ತೊಂಬತ್ತೊಂದರ ಈ ಅಜ್ಜಿ ಅಕ್ಟೋಬರ್ 1ರಂದು ನಿಧನರಾದಾಗ ಲೋಕವಿಖ್ಯಾತಿ ಪಡೆದ ವಿವಿಧ ಕ್ಷೇತ್ರಗಳ ಗಣ್ಯರಿಂದ ನುಡಿನಮನದ ಧಾರೆಯೇ ಹರಿದು ಬಂತು. ಅವರಲ್ಲಿ ವಿಜ್ಞಾನಿಗಳಿದ್ದರು. ಲಿಯೊನಾರ್ಡೊ ಡಿಕಾಪ್ರಿಯೊನಂಥ ಸಿನೆಮಾ ನಿರ್ದೇಶಕರಿದ್ದರು. ಬರಾಕ್ ಒಬಾಮಾ, ಜೋ ಬೈಡನ್ರಂಥವರಿದ್ದರು. ಸಂಗೀತಕಾರ ಡೇವಿಡ್ ಮ್ಯಾಥ್ಯೂಸ್, ಜೀವದೂತ ಡೇವಿಡ್ ಅಟ್ಟೆನ್ಬರೋ ಇದ್ದರು. ಜೇನ್ ಗುಡಾಲ್ ನಿಧನಕ್ಕೆ 150ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಗಟ್ಟಲೆ ಶೋಕಸಭೆಗಳು ನಡೆದವು. ವರ್ಷದ 300ಕ್ಕೂ ಹೆಚ್ಚು ದಿನಗಳನ್ನು ಉಪನ್ಯಾಸ ಪ್ರವಾಸಗಳಿಗೇ ಮೀಸಲಿಡುತ್ತಿದ್ದ ಹಿರಿಯ ಜೀವ ತನ್ನ ಇನ್ನೊಂದು ಉಪನ್ಯಾಸಕ್ಕೆಂದು ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದಾಗ ನಿದ್ದೆಯಲ್ಲೇ ಕಣ್ಣು ಮುಚ್ಚಿತು.

ಜೇನ್ ಮಗುವಾಗಿದ್ದಾಗ ಎರೆಹುಳುಗಳನ್ನು ಕೆದಕಿ ತಂದು ಹಾಸಿಗೆಯ ಮೇಲೆ ಮಣ್ಣನ್ನು ಹಾಸಿ ಪರೀಕ್ಷೆ ಮಾಡುತ್ತಿದ್ದಳು. .ಕೋಳಿಗೂಡಿನಲ್ಲಿ ಗಂಟೆಗಟ್ಟಲೆ ಅವಿತು ಕೂತು, ಮೊಟ್ಟೆ ಹೊರಬರುವ ರಂಧ್ರವನ್ನು ಹುಡುಕುತ್ತಿದ್ದಳು. ಟಾರ್ಜನ್ ಚಿತ್ರಮಾಲಿಕೆಯನ್ನು ನೋಡಿ ಆಫ್ರಿಕಾಕ್ಕೆ ತಾನು ಹೋಗಲೇ ಬೇಕೆಂದು ಹಟ ಹಿಡಿದಿದ್ದಳು. ‘ದೊಡ್ಡ ವಳಾಗಿ ನೀನೇ ದುಡಿದು ಹಣ ಗಳಿಸಿ ಹೋಗಬೇಕಷ್ಟೆ’ ಎಂದು ಅಮ್ಮ ಹೇಳಿದ್ದು ತಲೆಯಲ್ಲಿ ಕೂತಿತ್ತು. ಹದಿನೇಳರ ಹುಡುಗಿ ತನ್ನ ಓದನ್ನು ಅಷ್ಟಕ್ಕೇ
ನಿಲ್ಲಿಸಿ, ಚಿಕ್ಕಪುಟ್ಟ ನೌಕರಿ ಮಾಡಿ ಹಣ ಕೂಡಿಸಿ, 23ರ ಹರಯದಲ್ಲಿ ಕತ್ತಲ ಖಂಡ ಆಫ್ರಿಕಾಕ್ಕೆ ತೆರಳಿ ಚಿಂಪಾಂಜಿಗಳ ಅಧ್ಯಯನ ಕೈಗೊಂಡರು. ದುರ್ಬೀನು ಹಿಡಿದು ವಾರ, ತಿಂಗಳುಗಟ್ಟಲೆ ಒಂದೊಂದು ಚಿಂಪಾಜಿಯ, ಒಂದೊಂದು ಕುಟುಂಬದ, ಎರಡು–ಮೂರು ತಲೆಮಾರುಗಳ ಅಧ್ಯಯನ ನಡೆಸುತ್ತ ಒಂದೊಂದಕ್ಕೂ ಹೆಸರಿಟ್ಟು ಟಿಪ್ಪಣಿ ಬರೆದುಕೊಳ್ಳುತ್ತ ಹೋದರು.

60ರ ದಶಕದಲ್ಲಿ ಹೆಣ್ಣುಮಕ್ಕಳು, ಅದೂ ಒಬ್ಬಂಟಿಯಾಗಿ ವನ್ಯ ಸಂಶೋಧನೆಗೆ ಇಳಿದಿದ್ದೇ ಇರಲಿಲ್ಲ. ಪ್ರಾಣಿಗಳ ಗೆಳೆತನ ಮಾಡಬಾರದು, ಹೆಸರಿಡಬಾರದು, ಸಂಖ್ಯೆಯ ಗುರುತಿನಿಂದಲೇ ವರ್ಣಿಸಬೇಕು ಎಂದೆಲ್ಲ ವೈಜ್ಞಾನಿಕ ಸಲಹೆಗಳನ್ನು ಮೂಲೆಗೊತ್ತಿ ಅಧ್ಯಯನ ನಡೆಸಿದರು. ಮನುಷ್ಯರಲ್ಲಿ ಇರುವ ಹಾಗೆ ಈ ವಾನರಗಳಲ್ಲೂ ಹರ್ಷ, ಈರ್ಷ್ಯೆ, ಪೈಪೋಟಿ, ಶಾಭಾಸ್ಗಿರಿ, ಚಮಚಾಗಿರಿ, ವಂಚನೆ, ದ್ವೇಷ, ಚಿತಾವಣೆ, ಪರೋಪಕಾರ ಬುದ್ಧಿ ಎಲ್ಲವೂ ಇವೆಯೆಂದು ವರದಿ ಮಾಡಿದರು. ಅವು ಮಾಂಸ ತಿನ್ನುತ್ತವೆ, ಎಂಜಲು ಹಚ್ಚಿದ ಕಡ್ಡಿಯನ್ನು ಹುತ್ತದೊಳಕ್ಕೆ ಆಯುಧದಂತೆ ತೂರಿಸಿ ಗೆದ್ದಲುಗಳನ್ನು ಮೇಲೆತ್ತಿ ಭಕ್ಷಿಸುತ್ತವೆ, ಎಂಬೆಲ್ಲ ಸಚಿತ್ರ ವರದಿಗಳು ನ್ಯಾಶನಲ್ ಜಿಯಾಗ್ರಫಿಕ್ ಪತ್ರಿಕೆಯಲ್ಲಿ ಪ್ರಕಟವಾದಾಗ ವಿಜ್ಞಾನಿಗಳೂ ನಿಬ್ಬೆರಗಾದರು. ಪ್ರಾಣಿಗಳ ಗುಣಸ್ವಭಾವಗಳ ಅಧ್ಯಯನಕ್ಕೆ (‘ಇಥಾಲಜಿ’ಗೆ)
ಹೆಚ್ಚಿನ ಬಲ ಬಂತು, ಧನಸಹಾಯ ಬಂತು, ಯುವ ಸಂಶೋಧಕರ ತಂಡವೇ ಆಫ್ರಿಕಾದತ್ತ ಬಂತು. ಪದವೀಧರೆ ಕೂಡ ಆಗಿರದ ಜೇನ್ಗೆ ಕೇಂಬ್ರಿಜ್ ವಿ.ವಿ.ಯಲ್ಲಿ ಡಾಕ್ಟರೇಟ್ ಪ್ರಬಂಧ ಸಲ್ಲಿಸಲು ಅವಕಾಶ ಒದಗಿಬಂತು, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉಪನ್ಯಾಸಕ್ಕೆ ಆಹ್ವಾನಗಳ ಸರಮಾಲೆ ಬಂತು. ಸಂದರ್ಶನಗಳಿಗೆ, ಸಾಕ್ಷ್ಯಚಿತ್ರಗಳಿಗೆ ಬೇಡಿಕೆ ಬಂತು.

30ರ ವಯಸ್ಸಿನಲ್ಲೇ ಜಾಗತಿಕ ಖ್ಯಾತಿ ಪಡೆದರೂ ಜೇನ್ ಗುಡಾಲ್ ಅರಣ್ಯ ಬಿಟ್ಟು ಕದಲಲಿಲ್ಲ. ಇಂದು ತಾಂಝಾನಿಯಾದ ‘ಗೊಂಬಿ ರಾಷ್ಟ್ರೀಯ ಉದ್ಯಾನ’ಕ್ಕೆ ಜಾಗತಿಕ ಖ್ಯಾತಿ ಬಂದಿದೆ. ವಾನರಗಳನ್ನು ಕುರಿತಂತೆ ಜಗತ್ತಿನ ಅತಿ ದೀರ್ಘ ಸಂಶೋಧನೆ ಅಲ್ಲಿ ನಡೆದಿದೆ. ಮನುಷ್ಯನಿಗೆ ತೀರ ನಿಕಟ ಸಂಬಂಧಿ ಎನಿಸಿದ ಚಿಂಪಾಂಜಿ (ನಮ್ಮಲ್ಲಿರುವ ಶೇ 98.7 ಡಿಎನ್ಎ ಅವುಗಳಲ್ಲೂ ಇದೆ) ಹಾಗೂ ಇತರೆಲ್ಲ ವಾನರಗಳ ಬೌದ್ಧಿಕ ಮತ್ತು ಗುಣಭಾವಗಳ ಅಧ್ಯಯನಗಳಾಗಿವೆ. ಈ ಮೂಕಜೀವಿಗಳು ನಮ್ಮೊಂದಿಗೆ ಸಂಜ್ಞೆ ಮತ್ತು ಕೀಬೋರ್ಡ್ ಮೂಲಕ ಅಚ್ಚರಿ ಎನಿಸುವಷ್ಟು ಸಂವಹನ ನಡೆಸಲು ಸಾಧ್ಯವಾಗಿದೆ.

ವೈಜ್ಞಾನಿಕ ಅಧ್ಯಯನಗಳಾಚೆ ಜೇನ್ ತಮ್ಮನ್ನು ವಿಸ್ತರಿಸಿಕೊಂಡರು. ಅರಣ್ಯ ಜೀವಲೋಕದ ಇತರ ವಿದ್ಯಮಾನಗಳನ್ನೂ ಅರಣ್ಯವಾಸಿಗಳ ಹಿತಾಸಕ್ತಿಗಳನ್ನೂ ನೋಡುತ್ತ ಹೋದರು. ‘ಜೇನ್ ಗುಡಾಲ್ ಇನ್ಸ್ಟಿಟ್ಯೂಟ್’ (ಜೆಜಿಐ) ಹೆಸರಿನ ಸಂಸ್ಥೆಯನ್ನು ಆರಂಭಿಸಿ ಪರಿಸರ ಹಿತಾಸಕ್ತರನ್ನೆಲ್ಲ ಒಂದುಗೂಡಿಸಿದರು. ಮಕ್ಕಳಿಗೆಂದೇ ‘ರೂಟ್ಸ್ ಅಂಡ್ ಶೂಟ್ಸ್’ (ಬೇರು ಮತ್ತು ಚಿಗುರು) ಹೆಸರಿನ ಸಂಘಟನೆಯ ಮೂಲಕ ಹಳ್ಳಿಗಳಲ್ಲಿ ಅರಿವಿನ ಬೀಜ ಬಿತ್ತುತ್ತ ಹೋದರು.

ಆರಂಭದಲ್ಲಿ ಚಿಂಪಾಂಜಿಗಳು ಇವರನ್ನು ವೈರಿಯಂತೆ ಅಟ್ಟಿಸಿಕೊಂಡು ದಾಳಿಗೆ ಬರುತ್ತಿದ್ದವು. ಆದರೆ ಜೇನ್ ಶಾಂತವಾಗಿ ಅವುಗಳ ನಂಟಸ್ತನ ಬೆಳೆಸಿದರು. ಅದೇ ಅವರ ಯಶೋಮಾರ್ಗ ಎನಿಸಿತು. ಅವರ ಸಂಸ್ಥೆಯೂ ಪ್ರಭುತ್ವದ ಎದುರು ನೇರ ಹೋರಾಟಕ್ಕಿಳಿಯದೆ, ವನರಕ್ಷಣೆಗೆ ಗಟ್ಟಿ ಕಾನೂನು ಗಳನ್ನು ರೂಪಿಸುವಂತೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಮನವೊಲಿಸುತ್ತಿದೆ. ಔಷಧ ಕಂಪನಿಗಳಲ್ಲಿ ಊಳಿಗಕ್ಕಿರುವ ವಿಜ್ಞಾನಿಗಳು ಪ್ರಾಣಿಗಳ ಮೇಲೆ ನಡೆಸುವ ಕ್ರೂರ ಪ್ರಯೋಗಗಳ ಮೇಲೆ ಕಡಿವಾಣ ಹಾಕಲಾಗಿದೆ. ಅವರ ಲ್ಯಾಬ್ ಗಳಿಗೆಂದು ಪ್ರಾಣಿಗಳನ್ನು ಸಾಗಿಸದಂತೆ ವಿಮಾನ ಸಂಸ್ಥೆಗಳ ಮನವೊಲಿಸಲಾಗಿದೆ. ಅಳಿವಿನಂಚಿನ ಜೀವಿಗಳ ಬೇಟೆಗೆ, ಮೃಗಾಲಯಗಳ ಕ್ರೌರ್ಯಕ್ಕೆ ನಿರ್ಬಂಧ ಹಾಕಲೆಂದು ಅಂತಾರಾಷ್ಟ್ರೀಯ ಒಪ್ಪಂದ ಗಳಾಗಿವೆ. ಸ್ವತಃ ಸಸ್ಯಾಹಾರಿಯಾಗಿದ್ದ ಅವರು ‘ಮಾಂಸಾಹಾರ ತ್ಯಜಿಸಿ’ ಎಂದೇನೂ ಕರೆಕೊಡಲಿಲ್ಲ. ಆದರೆ ಔದ್ಯಮಿಕ ಮಟ್ಟದಲ್ಲಿ ದನ, ಕುರಿ, ಹಂದಿಗಳ ಸಾಕಣೆ ಮತ್ತು ವಧೆಯ ನಿರ್ದಯೀ ವಿಧಾನ ಮತ್ತು ಭೂಶಾಖ ಏರಿಕೆಯ ಬಗ್ಗೆ ಹೇಳುತ್ತ ‘ಮಾಂಸಾಹಾರ ಸೇವನೆಯನ್ನು ಕಡಿಮೆ ಮಾಡಿ, ಅದು ನಿಮಗೂ ಭೂಮಿಗೂ ಕ್ಷೇಮಕಾರಿ’ ಎಂದಷ್ಟೆ ಕೇಳಿಕೊಂಡರು.

ಇಂದು ಜೆಜಿಐ 26 ದೇಶಗಳಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸಿದೆ. 140ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ‘ರೂಟ್ಸ್ ಅಂಡ್ ಶೂಟ್ಸ್‘ ಬೇರೂರಿವೆ. ಭಾರತದಲ್ಲೂ ಇವೆರಡು ಸಂಸ್ಥೆಗಳ ಆಶ್ರಯದಲ್ಲಿ ಶಾಲಾಮಕ್ಕಳಲ್ಲಿ ಅರಣ್ಯ ಶಿಕ್ಷಣಕ್ಕೆಂದು ‘ವನ್ಯ ಭಾರತ’ ಮತ್ತು ಕಡಲ ಪರಿಚಯಕ್ಕೆ ‘ಬ್ಲೂ ಸ್ಕೂಲ್’ ಕಾರ್ಯಕ್ರಮಗಳು ನಡೆಯುತ್ತಿವೆ.

ಜೇನ್ ಗುಡಾಲ್ ಅವರಿಗೆ ಸಂದ ಅದೆಷ್ಟೊ ಡಾಕ್ಟರೇಟ್ ಡಿಗ್ರಿಗಳು, ವಿಶ್ವಪ್ರಶಸ್ತಿ, ವಿಶ್ವಸಂಸ್ಥೆಯ ಶಾಂತಿದೂತ ಅಭಿಧಾನ, ವಿಜ್ಞಾನ ಸಂವಹನ ಪ್ರಶಸ್ತಿ – ಇವೆಲ್ಲ ಬಿಡಿ; ಅವರ ‘ಮರಣೋತ್ತರ’ದ ಉಪನ್ಯಾಸ ಹೇಗಿತ್ತು ಗೊತ್ತೆ?

ನೆಟ್ಫ್ಲಿಕ್ಸ್ ವಾಹಿನಿ ಈಚೆಗೆ ‘ಪ್ರಸಿದ್ಧರ ಕೊನೆಯ ಮಾತು’ ಹೆಸರಿನ ಸರಣಿ ಸಂದರ್ಶನಗಳನ್ನು ಪ್ರಾರಂಭಿಸಿದೆ. ಖ್ಯಾತ ಸಾಧಕರ ಮತ್ತು ಚಿಂತಕರ ‘ಕೊನೆಯ ಸಂದರ್ಶನ’ವನ್ನು ಈಗಲೇ ರೆಕಾರ್ಡ್ ಮಾಡಿಕೊಂಡು, ಅಂಥವರ ನಿಧನದ ನಂತರ ಅದನ್ನು ಪ್ರಕಟಿಸುವ ಯೋಜನೆ ಅದು. ರೆಕಾರ್ಡಿಂಗ್ ಮಾಡುವವರಿಗೂ ಸಂವಾದ ಗೊತ್ತಾಗದಂತೆ ರಿಮೋಟ್ ಸಂದರ್ಶನ ನಡೆಯುತ್ತದೆ. ಮೊನ್ನೆ ಮಾರ್ಚ್ನಲ್ಲಿ ಈ ಸರಣಿ ಜೇನ್ ಗುಡಾಲ್ ಜೊತೆಗೇ ಆರಂಭವಾಗಿತ್ತು. ಇದೀಗ ಅದು ಪ್ರಕಟವಾಗಿದೆ. ‘ಮನುಷ್ಯನ ಸೌಕರ್ಯ ಹೆಚ್ಚುತ್ತ ಹೋದ ಹಾಗೆ ಆತನ ಮಿದುಳು ಮತ್ತು ಹೃದಯದ ನಡುವಣ ಸಂಬಂಧ ತೆಳುವಾಗುತ್ತ ಹೋಗುತ್ತಿದೆ; ಶಿಕ್ಷಣದ ಮೂಲಕ ಅದನ್ನು ಗಟ್ಟಿಗೊಳಿಸಲು ಸಾಧ್ಯವಿದೆ’ ಎಂದು ಜೇನ್ ಅದರಲ್ಲಿ ಹೇಳಿದ್ದಾರೆ.

‘ನೀವು ಹೇಳುವ ಹಾಗೆ, ಮುಗ್ಧರಿಗೆ ಶಿಕ್ಷಣ ಕೊಡೋಣ, ದುಷ್ಟರನ್ನು ಏನು ಮಾಡೋಣ?’ ಎಂಬ ಪ್ರಶ್ನೆಗೆ ಗುಡಾಲ್ ನೀಡಿದ ಉತ್ತರ: ‘ಬೇರೆ ಗ್ರಹಗಳಿಗೆ ಮನುಷ್ಯರನ್ನು ಕಳಿಸುವ ಈಲಾನ್ ಮಸ್ಕ್ ಯೋಜನೆ ಇದೆಯಲ್ಲ, ಅಲ್ಲಿಗೆ ಅವರನ್ನೆಲ್ಲ ಕಳಿಸಬೇಕು’ ಎಂದಿದ್ದಾರೆ. ‘ಯಾರ್ಯಾರನ್ನು ಕಳಿಸೋಣ?’ ಎಂದು ಕೇಳಿದ್ದಕ್ಕೆ, ‘ಅದೇ- ಟ್ರಂಪ್, ಪುತಿನ್, ಚೀನಾದ ಷಿ ಜಿನ್ಪಿಂಗ್, ಇಸ್ರೇಲಿನ ನೇತಾನ್ಯಾಹು ಮತ್ತು ಆ ನೌಕೆಯ ಕಮಾಂಡರ್ ಆಗಿ ಮಸ್ಕ್ ಕೂಡ ಹೋಗಬೇಕು’ ಎಂದಿದ್ದಾರೆ.

ಸಂದರ್ಶನದ ಕೊನೆಯ ಭಾಗದಲ್ಲಿ ಅವರಾಡಿದ ‘ಮರಣೋತ್ತರ’ ಮಾತುಗಳ ಮುಖ್ಯಾಂಶ ಹೀಗಿದೆ: ‘ಭೂಮಿ ಇಂದು ಅತ್ಯಂತ ಅಪಾಯದ ಘಟ್ಟದಲ್ಲಿದೆ. ಕರಾಳ ಬಿಸಿಯುಗಕ್ಕೆ ಕಾಲಿಟ್ಟಿದೆ. ಈಗಿನ ಬಲಪಂಥೀಯರ ಮುಷ್ಟಿ ಹೀಗೇ ಬಿಗಿಯಾಗುತ್ತ ಹೋದರೆ ಭೂಮಿ ದಿವಾಳಿ ಆಗುತ್ತದೆ. ಅದನ್ನು ತಡೆಯಬಲ್ಲ ವ್ಯವಸ್ಥೆಗಳೆಲ್ಲ ಇದ್ದರೂ ತಡೆಯಬೇಕೆಂಬ ಮನಸ್ಸು ರಾಜಕಾರಣಿಗಳಲ್ಲಿ ಮತ್ತು ಕಾರ್ಪೊರೇಟ್ ವಲಯದಲ್ಲಿ ಇಲ್ಲ… ಅದನ್ನು ಬದಲಿಸಬೇಕಿದೆ. ನೀವೆಲ್ಲ ನಿತ್ಯದ ಬದುಕಿನಲ್ಲಿ ಚಿಕ್ಕಚಿಕ್ಕ ಬದಲಾವಣೆ ಮಾಡಿಕೊಂಡರೂ ಸಾಕು, ಪೃಥ್ವಿ ಮತ್ತೆ ಚೇತರಿಸಿಕೊಳ್ಳಬಹುದು.’

ಅಂಥ ಚೇತರಿಕೆಗೆಂದೇ ವಿಜ್ಞಾನವನ್ನು, ಖ್ಯಾತನಾಮರನ್ನು ಮತ್ತು ಕಾಡಿನ ಜೀವಿಗಳನ್ನು ಒಂದಾಗಿ ಬೆಸೆಯುತ್ತ ಹೋಗಿದ್ದ ಅಮ್ಮ ಈಗ ಪ್ರಜ್ಞಾರೂಪಕ್ಕಿಳಿದಿದ್ದಾರೆ. ಇವರು ಹಚ್ಚಿದ ಅರಿವಿನ ದೀಪ್ತಿ ನಮ್ಮ ಅರಿವಿಗೆ ನೇರ ಬಾರದಿದ್ದರೂ ಅಂತರ್ವ್ಯಾಪಿಯಾಗಿ ಎಲ್ಲೆಡೆ ಬೆಳಗುತ್ತಿದೆ. ಇಲ್ಲವಾದರೆ, ನಮ್ಮ ಶರಾವತಿ ಕೊಳ್ಳದ ದಟ್ಟ ಕತ್ತಲಲ್ಲಿ ವಾಸಿಸುವ ನೂರಿನ್ನೂರು ಸಿಂಗಳೀಕಗಳಿಗೆ ಅಪಾಯ ಎದುರಾಗಿದೆ ಎಂದಾಗ, ಅವುಗಳ ರಕ್ಷಣೆಗೆ ಒತ್ತಾಯಿಸಿ ಅಷ್ಟೊಂದು ಸಾವಿರ ಜನರು ಸೆಪ್ಟೆಂಬರ್ 18ರಂದು ಗೇರುಸೊಪ್ಪದಲ್ಲಿ ಸೇರುತ್ತಿದ್ದರೆ?

ಜೀವಿಗಳನ್ನು ಪಂಜರದಲ್ಲಿ ಇಡುವುದನ್ನೇ ವಿರೋಧಿಸುವ ಜೇನ್ ಗುಡಾಲ್, ಆಫ್ರಿಕಾದ ಕಾಡಿನಲ್ಲಿ ತನ್ನ ಮೂರು ವರ್ಷದ ಮಗನನ್ನು ಪಂಜರದಲ್ಲಿಡುತ್ತಿದ್ದರು! ಏಕೆಂದರೆ, ದುರ್ಬೀನ್ ಹಿಡಿದ ತಾನು ಮರಪೊದೆಗಳ ಕಡೆ ಕಣ್ಣಿಟ್ಟು ಕೂತಿರುವಾಗ ಯಾವ ಪ್ರಾಣಿಯೂ ಮಗನ ಮೇಲೆ ದಾಳಿ ಮಾಡದಿರಲಿ ಎಂದು. ಇಂದು ತದ್ವಿರುದ್ಧದ ಸಂದರ್ಭದಲ್ಲಿ ನಾವಿದ್ದೇವೆ. ವಿವಿಧ ಭೂಖಂಡಗಳಲ್ಲಿ ನೂರಾರು ಪರಿಸರ ಹೋರಾಟಗಾರರು ಬಂಧನದಲ್ಲಿ ದ್ದಾರೆ. ಪ್ರಭುತ್ವದ ಬೆಂಬಲ ಪಡೆದ ಬಲಿಷ್ಠ ಬಾಹುಗಳು ಜೀವಲೋಕದ ದಮನ, ಧ್ವಂಸ ನಡೆಸುತ್ತಿವೆ.

ನಮ್ಮ ಸೋನಮ್ ವಾಂಗ್ಚುಕ್ ಎಲ್ಲಿದ್ದಾರೊ? ಹೇಗಿದ್ದಾರೊ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.