುತ್ತಾರೆ. ವಿದಳನಕ್ಕೆ ಹೋಲಿಸಿದರೆ ಮಿಲನ ಸುರಕ್ಷಿತ, ಆದರೆ ಭಾರೀ ಸವಾಲಿನ ಕೆಲಸ. ಸೂರ್ಯ ಮತ್ತು ಇತರ ತಾರೆಗಳಲ್ಲಿರುವ ಹೀಲಿಯಂ ಮತ್ತು ಹೈಡ್ರೊಜನ್‌ ಪರಮಾಣುಗಳು ಅಲ್ಲಿನ ಪ್ರಚಂಡ ಗುರುತ್ವ ಶಕ್ತಿಯಿಂದಾಗಿ ನಿಗಿನಿಗಿ ಉರಿಯುತ್ತ ಒಂದರೊಳಗೊಂದು ಬೆಸುಗೆ ಆಗುತ್ತಿರುತ್ತವೆ. ಆಗ ಹೊಮ್ಮುವ ಶಕ್ತಿಯೇ ಜಗತ್ತಿಗೆಲ್ಲ ಶಾಖವನ್ನೂ ಬೆಳಕನ್ನೂ ನೀಡುತ್ತಿದೆ.

ಭೂಮಿಯ ಮೇಲೂ ಅಂಥ ಫ್ಯೂಶನ್‌ ಸೂರ್ಯನ ನಿರ್ಮಾಣಕ್ಕೆ ಕಳೆದ 50 ವರ್ಷಗಳಿಂದ ಯತ್ನಗಳು ನಡೆಯುತ್ತಿವೆ. ವಿವಿಧ ಶ್ರೀಮಂತ ರಾಷ್ಟ್ರಗಳಲ್ಲಿ ನೂರಕ್ಕೂ ಹೆಚ್ಚು ಸರ್ಕಾರಿ ಇಲ್ಲವೆ ಖಾಸಗಿ ಫ್ಯೂಶನ್‌ರಿಯಾಕ್ಟರ್‌ಗಳಲ್ಲಿ ಪೈಪೋಟಿಯಲ್ಲಿ ಪ್ರಯೋಗಗಳು ನಡೆಯುತ್ತಿವೆ. ಅವೆಲ್ಲ ಸಾಲದೆಂಬಂತೆ ಹತ್ತಾರು ಶಕ್ತಿಶಾಲಿ ರಾಷ್ಟ್ರಗಳು ಒಂದಾಗಿ ಫ್ರಾನ್ಸ್‌ನಲ್ಲಿ ಅತ್ಯಂತ ದೊಡ್ಡ, 2,200 ಶತಕೋಟಿ ಡಾಲರ್‌ ವೆಚ್ಚದ ಫ್ಯೂಶನ್‌ ಸ್ಥಾವರವೊಂದನ್ನು ನಿರ್ಮಿಸುತ್ತಿವೆ. ಅಮೆರಿಕ, ಚೀನಾ, ಇಂಡಿಯಾ, ಜಪಾನ್‌, ರಷ್ಯಾ, ದಕ್ಷಿಣ ಕೊರಿಯಾ ಮತ್ತು ಐರೋಪ್ಯ ಒಕ್ಕೂಟದ ಈ ಜಂಟಿ ಪ್ರಯೋಗಕ್ಕೆ ‘ಇಟರ್‌’ ಎಂದು (ITER- ಇಂಟರ್‌ನ್ಯಾಶನಲ್‌ ಥರ್ಮೊ ನ್ಯೂಕ್ಲಿಯರ್‌ ಎಕ್ಸ್‌ಪರಿಮೆಂಟಲ್‌ ರಿಯಾಕ್ಟರ್‌) ಹೆಸರಿಸಲಾಗಿದೆ. ಇಟರ್‌ ಎಂದರೆ ಲ್ಯಾಟಿನ್‌ನಲ್ಲಿ ‘ಮಾರ್ಗ’ ಎಂಬ ಅರ್ಥವಿದೆ. 2025ರ ವೇಳೆಗೆ ಅದರಲ್ಲಿ ಪ್ರಾಯೋಗಿಕ ವಿದ್ಯುತ್‌ ಉತ್ಪಾದನೆ ಆರಂಭಿಸುವ ಗುರಿ ಇದೆ.

ಫ್ಯೂಶನ್‌ ಶಕ್ತಿಯ ಆವಾಹನೆಗೆ ಇಷ್ಟೊಂದು ಆಸಕ್ತಿ ಏಕೆಂದರೆ ಅದು ಕೈಗೆಟುಕಿದರೆ ಜಗತ್ತಿಗೆಲ್ಲ ನಿರಂತರ ಶಕ್ತಿ ಲಭಿಸುತ್ತದೆ. ಈ ಯಂತ್ರಾಗಾರದಲ್ಲಿ ಒಂದು ಲೀಟರ್‌ ಹೈಡ್ರೊಜನನ್ನು ಉರಿಸಿದಾಗ ಹೊಮ್ಮುವ ಶಕ್ತಿ ಒಂದು ಲೀಟರ್‌ ಪೆಟ್ರೋಲನ್ನು ಉರಿಸಿ
ದ್ದಕ್ಕಿಂತ 40 ಲಕ್ಷ ಪಟ್ಟು ಹೆಚ್ಚಿಗೆ ಇರುತ್ತದೆ. ಸಮುದ್ರದ ನೀರಿನಲ್ಲಿರುವ ಒಂದು ಗ್ರಾಮ್‌ (ಡ್ಯೂಟೀರಿಯಂ ಮತ್ತು ಟ್ರೀಶಿಯಂ) ಇಂಧನದಿಂದ 11 ಟನ್‌ ಕಲ್ಲಿದ್ದಲಿನಷ್ಟು ಶಕ್ತಿಯನ್ನು ಹೊಮ್ಮಿಸಬಹುದು. ಇಂಧನವಂತೂ ನೀರಿನಷ್ಟೇ ಧಾರಾಳ ಸಿಗುತ್ತದೆ ಮತ್ತು ರಿಯಾಕ್ಟರಿನ ಒಳಗೂ ಉತ್ಪಾದನೆ ಆಗುತ್ತಿರುತ್ತದೆ; ಹಾಗಾಗಿ ಅದು ಖಾಲಿಯಾಗುವ ಪ್ರಮೇಯವೇ ಇಲ್ಲ. ಈ ವಿಧಾನದಲ್ಲಿ ಕಾರ್ಬನ್‌ ಡೈಆಕ್ಸೈಡ್‌ ಹೊಮ್ಮುವುದಿಲ್ಲ; ಭೂಮಿಯ ತಾಪಮಾನ ಏರುವುದಿಲ್ಲ. ಚೆರ್ನೊಬಿಲ್ ಅಥವಾ ಫುಕುಶಿಮಾ ಮಾದರಿಯಲ್ಲಿ ಇದು ಸ್ಫೋಟವಾಗುವುದಿಲ್ಲ. ಏಕೆಂದರೆ ಇದರಲ್ಲಿ ಬಳಕೆಯಾಗುವ ಇಂಧನದ ಪ್ರಮಾಣ ತೀರ ಕಡಿಮೆ. ಮೇಲಾಗಿ ಇದರಿಂದ ಹೊಮ್ಮುವ ವಿಕಿರಣವೂ ತೀರ ತಾತ್ಕಾಲಿಕವಾಗಿರುತ್ತದೆ. ಬಾಂಬ್‌ ತಯಾರಿಸಲು ಸಾಧ್ಯವಿಲ್ಲ.

ಎರಡು ಪರಮಾಣುಗಳ ಬೆಸುಗೆ ಮಾಡಬೇಕೆಂದರೆ ಪ್ರಾರಂಭದಲ್ಲಿ ಸೂರ್ಯನಲ್ಲಿದ್ದಷ್ಟು ಪ್ರಖರ, ಹತ್ತಾರು ಕೋಟಿ ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ ಹೈಡ್ರೊಜನ್‌ ಅನಿಲವನ್ನು ಬಿಸಿ ಮಾಡಬೇಕು. ಆಗ ನಿಗಿನಿಗಿ ಪ್ಲಾಸ್ಮಾ ಸೃಷ್ಟಿಯಾಗಿ ಜಲಜನಕದ ಪರಮಾಣುಗಳು ಪರಸ್ಪರ ಡಿಕ್ಕಿ ಹೊಡೆದು ಹೀಲಿಯಂ ಆಗುತ್ತದೆ. ಮೂಲಕ್ಕಿಂತ ಹೆಚ್ಚಿನ ಶಾಖ ಹೊಮ್ಮುತ್ತ ಸರಪಳಿ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಅಷ್ಟೊಂದು ಶಾಖದಲ್ಲಿ ಇಡೀ ಯಂತ್ರಾಗಾರವೇ ಕರಗಿ ಹೋಗುತ್ತದೆ. ಅದಕ್ಕೇ ಯಾವ ಲೋಹವನ್ನೂ ಬಳಸದೆ ಕೇವಲ ಅಯಸ್ಕಾಂತದ ಅಗೋಚರ ಕುಳಿಯಲ್ಲಿ ಬೆಸುಗೆ ಹಾಕಬೇಕು. ಉದ್ದಿನ ವಡೆಯಾಕಾರದ ‘ಟೊಕಾಮಾಕ್‌’ ಹೆಸರಿನ ಗೋಲ ಸುರಂಗದಲ್ಲಿ ಮಿಂಚಿನಂತೆ ಪ್ರಭೆಯನ್ನು ಸುತ್ತಿಸಬೇಕು. ಅದು ವಿಜ್ಞಾನ ತಂತ್ರಜ್ಞಾನದ ಪರಮೋಚ್ಚ ಬುದ್ಧಿಮತ್ತೆ, ಕೌಶಲ ಮತ್ತು ಹಣವನ್ನು ಬೇಡುವ ಪ್ರಯೋಗ. ಆ ಎಲ್ಲ ಬಂಡವಾಳಗಳನ್ನೂ ತೊಡಗಿಸಿ ಹೊಸ ವಿದ್ಯುತ್‌ ಮೂಲವನ್ನು ಸಾಕಾರಗೊಳಿಸಲು ತುರುಸಿನ ಪೈಪೋಟಿ ನಡೆದಿದೆ. ಯಾರಿಗೆ ಮೊದಲ ಯಶಸ್ಸು ಸಿಕ್ಕೀತೆಂದು ವಿಜ್ಞಾನ ಜಗತ್ತು ಕುತೂಹಲದಿಂದ ನೋಡುತ್ತಿದೆ.

ಈ ನಡುವೆ ಖಾಸಗಿ ಶತಕೋಟ್ಯಧೀಶರು ಫ್ಯೂಶನ್‌ ವಿದ್ಯುತ್‌ ಶಕ್ತಿ ಉತ್ಪಾದನೆಗೆ ಹಣ ಹೂಡಲು ಬರುತ್ತಿದ್ದಾರೆ. ಅಮೆಝಾನ್‌ ಕಂಪನಿಯ ಸಂಸ್ಥಾಪಕ ಹಾಗೂ ಜಗತ್ತಿನ ಎರಡನೇ ಅತಿ ಶ್ರೀಮಂತ ವ್ಯಕ್ತಿ ಜೆಫ್‌ ಬೆಝೋಸ್‌ ಇದೀಗ ಕೆನಡಾ ನವೋದ್ಯಮಿಯ ಜೊತೆ ಸೇರಿ ‘ಜನರಲ್‌ ಫ್ಯೂಶನ್‌’ ಶಕ್ತಿ ಸ್ಥಾವರಕ್ಕೆ ಹಣ ಹೂಡಿದ್ದಾಗಿದೆ. ರಷ್ಯಾವನ್ನು ಮಣಿಸಲು ಹೊರಟ ಅಮೆರಿಕ ಸರ್ಕಾರ ಹಿಂದೆಂದಿಗಿಂತ ಹೆಚ್ಚಿನ ಹಣವನ್ನು ಫ್ಯೂಶನ್‌ ಎನರ್ಜಿ ಸಂಶೋಧನೆಗೆ ವ್ಯಯಿಸಲು ನಿರ್ಧರಿಸಿದೆ. ಎಮ್‌ಐಟಿಯ ತಂತ್ರಜ್ಞರು ಸೂಪರ್‌ ಕಂಡಕ್ಟರ್‌ ಮೂಲಕ ಹೊಸ ಬಗೆಯ ಅಯಸ್ಕಾಂತವನ್ನು ಸೃಷ್ಟಿಸಿದರೆ, ಜರ್ಮನಿಯ ಮಾರ್ವೆಲ್‌ ಫ್ಯೂಜನ್‌ ಕಂಪನಿ ಲೇಸರ್‌ ಕಿರಣಗಳ ಮೂಲಕ ಪರಮಾಣು ಬೆಸುಗೆಯನ್ನು ಸಾಧಿಸಲು ಹೊರಟಿದೆ. ನಿರಂತರ ಐದು ಸೆಕೆಂಡ್‌ಗಳ ಕಾಲ (!) ತನ್ನಲ್ಲಿ ಪರಮಾಣು ಬೆಸುಗೆ ನಡೆಯಿತೆಂದು ಇಂಗ್ಲೆಂಡಿನ
ಲ್ಲಿರುವ ಜಗತ್ತಿನ ಅತಿ ದೊಡ್ಡ ಟೊಕಾಮಾಕ್‌ ಸ್ಥಾವರ ಘೋಷಿಸಿದರೆ, ಚೀನಾ ತನ್ನ ಫ್ಯೂಶನ್‌ ಸ್ಥಾವರದಲ್ಲಿ 101 ಸೆಕೆಂಡ್‌ಗಳಷ್ಟು ದೀರ್ಘಕಾಲ ಬೆಸುಗೆ ನಡೆಯಿತೆಂದು ಹೇಳಿಕೊಂಡಿದೆ.

ವಿಪರ್ಯಾಸದ ಸಂಗತಿ ಏನು ಗೊತ್ತೆ? ಜಗತ್ತಿನ ಅತಿ ದೊಡ್ಡ ಫ್ಯೂಶನ್‌ ಸ್ಥಾವರ ಎನಿಸಿದ ‘ಇಟರ್‌’ನಲ್ಲಿ ದೊಡ್ಡ ಕನ್‌-ಫ್ಯೂಶನ್‌ ಸೃಷ್ಟಿಯಾಗಿದೆ. ರಷ್ಯಾವನ್ನು ಈ ಪ್ರಯೋಗದಿಂದ ಹೊರಗಿಡುವಂತಿಲ್ಲ, ಏಕೆಂದರೆ ಯಂತ್ರದ ಕೆಲವು ಬಿಡಿಭಾಗಗಳು ಅಲ್ಲಿಂದಲೇ ಬರಬೇಕಾಗಿದೆ. ಬಿಸಿತುಪ್ಪ! ಇತ್ತ, ಪರಮಾಣು ಬೆಸುಗೆಯ ತಂತ್ರಜ್ಞಾನವೇ ಬಿಸಿತುಪ್ಪವೆಂದೂ ಹೂಡಿಕೆಗಿಂತ ಹೆಚ್ಚಿನ ಶಕ್ತಿಯನ್ನು ನಿರಂತರ ಪಡೆಯಲು ಸಾಧ್ಯವೇ ಇಲ್ಲದ್ದರಿಂದ ನಾಳೆ ಉಗುಳಲೇಬೇಕಾದೀತೆಂದೂ ಕೆಲವು ಖ್ಯಾತ ಭೌತವಿಜ್ಞಾನಿಗಳು ಹೇಳುತ್ತಿದ್ದಾರೆ.

ಹಾಗೆಂದು ಅದಕ್ಕೆ ಸುರಿಯುವ ಬಂಡವಾಳ ನಿರರ್ಥಕ ಎನ್ನುವಂತಿಲ್ಲ. ವಿಜ್ಞಾನದ ಗಡಿಮಿತಿಯನ್ನು ವಿಸ್ತರಿಸುವ ಸಾಹಸ ಅಲ್ಲಿ ನಡೆದಿದೆ. ಅದೆಷ್ಟೊಂದು ಉಪಲಾಭಗಳಿವೆಯೊ ಗೊತ್ತಿಲ್ಲ. ವಿಜ್ಞಾನದ ಇದುವರೆಗಿನ ಬಹುತೇಕ ಎಲ್ಲ ಫಲಗಳೂ ಯುದ್ಧಸಿದ್ಧತೆಯಿಂದಾ
ಗಿಯೇ ಮನುಕುಲಕ್ಕೆ ಲಭಿಸಿವೆ. ನಮ್ಮಲ್ಲೂ ಪರಮಾಣು ಬಾಂಬ್‌ನ ಪರೀಕ್ಷಾಸ್ಫೋಟ ಮಾಡಿದ ಮೇ 11ನ್ನು ‘ರಾಷ್ಟ್ರೀಯ ತಂತ್ರಜ್ಞಾನ ದಿನ’ ಎಂದು ಆಚರಿಸುತ್ತೇವೆ. ಈಗಿನ ವಿಶೇಷ ಏನೆಂದರೆ, ದುಷ್ಟಶಕ್ತಿಯನ್ನು ಮಣಿಸಲು ಇದೇ ಮೊದಲ ಬಾರಿಗೆ ಶಿಷ್ಟಶಕ್ತಿಯ ಆವಾಹನೆಯ ಯತ್ನಗಳು ನಡೆದಿವೆ. ಶುಭ ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT