ಗುರುವಾರ , ಆಗಸ್ಟ್ 5, 2021
23 °C

ದಿನದ ಸೂಕ್ತಿ | ಎಲ್ಲೆಲ್ಲೂ ಇರಲಿ ಮಮತೆ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಮಾರ್ಜಾಲಭಕ್ಷಿತೇ ದುಃಖಂ ಯಾದೃಶಂ ಗೃಹಕುಕ್ಕುಟೇ ।

ನ ತಾದೃಙ್ ಮಮತಾಶೂನ್ಯೇ ಕಲವಿಂಕೇsಥ ಮೂಷಕೇ ।।

ಇದರ ತಾತ್ಪರ್ಯ ಹೀಗೆ: ‘ಮನೆಯ ಕೋಳಿಯನ್ನು ಬೆಕ್ಕು ತಿಂದಾಗ, ಎಷ್ಟು ದುಃಖವಾಗುತ್ತದೆಯೋ ಅಷ್ಟು ದುಃಖ ಗುಬ್ಬಿಯನ್ನೋ ಇಲಿಯನ್ನೋ ಬೆಕ್ಕು ತಿಂದಾಗ ಜನರಿಗೆ ಆಗುವುದಿಲ್ಲ; ಮಮತೆ ಇಲ್ಲದಿರುವುದೇ ಅದಕ್ಕೆ ಕಾರಣ.‘

ಮನೆಯಲ್ಲಿ ಕೋಳಿಯೊಂದನ್ನು ಸಾಕಿದ್ದೇವೆ. ಪ್ರಿತಿಯಿಂದ. ಅದು ನಮ್ಮ ಮನೆಯ ಸದಸ್ಯ ಎಂಬಷ್ಟು ಪ್ರೀತಿ. ಅದು ನಮ್ಮ ಕೋಳಿ, ನಮ್ಮ ಮುದ್ದಿನ ಕೋಳಿ. ಒಮ್ಮೆ ಬೆಕ್ಕೊಂದು ದಾಳಿ ಮಾಡಿ ಆ ನಮ್ಮ ಪ್ರೀತಿಯ ಕೋಳಿಯನ್ನು ತಿಂದುಹಾಕಿಬಿಟ್ಟಿತು! ಆಗ ನಮ್ಮ ಪರಿಸ್ಥಿತಿ?

ಮನೆಯ ಮಗಳನ್ನೇ ಬೆಕ್ಕು ತಿಂದುಹಾಕಿದೆಯೋ ಎಂಬಷ್ಟು ಸಂಕಟವಾಗುತ್ತದೆ; ಇಡೀ ದಿನ ಶೋಕ ಶೋಕ ಶೋಕ! 

ಅದೇ ಬೆಕ್ಕು ದಿನವೂ ನಮ್ಮ ಮನೆಯ ಅಂಗಳದಲ್ಲಿಯೋ ಓಡಾಡುತ್ತಿರುವ ಇಲಿಗಳನ್ನು ತಿನ್ನುತ್ತಲೇ ಇರುತ್ತದೆ; ಆದರೆ ನಮಗೆ ಅದನ್ನು ನೋಡಿ ಎಂದಾದರೂ ದುಃಖವಾಗುತ್ತದೆಯೇ? ಬೆಕ್ಕು–ಇಲಿಗಳ ಸಾವಿನ ಆಟವನ್ನು ನೋಡಿ ಸಂಭ್ರಮಿಸುತ್ತೇವೆ. ಮೊಬೈಲ್‌ನಲ್ಲಿ ಚಿತ್ರಿಸಿ, ಫೇಸ್‌ಬುಕ್‌ನಲ್ಲಿ ಅದನ್ನು ಹಂಚಿಕೊಳ್ಳುತ್ತೇವೆ. 

ಇದಕ್ಕೆ ಕಾರಣವೇನು?

ನಮಗೆ ಕೋಳಿಯ ವಿಷಯದಲ್ಲಿ ’ಅದು ನಮ್ಮದು‘ ಎಂಬ ಮಮತೆ ಇದೆ; ಆದರೆ ಇಲಿ–ಗೂಬೆಗಳ ವಿಷಯದಲ್ಲಿ ಈ ಮಮತೆ ಇರದು. ಇದೇ ನಮ್ಮ ಈ ತಾರತಮ್ಯಕ್ಕೆ ಕಾರಣ.

ಈ ಸುಭಾಷಿತವನ್ನು ಸದ್ಯದ ಪರಿಸ್ಥಿತಿಗೂ ಹೋಲಿಸಿ ನೋಡೋಣ.

ಕೊರೊನಾದಿಂದ ಉಂಟಾಗಿರುವ ಸಮಸ್ಯೆಯ ಬಗ್ಗೆ ನಮಗೆ ಅರಿವಿದೆ. ಈ ವೈರಾಣುವಿನ ವಿರುದ್ಧದ ಹೋರಾಟದಲ್ಲಿ ಈಗಾಗಲೇ ನೂರಾರು ವೈದ್ಯರೂ ನರ್ಸ್‌ಗಳೂ ಪೊಲೀಸರು ತಮ್ಮ ಪ್ರಾಣಗಳನ್ನೇ ಆಹುತಿ ಕೊಟ್ಟಿದ್ದಾರೆ. ಬೇರೆಯವರ ಪ್ರಾಣವನ್ನು ಉಳಿಸಲು ಅವರೆಲ್ಲರೂ ತಮ್ಮ ಪ್ರಾಣಗಳನ್ನೇ ತ್ಯಾಗಮಾಡಿದ್ದಾರೆ. ಹೀಗಿದ್ದರೂ ನಮಗೆ ಮಾತ್ರ ಉದಾಸೀನ; ನಮ್ಮ ಅನಗತ್ಯ ಓಡಾಟ ನಿಂತಿಲ್ಲ; ಹರಡುವಿಕೆಯನ್ನು ನಿಯಂತ್ರಿಸಲು ನಾವೂ ಈ ಹೋರಾಟದಲ್ಲಿ ತೊಡಗಬೇಕು ಎಂಬ ಎಚ್ಚರಿಕೆ ನಮ್ಮಲ್ಲಿ ಮೂಡಿಲ್ಲ. ಇದಕ್ಕೆ ಕಾರಣ?

ಆ ವೈದ್ಯರಾಗಲೀ ನರ್ಸ್‌ಗಳಾಗಲೀ ಪೊಲೀಸರಾಗಲೀ ನಮ್ಮ ಮನೆಯವರಲ್ಲ; ಹೀಗಾಗಿ ಅವರ ಬಗ್ಗೆ ನಮಗೆ ಮಮತೆ ಇಲ್ಲ. ಸಮಸ್ಯೆ ನಮ್ಮ ಮನೆಯ ಬಾಗಿಲಿಗೆ ಬರದ ಹೊರತು ನಮಗೆ ಅದರ ಗಹನತೆಯೇ ಗೊತ್ತಾಗದು ಎಂಬಷ್ಟು ದಪ್ಪ ಚರ್ಮ ನಮ್ಮದು.

ಇಲ್ಲಿ ಇನ್ನೊಂದು ಪದ್ಯವನ್ನು ನೋಡಬಹುದು:

ತ್ಯಕ್ತವ್ಯೋ ಮಮಕಾರಸ್ತ್ಯಕ್ತುಂ ಯದಿ ಶಕ್ಯತೇ ನಾಸೌ ।

ಕರ್ತವ್ಯೋ ಮಮಕಾರಃ ಕಿಂ ತು ಸ ಸರ್ವತ್ರ ಕರ್ತವ್ಯಃ ।। 

’ನನ್ನದು ಎಂಬ ಮಮಕಾರವನ್ನು ತ್ಯಜಿಸಬೇಕು; ಒಂದು ವೇಳೆ ಅದನ್ನು ತ್ಯಜಿಸಲು ಸಾಧ್ಯವಾಗದಿದ್ದರೆ ಮಮಕಾರವನ್ನು ಇಡಬಹುದು. ಆದರೆ ಅದನ್ನು ಎಲ್ಲರ ವಿಷಯದಲ್ಲಿಯೂ ಇಡಬೇಕು‘ – ಇದು ಇದರ ತಾತ್ಪರ್ಯ.

ನಾನು–ನನ್ನದು ಎಂಬ ಮಮಕಾರವನ್ನು ಬಿಡಬೇಕು – ಎನ್ನುವುದು ವೇದಾಂತದ ನಿಲುವು. ಆದರೆ ಹೀಗೆ ಮಮಕಾರವನ್ನು ತ್ಯಜಿಸುವುದು ಸುಲಭವಲ್ಲ. ಹಾಗಾದರೆ ಏನು ಮಾಡಬೇಕು? ಈ ಮಮಕಾರವನ್ನು ಕೇವಲ ನಮ್ಮ ಮನೆಗೆ ಮಾತ್ರ ಸೀಮಿತಮಾಡಿಕೊಳ್ಳದೇ ಇಡಿಯ ಸಮಾಜಕ್ಕೆ ಅದನ್ನು ವಿಸ್ತರಿಸಬೇಕು, ಅಷ್ಟೆ.

ನನ್ನ ಮಗ ಮಾತ್ರ ನನಗೆ ಮಗ ಅಲ್ಲ; ನನ್ನ ಮಗಳು ಮಾತ್ರ ಮಗಳು ಅಲ್ಲ; ಕೊರೊನಾ ವಿರುದ್ಧ ಹೋರಾಡುತ್ತಿರುವವರೆಲ್ಲರೂ ನನ್ನ ಮಗ–ಮಗಳಿಗೆ ಸಮ, ಎಲ್ಲರೂ ಒಂದೇ ಮನೆಯವರು – ಎಂದು ನಮ್ಮ ಮಮಕಾರ ವಿಸ್ತಾರವಾದರೆ ಆಗ ನಮ್ಮ ಹೊಣೆಗಾರಿಕೆ ಹೆಚ್ಚುತ್ತದೆ; ನಮ್ಮ ಉಡಾಫೆತನ ತಗ್ಗುತ್ತದೆ.

ನಮ್ಮ ಮನೆಯ ಆರೋಗ್ಯವಷ್ಟೆ ಮುಖ್ಯವಲ್ಲ, ಇಡಿಯ ಪ್ರಪಂಚವೇ ನನ್ನ ಮನೆ; ಇಡೀ ಪ್ರಪಂಚದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ್ದು ನನ್ನ ಕರ್ತವ್ಯ – ಎಂಬ ವಿಶ್ವಾತ್ಮಭಾವ ನಮ್ಮಲ್ಲಿ ಮೂಡಿದಾಗ ಕೊರೊನಾದಂಥ ಒಂದು ಸಮಸ್ಯೆ ಏನು, ಹತ್ತು ಸಮಸ್ಯೆಗಳು ಎದುರಾದರೂ ನಾವು ಹೆದರಬೇಕಾಗಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು