ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಎಲ್ಲ ದೇಶವೂ ಸ್ವದೇಶವೇ

Last Updated 31 ಅಕ್ಟೋಬರ್ 2020, 1:10 IST
ಅಕ್ಷರ ಗಾತ್ರ

ಕೋsತಿಭಾರಃ ಸಮರ್ಥಾನಾಂ

ಕಿಂ ದೂರಂ ವ್ಯವಸಾಯಿನಾಮ್ ।

ಕೋ ವಿದೇಶಃ ಸವಿದ್ಯಾನಾಂ

ಕಃ ಪರಃ ಪ್ರಿಯವಾದಿನಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಸಮರ್ಥರಿಗೆ ಯಾವುದು ತಾನೆ ಹೆಚ್ಚು ಭಾರ? ಪ್ರಯತ್ನಶೀಲರಿಗೆ ದೂರದಲ್ಲಿರುವುದು ಯಾವುದು? ವಿದ್ಯಾವಂತರಿಗೆ ವಿದೇಶ ಯಾವುದು? ಪ್ರಿಯವಾದ ಮಾತುಗಳನ್ನಾಡುವವನಿಗೆ ಶತ್ರು ಯಾರು?’

ಸುಭಾಷಿತ ಪ್ರಶ್ನೆಗಳ ಮೂಲಕವೇ ಅದರ ವಿಷಯಪ್ರತಿಪಾದನೆಗೆ ಹೊರಟಿದೆ.

ಕಷ್ಟಗಳನ್ನು ಸಹಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ರಾಮನಿಗೆ ಬಂದ ಕಷ್ಟಗಳು, ಧರ್ಮರಾಯನಿಗೆ ಬಂದ ಕಷ್ಟಗಳು ಒಂದೇ ಎರಡೇ. ಆದರೆ ಎಲ್ಲರಿಗೂ ಅಂಥ ಕಷ್ಟಗಳನ್ನು ತಾಳಲು ಆಗದು. ನಾವು ಭಾರವನ್ನು ಹೊರಬೇಕು ಎಂದಾದಲ್ಲಿ ಅದಕ್ಕೆ ತಕ್ಕ ಸಾಮರ್ಥ್ಯ ನಮ್ಮಲ್ಲಿರಬೇಕು. ಸುಭಾಷಿತ ಅದನ್ನೇ ಕೇಳುತ್ತಿರುವುದು: ಸಮರ್ಥರಿಗೆ ಯಾವುದು ತಾನೆ ಭಾರ? ಎಂದರೆ ಯಾವುದೂ ಭಾರ ಅಲ್ಲ – ಎಂದೇ ತಾತ್ಪರ್ಯ.

ಪ್ರಯತ್ನಶೀಲತೆ – ಎಂದರೆ ನಿರಂತರ ಕೆಲಸದಲ್ಲಿ ತೊಡಗಿಕೊಳ್ಳುವುದು; ಸೋತೆವು ಎಂದು ಅದರಿಂದ ವಿಮುಖರಾಗದಿರುವುದು. ಅಂಥ ಪ್ರಯತ್ನಶೀಲರಿಗೆ ಯಾವುದು ತಾನೆ ದೂರದಲ್ಲಿರುವುದು? ಯಾವುದೂ ಇರುವುದಿಲ್ಲ – ಎಂದೇ ಅರ್ಥ. ಒಂದೊಂದೇ ಹೆಜ್ಜೆಯನ್ನು ಕ್ರಮಿಸುತ್ತಿದ್ದರೆ ಎಲ್ಲವೂ ನಮಗೆ ಹತ್ತಿರವಾಗುತ್ತದೆಯಷ್ಟೆ!

ವಿದ್ಯಾವಂತವರಿಗೆ ವಿದೇಶ ಯಾವುದು? ಸುಭಾಷಿತದ ಈ ಮಾತು ಸ್ವಾರಸ್ಯಕರವಾಗಿದೆ. ವಿದ್ಯಾವಂತರಿಗೆ ಯಾವುದು ವಿದೇಶ ಅಲ್ಲ ಎಂದು ಇದರ ಭಾವ. ಎಂದರೆ ಏನಾಯಿತು? ವಿದ್ಯಾವಂತರು ಎಲ್ಲ ದೇಶವನ್ನೂ ತಮ್ಮ ದೇಶವನ್ನಾಗಿಯೇ ನೋಡುತ್ತಾರೆ ಎಂದೂ ಅರ್ಥ ಮಾಡಬಹುದು. ವಿದ್ಯೆ ನಮ್ಮಲ್ಲಿ ವೈಶಾಲ್ಯಬುದ್ಧಿಯನ್ನು ಬೆಳಸುತ್ತದೆ ಎಂದು ಇದರ ತಾತ್ಪರ್ಯ. ಇದರ ಜೊತೆಗೆ ವಿದ್ಯಾವಂತರು ಎಲ್ಲ ದೇಶಗಳಲ್ಲೂ ಸಂತೋಷವಾಗಿ ಇರಬಲ್ಲರು ಎಂದೂ ಅರ್ಥಮಾಡಬಹುದು; ಎಂದರೆ ಅವರ ಜೀವನನಿರ್ವಹಣೆಗೂ ತೊಂದರೆ ಆಗದು ಎಂದು ತಾತ್ಪರ್ಯ.

ಮಾತಿನಿಂದಲೇ ಮಿತ್ರರು, ಮಾತಿನಿಂದಲೇ ಶತ್ರುಗಳು. ಮಿತ್ರರು ಹೆಚ್ಚಿದಷ್ಟೂ ಜೀವನ ಸಂತೋಷಮಯವಾಗಿರುತ್ತದೆ; ಶತ್ರುಗಳು ಹೆಚ್ಚಿದಷ್ಟೂ ಜೀವನ ನರಕವಾಗುತ್ತದೆ. ಮಾತು ನಮ್ಮ ವ್ಯಕ್ತಿತ್ವದ ಭಾಗವೂ ಹೌದು. ಹೀಗಾಗಿ ನಮ್ಮ ಸೌಹಾರ್ದತೆಯನ್ನು ನಮ್ಮ ಮಾತು ಚೆನ್ನಾಗಿ ಪ್ರತಿನಿಧಿಸುತ್ತದೆ. ಹೀಗಾಗಿ ಒಳ್ಳೆಯ ಮಾತುಗಳನ್ನೇ ಆಡುವವನಿಗೆ ಶತ್ರುಗಳೇ ಇರುವುದಿಲ್ಲ ಎಂದು ಘೋಷಿಸುತ್ತಿದೆ ಸುಭಾಷಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT