ಚರಿತ್ರೆಯಲ್ಲಿ ತೀರ ಅಪರೂಪಕ್ಕೆ ಹೀಗಾಗುತ್ತದೆ: ನೀರಿನ ವಿಷಯದಲ್ಲಿ ಕರ್ನಾಟಕ ಮತ್ತು ಭಾರತ ಒಂದೇ ಬಗೆಯ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ನಮಗೆ ಇಲ್ಲಿ ಕಾವೇರಿ ಇದ್ದ ಹಾಗೆ, ಭಾರತಕ್ಕೆ ಅಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಸಿಂಧೂ ನದಿ ಇದೆ. ನಮ್ಮದೇ ನದಿಯಾದರೂ ನಮ್ಮ ಇಚ್ಛೆಗೆ ತಕ್ಕಂತೆ ಅದನ್ನು ಬಳಸುವ ಹಾಗಿಲ್ಲ.

ಇಲ್ಲಿ ಕಾವೇರಿ ನೀರಿನ ಬಗ್ಗೆ ತಮಿಳುನಾಡು ನಮಗೆ ನಿರ್ಬಂಧ ಹಾಕುವ ಹಾಗೆ ಪಾಕಿಸ್ತಾನ ಅಲ್ಲಿ ಭಾರತಕ್ಕೆ ನಿರ್ಬಂಧ ಹಾಕಿದೆ. ಹಾಗೆಂದು ನಾವು ಗೊಣಗುವಂತಿಲ್ಲ, ಏಕೆಂದರೆ ಜಗತ್ತಿನ ಎಲ್ಲ ಕಡೆ ಇದೇ ನಿಯಮ ಇದೆ. ನದಿಯ ಉಗಮಸ್ಥಾನದ ಬಳಕೆದಾರರು ಕೆಳ ಹರಿವಿನ ಬಳಕೆದಾರರಿಗೆ ತೊಂದರೆ ಮಾಡಬಾರದು. ಕೆಳಹರಿವಿನ ಜನರು ನೀರನ್ನು ಹೇಗೆ ಬೇಕಾದರೂ ಬಳಸಬಹುದು; ಆದರೆ ಉಗಮಸ್ಥಾನದವರ ಸ್ವಾತಂತ್ರ್ಯಕ್ಕೆ ನಿರ್ಬಂಧಗಳಿವೆ.

ಕಾಶ್ಮೀರದ ಸಿಂಧೂ (ಇಂಡಸ್) ಕಣಿವೆಗೆ ಬನ್ನಿ. ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಹೋಗುವ ಆರು ಉಪನದಿಗಳಲ್ಲಿ ರಾವಿ, ಬಿಯಾಸ್ ಮತ್ತು ಸತ್ಲೆಜ್ ಈ ಮೂರು ಉಪನದಿಗಳಷ್ಟೆ ನಮ್ಮ ಬಳಕೆಗಿವೆ. ಇನ್ನಿತರ ಮೂರು-ಸಿಂಧೂ, ಝೆಲಮ್ ಮತ್ತು ಚಿನಾಬ್ ನದಿಗಳಿಂದ ಹೆಚ್ಚೆಂದರೆ ಶೇ 20ರಷ್ಟು ನೀರನ್ನು ಮಾತ್ರ ಬಳಸಿಕೊಳ್ಳಬಹುದು. ಈ ಆರೂ ಉಪನದಿಗಳು ಮುಂದೆ ಪಾಕಿಸ್ತಾನದಲ್ಲಿ ಒಂದಾಗಿ ಸಿಂಧೂ ನದಿಯೇ ಆಗುತ್ತವೆ.

ಪಾಕಿಸ್ತಾನಕ್ಕೆ ಇರುವುದು ಅದೊಂದೇ ನದಿ. 1960ರ ಈ ಒಪ್ಪಂದಕ್ಕೆ ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಬ್ರಿಟನ್, ಅಮೆರಿಕ ಮತ್ತು ಕೆನಡಾ ದೇಶಗಳ ಸಾಕ್ಷಿ ಸಹಿ ಇದೆ. ಭಾರತ ಈಗ ಅದನ್ನು ಧಿಕ್ಕರಿಸಿದರೆ, ಅಂದರೆ ಸಿಂಧೂ ಉಪನದಿಗಳ ನೀರಿಗೆ ತಡೆಯೊಡ್ಡಿದರೆ ಪಾಕಿಸ್ತಾನದ ಕನಿಷ್ಠ ಎರಡು ಕೋಟಿ ಜನರು ಸಿಡಿದೆದ್ದು ಪಾಕಿಸ್ತಾನ ಯುದ್ಧ ಸಾರುತ್ತದೆ. ಮೇಲಾಗಿ ಆ ಆರೂ ಸಾಕ್ಷಿರಾಷ್ಟ್ರಗಳು ಭಾರತಕ್ಕೆ ದಿಗ್ಬಂಧನ ಹಾಕಬಹುದು.

ಭಾರತ ಸಿಂಧೂ ಕಣಿವೆಯ ಗೊಡವೆಗೆ ಹೋಗಲೇ ಇಲ್ಲ. ಚಿಕ್ಕಪುಟ್ಟ ಯೋಜನೆಗಳಿಂದಾಗಿ ವಿವಾದಗಳೆದ್ದರೂ ಅಲ್ಲಲ್ಲೇ ಬಗೆಹರಿದಿವೆ. ಪಾಕಿಸ್ತಾನದೊಂದಿಗಿನ ಕಳೆದ ಮೂರು ಯುದ್ಧಗಳ ಸಮಯದಲ್ಲೂ ಸಿಂಧೂ- ಝೆಲಮ್- ಚಿನಾಬ್‌ನ ನೀರನ್ನು ಅಡ್ಡ ತಿರುಗಿಸುವ ಬಗ್ಗೆ ಮಾತಾಡಲಿಲ್ಲ. ಅಡ್ಡ ತಿರುಗಿಸುವುದು ಸುಲಭವೂ ಅಲ್ಲ; ಲಕ್ಷ ಕೋಟಿ ಅಲ್ಲ, ಕೋಟಿ ಕೋಟಿ ಹಣ ಸುರಿದರೂ ಒಂದೆರಡು ದಶಕಗಳಲ್ಲಿ ಆಗುವ ಕೆಲಸವೂ ಅದಲ್ಲ. ಆದರೆ ಈಗ ಅದರ ಪ್ರಸ್ತಾಪ ಮತ್ತೆ ಮತ್ತೆ ಆಗುತ್ತಿದೆ.

ಸಿಂಧೂ ಎಂದಾಕ್ಷಣ ಪಾಕಿಸ್ತಾನ ಮುಟ್ಟಿದರೆ ಮುನಿದೇಳುತ್ತದೆ. ಕಳೆದ ವಾರ ‘ಇಂಡಿಯಾ ಟುಡೇ’ ಚಾನೆಲ್‌ನ ರಾಹುಲ್ ನೀಲಕಮಲ್ ಹೇಗೊ ಷಿಕ್ಯಾಗೊದಲ್ಲಿರುವ ಮಾಜಿ ಪಾಕ್ ಅಧ್ಯಕ್ಷ ಜನರಲ್ ಮುಷರ್ರಫ್‌ರನ್ನು ಮಾತಿಗೆಳೆದರು.

ಪಾಕಿಸ್ತಾನವನ್ನು ಭಾರತ ಶಿಕ್ಷಿಸಬಹುದಾದ ವಿವಿಧ ವಿಧಾನಗಳ ಬಗೆಗಿನ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರ ಕೊಟ್ಟ ಮುಷರ್ರಫ್, ಸಿಂಧೂ ಕಣಿವೆಯ ನೀರನ್ನು ನಿಲ್ಲಿಸುವ ಮಾತು ಬಂದಾಗ ಮಾತ್ರ ಭುಗಿಲೆದ್ದರು. ‘ಏನು ಏನಂತೀರಿ ರಾಹುಲ್! ಪಾಕಿಸ್ತಾನದಂಥ ಅಣ್ವಸ್ತ್ರ ಸನ್ನದ್ಧ ದೇಶಕ್ಕೆ ನೀರು ಸಿಗದಂತೆ ಮಾಡುತ್ತೀರಾ? ಅದು ತೀರಾ ತೀರಾ ಗಂಭೀರ ವಿಷಯ. ಅದರ ಸೊಲ್ಲೆತ್ತಬೇಡಿ’ ಎಂದು ಗದರಿದರು.

ಆದರೆ ನಮ್ಮಲ್ಲಿಯೇ ಸಡಿಲ ನಾಲಗೆಯ ಕೆಲವು ತೀವ್ರವಾದಿಗಳು ಮಾಧ್ಯಮಗಳ ಎದುರು ಅಣ್ವಸ್ತ್ರ ಪ್ರಯೋಗದ ಬಗ್ಗೆ ಮನ ಬಂದಂತೆ ಮಾತಾಡುತ್ತಾರೆ. ಚಾನೆಲ್‌ಗಳೂ ಅಹೋರಾತ್ರಿ ಯುದ್ಧದ ಭಜನೆ ಮಾಡುತ್ತಿವೆ. ಅಣ್ವಸ್ತ್ರವೆಂದರೆ ಅದೇನೊ ಆಟವೆಂಬಂತೆ, ಹಬ್ಬದ ಪಟಾಕಿಯೆಂಬಂತೆ ಅದನ್ನೆತ್ತಿ ಪಾಕಿಸ್ತಾನದ, ಉಗ್ರರ ಶಾಶ್ವತ ದಮನದ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿವೆ.

‘ನಮ್ಮ ಹತ್ತು ಕೋಟಿ ಜನರು ಪಾಕಿಸ್ತಾನದ ಅಣುಬಾಂಬ್‌ಗೆ ತಲೆಯೊಡ್ಡಿದರೆ ನಾವು ಇಡೀ ಪಾಕಿಸ್ತಾನವನ್ನು ದೂಳೀಪಟ ಮಾಡಬಹುದು’ ಎಂಬರ್ಥದ ಸುಬ್ರಹ್ಮಣ್ಯ ಸ್ವಾಮಿಯ ಹೇಳಿಕೆ ಲಂಗುಲಗಾಮಿಲ್ಲದೆ ಹರಿದಾಡುತ್ತದೆ.

ಭಾರತ- ಪಾಕಿಸ್ತಾನದ ನಡುವೆ ಪರಮಾಣು ಯುದ್ಧ ಸಂಭವಿಸೀತೆ? ಭಾರತದ ಮಿಲಿಟರಿಯಂತೂ ತಾನು ಮೊದಲು ಬಟನ್ ಒತ್ತುವುದಿಲ್ಲವೆಂದು ಎಂದೋ ಘೋಷಿಸಿದೆ.ಆದರೆ ನಾವು ಮಾಮೂಲು ದಾಳಿಯನ್ನು ನಡೆಸಿ ಪಾಕಿಸ್ತಾನದ ಗಡಿಯೊಳ್ಳಕ್ಕೆ ನುಗ್ಗುತ್ತ ಹೋದರೆ ಪಾಕಿಸ್ತಾನ ತನ್ನ ಮೊದಲ ಅಣ್ವಸ್ತ್ರ ಪ್ರಯೋಗ ಮಾಡುತ್ತದೆಂದು ಅಲ್ಲಿನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ. ಅಂಥ ಮೊದಲ ಅಸ್ತ್ರವಾಗಿ ‘ನಾಸ್ರ್’ ಕ್ಷಿಪಣಿ ಅಲ್ಲಿಂದ ಬಂದೀತು. ಅದು ಹೆಚ್ಚೆಂದರೆ 60 ಕಿಲೊಮೀಟರ್ ದೂರ ಬರುತ್ತದೆ.

ತನ್ನದೇ ಭೂಪ್ರದೇಶ ನಾಶವಾದರೂ ಚಿಂತೆಯಿಲ್ಲ, ಅಲ್ಲಿಗೆ ಬಂದ ಭಾರತೀಯ ಸೈನ್ಯವನ್ನು ಹೊಸಕಿ ಹಾಕಲು ಅದು ಯತ್ನಿಸಬಹುದು. ಅಥವಾ ಒಂದೊಮ್ಮೆ ಪಾಕಿಸ್ತಾನ ಆಗಲೂ ಸಂಯಮವನ್ನು ಪ್ರದರ್ಶಿಸಿದರೆ, ಅಂದರೆ ಅಣ್ವಸ್ತ್ರ ಪ್ರಯೋಗ ಮಾಡದೇ ಇದ್ದರೂ, ಅಲ್ಲಿನ ಉಗ್ರರು ಕೈಕಟ್ಟಿ ಕೂರಲಿಕ್ಕಿಲ್ಲ. ವರದಿಗಳ ಪ್ರಕಾರ, ಈ ಹಿಂದೆ ನಾಲ್ಕು ಬಾರಿ ಉಗ್ರರು ಪಾಕಿಸ್ತಾನದ್ದೇ ಅಣ್ವಸ್ತ್ರ ತಯಾರಿಕೆಯ ನೆಲೆಗಳ ಮೇಲೆ ದಾಳಿ ಮಾಡಿದ್ದಾರೆ.

ಬಾಂಬ್ ತಯಾರಿಕೆಗೆ ಬೇಕಿದ್ದ ದ್ರವ್ಯಗಳನ್ನು ಅವರು ಕದ್ದಿರಬಹುದು, ಬಾಂಬನ್ನೇ ಕದ್ದಿರಬಹುದು ಅಥವಾ ಬಾಂಬನ್ನು ಹೂಡಿಟ್ಟ ಕ್ಷಿಪಣಿಯನ್ನೇ ಕದ್ದು ಸಾಗಿಸಿರಬಹುದು. ನಮ್ಮಲ್ಲಿರುವಷ್ಟು ಅಚ್ಚುಕಟ್ಟಾದ ಯುದ್ಧವ್ಯವಸ್ಥೆ ಪಾಕಿಸ್ತಾನದಲ್ಲಿಲ್ಲ. ಅಲ್ಲಿ ಸರ್ಕಾರ ಮತ್ತು ಮಿಲಿಟರಿ ನಡುವೆ ಹೊಂದಾಣಿಕೆ ಕಮ್ಮಿ. ಉಗ್ರರು ಎಲ್ಲೆಲ್ಲೋ ತೂರಿಕೊಂಡಿದ್ದಾರೆ.

ಹೀಗಾಗಿ ಎರಡು ದೇಶಗಳ ನಡುವೆ ಚಿಕ್ಕದೊಂದು ಸಂಘರ್ಷವೂ (ಅಥವಾ ಮುಷರ್ರಫ್ ಹೇಳಿದ ಹಾಗೆ, ಸಿಂಧೂ ನದಿಗೆ ದಿಗ್ಬಂಧನ ಹಾಕುವ ಸಿದ್ಧತೆಯೂ) ಅಣ್ವಸ್ತ್ರ ಪ್ರಯೋಗಕ್ಕೆ ಕಾರಣವಾಗಬಹುದು. ಆಗೇನಾದರೂ ಭಾರತ ಪ್ರತೀಕಾರ ಭಾವದಿಂದ ತನ್ನ ಅಣ್ವಸ್ತ್ರವನ್ನು ಚಿಮ್ಮಿಸಿದ್ದೇ ಆದರೆ ಪಾಕಿಸ್ತಾನದಿಂದ ಮಧ್ಯದೂರದ ಕ್ಷಿಪಣಿಗಳು ನಮ್ಮತ್ತ ತೂರಿ ಬರಬಹುದು. ಅದಕ್ಕೆ ಪ್ರತಿಯಾಗಿ ನಾವೂ ಠೇಂಕರಿಸಲೇಬೇಕು.

ಅಮೆರಿಕದ ‘ಬುಲ್ಲೆಟಿನ್ ಆಫ್ ಅಟಾಮಿಕ್ ಸೈಂಟಿಸ್ಟ್ಸ್’ ಪತ್ರಿಕೆಯ 2015 ವರದಿಯ ಪ್ರಕಾರ ಪಾಕಿಸ್ತಾನದ ಬಳಿ ಎಫ್-ಸಿಕ್ಸ್‌ಟೀನ್ ಮತ್ತು ಮಿರಾಜ್ ವಿಮಾನಗಳಲ್ಲಿ 36 ಅಣುಬಾಂಬ್‌ಗಳಿವೆ; ಘಝ್ನವಿ, ಶಹೀನ್, ಘಾವ್ರಿ ಮತ್ತು ನಾಸ್ರ್ ಹೆಸರಿನ ಕ್ಷಿಪಣಿಗಳಲ್ಲಿ 86 ಬಾಂಬ್‌ಗಳಿವೆ. ದೂರಗಾಮಿ ಬಾಬರ್ ಕ್ಷಿಪಣಿಯ ಮೇಲೆ 8 ಬಾಂಬ್‌ಗಳು ಕೂತಿವೆ.

ಬಾಬರ್ ಕ್ಷಿಪಣಿ 1300 ಕಿ.ಮೀ ದೂರಕ್ಕೂ ಸಾಗಿ ಬರಬಹುದಾಗಿದ್ದು ಲುಧಿಯಾನಾ, ದಿಲ್ಲಿ, ಜಯಪುರ, ಭೋಪಾಲ, ಲಖ್ನೋ ಮತ್ತು ಅಹ್ಮದಾಬಾದ್‌ವರೆಗೆ ಬರಬಹುದು. ಕ್ಷಿಪಣಿಗಳಿಗಿಂತ ಬಾಂಬರ್ ವಿಮಾನಗಳು ಹೆಚ್ಚು ಅಪಾಯಕಾರಿ. ಸಮುದ್ರ ಪಾತಳಿಯಿಂದ ಕೇವಲ ಮೂರಡಿ ಎತ್ತರದಲ್ಲಿ ಹಾರುತ್ತ ರಡಾರ್‌ಗಳ ಕಣ್ತಪ್ಪಿಸಿ ಪಾಕಿಸ್ತಾನದ ಎಫ್-16 ಮುಂಬೈ, ಕಾರವಾರ, ಕೈಗಾ, ಸೀಬರ್ಡ್‌ವರೆಗೂ ಬರಬಹುದು.

ಭಾರತದ ಅಣ್ವಸ್ತ್ರ ಶೇಖರಣೆ ಪಾಕಿಸ್ತಾನದಕ್ಕಿಂತ ಹೆಚ್ಚೇನಿಲ್ಲ. ಆದರೆ ಅವನ್ನು ಚಿಮ್ಮಿಸುವ ಸಾಧನಗಳು ಹೆಚ್ಚು ಪ್ರಬಲವಾಗಿವೆ. ಲಭ್ಯ ಮಾಹಿತಿಗಳ ಪ್ರಕಾರ ನಮ್ಮ ವಜ್ರ (ಮಿರಾಜ್) ಮತ್ತು ಶಮ್‌ಶೇರ್ (ಸುಧಾರಿತ ಜಾಗ್ವಾರ್) ವಿಮಾನಗಳಲ್ಲಿ 48 ಅಣುಬಾಂಬ್‌ಗಳಿವೆ; ಪೃಥ್ವಿ ಕ್ಷಿಪಣಿ ಮತ್ತು ಬಹುದೂರಗಾಮಿ ಅಗ್ನಿ ಕ್ಷಿಪಣಿಗಳಲ್ಲಿ 56 ಬಾಂಬ್‌ಗಳಿವೆ; ಹಡಗಿನ ಮೇಲಿನ ಧನುಷ್ ಮತ್ತು ಜಲಾಂತರ್ಗಾಮಿಯ ಸಾಗರಿಕಾ ಕ್ಷಿಪಣಿಗಳಲ್ಲಿ 14 ಅಣುಬಾಂಬ್‌ಗಳಿವೆ.

ಭಾರತದ ಒಟ್ಟಾರೆ ಮಿಲಿಟರಿ ತಾಕತ್ತಿಗೆ ಹೋಲಿಸಿದರೆ ಪಾಕಿಸ್ತಾನದ್ದು ತೀರ ದುರ್ಬಲವಾಗಿದ್ದು, ನಾವು ಸಾದಾ ದಾಳಿಯ ಮೂಲಕ ಶೆಲ್‌ಗಳ ಮಳೆಗರೆದರೆ ಅವರು ಸಲೀಸಾಗಿ ಅಣ್ವಸ್ತ್ರವನ್ನೇ ಚಿಮ್ಮಿಸುವ ಸಾಧ್ಯತೆ ಇರುತ್ತದೆ. ಅವರ ನೆಲದಲ್ಲೇ ಅದು ಸ್ಫೋಟಗೊಂಡರೆ ಭಾರತ ಆಗಲೂ ಅಣ್ವಸ್ತ್ರವನ್ನು ಬಳಸದೇ ಇರಬಹುದು. ಆದರೆ ನಮ್ಮ ಆಯಕಟ್ಟಿನ ಸ್ಥಳಗಳ ಮೇಲೆ ದಾಳಿ ನಡೆದರೆ? ಪ್ರತಿದಾಳಿ ಅನಿವಾರ್ಯವಾಗುತ್ತದೆ.

ಅಕಸ್ಮಾತ್ ಈ ಚಕಮಕಿಯಲ್ಲಿ ಹಿರೊಶಿಮಾ ಬಾಂಬ್ ಗಾತ್ರದ ಪುಟಾಣಿ ನೂರು ಅಣುಬಾಂಬ್‌ಗಳು ಸ್ಫೋಟಿಸಿದರೂ ಸಾಕು, ಇಡೀ ಪ್ರಪಂಚ ತತ್ತರಿಸುತ್ತದೆ. ಈ ಉಪಖಂಡದ ಸುಮಾರು 210 ಲಕ್ಷ ಜನರು ನೇರವಾಗಿ ಸಾಯುತ್ತಾರೆ. ಕರೀ ಹೊಗೆ ಆಕಾಶಕ್ಕೇರಿ ಪೂರ್ವ-ಪಶ್ಚಿಮಕ್ಕೆ ಪಸರಿಸುತ್ತ ಮೂರು ತಿಂಗಳುಗಳಲ್ಲಿ ಭೂಮಿಗೆ ಕಪ್ಪು ಚಾದರ ಆವರಿಸುತ್ತದೆ. ಮಳೆಮಾರುತಗಳೆಲ್ಲ ನಾಪತ್ತೆಯಾಗಿ, ಕೃಷಿ ಚಟುವಟಿಕೆ ಬಹುಪಾಲು ಸ್ಥಗಿತವಾಗುತ್ತದೆ.

ಜಗತ್ತಿನ ಇನ್ನೂರು ಕೋಟಿ ಜನರು ಆಹಾರಕ್ಕಾಗಿ ಪರದಾಡುತ್ತ ಅಲ್ಲಲ್ಲಿ ಕಿರುಯುದ್ಧಗಳಿಗೆ ಕಾರಣರಾಗುತ್ತಾರೆ. ಭೂಮಿಗೆ ರಕ್ಷಾಕವಚ ಎನಿಸಿರುವ ಓಝೋನ್ ವಲಯ ಚಿಂದಿಯಾಗುತ್ತದೆ. ಕೊಲಂಬಿಯಾದ nucleardarkness.org ಎಂಬ ಜಾಲತಾಣದ ಚಲಿಸುವ ನಕ್ಷೆಯಲ್ಲಿ ಈ ದುರಂತದ ಚಿತ್ರಣವಿದೆ.

ಅಣುದಾಳಿಗೆ ಸಿಕ್ಕ ಭಾರತ- ಪಾಕಿಸ್ತಾನದ ಎರಡು ಕೋಟಿ ಜನರು ದಿಢೀರಾಗಿ ಸಾಯುವುದಿಲ್ಲ. ಅಣುಬಾಂಬ್ ಸ್ಫೋಟಿಸಿದಾಗ ಹಠಾತ್ ಮಿಂಚುವ ಪ್ರಭೆಯಿಂದ ಶರೀರದ ಕೆಲಭಾಗ ಆ ಕ್ಷಣವೇ ಪೂರ್ತಿ ಬೆಂದು ಹೋಗುತ್ತದೆ. ಏನಾಯಿತೆಂದು ಮುಖವನ್ನು ಒರೆಸಲು ಹೋದರೆ ಇಡೀ ಚರ್ಮ ಕೈಗೆ ಬರುತ್ತದೆ. ದಿಗ್ಭ್ರಮೆಗೊಂಡು ಅತ್ತಿತ್ತ ನೋಡುವಷ್ಟರಲ್ಲಿ ಎರಡನೇ ಆಘಾತದ ಅಲೆ ಅಪ್ಪಳಿಸುತ್ತದೆ. ಅದು ಸರ್ವನಾಶದ ಅಲೆ! ನಿಂತಿದ್ದವರು ದೂರ ಚಿಮ್ಮಿ ಹೋಗುತ್ತಾರೆ.

ಬಸ್‌ನಲ್ಲಿದ್ದರೆ ಇಡೀ ಬಸ್ ಎಗರಿ ಬೀಳುತ್ತದೆ. ನಗರದ ಎಲ್ಲ ಕಟ್ಟಡಗಳೂ ಕುಸಿಯುತ್ತವೆ. ಎಲ್ಲ ಪೆಟ್ರೋಲ್ ಬಂಕ್‌ಗಳೂ ಸಿಡಿಯುತ್ತವೆ. ಎಲ್ಲ ವಿದ್ಯುತ್ ಕಂಬಗಳೂ ಧರಾಶಾಹಿ ಆಗುತ್ತವೆ. ಕುಸಿತ, ಬೆಂಕಿ, ವಿದ್ಯುತ್ ಆಘಾತ ಈ ಮೂರರಿಂದಲೂ ತಪ್ಪಿಸಿಕೊಂಡ ಅದೃಷ್ಟಶಾಲಿ ಯಾವುದೋ ಉದ್ಯಾನದಲ್ಲಿ ಪಕ್ಷಿವೀಕ್ಷಣೆ ಮಾಡುತ್ತಿದ್ದರೆ ಈಗ ಮೂರನೆಯ ಅಲೆ ಅಪ್ಪಳಿಸುತ್ತದೆ. ಅದು ವಿಕಿರಣದ ಅಲೆ. ಗ್ಯಾಮಾ ಕಿರಣಗಳು ದೇಹದ ಒಳಕ್ಕೆ ಹೊಕ್ಕು ಜೀವಕೋಶಗಳನ್ನು ಧ್ವಂಸ ಮಾಡುತ್ತವೆ. ರಕ್ತ ಉಮ್ಮಳಿಸಿಬರುತ್ತದೆ.

ಗಾಯಾಳುಗಳಿಗೆ ತುರ್ತುಸೇವೆ ಒದಗಿಸಬೇಕಾದ ವೈದ್ಯತಂಡ ಬದುಕಿ ಉಳಿದಿದ್ದರೂ ಯಾವ ಸೇವೆಯನ್ನೂ ಒದಗಿಸಲಾರದು. ಪ್ರಥಮ ಶುಶ್ರೂಷೆ, ರಕ್ತಪೂರೈಕೆ ಹಾಗಿರಲಿ ಅಂಬುಲೆನ್ಸ್ ಸುಸ್ಥಿತಿಯಲ್ಲಿದ್ದರೂ ಚಲಿಸಲು ರಸ್ತೆಗಳೇ ಇರುವುದಿಲ್ಲ. ನೆಲಮಾಳಿಗೆಯಲ್ಲಿ ಬದುಕುಳಿದ ಕೆಲವರು ನೀರು, ಆಹಾರಕ್ಕಾಗಿ ಮೇಲಕ್ಕೆ ಬಂದರೆ ವಿಕಿರಣಕ್ಕೆ, ವಿಷಗಾಳಿಗೆ ಸಿಲುಕುತ್ತಾರೆ. ಬಾಂಬ್ ದಾಳಿಗೆ ಸಿಕ್ಕು ನೇರವಾಗಿ ಸತ್ತವರೇ ಅದೃಷ್ಟಶಾಲಿಗಳು ಎನ್ನುವಂತಾಗುತ್ತದೆ.

ನಗರಗಳ ಮೇಲೆ, ಅಥವಾ ತುಂಬಿದ ಅಣೆಕಟ್ಟುಗಳ ಮೇಲೆ ಬೀಳುವ ಬದಲು ಅಣುಬಾಂಬ್‌ಗಳು ಗುರಿ ತಪ್ಪಿ ಎಲ್ಲೋ ಬಟಾಬಯಲಿನಲ್ಲೊ ಕಾಡುಮೇಡಿನಲ್ಲೊ ಬಿದ್ದರೆ? ಸಾವುನೋವಿನ ಸಂಖ್ಯೆ ಕಡಿಮೆ ಇರುತ್ತದೆ ನಿಜ. ಆದರೆ ಯಾರೂ ಅತ್ತ ತುರ್ತು ನೆರವಿಗೆ ಹೆಲಿಕಾಪ್ಟರ್‌ಗಳಲ್ಲೂ ಹೋಗದ ಹಾಗೆ ವಿಕಿರಣ ಮತ್ತು ದಟ್ಟ ಹೊಗೆ ಕವಿದಿರುತ್ತದೆ.

ರಸ್ತೆ, ಸೇತುವೆ, ವಿದ್ಯುತ್ ಕಂಬಗಳ ರಿಪೇರಿಯೂ ಸಾಧ್ಯವಾಗುವುದಿಲ್ಲ. ವರ್ಷಗಟ್ಟಲೆ ಅತ್ತ ಯಾರೂ (ಲೂಟಿಕೋರರೂ) ಕಾಲಿಡದಂತೆ ದಿಗ್ಬಂಧನ ಹಾಕಬೇಕಾಗುತ್ತದೆ.ಭೂಮಿಯ ತಳದಲ್ಲಿದ್ದ ತೈಲದ್ರವ್ಯಗಳನ್ನು ಮೇಲೆತ್ತುತ್ತ ನಾವು ಕಳೆದ 150 ವರ್ಷಗಳಲ್ಲಿ ಎಲ್ಲೆಡೆ ಪೆಟ್ರೊಲ್ ಮತ್ತು ಪ್ಲಾಸ್ಟಿಕ್‌ಗಳ ದಹನಶೀಲ ನಾಗರಿಕತೆಯನ್ನು ಕಟ್ಟಿ ಬೆಳೆಸಿದ್ದೇವೆ.

ಬಾಂಬ್‌ಗಳು ಎಲ್ಲೇ ಬಿದ್ದರೂ ಅಗ್ನಿಜ್ವಾಲೆ ಮತ್ತು ದಟ್ಟ ಹೊಗೆಮಸಿಯಿಂದಾಗಿ ಸೂರ್ಯನೇ ಮರೆಯಾಗುತ್ತಾನೆ. ಬೆಂಕಿ ಇದ್ದಲ್ಲಿ ಸೂರ್ಯನಿಗೇನು ಕೆಲಸ? ‘ಅಣು ಚಳಿಗಾಲ’ ಜಗತ್ತಿಗೆಲ್ಲ ಆವರಿಸುತ್ತದೆ. ಅನಿರೀಕ್ಷಿತ ಕರೀಮಳೆ, ಕರಾಳಚಳಿ, ಹಿಮಪಾತದಿಂದಾಗಿ ಋತುಗಳೇ ಅಳಿಸಿ ಹೋಗುತ್ತವೆ. ನಾಗರಿಕ ವ್ಯವಸ್ಥೆಗಳೆಲ್ಲ ಅಸ್ತವ್ಯಸ್ತ ಆಗುತ್ತವೆ.

ಬದುಕುಳಿದವರಿಗೆ ಬದುಕೇ ಅಸಹನೀಯವಾಗುತ್ತದೆ. ಬಾರಾಮುಲ್ಲಾದ ಬಳಿಯ ‘ಉರಿ’ ಎಂದು ನಾವು ಕರೆಯುವ ಚಳಿಪ್ರದೇಶವನ್ನು ಅಲ್ಲಿನವರು ‘ಉಡಿ’ ಎನ್ನುತ್ತಾರೆ. ಉಡಿಯಲ್ಲಿದ್ದ ಕಿಡಿಯನ್ನು ಅಲ್ಲೇ ಆರಿಸಬೇಕೆ ಅಥವಾ ತಿದಿಯೂದಿ ಇಡೀ ಜಗತ್ತನ್ನು ಹಿಮಯುಗಕ್ಕೆ ತಳ್ಳಬೇಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.