ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃತಜ್ಞತೆ: ಇದು ಸಮಾಜಯಜ್ಞ

Last Updated 5 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ರಸ್ತೆಯಲ್ಲಿ ಬರುತ್ತಿದ್ದೇವೆ. ನಮ್ಮ ಎದುರಿಗೆ ಅಪಘಾತವೊಂದು ನಡೆಯಿತು. ವಾಹನದಲ್ಲಿದ್ದ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ; ನೋವಿನಿಂದ ಚೀರುತ್ತ ಸಾವಿನೊಂದಿಗೆ ಹೋರಾಡುತ್ತಿದ್ದಾನೆ. ತತ್‌ಕ್ಷಣದ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?

ಮೊಬೈಲ್‌ ಫೋನನ್ನು ಜೇಬಿನಿಂದ ಹೊರತೆಗೆಯುತ್ತೇವೆ; ಫೋಟೊಗಳನ್ನು ತೆಗೆಯಲು ಆರಂಭಿಸುತ್ತೇವೆ; ವಿಡಿಯೊ ಮಾಡುತ್ತೇವೆ; ಸೆಲ್ಫಿಯನ್ನೂ ಕ್ಲಿಕ್ಕಿಸುತ್ತೇವೆ! ಕೂಡಲೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುತ್ತೇವೆ. ಅದು ವೈರಲ್‌ ಕೂಡ ಆಗುತ್ತದೆ. ಲೈಕ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ನಾವೇನೋ ಘನ ವಿಜಯವನ್ನು ಸಾಧಿಸಿದಂತೆ ಉಬ್ಬಿಹೋಗುತ್ತಿರುತ್ತೇವೆ.

ಆದರೆ ಅಪಘಾತವನ್ನು ಕಂಡಾಗ ನಮ್ಮ ಪ್ರತಿಕ್ರಿಯೆ ಹೇಗಿರಬೇಕಿತ್ತು?

ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಕಾಪಾಡಲು ನಮ್ಮಿಂದ ಸಾಧ್ಯವಿರುಷ್ಟು ಮಾಡಬೇಕಿತ್ತು. ಒಂದು ವೇಳೆ ನಮಗೆ ಏನೂ ಮಾಡಲು ಸಾಧ್ಯವೇ ಆಗದಿದ್ದರೂ ಪರವಾಗಿಲ್ಲ; ಆದರೆ ಸಂದರ್ಭದಲ್ಲಿ ನಾವು ಕ್ರೌರ್ಯದಿಂದಲೂ ವಿಕೃತದಿಂದಲೂ ನಡೆದುಕೊಳ್ಳಬಾರದು. ಬೇರೊಬ್ಬರು ನೋವಿನಲ್ಲಿರುವಾಗ ನಾವು ಸಂತೋಷದಿಂದ ಅವರೊಂದಿಗೆ ಸೆಲ್ಫಿಯನ್ನು ತೆಗೆದುಕೊಳ್ಳುವುದು ಅಮಾನವೀಯವೂ ಅಸಹ್ಯಕರವೂ ಹೌದು. ಇಂಥ ವಿಕೃತಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ. ಶವಗಳೊಂದಿಗೂ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುವ ನಿರ್ದಯಿಗಳ, ಅಸಂಸ್ಕೃತರ ವಿಕಾರಮುಖಗಳನ್ನು ಫೇಸ್‌ಬುಕ್‌ನಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೆಲುಗು ಚಿತ್ರನಟ ಹರಿಕೃಷ್ಣ ಜೀವವನ್ನು ಕಳೆದುಕೊಂಡರು. ಆಸ್ಪತ್ರೆಯ ನರ್ಸ್‌ಗಳು ಅವರ ಶವದೊಂದಿಗೆ ಸೆಲ್ಫಿ ತೆಗೆದುಕೊಂಡದ್ದು ದೊಡ್ಡ ಸುದ್ದಿಯಾಗಿ, ವ್ಯಾಪಕ ಟೀಕೆಗೂ ಗುರಿಯಾಗಿದೆ. ನಾಗರಿಕರು, ಸುಶಿಕ್ಷಿತರು – ಎಂದೆಲ್ಲ ಕರೆಸಿಕೊಳ್ಳುವ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಎಲ್ಲಕ್ಕಿಂತ ಮೊದಲು ನಾವು ಮನುಷ್ಯರೆ – ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಮಾನವತೆ ತಾನೆ ಮನುಷ್ಯತ್ವದ ಪ್ರಮುಖ ಲಕ್ಷಣ? ಅದೇ ಇಲ್ಲದಿದ್ದಾಗ ನಮ್ಮನ್ನು ‘ಮನುಷ್ಯರು’ ಎಂದು ಕರೆಯುವುದು ಸರಿಯಾದೀತೆ?

ಸಂಸ್ಕೃತ ಸುಭಾಷಿತವೊಂದು ಹೀಗಿದೆ:

ಸಜ್ಜನಸ್ಯ ಹೃದಯಂ ನವನೀತಂ ಯದ್ವದಂತಿ ಕವಯಸ್ತದಲೀಕಂ |

ಅನ್ಯದೇಹವಿಲಸತ್ಪರಿತಾಪಾತ್‌ ಸಜ್ಜನೋ ದ್ರವತಿ ನೋ ನವನೀತಮ್‌ ||

‘ಕವಿಗಳು ಸತ್ಪುರುಷರ ಹೃದಯವನ್ನು ಬೆಣ್ಣೆಯೆಂದು ವರ್ಣಿಸುತ್ತಾರೆ. ಇದು ಸುಳ್ಳು. ಬೇರೆಯವರ ಕಷ್ಟವನ್ನು ಕಂಡು ಸಜ್ಜನರು ಕರಗುತ್ತಾರೆ. ಆದರೆ ಬೆಣ್ಣೆಯು ಕರಗುವುದಿಲ್ಲ’ – ಇದು ಈ ಪದ್ಯದ ಆರ್ಥ.

ಬೇರೆಯವರ ಕಷ್ಟವನ್ನು ಕಂಡು ಕರಗುವುದು, ಎಂದರೆ ಅದಕ್ಕೆ ಸ್ಪಂದಿಸುವುದು ಮನುಷ್ಯನ ಮೂಲಭೂತಗುಣವಾಗಿರತಕ್ಕದ್ದು – ಎಂದು ಕವಿ ಇಲ್ಲಿ ಆಶಿಸಿ, ಅದನ್ನು ಧ್ವನಿಪೂರ್ಣವಾಗಿ ಪ್ರಕಟಗೊಳಿಸಿದ್ದಾನೆ. ಹೀಗೆ ಸ್ಪಂದಿಸುವುದೇ ಸಜ್ಜನಿಕೆಯ ಲಕ್ಷಣ ಎಂದೂ ಹೇಳಿದ್ದಾನೆ. ‘ಬೆಣ್ಣೆಯಂತೆ ನಿನ್ನ ಮನಸ್ಸು, ಹೃದಯ’ ಎಂದೆಲ್ಲ ಸಂವೇದನಶೀಲರನ್ನು ಹೊಗಳುತ್ತೇವೆ. ಆದರೆ ಇಲ್ಲಿ ಹೋಲಿಕೆ ಸರಿಯಿಲ್ಲ ಎನ್ನುತ್ತಿದ್ದಾನೆ, ಕವಿ. ಏಕೆಂದರೆ ಬೆಂಕಿಯ ಎದುರಿಗೆ ಮಾತ್ರ ಬೆಣ್ಣೆ ಕರಗುತ್ತದೆಯೇ ವಿನಾ ಕಷ್ಟದಲ್ಲಿರುವವರನ್ನು ಕಂಡು ಕರಗದು. ಆದರೆ ಸಜ್ಜನರು ಹಾಗಲ್ಲ; ಕರಗುತ್ತಾರೆ. ಹೀಗಾಗಿ ಅವರನ್ನು ಬೆಣ್ಣೆಯೊಂದಿಗೆ ಹೋಲಿಸುವುದು ತರವಲ್ಲ – ಎನ್ನುವುದು ಅವನ ನಿಲುವು.

ಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸುವುದು ನಮ್ಮ ಸಹಜ ಸ್ವಭಾವವಾಗಬೇಕು. ಏಕೆಂದರೆ ಕೃತಜ್ಞತೆ ಎಂಬ ಗುಣ ಮನುಷ್ಯತ್ವದ ಮತ್ತೊಂದು ಪದವೇ ಆಗಿರತಕ್ಕದ್ದು. ನಾವು ‘ನಾವಾಗಲು’ ಎಷ್ಟೆಲ್ಲ ಜನರ ತ್ಯಾಗ, ಬೆವರು, ತಿಳಿವಳಿಕೆಗಳು ನಮಗೆ ಒದಗಿರುತ್ತವೆಯಲ್ಲವೆ? ಅಂಥ ಎಲ್ಲರ ಸಹಾಯವನ್ನೂ ನಾವು ಸ್ಮರಿಸಿ, ಅದಕ್ಕೆ ಸಲ್ಲಬೇಕಾದ ಗೌರವನ್ನೂ ಆದರವನ್ನೂ ಸ್ಪಂದನವನ್ನೂ ಸಲ್ಲಿಸುವ ಪರಿಯೇ ‘ಕೃತಜ್ಞತೆ.’ ನಾವು ಕಷ್ಟದಲ್ಲಿದ್ದಾಗ ಹಲವರು ನಮ್ಮ ನೆರವಿಗೆ ಬಂದಿರುತ್ತಾರೆ. ನಾವು ಕಾಯಿಲೆ ಬಿದ್ದಾಗ ಆಸ್ಪತ್ರೆಗೆ ಹೋಗುತ್ತೇವೆಯಲ್ಲವೆ? ನಾವು ಹೋಗುವ ರಸ್ತೆಯನ್ನು ನಿರ್ಮಿಸಿದವರು ಯಾರು? ನಮಗೆ ಗೊತ್ತಿಲ್ಲ! ನೂರಾರು ಜನರು ರಾತ್ರಿ–ಹಗಲು ಕಷ್ಟಪಟ್ಟು ಆ ರಸ್ತೆಯನ್ನು ನಿರ್ಮಿಸಿರುತ್ತಾರೆ. ಅವರು ಅದನ್ನು ನಿರ್ಮಿಸದೆಹೋಗಿದ್ದರೆ ನಾವು ಆಸ್ಪತ್ರೆಯನ್ನು ತಲುಪಲು ಆಗುತ್ತಲೇ ಇರಲಿಲ್ಲವಲ್ಲವೆ? ನಾವು ಮಾವಿನ ಹಣ್ಣನ್ನೋ ಹಲಸಿನ ಹಣ್ಣನ್ನೋ ತಿಂದು, ಅದರ ರುಚಿಯನ್ನು ಅನುಭವಿಸುತ್ತೇವೆ. ಆದರೆ ಆ ಹಣ್ಣನ್ನು ಬೆಳೆದವರು ಯಾರು ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಮಾವಿನ ಗಿಡವನ್ನಾಗಲೀ ಹಲಸಿನ ಗಿಡವನ್ನಾಗಲೀ ಯಾರೂ ನೆಡದಿದ್ದರೆ ಇಂದು ನಮಗೆ ಅದರ ಹಣ್ಣು ಸಿಗುತ್ತಿತ್ತೆ? ನಾವು ಅದಕ್ಕೆ ಕೊಡುವ ಐದೋ ಹತ್ತೋ ರೂಪಾಯಿಗಳಷ್ಟೆ ಅದರ ಮೌಲ್ಯವಲ್ಲವೆನ್ನಿ!

‘ಸಮಾಜಯಜ್ಞ’ ಎಂಬ ಕಲ್ಪನೆಯೊಂದು ನಮ್ಮ ಸಂಸ್ಕೃತಿಯಲ್ಲಿದೆ. ಸಮಾಜವಿಲ್ಲದೆ ನಾವಿಲ್ಲ; ನಮ್ಮ ಪ್ರತಿಯೊಂದು ಆಗುಹೋಗುಗಳಲ್ಲೂ ಸಮಾಜದ ಪಾತ್ರ ಇದ್ದೇ ಇರುತ್ತದೆ. ಸಮಾಜದ ಈ ಋಣವನ್ನು ತೀರಿಸಿಕೊಳ್ಳುವ ದಾರಿಯೆಂದರೆ ನಾವು ಸಮಾಜಾಭಿಮುಖವಾಗಿ ನಡೆದುಕೊಳ್ಳುವುದು. ಸಾಮಾಜಿಕರಲ್ಲಿ ಯಾರಿಗಾದರೂ ನಮ್ಮ ಸಹಾಯದ ಆವಶ್ಯಕತೆ ಇದ್ದರೆ ಅದನ್ನು ಪೂರೈಸುವುದು ನಮ್ಮ ಪ್ರಥಮ ಕರ್ತವ್ಯವೇ ಆಗುತ್ತದೆ. ಇದೇ ಸಮಾಜಯಜ್ಞ. ಈ ಯಜ್ಞದಿಂದ ನಾವು ವಿಮುಖರಾದರೆ ಆಗ ನಾವು ಕೃತಘ್ನರೇ ಹೌದು. ಪುರುಷೋತ್ತಮನಾದ ಶ್ರೀರಾಮನ ಮಹಾಗುಣಗಳಲ್ಲಿ ಒಂದು ಕೃತಜ್ಞತೆಯೂ ಸೇರಿದೆ. ಅವನಲ್ಲಿ ಆ ಗುಣ ಇದ್ದದ್ದರಿಂದಲೇ ಅವನು ಧರ್ಮದ ವಿಗ್ರಹರೂಪ ಎಂಬ ಕೀರ್ತಿಗೆ ಪಾತ್ರನಾದದ್ದು. ಸಮಾಜಯಜ್ಞ ಎಂದರೆ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು, ಸೇತುವೆಗಳನ್ನು ನಿರ್ಮಿಸಬೇಕೆಂದೇನೂ ಇಲ್ಲ; ರಸ್ತೆಯಲ್ಲಿ ಬಿದ್ದಿರುವ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ಅದನ್ನು ತಿಪ್ಪೆಗೆ ಎಸೆಯುವುದೂ ಸಮಾಜಯಜ್ಞವೇ. ನೀರು ಹರಿದು ಹೋಗುತ್ತಿರುವ ಸಾರ್ವಜನಿಕ ನಲ್ಲಿಯ ಹರಿವನ್ನು ನಿಲ್ಲಿಸುವುದು ಕೂಡ ಇದೇ ವ್ಯಾಪ್ತಿಗೆ ಬರುತ್ತದೆ. ಅಷ್ಟೇಕೆ, ರಸ್ತೆಯಲ್ಲಿ, ಕಚೇರಿಯಲ್ಲಿ, ಸಮಾರಂಭಗಳಲ್ಲಿ ಶಿಷ್ಟರಾಗಿ ನಡೆದುಕೊಳ್ಳುವುದು ಕೂಡ ಸಮಾಜಯಜ್ಞವೇ. ಹೀಗೆಯೇ ಅಪಘಾತಕ್ಕೆ ತುತ್ತಾದವರ ಫೋಟೋವನ್ನು ಕ್ಲಿಕ್ಕಿಸದೆ, ಅವರ ಸಹಾಯಕ್ಕೆ ಧಾವಿಸುವುದು ಕೂಡ ಸಮಾಜಯಜ್ಞವೇ. ನಾಳೆ ನಾವೋ ನಮ್ಮವರೋ ಅಪಘಾತಕ್ಕೆ ಒಳಗಾದರೆ ನಮ್ಮನ್ನು ಯಾರಾದರೂ ರಕ್ಷಿಸಬೇಕಾಗುತ್ತದೆ ತಾನೆ?

ಕೃತಜ್ಞತೆ ಎನ್ನುವುದು ಸಾಮಾಜಿಕ ಮೌಲ್ಯವೂ ಹೌದು, ಕೌಟುಂಬಿಕ ಮೌಲ್ಯವೂ ಹೌದು. ಇದು ವ್ಯಷ್ಟಿಹಿತವನ್ನೂ ಸಮಷ್ಟಿಹಿತವನ್ನೂ ಏಕಕಾಲದಲ್ಲಿ ಕಾಪಾಡುವಂಥದ್ದು; ಗೌರವಿಸುವಂಥದ್ದು. ‘ಕೃತಜ್ಞತೆ.’ ಇದು ನಮ್ಮ ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ವಿವರ ಅಲ್ಲ; ಇದು ನಮ್ಮ ಹೃದಯದ ಸ್ಪಂದನೆಗೆ ಸೇರಿದ ಭಾವಶಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT