ಇದು ಹೈ ಸ್ಪೀಡ್ ಸುದ್ದಿಯ ಸಮಯ. ಬೊಲಿವಿಯಾ ದೇಶದಲ್ಲಿ ಕಾಳ್ಗಿಚ್ಚು ಅತಿವೇಗದಲ್ಲಿ ಹಬ್ಬುತ್ತ 38 ಲಕ್ಷ ಹೆಕ್ಟೇರ್‌ಗಳಷ್ಟು ದಟ್ಟ ಕಾಡನ್ನು ಬೂದಿ ಮಾಡುತ್ತಿದೆ. ತುರ್ತು ಪರಿಸ್ಥಿತಿಯ ಘೋಷಣೆ ಮಾಡಲಾಗಿದೆ. ಅಕ್ಕಪಕ್ಕದ ಪೆರು, ಅರ್ಜೆಂಟೀನಾ, ಬ್ರೆಝಿಲ್ ದೇಶಗಳಲ್ಲಿ ಆತಂಕದ ಹೊಗೆ ಹಬ್ಬಿಸುತ್ತಿದೆ. ಅದು ದಕ್ಷಿಣ ಅಮೆರಿಕದ ಸುದ್ದಿಯಾದರೆ ಇತ್ತ ಪೂರ್ವ ಏಷ್ಯಾದಲ್ಲಿ ‘ಯಾಗಿ’ ಹೆಸರಿನ ಚಂಡಮಾರುತ (ಸೂಪರ್ ಟೈಫೂನ್) ಫಿಲಿಪ್ಪೀನ್ಸ್ ದೇಶವನ್ನು ಚೆಂಡಾಡಿ ಹಾಂಗ್‌ಕಾಂಗ್/ ಚೀನಾದ ಭೂಭಾಗವನ್ನು ಪತರಗುಟ್ಟಿಸಿ ಈಗ ವಿಯೆಟ್ನಾಂ ದೇಶಕ್ಕೆ ದಾಳಿ ಇಟ್ಟಿದೆ. ಹಿಂದಿನ ಎಲ್ಲ ಸ್ಪೀಡ್ ದಾಖಲೆಗಳನ್ನು ಮುರಿಯುತ್ತ, ಚಲಿಸುವ ಬಸ್‌ಗಳನ್ನೂ ಸೇತುವೆಗಳನ್ನೂ ಪಲ್ಟಿ ಹೊಡೆಸುತ್ತ, ಉದ್ಯಮ ಸಂಕೀರ್ಣಗಳನ್ನು ನೆಲಸಮ ಮಾಡುತ್ತಿದೆ. ಅದರ ಜೊತೆಜೊತೆಗೇ ಬಂದ ಅಬ್ಬರದ ಮಳೆಯಿಂದ ನೆರೆಹಾವಳಿ, ಭೂಕುಸಿತಗಳಿಂದ 160ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಯುರೋಪ್‌ನಲ್ಲಿ ಇನ್ನೊಂದು ಬಗೆಯ ಹೈಸ್ಪೀಡ್ ಸುದ್ದಿ ಮಾಡುತ್ತಿದೆ: ‘ಹೈಪರ್‌ಲೂಪ್’ ಹೆಸರಿನ ಅತಿವೇಗದ ಸಂಚಾರ ಸಾಧನಕ್ಕೆ ಈ ವಾರ ಪ್ರಾಯೋಗಿಕ ಚಾಲನೆ ನೀಡಲಾಗುತ್ತಿದೆ. ನೆಲದ ಮೇಲೆ ಉದ್ದಕ್ಕೆ ಮಲಗಿಸಿದ ಕೊಳವೆಯಲ್ಲಿ ರಾಕೆಟ್‌ನಂಥ ಸಾಧನವನ್ನು ರಾಕೆಟ್ ವೇಗದಲ್ಲಿ ಓಡಿಸುವ ಪ್ರಯೋಗ ಇದು. ‘ಐದನೇ ಮಾದರಿಯ ಸಂಚಾರ ಸಾಧನ’ ಎಂದು ಇದನ್ನು ಬಣ್ಣಿಸಲಾಗುತ್ತಿದೆ. ಇದುವರೆಗೆ ಹಡಗು, ರಸ್ತೆಸಾರಿಗೆ, ರೈಲು ಮತ್ತು ವಿಮಾನ ಎಂಬ ನಾಲ್ಕು ವಿಧಗಳಲ್ಲಿ ನಾವೆಲ್ಲ ಸಂಚರಿಸುತ್ತಿದ್ದೆವು. ಈ ಹೊಸ ವಿಧಾನ 2030ರ ವೇಳೆಗೆ ಸಿದ್ಧವಾದರೆ ಯುರೋಪ್‌ನ ವಿವಿಧ ನಗರಗಳ ಮಧ್ಯೆ ಜನರು ಜೆಟ್ ವಿಮಾನಕ್ಕಿಂತ ಫಾಸ್ಟಾಗಿ ಓಡಾಡಬಹುದು.
ಜಗತ್ತಿನ ಅತಿಶ್ರೀಮಂತ ವ್ಯಕ್ತಿ ಎನಿಸಿದ ಇಲಾನ್ ಮಸ್ಕ್ ಎಂಬ ಉದ್ಯಮಿ (ಆತನ ಸಂಪತ್ತು ಇಂದು ₹ 20,450 ಶತಕೋಟಿ) ಹತ್ತು ವರ್ಷಗಳ ಹಿಂದೆ ಇಂಥದ್ದೊಂದು ವಾಹನದ ಚಿತ್ರಣವನ್ನು ಮುಂದಿಟ್ಟಿದ್ದ. ಅದರ ತತ್ತ್ವ ಸಾಕಷ್ಟು ಸರಳವಾಗಿದೆ. ಒಂದು ಕೊಳವೆಯಲ್ಲಿನ ಬಹುತೇಕ ಗಾಳಿಯನ್ನೆಲ್ಲ ತೆಗೆದುಬಿಡಬೇಕು. ಅದರೊಳಕ್ಕೆ ರಾಕೆಟ್ ಓಡಿದರೆ ಅದಕ್ಕೆ ಗಾಳಿಯ ಘರ್ಷಣೆ ಇರುವುದಿಲ್ಲ. ಕೊಳವೆಯ ಒಳಗಿನ ಹಳಿಯ ಮೇಲೆ ಆ ರಾಕೆಟ್ ಚಲಿಸಬಾರದು. ಘರ್ಷಣೆ ಅಲ್ಲೂ ಇರುತ್ತದಲ್ಲ? ಹಳಿಗಿಂತ ಕೊಂಚ, ಅಂದರೆ ಬೆರಳಷ್ಟು ಎತ್ತರದಲ್ಲಿ ಅದು ಚಲಿಸಬೇಕು. ಈ ತಂತ್ರಕ್ಕೆ ಮೆಗ್ನೆಟಿಕ್ ಲೆವಿಟೇಶನ್ ಎನ್ನುತ್ತಾರೆ. ಅಯಸ್ಕಾಂತಗಳ ಒಂದೇ ಧ್ರುವವನ್ನು ಒಟ್ಟಿಗೆ ತರಲು ಸಾಧ್ಯವಿಲ್ಲವಲ್ಲ. ಹೈಪರ್‌ಲೂಪ್‌ನ ಕೊಳವೆ ಮತ್ತು ಅದರೊಳಗಿನ ರಾಕೆಟ್ ನಡುವೆ ಅಂಥದ್ದೇ ಸಂಬಂಧ ಇರುತ್ತದೆ. ಕರೆಂಟ್ ಕೊಟ್ಟಾಗ ಅವೆರಡರ ನಡುವೆ ಒಂದರ್ಧ ಸೆಂಟಿಮೀಟರ್ ಅಂತರ ಏರ್ಪಡುತ್ತದೆ. ಈಗ ರಾಕೆಟ್‌ಗೆ ನೂಕುಬಲವನ್ನು ಕೊಟ್ಟರೆ ಅದು ಕೊಳವೆಯಲ್ಲಿ ಯಾವುದೇ ಘರ್ಷಣೆ ಇಲ್ಲದೇ ಬುಲೆಟ್ ಟ್ರೇನಿಗಿಂತ, ವಿಮಾನಕ್ಕಿಂತ ಹೆಚ್ಚಿನ, ಅಂದರೆ ಗಂಟೆಗೆ ಸಾವಿರ ಕಿಲೊಮೀಟರ್ ವೇಗದಲ್ಲಿ ಆ ಬಂಡಿಯನ್ನು ಓಡಿಸಬಹುದು.
ಲೆಕ್ಕಾಚಾರದ ಪ್ರಕಾರ, ಇಂಥದ್ದೊಂದು ಕೊಳವೆಯನ್ನು ಬೆಂಗಳೂರು- ಮೈಸೂರಿನ ನಡುವೆ ಸ್ಥಾಪಿಸಿದರೆ ಅದರೊಳಗಿನ ವಾಹನದಲ್ಲಿ ಕೂತು ನೀವು ಕೇವಲ ಏಳೆಂಟು ನಿಮಿಷಗಳಲ್ಲಿ ಇಲ್ಲಿಂದ ಅಲ್ಲಿಗೆ ಧಾವಿಸಬಹುದು. ಕಣ್ಣೆವೆ ಮುಚ್ಚಿ ತೂಕಡಿಸಲೂ ಸಮಯ ಇರುವುದಿಲ್ಲ.
ಕನಸುಗಾರ ಇಲಾನ್ ಮಸ್ಕ್ ಹತ್ತು ವರ್ಷಗಳ ಹಿಂದೆ ಅಲ್ಲೆಲ್ಲೋ ತೂಕಡಿಸುತ್ತಿದ್ದಾಗ ಇಂಥದ್ದೇ ಒಂದು ಯೋಚನೆ ಬಂದಿರಬೇಕು. ಕನಸಿನ ಸಾಕ್ಷಾತ್ಕಾರಕ್ಕೆ ಬೇಕಾದ ಧನಬಲ, ತಾಂತ್ರಿಕ ಜ್ಞಾನ, ಬಿಸಿನೆಸ್ ನೈಪುಣ್ಯ ಎಲ್ಲವೂ ಮೇಳವಿಸಿರುವ ಆತ ಅಮೆರಿಕದ ನೆವಾಡಾ ಮರುಭೂಮಿಯಲ್ಲಿ ಎಂಟು ವರ್ಷಗಳ ಹಿಂದೆ ಹೈಪರ್‌ಲೂಪ್ ಕೊಳವೆಯನ್ನು ಸ್ಥಾಪಿಸಿಯೂ ಆಗಿತ್ತು. ಈ ಕ್ರಾಂತಿಕಾರ ಸಂಚಾರ ಸಾಧನದ ಬಗ್ಗೆ ಎಲ್ಲೆಡೆ ಚರ್ಚೆ ನಡೆದು, ಬಂಡವಾಳ ಹೂಡಲು ಯಾರೆಲ್ಲ ಆಸಕ್ತಿ ತೋರಿಸಿದಾಗ ಮಸ್ಕ್‌ಗೆ ಬೇರೇನೊ ಐಡಿಯಾ ಹೊಳೆದಿರಬೇಕು. ತನ್ನ ಕಂಪನಿಯನ್ನು ರಿಚರ್ಡ್ ಬ್ರಾನ್ಸನ್ ಎಂಬ ಇನ್ನೊಬ್ಬ ಸಾಹಸಿ ಉದ್ಯಮಿಗೆ ಮಾರಿಬಿಟ್ಟ. ‘ಹೈಪರ್‌ಲೂಪ್ 1’ ಹೆಸರಿನಲ್ಲಿ ಹೊಸ ಕಂಪನಿ ಅದೇ ತಾಣದಲ್ಲಿ ಪ್ರಯೋಗವನ್ನು ಮುಂದುವರಿಸಿತು. ಅದರ ಆಗಿನ ಪ್ರಚಾರ ಭರಾಟೆ ಎಷ್ಟಿತ್ತೆಂದರೆ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡಣವೀಸ್ ತಾನೂ ಮುಂಬೈ- ಪುಣೆ ಮಧ್ಯೆ ಅಂಥದ್ದೇ ಮಿಂಚಿನ ಮಾರ್ಗವನ್ನು ಹಾಕಿಸುತ್ತೇನೆಂದು 2018ರಲ್ಲಿ ಭೂಮಿ ಖರೀದಿಗೂ ವ್ಯವಸ್ಥೆ ಮಾಡಿ, ನೇರವಾಗಿ ನೆವಾಡಾಕ್ಕೆ ಖುದ್ದಾಗಿ ಹೋಗಿ ನೋಡಿಕೊಂಡು ಬಂದಿದ್ದೂ ಆಯಿತು. (‘ನಾಲ್ಕು ಗಂಟೆಗಳ ಮುಂಬೈ- ಪುಣೆ ದೂರವನ್ನು ಕೇವಲ 25 ನಿಮಿಷಗಳಲ್ಲಿ ಪೂರೈಸುವ ವ್ಯವಸ್ಥೆ ಮಾಡುತ್ತೇವೆ, ಜಗತ್ತಿನ ಮೊದಲ ಹೈಪರ್‌ಲೂಪ್ ಸಂಚಾರ ವ್ಯವಸ್ಥೆ ನಮ್ಮಲ್ಲೇ ಆಗಲಿದೆ’ ಎಂಬುದು ಆಗ ಅವರು ನೀಡಿದ ಭರವಸೆಯಾಗಿತ್ತು).
ಅದೇ ವೇಳೆಗೆ ಅಬುಧಾಬಿ-ದುಬೈ ಮಧ್ಯೆ ತಾನೂ ಅಂಥ ಮಾಯಾಮಾರ್ಗವನ್ನು ಆರಂಭಿಸುತ್ತೇನೆ ಎಂದು ಯು.ಎ.ಇ. ತೈಲದೊರೆಯೂ ಉತ್ಸಾಹ ತೋರಿದ್ದರಿಂದ ಫಡಣವೀಸ್ ತುಸು ವೇಗವಾಗಿಯೇ ನೆವಾಡಾ ಮರುಭೂಮಿಗೆ ಧಾವಿಸಿದರೆಂದು ಕಾಣುತ್ತದೆ. ಅಲ್ಲಿ ಅರ್ಧ ಕಿಲೊಮೀಟರ್ ಉದ್ದದ ಕೊಳವೆಯಲ್ಲಿ ಇಟ್ಟ ವಾಹನ ಗಂಟೆಗೆ 400 ಕಿಲೊಮೀಟರ್ ಓಡಿದ್ದನ್ನು ನೋಡಿದ್ದೂ ಆಯಿತು. ಕೊಳವೆಯ ಉದ್ದ ಇನ್ನೂ ನೂರಿನ್ನೂರು ಕಿಲೊಮೀಟರ್ ಇದ್ದರೆ ಹೈಪರ್‌ಲೂಪ್ ವೇಗವನ್ನು ಇಮ್ಮಡಿ ಮಾಡಬಹುದು ಎಂಬುದು ವರ್ಜಿನ್ ಕಂಪನಿಯ ಭರವಸೆಯಾಗಿತ್ತು. ರಸ್ತೆ, ರೈಲು, ವಿಮಾನಗಳ ಸಂಚಾರಕ್ಕೆ ಹೋಲಿಸಿದರೆ ಇದು ಕಡಿಮೆ ವೆಚ್ಚದ್ದೆಂದೂ ಸೌರ ವಿದ್ಯುತ್‌ನಿಂದ ಕೂಡ ಇದಕ್ಕೆ ಚಾಲನೆ ನೀಡಬಹುದೆಂದೂ ಹೇಳಲಾಗಿತ್ತು.
ಹಾಗಿದ್ದರೆ ಆ ಭರವಸೆ ಈಡೇರಿತೆ? ಹೈಪರ್‌ಲೂಪ್ ಯೋಜನೆ ಫಡಣವೀಸ್ ಅವರ ರಾಜಕೀಯ ನಡೆಯಂತೆಯೇ ಏರಿಳಿತ ಕಂಡಿತು (ಫಡಣವೀಸ್ 2019ರಲ್ಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಹೋಗಿ, ಶಿವಸೇನೆ ಕೈಕೊಟ್ಟಿದ್ದರಿಂದ ಎನ್‌ಸಿಪಿ ಕೈಹಿಡಿದು ನಾಟಕೀಯವಾಗಿ ನಸುಕಿನಲ್ಲಿ ಪ್ರತಿಜ್ಞಾವಿಧಿಯನ್ನು ಕೈಗೊಂಡು, ಮೂರೇ ದಿನ ಆಳ್ವಿಕೆ ನಡೆಸಿ ಮುಗ್ಗರಿಸಿ, ಹೇಗೋ ಎದ್ದು ಈಗ ಉಪಮುಖ್ಯಮಂತ್ರಿ ಆಗಿದ್ದಾರಲ್ಲ?). ‘ಹೈಪರ್‌ಲೂಪ್ 1’ ಕಂಪನಿ ಏನೇನೋ ಮಾಡಿ ಈ ಯೋಜನೆಯನ್ನು ವಿವಿಧ ದೇಶಗಳಲ್ಲಿ ಜಾರಿಗೆ ತರಲು ಗುದ್ದಾಡಿ ಎಲ್ಲೂ ಯಾವುದೂ ಕೈಗೆ ಹತ್ತದೆ, ಕಳೆದ ವರ್ಷ ತನ್ನನ್ನು ತಾನೇ ದಿವಾಳಿ ಎಂದು ಘೋಷಿಸಿಕೊಂಡಿತು. ಕೊರೊನಾ ಕಾರಣವೆಂಬ ಸಬೂಬು ಕೆಲಮಟ್ಟಿಗೆ ನಿಜವಿರಲೂಬಹುದು. ಆದರೆ ಅಮೆರಿಕ, ಕೆನಡಾ, ಚೀನಾ ಮತ್ತು ಯುರೋಪ್ ದೇಶಗಳಲ್ಲಿ ಹೊಸ ಕಂಪನಿಗಳು ಹಣ ಹೂಡುತ್ತಿವೆ.
ಇದೀಗ ಹಾರ್ಡ್ಟ್ ಹೈಪರ್‌ಲೂಪ್ ಹೆಸರಿನ ಡಚ್ ಕಂಪನಿ ಮೊನ್ನೆ ಹೊಚ್ಚ ಹೊಸ ಕೊಳವೆ ಮಾರ್ಗಗಳನ್ನು ಜೋಡಿಸುತ್ತಿರುವ ಫೋಟೊಗಳನ್ನು ಬಿತ್ತರಿಸಿದೆ. ನೆದರ್‌ಲ್ಯಾಂಡ್ಸ್‌ನ ವೀಂಢಾಮ್ ನಗರದ ಹೊರವಲಯದಲ್ಲಿ ಜೋಡಿ ಕೊಳವೆಯಲ್ಲಿ ವಾಹನ ರಾಕೆಟ್ ವೇಗದಲ್ಲಿ ಚಲಿಸಿತು ಎಂದು ಇದೀಗ ವರದಿ ಬಂದಿದೆ. ವಿಶೇಷ ಏನೆಂದರೆ, ಆ ಕೊಳವೆಗಳ ನಿರ್ಮಾಣ ನಮ್ಮ ಟಾಟಾ ಸ್ಟೀಲ್ ಕಂಪನಿಯದ್ದಾಗಿದೆ. 2030ರ ವೇಳೆಗೆ ಫ್ರಾನ್ಸ್, ಇಟಲಿ, ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಹೈಪರ್‌ಲೂಪ್ ಸಂಚಾರ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.
ವೇಗ, ಇನ್ನೂ ವೇಗ, ಮತ್ತೂ ವೇಗ ಎಂಬುದು ಎಲ್ಲರಿಗೂ ಥ್ರಿಲ್ ಕೊಡುತ್ತದೆ ನಿಜ. ಅದರಿಂದಾಗುವ ದುರಂತಗಳ ಸುದ್ದಿ ಮತ್ತೆ ಮತ್ತೆ ಸಿಗುತ್ತಲೇ ಇದೆಯಾದರೂ ಯಾರಿಗೂ ಆ ದಿಸೆಯಲ್ಲಿ ಚಿಂತಿಸುವ ವ್ಯವಧಾನ ಇದ್ದಂತಿಲ್ಲ. ಈಗಿನ ಕಾಲದ ವಿಶೇಷ ಏನೆಂದರೆ, ಮನುಷ್ಯರಿಗೆ ಪೈಪೋಟಿ ನೀಡುವಂತೆ ಗಾಳಿ, ಮಳೆ, ಸೆಕೆ, ಬೆಂಕಿ ಎಲ್ಲವೂ ವೇಗವನ್ನು ಹೆಚ್ಚಿಸಿಕೊಂಡಂತಿವೆ. ಜಾಗತಿಕ ತಾಪಮಾನವನ್ನು ಅಷ್ಟರಮಟ್ಟಿಗೆ ನಾವು ಏರಿಸಿ ಕೂತಿದ್ದೇವೆ.
ವೇಗದ ಚಲನೆಯೇ ಆಧುನಿಕ ನಾಗರಿಕತೆಗೆ ಮಹಾನ್ ವ್ಯಸನವಾಗಿದೆ ಎಂದು ಅನೇಕ ದಾರ್ಶನಿಕರು ಹೇಳುತ್ತಲೇ ಬಂದಿದ್ದಾರೆ. ಎಲ್ಲರಿಗಿಂತ ಸೊಗಸಾದ ಹೇಳಿಕೆಯನ್ನು ಮಹಾತ್ಮ ಗಾಂಧಿ ಕೊಟ್ಟಿದ್ದಾರೆ: ‘ನೀವು ತಪ್ಪುದಾರಿಯಲ್ಲಿ ಹೋಗುತ್ತಿದ್ದರೆ, ವೇಗ ಹೆಚ್ಚಾದಷ್ಟೂ ನಷ್ಟವೂ ಹೆಚ್ಚುತ್ತದೆ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.