ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ದಸರೆಗೂ ಶೃಂಗಾರಗೊಳ್ಳಲಿಲ್ಲ ಮೆಟ್ರೊ ‘ಜಂಬೂ ಸವಾರಿ’ಯ ಪ್ರತಿಕೃತಿ

Last Updated 15 ಅಕ್ಟೋಬರ್ 2018, 12:42 IST
ಅಕ್ಷರ ಗಾತ್ರ

ಬೆಂಗಳೂರು:ಎಲ್ಲೆಡೆ ದಸರಾ ಸಂಭ್ರಮ, ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆ, ಕುಮ್ಕಿ ಆನೆಗಳು ಅಂದು ಬೆಳಿಗ್ಗೆ ಶೃಂಗಾರಗೊಂಡು, ಅಂಬಾರಿ ಹೊತ್ತು, ಎಲ್ಲರ ಗಮನ ಸೆಳೆಯುತ್ತವೆ. ಇಂಥಹ ಅಪರೂಪದ ದೃಶ್ಯವನ್ನು ವರ್ಷವಿಡೀ ನೋಡುಗರಿಗೆ ನೀಡುತ್ತಿರುವ ಎಂಜಿ ರಸ್ತೆಯ ಮೆಟ್ರೊನಿಲ್ದಾಣದಲ್ಲಿ ಪ್ರತಿಷ್ಠಾಪಿಸಿರುವ ಅಂಬಾರಿ ಹೊತ್ತ ಆನೆ ಪ್ರತಿಕೃತಿ ಕಳೆಗುಂದಿದೆ. ಇದನ್ನು ಸ್ವಚ್ಛಗೊಳಿಸುವ ಅಥವಾ ಬಣ್ಣಗಳಿಂದ ಮತ್ತೆ ಅಲಂಕರಿಸುವ ಯಾವ ಕೆಲಸವೂ ನಡೆದಿಲ್ಲ.

ಪ್ರತಿಕೃತಿಯನ್ನು ಇರಿಸಿದ ಆರಂಭದ ದಿನಗಳಲ್ಲಿ ಎಲ್ಲರ ಗಮನ ಸೆಳೆದಿತ್ತು. ಅದರ ಮುಂದೆ ಹಾದುಹೋಗುವ ಪ್ರಯಾಣಿಕರು, ಜನರು ಜಂಬೂ ಸವಾರಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈಗಲೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರಾದರೂ ಹೆಚ್ಚು ಹೆಚ್ಚಾಗಿ ಆಕರ್ಷಿಸುತ್ತಿಲ್ಲ.

ಜಂಬೂಸವಾರಿಯ ಪ್ರತಿಕೃತಿ ಎಲ್ಲರಿಗೂ ಗೋಚರಿಸುವಂತೆ ಇರಿಸಲಾಗಿದ್ದು, ಇದು ರಸ್ತೆಗೆ ಹೊಂದಿಕೊಂಡಿದೆ. ವಾಹನಗಳ ಹೊಗೆ, ದೂಳಿನಿಂದ ಆನೆಯ ಮೇಲೆ ಬರೆದಿರುವ ಚಿತ್ತಾರವೂ ಮಸುಕಾಗಿದೆ. ಅಂಬಾರಿ, ಅಂಬಾರಿಯಲ್ಲಿರುವ ದೇವತೆ, ಸಿಂಗರಿಸಿರುವ ಹೂಗಳು, ಅಂಬಾರಿಯ ಕೆಳಗಿನ ನಾಮ್ದಾ(ದಪ್ಪನೆಯ ‌ಹಾಸಿಗೆ) ಮೇಲೆ ಹಾಕಿರುವ ‘ಜೂಲ’(ಬಟ್ಟೆ), ಕೊರಳಲ್ಲಿರುವ ಗಂಟೆ ಸರ, ಅಣೆಪಟ್ಟಿ ಸೇರಿದಂತೆ ಮಾವುತ, ಮಾವುತ ಧರಿಸಿರುವ ಬಟ್ಟೆ ಎಲ್ಲವೂ ಹೊಗೆ, ದೂಳಿನಿಂದ ಕಪ್ಪಿಟ್ಟಿವೆ. ಆನೆ ಮೈಬಣ್ಣ ಕಡು ಬೂದು ಇರುವುದರಿಂದ ಹೆಚ್ಚೇನು ಮಸುಕಾಗಿಲ್ಲ ಎನಿಸಿದರೂ, ಮೊದಲಿನ ಹೊಳಪಿಲ್ಲವಾಗಿದೆ. ಅಣೆಪಟ್ಟಿಯಂತು ಆರಂಭದಲ್ಲಿ ಚಿನ್ನದ ಹೊಳಪನ್ನು ಹೊಂದಿತ್ತು. ಈಗ ಅದು ಬಿಳಿ ಬಣ್ಣಕ್ಕೆ ತಿರುಗಿದೆ.

ಮಾಸುಕಾಗಿರುವ ಅಂಬಾರಿ, ಮಾವುತ
ಮಾಸುಕಾಗಿರುವ ಅಂಬಾರಿ, ಮಾವುತ

ಪ್ರವಾಸೋದ್ಯಮ ಇಲಾಖೆ ಮತ್ತು ಬೆಂಗಳೂರು ಮೆಟ್ರೊ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಪ್ರಸಿದ್ಧ ಮೈಸೂರು ದಸರಾ ಜಂಬೂ ಸಾವರಿ ಆನೆಯ ಫೈಬರ್‌ ಗಾಜಿನ ಮಾದರಿಯನ್ನು ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದ ಮುಂದೆ 2016ರ ನವೆಂಬರ್‌ನಲ್ಲಿ ಇಲ್ಲಿ ಇರಿಸಿವೆ.

ಪ್ರವಾಸೋದ್ಯಮ ಇಲಾಖೆಯಿಂದ ದಸರಾ ಅಚರಣೆಯ ಅಂಗವಾಗಿ ತಯಾರಿಸಲಾಗಿದ್ದ ಆನೆಯ ಗಾತ್ರದಷ್ಟೇ ದೊಡ್ಡದಾದ ಈ ಮಾದರಿಯನ್ನು ಒಂದೂ ವರೆತಿಂಗಳ ಕಾಲ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಜನರು ಇದನ್ನು ಇಷ್ಟಪಟ್ಟು ನೋಡಿ, ಅದರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದು ವಿಮಾನ ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಎಲ್ಲರಿಗೂ ಸಿಗುವಂತಾಗಲಿ ಎಂದು ಅಲ್ಲಿಂದ ಸ್ಥಳಾಂತರಿಸಿ ಮೆಟ್ರೊ ನಿಲ್ದಾಣದ ಮುಂದೆ ಶಾಶ್ವತವಾಗಿ ಇರಿಸಲಾಗಿತ್ತು.

ಸಿನಿಮಾ ಸೆಟ್‌ಗಳು, ಗಣೇಶ ಉತ್ಸವದ ಮಂಟಪ ನಿರ್ಮಾಣದಲ್ಲಿ ಹೆಸರುಗಳಿಸಿದ್ದ ಸಂಸ್ಥೆಯು ಈ ಮಾದರಿಯನ್ನು ನಿರ್ಮಿಸಿಕೊಟ್ಟಿತ್ತು. ₹8 ಲಕ್ಷ ವೆಚ್ಚದಲ್ಲಿ ಈ ದಸರಾ ಜಂಬೂ ಸವಾರಿ ಮಾದರಿಯನ್ನು ಸಿದ್ಧಪಡಿಸಲಾಗಿತ್ತು.

2016ರಲ್ಲಿ ಕಂಗೊಳಿಸುತ್ತಿದ್ದ ಅಂಬಾರಿ ಹೊತ್ತ ಆನೆ
2016ರಲ್ಲಿ ಕಂಗೊಳಿಸುತ್ತಿದ್ದ ಅಂಬಾರಿ ಹೊತ್ತ ಆನೆ
ಕಂಗೊಳಿಸುತ್ತಿದ್ದ ಆನೆ, ಅಂಬಾರಿ ಪ್ರಸ್ತುತ(2018ರ ಅ.15) ಕಾಣಿಸಿದ್ದು ಹೀಗೆ.
ಕಂಗೊಳಿಸುತ್ತಿದ್ದ ಆನೆ, ಅಂಬಾರಿ ಪ್ರಸ್ತುತ(2018ರ ಅ.15) ಕಾಣಿಸಿದ್ದು ಹೀಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT