ಶನಿವಾರ, ಮೇ 21, 2022
23 °C
‘ನೆಟ್‌ ಝೀರೊ’ದತ್ತ ಸಾಗುತ್ತಿದ್ದರೆ ಸ್ವಚ್ಛಭಾರತವೂ ತಂತಾನೇ ನಮ್ಮೆದುರು ಮೈದಳೆಯುತ್ತ ಹೋಗುತ್ತದೆ

ವಿಜ್ಞಾನ ವಿಶೇಷ: ಇಂಗಾಲಶಾಹಿಯ ಅಂತ್ಯದ ಆರಂಭ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಇಡೀ ಉತ್ತರ ಭಾರತದ ಉದ್ದಗಲಕ್ಕೆಲ್ಲ ಈಗ ದಟ್ಟ ಹೊಂಜು ಆವರಿಸಿದೆ. ಹಗಲಿನಲ್ಲೇ ಹೆಡ್‌ಲೈಟ್‌ ಹಾಕಿಕೊಂಡು ವಾಹನ ಓಡಿಸುವ ದಿನಗಳು ಮತ್ತೆ ಬಂದಿವೆ. ಒಂದು ತಿಂಗಳ ಹಿಂದಷ್ಟೇ ಅಲ್ಲಿನ ಅನೇಕ ನಗರಗಳು- ದಿಲ್ಲಿಯಿಂದ ಹಿಡಿದು ಉತ್ತರಾಖಂಡದ ಗುಡ್ಡಬೆಟ್ಟಗಳವರೆಗೂ- ಪ್ರವಾಹದಿಂದ ತತ್ತರಿಸುತ್ತಿದ್ದವು. ಇನ್ನು ಎರಡು ತಿಂಗಳ ನಂತರ ಘೋರ ಚಳಿಯ ಅಲೆ ಅಲ್ಲಿ ಹೊಮ್ಮಲಿದೆ. ಅದಾದ ಮೂರು ತಿಂಗಳ ನಂತರ ಬಿಸಿಗಾಳಿಯ ಪರ್ವ ಆರಂಭವಾಗಲಿದೆ. ಇಂಗಾಲದ ಯುಗ ಅಂದರೆ ಹೀಗೇನೇ.

ಮುಂಬರುವ ವರ್ಷಗಳಲ್ಲಿ ಉತ್ತರ ಭಾರತ ಹೇಗಿರಬಹುದು? ಬಿಸಿಪ್ರಳಯದ ಕುರಿತು ಅಮೆರಿಕದ ಖ್ಯಾತ ವಿಜ್ಞಾನ ಬರಹಗಾರ ಕಿಮ್‌ ಸ್ಟಾನ್ಲಿ ರಾಬಿನ್ಸನ್‌ ಕಳೆದ ವರ್ಷ ‘ದಿ ಮಿನಿಸ್ಟ್ರಿ ಆಫ್‌ ದಿ ಫ್ಯೂಚರ್‌’ ಹೆಸರಿನ ವೈಜ್ಞಾನಿಕ ಕಾದಂಬರಿಯನ್ನು ಬರೆದಿದ್ದಾನೆ (ಆತನ ಎಲ್ಲ 21 ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿಗಳು ಬಂದಿವೆ). ನಮ್ಮ ಉತ್ತರ ಪ್ರದೇಶದ ಒಂದು ಊರಿನ ದೃಶ್ಯದಿಂದಲೇ ಕಾದಂಬರಿ ಆರಂಭವಾಗುತ್ತದೆ: ಅಲ್ಲಿ ಬಿಸಿಗಾಳಿ ತುಂಬ ಪ್ರಖರವಾಗಿದೆ. ವಾತಾವರಣದಲ್ಲಿ ತೇವಾಂಶವೂ ಅತಿಯಾಗಿದ್ದುದರಿಂದ ಬೆವರು ಹರಿದರೂ ದೇಹ ತಂಪಾಗುವುದಿಲ್ಲ. ಸೆಖೆಯಿಂದ ಬಚಾವಾಗಲು ಎಲ್ಲರೂ ಏರ್‌ ಕಂಡೀಶನರ್‌ಗಳ ಆಸರೆ ಪಡೆದಿರುತ್ತಾರೆ. ಆದರೆ ಏಕಾಏಕಿ ವಿದ್ಯುತ್‌ ಗ್ರಿಡ್‌ ವೈಫಲ್ಯದಿಂದಾಗಿ ಎಲ್ಲೆಡೆ ಕರೆಂಟ್‌ ಹೋಗುತ್ತದೆ. ಸರಿಪಡಿಸಲು ಒಂದೆರಡು ದಿನ ಸಾಲುವುದಿಲ್ಲ; ಭೀಕರ ಉರಿಬೇಗೆಗೆ ಸಿಕ್ಕು ಎರಡು ಕೋಟಿ ಜನರು ಸಾಯುತ್ತಾರೆ.

ಆನಂತರ ಭಾರತದಲ್ಲಿ ಹೊಸ ಯುಗ ಆರಂಭವಾಗುತ್ತದೆ. ಹೇಗೆ ಇಡೀ ಜಗತ್ತಿಗೆ ಭಾರತವೇ ಹೊಸ ಮಾದರಿಯ ಕಲ್ಯಾಣ ರಾಷ್ಟ್ರವಾಗುತ್ತದೆ ಎಂಬುದನ್ನು ರಾಬಿನ್ಸನ್‌ ತನ್ನ ಕಾದಂಬರಿಯ ಮುಂದಿನ ಐದುನೂರು ಪುಟಗಳಲ್ಲಿ ವಿವರಿಸುತ್ತ ಹೋಗುತ್ತಾನೆ. ಈಗಿರುವ ಬಂಡವಾಳಶಾಹಿ ವ್ಯವಸ್ಥೆಯ ಬದಲು ಸಂಪೂರ್ಣ ವಿಕೇಂದ್ರೀಕೃತ ವ್ಯವಸ್ಥೆ ಬರಲಿದೆ; ಅದು ಈಗಿನ ಕೇರಳ ಮತ್ತು ಸಿಕ್ಕಿಮ್‌ ರಾಜ್ಯಗಳ ಆಡಳಿತದ ವಿಸ್ತೃತ ರೂಪವಾಗಿರುತ್ತದೆ. ಪ್ರತೀ ಊರಿನ ಜನರು ತಮ್ಮದೇ ಸ್ಥಳೀಯ ಶಕ್ತಿಮೂಲಗಳನ್ನು ಬಳಸಿಕೊಂಡು, ತಾವೇ ತಮ್ಮ ಸುರಕ್ಷಿತ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಈಗ ಚಾಲ್ತಿಯಲ್ಲಿರುವ ಧನದಾಹಿ ವ್ಯವಸ್ಥೆಗೆ ವಿದಾಯ ಹೇಳಿ ಹೊಸ ಸಮಾಜವನ್ನು ಕಟ್ಟುತ್ತಾರೆ.

ಗ್ಲಾಸ್ಗೊ ನಗರದಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಜಾಗತಿಕ ತಾಪಮಾನ (ನಿಯಂತ್ರಣ) ಸಮಾವೇಶದ ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಅಂಥದ್ದೇ ಕನಸಿನ ದೇಶವೊಂದನ್ನು ಕಟ್ಟಿ ನಿಲ್ಲಿಸಿದ್ದಾರೆ. ಅವರ ಉದ್ದೇಶಿತ ಯೋಜನೆಗಳೆಲ್ಲ ಕಾರ್ಯರೂಪಕ್ಕೆ ಬಂದಿದ್ದೇ ಹೌದಾದರೆ ಈಗ ಶತಕೋಟ್ಯಧೀಶರ ಮುಷ್ಟಿಯಲ್ಲಿರುವ ಎಲ್ಲ ಪೆಟ್ರೋಲ್‌ ಮತ್ತು ಕಲ್ಲಿದ್ದಲ ನಿಕ್ಷೇಪಗಳನ್ನು ಮುಚ್ಚಬೇಕಾಗುತ್ತದೆ. ಅದರ ಬದಲಿಗೆ ಗಾಳಿ, ಬಿಸಿಲು, ಜೀವದ್ರವ್ಯ ಮತ್ತು ಜಲಜನಕ ಇವೇ ಪ್ರಮುಖ ಶಕ್ತಿಮೂಲಗಳಾಗಲಿವೆ. ಇವೆಲ್ಲವೂ ನಮ್ಮಂಥ ಜನಸಾಮಾನ್ಯರಿಗೂ ಎಟುಕಬಲ್ಲ ಶಕ್ತಿಮೂಲಗಳೇ ತಾನೆ? ನಮ್ಮ ನಮ್ಮ ಹಿತ್ತಲಿನ ಅಂಥ ಶಕ್ತಿಮೂಲಗಳಿಂದಲೇ ವಿದ್ಯುತ್‌ ಉತ್ಪಾದನೆ ಸಾಧ್ಯ ವಾದರೆ, ಪೆಟ್ರೋಲ್‌ ಕಂಪನಿಗಳ ಹಾಗೂ ಕಲ್ಲಿದ್ಧನಿಕರತ್ತ ಹರಿದು ಹೋಗುತ್ತಿರುವ ಸಂಪತ್ತೆಲ್ಲ ಜನಸಾಮಾನ್ಯರ ಕೈಗೆ ಬಂದೀತೆ?

ತಾತ್ವಿಕವಾಗಿ ಹಾಗೇ ಆಗಬೇಕು. ಗ್ಲಾಸ್ಗೊ ವೇದಿಕೆ ಯಲ್ಲಿ ಮಾತನಾಡಿದ ಅನೇಕ ಮುತ್ಸದ್ದಿಗಳು ಅದನ್ನೇ ಒತ್ತಿ ಹೇಳುತ್ತಿದ್ದಾರೆ. ಬಂಡವಾಳಶಾಹಿ (ನಾವದನ್ನು ‘ಇಂಗಾಲಶಾಹಿ’ ಎನ್ನೋಣ) ಶಕ್ತಿಗಳಿಂದ ಈ ಭೂಮಿಗೆ ಬಿಡುಗಡೆ ಸಿಕ್ಕರೆ ಅದರ ಜ್ವರವೂ ತಾನಾಗಿ ಬಿಟ್ಟುಹೋಗುತ್ತದೆ ಎಂದಿದ್ದಾರೆ. ಆದರೆ ಬಿಡುಗಡೆ ಅಷ್ಟು ಸುಲಭವೇನಲ್ಲ. ಉದಾಹರಣೆಗೆ ಸೌರವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಭಾರಿ ಪ್ರಗತಿ ಸಾಧಿಸಿದೆ ಎಂದು ಮೋದಿಯವರು ಈಗಿನ ಸಮಾವೇಶದಲ್ಲಿ ಬಹು ಹೆಮ್ಮೆಯಿಂದ ಹೇಳಿದ್ದಾರೆ. ಅದು ನಿಜವೂ ಹೌದು. ನೂರು ಗಿಗಾವಾಟ್‌, ಅಂದರೆ ಒಂದು ಲಕ್ಷ ಮೆಗಾವಾಟ್‌ ವಿದ್ಯುತ್‌ ಶಕ್ತಿಯನ್ನು ಬದಲೀ ಶಕ್ತಿಮೂಲ ಗಳಿಂದ ಭಾರತ ಪಡೆಯುತ್ತಿದೆ. ಹಾಗೆಂದು ನಮ್ಮ ಅದೆಷ್ಟು ಪಂಚಾಯಿತಿಗಳು ತಮ್ಮೂರಿಗೆ ಬೇಕಾದ ವಿದ್ಯುತ್ತನ್ನು ಸೂರ್ಯನಿಂದ ಪಡೆಯುತ್ತಿವೆ? ಒಂದೂ ಇಲ್ಲ. ತಮಿಳುನಾಡಿನ ಒಡಂತುರೈ ಗ್ರಾಮ ಪಂಚಾಯಿತಿ ಮಾತ್ರ ಗಾಳಿಶಕ್ತಿಯಿಂದ ಉತ್ಪಾದಿಸಿದ ವಿದ್ಯುತ್ತನ್ನು ಮಾರಿ ಪ್ರತಿವರ್ಷ ಹನ್ನೊಂದು ಲಕ್ಷ ರೂಪಾಯಿಗಳ ಆದಾಯವನ್ನು ಸರ್ಕಾರದಿಂದ ಪಡೆಯುತ್ತಿದೆ. ದೇಶದ ಎಲ್ಲೆಡೆ ಸದ್ಯಕ್ಕಂತೂ ಅದಾನಿ ಕಂಪನಿಯೊಂದೇ ದೇಶದ ಸೌರವಿದ್ಯುತ್ತಿನ ಯಜಮಾನಿಕೆ ಪಡೆದಿದೆ (ಅದು ಕಲ್ಲಿದ್ದಲ ಗಣಿಯನ್ನೂ ಗುತ್ತಿಗೆ ಪಡೆದಿದೆ; ಇಂಡೊನೇಷ್ಯ ಮತ್ತು ಆಸ್ಟ್ರೇಲಿಯಾದಿಂದ ಕಲ್ಲಿದ್ದಲನ್ನು ತರಿಸುತ್ತಿದೆ). ಸೌರಫಲಕಗಳ ಸ್ಥಾಪನೆಯಲ್ಲಿ ಅದು ಜಗತ್ತಿನಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿರುವ ಕಂಪನಿ ಎಂದು ದಾಖಲು ಮಾಡಿದೆ. ಮೋದಿಯವರ ಗ್ಲಾಸ್ಗೊ ಭಾಷಣ ಮುಗಿದ ದಿನದಿಂದ, ಸೌರವಿದ್ಯುತ್ತಿಗೆ ಸಂಬಂಧಿಸಿದ ‘ಅದಾನಿ ಗ್ರೀನ್‌’ ಕಂಪನಿಯ ಷೇರುಮೌಲ್ಯ ನಿರಂತರ ಹೆಚ್ಚುತ್ತಿದೆ.

ಭಾರತದ ಅಭಿವೃದ್ಧಿ ರಥವನ್ನು ನೆಟ್‌ ಝೀರೊ ದಿಕ್ಕಿ ನಲ್ಲಿ ಸಾಗಿಸಲೆಂದು ಹಣ ಹೂಡಿಕೆ ಮತ್ತು ತಂತ್ರಜ್ಞಾನ ಎರಡೂ ಭಾರಿ ಪ್ರಮಾಣದಲ್ಲಿ ಬರುವುದರಲ್ಲಿ ಸಂಶಯವಿಲ್ಲ. ‘ಬಂಡವಾಳ ಹೂಡುವುದಾದರೆ ಭಾರತವೇ ನಿಗಿಕೆಂಡವಾಗಿದೆ’ ಎಂದು (ಕಬ್ಬಿಣ ಕಾದಿದೆ, ಬಡಿಯಲು ಹೊರಡಿ-ಎಂಬರ್ಥದಲ್ಲಿ) ಅಮೆರಿಕ ಸರ್ಕಾರದ ಕ್ಲೈಮೇಟ್‌ ವಕ್ತಾರ ಜಾನ್‌ ಕೆರ‍್ರಿ ಅಕ್ಟೋಬರ್‌ನಲ್ಲಿ ಹೇಳಿದ್ದು ನಮ್ಮ ಎಲ್ಲ ವಾಣಿಜ್ಯಪತ್ರಿಕೆಗಳಲ್ಲಿ ಹೆಡ್‌ಲೈನ್‌ ಆಗಿತ್ತು. ಶಕ್ತರಾಷ್ಟ್ರಗಳು ಹಿಂದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ರೂಪದಲ್ಲಿ ಇತರ ದೇಶ ಗಳತ್ತ ಹೆಚ್ಚಿನ ಧನಧಾರೆ ಹರಿಸುವ ಸಾಧ್ಯತೆಗಳೂ ಕಾಣತೊಡಗಿವೆ. ಪ್ರಶ್ನೆ ಏನೆಂದರೆ, ಅಂಥ ಹರಿವನ್ನು ಜನಸಾಮಾನ್ಯರು ತಮ್ಮತ್ತ ತಿರುಗಿಸಿಕೊಳ್ಳಲು ಸಾಧ್ಯವೆ?

ತಂತ್ರಜ್ಞಾನವನ್ನೂ ಹಾಗೆ ತಿರುಗಿಸಲು ಸಾಧ್ಯವಾದರೆ ನಮ್ಮ ಯುವಜನಾಂಗ ಕಾರ್ಪೊರೇಟ್‌ ಶಕ್ತಿಗಳ ಮುಷ್ಟಿಯಿಂದ ಬಿಡುಗಡೆ ಪಡೆದು ತಾವಾಗಿ ಹೇರಳ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು. ಸ್ವಚ್ಛ ಭಾರತವೂ ನಮ್ಮದಾಗಬಹುದು. ಬೆಂಗಳೂರು ಮತ್ತು ಇತರ ನಗರಗಳ ತ್ಯಾಜ್ಯಗಳಿಂದ ಹೊಮ್ಮುವ ಮೀಥೇನ್‌ ಅನಿಲದಿಂದಲೇ ಹೊಸ ಆರ್ಥಿಕತೆಗೆ ಚಾಲನೆ ಕೊಡಬಹುದು. ಈ ಅಂಕಣದಲ್ಲಿ ಹಿಂದೆಷ್ಟೋ ಬಾರಿ ಉದಾಹರಣೆಗಳ ಮೂಲಕ ಹೇಳಿದ ಹಾಗೆ, ಚರಂಡಿ ನೀರನ್ನು, ಅದರಲ್ಲಿರುವ ಶಕ್ತಿಯಿಂದಲೇ ಶುದ್ಧೀಕರಿಸ
ಬಹುದು. ಜೋಳದ ದಂಟು, ಬಾಳೆಯ ದಿಂಡು, ಕಾಫಿಸಿಪ್ಪೆ, ಭತ್ತದ ಹೊಟ್ಟು, ಗೋತ್ಯಾಜ್ಯಗಳಿಂದ ಬದಲೀ ಪ್ಲಾಸ್ಟಿಕ್‌ ಅಷ್ಟೇಕೆ, ಗ್ರೀನ್‌ ಹೈಡ್ರೊಜನನ್ನೂ ಉತ್ಪಾದಿಸಬಹುದು. ಗ್ರಾಮೀಣ ಜನರು ಪೆಟ್ರೋಲ್‌, ಡೀಸೆಲ್‌ಗಾಗಿ, ಪ್ಲಾಸ್ಟಿಕ್‌ ಸಾಮಗ್ರಿಗಳಿಗಾಗಿ ಪೇಟೆಗೆ ಬರುವ ಬದಲು ಇಲ್ಲಿಯವರೇ ಅತ್ತ ಹೋಗುವಂತೆ ಮಾಡಬಹುದು. ಆದರೆ ಅದಕ್ಕೆ ಕೇವಲ ಇಲೆಕ್ಟ್ರಿಕಲ್‌/ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಸಾಲದು; ಸೋಶಿಯಲ್‌ ಎಂಜಿನಿಯರಿಂಗ್‌ ಕೂಡ ಬೇಕಾಗುತ್ತದೆ. ಜನರು ಉತ್ಸಾಹದಿಂದ ಅಂಥ ಹೊಸ ದಿಶೆಯತ್ತ ತಿರುಗುವಂತೆ ಮಾಡುವ ತಂತ್ರಗಾರಿಕೆ ಕೂಡ ಮುಖ್ಯವಾಗುತ್ತದೆ. ಶಾಲೆ, ಕಾಲೇಜುಗಳಲ್ಲಿ, ಧಾರ್ಮಿಕ ಸಂಘಸಂಸ್ಥೆಗಳಲ್ಲಿ, ಸಭಾಭವನ, ಕಲ್ಯಾಣಮಂಟಪಗಳಲ್ಲಿ, ಮನೆಯೊಳಗಿನ ಟಿ.ವಿಯಲ್ಲಿ, ಕೈಯಲ್ಲಿನ ಗಣಕದಲ್ಲಿ ಅದಕ್ಕೆ ಪ್ರೇರಣೆ ಸಿಗುತ್ತಿರಬೇಕಾಗುತ್ತದೆ. ಹಸಿಕಸವನ್ನು ಹೂಳುಗುಂಡಿಗೆ ಸುರಿಯುವವರೆಲ್ಲ ತಮ್ಮ ಮಕ್ಕಳ ಸುಗಮ ಭವಿಷ್ಯವನ್ನೂ ಹಾಗೇ ಸುರಿಯುತ್ತಿದ್ದೇವೆ ಎಂದು ಭಾವಿಸುವಂತಾಗಬೇಕು.


ನಾಗೇಶ ಹೆಗಡೆ

‘ಕಳೆದ ಶತಮಾನದಲ್ಲಿ ಜಗತ್ತನ್ನು ವಸಾಹತುಶಾಹಿ ಸಂಕೋಲೆಯಿಂದ ಪಾರು ಮಾಡುವಲ್ಲಿ ಭಾರತವೇ ಮುಂದಾಳಾಗಿತ್ತು. ಈಗ ಇಂಗಾಲಶಾಹಿ ಮುಷ್ಟಿಯಿಂದ ಜಗತ್ತನ್ನು ಬಿಡಿಸಿ ತರಲು ಮತ್ತೆ ಭಾರತದ್ದೇ ನೇತೃತ್ವ ಬೇಕಾಗಿದೆಯೇನೊ’ ಎಂದು ಪ್ರತಿಷ್ಠಿತ

‘ನ್ಯೂಯಾರ್ಕರ್‌’ ಪತ್ರಿಕೆಯಲ್ಲಿ ರಘು ಕಾರ್ನಾಡ್‌ (ಗಿರೀಶ ಕಾರ್ನಾಡರ ಮಗ) ಬರೆದಿದ್ದಾರೆ. ಭಾರತವನ್ನು ಆವರಿಸಿದ್ದ ನೆಹರೂ ಬಿಂಬವನ್ನೂ ಅವರ ಪಂಚಶೀಲ ತತ್ವಗಳನ್ನೂ ಇತಿಹಾಸಕ್ಕೆ ರವಾನಿಸಿ ಈಗಿನ ಪ್ರಧಾನಿಯವರು ಪುರಾಣದ ‘ಪಂಚಾ ಮೃತ’ ಸೂತ್ರವನ್ನು ಗ್ಲಾಸ್ಗೊ ವೇದಿಕೆಯಲ್ಲಿ ಸಾರಿದ್ದಾರೆ. ಅವರ ಕಲ್ಪನೆಯ ಐದೂ ಅಮೃತಗಳು ಎಲ್ಲರಿಗೂ ಸಮಾನವಾಗಿ ಸಿದ್ಧಿಸಲೆಂದು ಆಶಿಸಬೇಕಾಗಿದೆ.

ಹಿಂದೆ ಸಮುದ್ರಮಥನ ಮಾಡಿದಾಗ ಸಿಕ್ಕ ಅಮೃತ ಕೆಲವರಿಗೆ ಮಾತ್ರ ದಕ್ಕುವಂತೆ ಮಸಲತ್ತು ನಡೆದಿತ್ತಂತಲ್ಲ? ಸಾಲದ್ದಕ್ಕೆ ಅಮೃತ ಸಿಕ್ಕದವರಿಗೆ ರಾಕ್ಷಸ ಪಟ್ಟ ಕಟ್ಟಿದ್ದರಲ್ಲ? ಹಾಗೊಂದಾಗಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು