ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಶೇಷ | ನೆಲಕ್ಕೆ, ಹೊಲಕ್ಕೆ ಐಸಿಟಿ, ಐಓಟಿ

ಛಲವೊಂದಿದ್ದರೆ ಬರವನ್ನೇ ಹಿಂಡಿ ಹನಿ ಹನಿ ನೀರನ್ನು ಬಸಿಯಲೂಬಹುದು
Published 8 ಮೇ 2024, 23:50 IST
Last Updated 8 ಮೇ 2024, 23:50 IST
ಅಕ್ಷರ ಗಾತ್ರ

ಸೆಕೆಯ ಅಲೆ ಕೇವಲ ನೆಲದ ಮೇಲಷ್ಟೇ ಚಲಿಸುತ್ತದೆ ಎಂದುಕೊಂಡಿದ್ದಿರಾ? ಅದು ಸಮುದ್ರದ ಆಳದಲ್ಲೂ ನಿಧಾನಕ್ಕೆ ಚಲಿಸುತ್ತದೆ. ಹೋದವರ್ಷದ ಆ ಅಲೆಯ ಪ್ರಭಾವ ಈಗ ಕಾಣುತ್ತಿದೆ. ಅಂದಮೇಲೆ, ನೆಲದಡಿಯಲ್ಲೂ ಅಂಥದ್ದೇ ಶಾಖದ ಅಲೆ ಇರಬಹುದಲ್ಲವೆ? ನಮ್ಮಲ್ಲಿ ಬರಪೀಡಿತ ತಾಲ್ಲೂಕುಗಳ ಸಂಖ್ಯೆ ವರ್ಷವರ್ಷಕ್ಕೂ ಹೆಚ್ಚುತ್ತಿರುವುದನ್ನು ನೋಡಿದರೆ ಅಂಥದ್ದೊಂದು ಗುಮಾನಿ ಬರುತ್ತಿದೆ. ಮೊನ್ನೆ ಭಾನುವಾರ ತುಮಕೂರು ಜಿಲ್ಲೆಯ ತೋವಿನಕೆರೆಯ ರಾಜಣ್ಣ ಆತ್ಮಹತ್ಯೆ ಮಾಡಿಕೊಂಡರು. ಒಣಗುತ್ತಿರುವ ಅಡಿಕೆ ತೋಟವನ್ನು ಉಳಿಸಿಕೊಳ್ಳಲೆಂದು ಅವರು ಒಂದೆರಡಲ್ಲ, ಏಳು ಕೊಳವೆಬಾವಿಗಳನ್ನು ಕೊರೆಸಿದರು. ಎಲ್ಲವೂ ವಿಫಲವಾಗಿದ್ದವು. ಭೂಗತ ಬರಗಾಲ, ಸಾಲಬಾಧೆ ಅವರನ್ನು ಬಲಿತೆಗೆದುಕೊಂಡಿತು. ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ಅಂಥ ನತದೃಷ್ಟರ ಸಂಖ್ಯೆ 800ನ್ನು ದಾಟಿದೆಯಂತೆ. ಆದರೂ ಅದನ್ನು ‘ಆತ್ಮಹತ್ಯೆಯ ಅಲೆ’ ಎನ್ನುತ್ತಿಲ್ಲವೇಕೊ?

ವಿಜ್ಞಾನ–ತಂತ್ರಜ್ಞಾನದ ನೆರವು ಪಡೆದರೆ ಈ ಅಲೆಯಿಂದಲೂ ಹುಷಾರಾಗಿ ಪಾರಾಗಬಹುದು. ರಾಜಸ್ಥಾನದ ಕೆರ್ಡಿ ಗ್ರಾಮದ ರೈತನ ಜೋಳದ ಪೈರು ಹೀಗೇ ಒಣಗಿ ನಿಂತಿತ್ತು. ಅಪ್ಪನ ಖಿನ್ನತೆಯನ್ನು ಗಮನಿಸಿ 16ರ ಹುಡುಗ ತನ್ನ ಸೈನ್ಸ್‌ ಪ್ರಾಜೆಕ್ಟ್‌ಗೆ ಬರವನ್ನೇ ಎತ್ತಿಕೊಂಡ. ನೀರನ್ನು ಜಾಸ್ತಿ ದಿನ ಹಿಡಿದಿಡಬಲ್ಲ ಕೃಷಿತ್ಯಾಜ್ಯಗಳ ಮೇಲೆ ಪ್ರಯೋಗ ಆರಂಭಿಸಿದ. ಬೆಂಡೆಯ ದಂಟು, ಜೋಳದ ರೆಂಬೆ, ಕಬ್ಬಿನ ಸಿಪ್ಪೆ ಏನೆಲ್ಲವುಗಳ ಮೇಲೆ ಮಣ್ಣು ಮುಚ್ಚಿ, ನೀರು ಚಿಮುಕಿಸಿ, ಬೀಜ ಬಿತ್ತುತ್ತ, ಫಲಿತಾಂಶವನ್ನು ದಾಖಲಿಸುತ್ತ ಹೋದ. ಕಿತ್ತಳೆ ಸಿಪ್ಪೆ ಮತ್ತು ಬಾಳೆಹಣ್ಣಿನ ಸಿಪ್ಪೆಗಳಿದ್ದ ಮಡಿಗಳಲ್ಲಿ ಸಸಿಗಳು ಚೆನ್ನಾಗಿ ಬೆಳೆಯುವುದನ್ನು ಕಂಡುಕೊಂಡ. ಈ ಸಿಪ್ಪೆಗಳನ್ನೇ ಪುಡಿ ಮಾಡಿ, ಮಣ್ಣಿನೊಂದಿಗೆ ಸೇರಿಸಿದರೆ ಬೆಳೆ ಇನ್ನೂ ಚೆನ್ನಾಗಿ ಬರುವುದನ್ನು ದಾಖಲಿಸಿದ. ಕೃಷಿ ವಿಜ್ಞಾನದ ಕಾಲೇಜನ್ನು ಸೇರಿದ ಮೇಲೆ ಉದಯಪುರದ ಜ್ಯೂಸ್‌ ಅಂಗಡಿಗಳ ಬಳಿ ರಾತ್ರಿಯೆಲ್ಲ ಸುತ್ತಾಡಿ ಕಿತ್ತಳೆ ಸಿಪ್ಪೆಗಳನ್ನು ಸಂಗ್ರಹಿಸಿ ಪುಡಿಪ್ರಯೋಗ ಮಾಡುತ್ತ ಹೋದ.

ಈ ಯುವಕನ ಹೆಸರು ನಾರಾಯಣ ಲಾಲ್‌ ಗುರ್ಜರ್‌. ಪದವಿಯ ಓದನ್ನು ಪೂರ್ಣಗೊಳಿಸುವ ಮೊದಲೇ ಕಿತ್ತಳೆ ಸಿಪ್ಪೆಯ ಬೆನ್ನೇರಿ ಜಪಾನಿನ ಓಕಿನಾವಾ ವಿಜ್ಞಾನ ತಂತ್ರಜ್ಞಾನ ಸಂಸ್ಥೆಯಲ್ಲಿ ಸಂಶೋಧನಾ ಸ್ಕಾಲರ್‌ ಆದ. ಕೋವಿಡ್‌ ಅವಧಿಯಲ್ಲಿ ಅಲ್ಲಿ ಸಿಲುಕಿದ್ದಾಗಲೇ ಕಿತ್ತಳೆ ಸಿಪ್ಪೆಯಿಂದ ಪಾಲಿಮರ್‌ ಪುಡಿಯನ್ನು ತಯಾರಿಸುವ ವಿಧಾನವನ್ನು ಕಂಡುಹಿಡಿದು 23ರ ಹರಯದಲ್ಲೇ ಪೇಟೆಂಟ್‌ ಪಡೆದ. ತನ್ನ ತೂಕಕ್ಕಿಂತ 400 ಪಟ್ಟು ಹೆಚ್ಚು ನೀರನ್ನು ಹಿಡಿದಿಟ್ಟುಕೊಂಡು ನಿಧಾನಕ್ಕೆ ಬೇರಿಗೆ ಜಿನುಗಿಸಬಲ್ಲ ನಾನಾ ಬಗೆಯ ಕೃತಕ ಪಾಲಿಮರ್‌ಗಳು ಹೊಲಕ್ಕೆ ಬಂದಿವೆಯಾದರೂ ಗುರ್ಜರ್‌ ವಿಧಾನದ್ದು ಅಪ್ಪಟ ಪರಿಸರಸ್ನೇಹಿ. ಕಿತ್ತಳೆಯ ಪಾಲಿಮರ್‌ ಪುಡಿಯನ್ನು ಎರಚಿದರೆ ಶೇ 40ರಷ್ಟು ನೀರನ್ನು ಮತ್ತು ಶೇ 20ರಷ್ಟು ಗೊಬ್ಬರವನ್ನು ಉಳಿಸಬಹುದು ಎಂದು ಈ ಯುವಕ ತೋರಿಸಿದ. ಈಗ ಉದಯಪುರದಲ್ಲಿ ಗುರ್ಜರ್‌ನ ಫ್ಯಾಕ್ಟರಿಯಲ್ಲಿ ತಿಂಗಳಿಗೆ ನೂರು ಟನ್‌ ‘ಫಸಲ್‌ ಅಮೃತ್‌’ ಪಾಲಿಮರ್‌ ಪುಡಿ ತಯಾರಾಗಿ ದೇಶವಿದೇಶಗಳಿಗೆ ಹೋಗುತ್ತಿದೆ.

ನೀರಿನ ಅಪವ್ಯಯವನ್ನು ತಡೆಯಬೇಕು; ತುಸುವೇ ನೀರನ್ನು ಆದಷ್ಟೂ ದಕ್ಷತೆಯಿಂದ ಬಳಸಬೇಕು. ಈ ಎರಡು ಉದ್ದೇಶಗಳ ಸಾಧನೆಗೆ ಇಂದು ನಾನಾ ಸಾಧನಗಳು ಬಂದಿವೆ. ಈಗಲ್ಲ, ತುಂಬ ಹಿಂದೆಯೇ ಬಂದಿವೆ. ಆದರೆ ಅವೆಲ್ಲ ಕೃಷಿ ವಿಜ್ಞಾನಿಗಳ ಮತ್ತು ಕೃಷಿ ಅಧಿಕಾರಿಗಳ ಮುಷ್ಟಿಯಲ್ಲಿದ್ದವು. ರೈತರಿದ್ದಲ್ಲಿ ಹೋಗಿ ಅವುಗಳನ್ನು ಪರಿಚಯಿಸುವ ಆಸಕ್ತಿ ಅಥವಾ ಉತ್ಸಾಹ ಸರ್ಕಾರಿ ಸಂಬಳ ಪಡೆಯುವವರಲ್ಲಿ ಎಷ್ಟಿದ್ದೀತು? ಕ್ರಮೇಣ ಖಾಸಗಿ ಕಂಪನಿಗಳು ರೈತರ ಹೊಲಕ್ಕಿಳಿದವು. ಮಹಾರಾಷ್ಟ್ರದ ಜಳಗಾಂವ್‌ ಎಂಬ ಊರು ಹೆಸರಿಗೆ ತಕ್ಕಂತೆ ನೀರಿಗೆ ಹೆಸರಾಗಿತ್ತು; ಜವುಳುಗಾಂವ್‌ ಆಗಿತ್ತು. ಬಾಳೆಯೇ ಮುಖ್ಯ ಬೆಳೆಯಾಗಿತ್ತು. ಕ್ರಮೇಣ ನೀರು ಕಡಿಮೆಯಾಗುತ್ತ ಬಂದಂತೆ ಸೆಕೆ ಜಾಸ್ತಿಯಾಗುತ್ತ ಈಗ ಅದು ಬರಪೀಡಿತ ‘ಝಳಗಾಂವ್‌’ ಆಗಿದೆ. ಆದರೆ ರೈತರ ಕೈ ಹಿಡಿದೆತ್ತಲು ಹನಿ ನೀರಾವರಿ ಕಂಪನಿಗಳು ಅಲ್ಲಿಗೆ ಬಂದವು. ಇಂದು ದೇಶದ ಅತಿ ಹೆಚ್ಚು ಬಾಳೆ ಜಳಗಾಂವ್‌ ಜಿಲ್ಲೆಯಲ್ಲಿ ಬೆಳೆಯುತ್ತಿದೆ; ಪಾಕಿಸ್ತಾನಕ್ಕೆ ನಿರ್ಯಾತವಾಗುತ್ತಿದೆ. ಕದಳೀಕ್ರಾಂತಿ ಅಲ್ಲಿ ಅದೆಷ್ಟು ವ್ಯಾಪಕವಾಗಿದೆ ಎಂದರೆ ಊರೂರಲ್ಲೂ ರೈತರದ್ದೇ ಕೃಷಿ ಉತ್ಪಾದಕ ಕಂಪನಿಗಳು ಚಿಗುರಿಕೊಂಡಿವೆ. ಆಧುನಿಕ ತಂತ್ರಜ್ಞಾನ ಬೇರುಮಟ್ಟಕ್ಕೆ ಇಳಿದಿದೆ. ಬರವನ್ನೇ ಹಿಂಡಿ ಬಾಳೆಹಣ್ಣಿನ ರಸವನ್ನು ಬಸಿಯಲಾಗುತ್ತಿದೆ.

ಈಗಂತೂ ಇಂಟರ್‌ನೆಟ್ ಮತ್ತು ಕಂಪ್ಯೂಟರ್‌ ತಂತ್ರಜ್ಞಾನಕ್ಕೆ (ಐಸಿಟಿ) ಹಾಗೂ ವಸ್ತುಗಳ ಅಂತರ್ಜಾಲಕ್ಕೆ (ಐಓಟಿ) ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ಕೂಡ ಸೇರಿದ್ದರಿಂದ ರೈತರಿಗೆ ಜ್ಞಾನಲೋಕದ ಮಹಾದ್ವಾರವೇ ತೆರೆದುಕೊಂಡಿದೆ. ಸ್ಮಾರ್ಟ್‌ಫೋನ್‌ ಹಿಡಿದು ಹೊಲಕ್ಕಿಳಿದು ಕ್ಯಾಮೆರಾದಲ್ಲಿ ಸಸ್ಯವನ್ನೂ ಕಳೆಯನ್ನೂ ಹೆಸರಿಸಬಹುದು. ರೋಗ ತಗುಲಿದ ಎಲೆಯ ಚಿತ್ರವನ್ನು ರವಾನಿಸಿದರೆ ಶಿಲೀಂಧ್ರವೊ, ತಿಗಣೆಯೊ ಅಥವಾ ಪೋಷಕಾಂಶ ಕೊರತೆಯೊ, ಅತಿ ನೀರಾವರಿಯೊ, ಬಾಯಾರಿಕೆಯೊ ಎಲ್ಲ ಗೊತ್ತಾಗುತ್ತದೆ. ಸರಿಪಡಿಸುವ ಮಾರ್ಗೋಪಾಯಗಳ ಸಲಹೆಯೂ ಸಿಗುತ್ತದೆ. ನಿಮ್ಮ ಭಾಷೆಯಲ್ಲೇ ಹೇಳುತ್ತದೆ. ವಿಶೇಷ ಏನೆಂದರೆ ಇವೆಲ್ಲ ಸಣ್ಣ ರೈತರಿಗೆಂದೇ ರೂಪುಗೊಂಡಿವೆ. (ದೊಡ್ಡ ಕೃಷಿ ಕಂಪನಿಗಳಿಗೆ ಆ್ಯಪ್‌ಗಳ ಅಗತ್ಯವಿಲ್ಲ. ಅಲ್ಲಿ ವಿಜ್ಞಾನಿಗಳೇ ಇರುತ್ತಾರೆ). ಚಿಕ್ಕ ಹಿಡುವಳಿದಾರರಿಗೆಂದೇ ‘ಪ್ಲಾಂಟಿಕ್ಸ್‌’ ಹೆಸರಿನ ಆ್ಯಪ್‌ ಒಂದಿದೆ. ಜರ್ಮನ್‌ ಮೂಲದ ನವೋದ್ಯಮಿಗಳು ತಯಾರಿಸಿದ ಈ ಆ್ಯಪ್‌ನ 130 ಲಕ್ಷ ಬಳಕೆದಾರರಲ್ಲಿ ಭಾರತೀಯ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಫ್ಕೊ ಕಂಪನಿಯ ‘ಕಿಸಾನ್‌’ ಆ್ಯಪ್‌ಗೆ 30 ಲಕ್ಷ ಚಂದಾದಾರರಿದ್ದು, ಅದು 15 ಭಾರತೀಯ ಭಾಷೆಗಳಲ್ಲಿ ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಿದೆ. ಹವಾಮಾನ ಮತ್ತು ಮಾರುಕಟ್ಟೆಯ ವಿದ್ಯಮಾನಗಳನ್ನೂ ತಿಳಿಸುತ್ತದೆ. ಅಂಥ ಹೊಸ ಹೊಸ ಆ್ಯಪ್‌ಗಳು ರೈತರಿಗೆ ಜ್ಞಾನದ ದೀವಿಗೆಯಾಗುತ್ತಲೇ ಸಮುದಾಯಗಳನ್ನು ಬೆಸೆಯುತ್ತಿವೆ; ಹೊಸ ವಿಚಾರಗಳ ವಿನಿಮಯಕ್ಕೆ ಅನುವು ಮಾಡಿಕೊಡುತ್ತಿವೆ. ಕುರಿ ಮೇಯಿಸುವವರ ಕೈಗೂ ಐಸಿಟಿ, ಐಓಟಿಗಳು ಬಂದಿವೆ.

ತಳಸಮುದಾಯದ ಶ್ರಮಿಕರನ್ನು ತಂತ್ರಜ್ಞಾನದ ಮೂಲಕ ಒಗ್ಗೂಡಿಸುವ ಬಗ್ಗೆ ಮಾಧವ ಗಾಡ್ಗೀಳರ ನೆರವಿನಲ್ಲಿ ಸಂಶೋಧನೆ ಮಾಡಿದ ಪಾವಗಡದ ಯುವರೈತ ಪಿ.ಆರ್‌. ಶೇಷಗಿರಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಡಾಕ್ಟರೇಟ್‌ ಪಡೆದು ತಮ್ಮ ಹೊಲಕ್ಕೇ ಹಿಂದಿರುಗಿದರು. ಬರಪೀಡಿತ ರೈತರ ನೀರಿನ ಸಮಸ್ಯೆಯ ಬಿಸಿ ಅವರಿಗೆ ತಟ್ಟಿತ್ತು. ಬೆಂಗಳೂರಿನ ಇಲೆಕ್ಟ್ರಾನಿಕ್‌ ಸಿಟಿಯ ತಮ್ಮ ಪರಿಚಿತರ ಜೊತೆ ಸೇರಿ ರೈತರ ಪಂಪ್‌ಸೆಟ್‌ಗಳಿಗೆ ಹೊಸ ಸ್ಟಾರ್ಟರನ್ನು ರೂಪಿಸಿದರು. ಹೆಸರು ‘ಕೃಷಿಹೃದಯ’. ಅದರ ನರಮಂಡಲವನ್ನು ಮೊಬೈಲ್‌ಗೆ ಜೋಡಿಸಿದರು. ಮನೆಯಲ್ಲೇ ಕೂತು ಬಟನ್‌ ಒತ್ತಿ ಪಂಪ್‌ಸೆಟ್‌ ಚಾಲೂ ಮಾಡುವುದೇನೂ ಹೊಸದಲ್ಲ. ಆದರೆ ಇವರು ರೂಪಿಸಿದ ಆ್ಯಪ್‌ ಹಾಕಿಕೊಂಡರೆ ನೀರು ಮೇಲಕ್ಕೆ ಬರುವ ಪ್ರಮಾಣ ಪ್ರತಿನಿಮಿಷಕ್ಕೂ ಗೊತ್ತಾಗುತ್ತದೆ. ಬಾವಿಯಲ್ಲಿ ನೀರು ಕಡಿಮೆಯಾದರೆ ಪಂಪನ್ನು ಸ್ಥಗಿತಗೊಳಿಸಿ, ನಿಗದಿತ ವೇಳೆಯ ನಂತರ ತಾನೇ ಚಾಲನೆ ಕೊಡುತ್ತದೆ. ಯಾವ ಟವರ್‌ನಿಂದಲಾದರೂ ಸಿಗ್ನಲ್‌ ಹೀರುವ ಚುರುಕು ಸಿಮ್‌ ಕಾರ್ಡನ್ನು ಜೋಡಿಸಲಾಗಿದೆ. ಹನಿ ನೀರಾವರಿಯ ಕೊಳವೆಗೆ ಇವರ ಸ್ಮಾರ್ಟ್‌ ವಾಲ್ವ್‌ ಕೂಡ ತಯಾರಾಗಿದೆ. ನೆಲದಡಿಯ ಎರಡು ಮೀಟರ್‌ ಆಳದವರೆಗಿನ ತೇವಾಂಶವನ್ನು ಅಳೆದು ನೋಡುತ್ತ ಹೊಲದ ಯಾವ ಭಾಗಕ್ಕೆ ಎಷ್ಟು ನೀರು ಬೇಕು, ಯಾವ ಬೆಳೆ ಎಲ್ಲಿ ಸೂಕ್ತ ಎಂಬುದನ್ನೂ ನಿರ್ಧರಿಸುತ್ತದೆ.

ಬೇಟೆಗಾರನ ಬಲೆಯಲ್ಲಿ ಸಿಕ್ಕ ಪಕ್ಷಿಗಳೆಲ್ಲ ಹೇಗೆ ಒಟ್ಟಿಗೆ ಬಲೆಯ ಸಮೇತ ಮೇಲಕ್ಕೇರಿ ಪಾರಾದವೆಂಬ ಪಂಚತಂತ್ರದ ಕತೆ ನಮಗೆಲ್ಲ ಗೊತ್ತೇ ಇದೆ. ಸಂಕಷ್ಟಗಳ ಬಲೆಯಲ್ಲಿ ಸಿಲುಕಿರುವ ರೈತರನ್ನು ಒಗ್ಗೂಡಿಸಲು, ಮೇಲಕ್ಕೆತ್ತಲು ಐಸಿಟಿ, ಐಓಟಿಗಳು ಬಂದಿವೆ. ಸ್ಮಾರ್ಟ್‌ಫೋನನ್ನು ಹಿಡಿದ ಕೃಷಿಕರೂ ಸ್ಮಾರ್ಟ್‌ ಆಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT