ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಓದಿನ ಗುರಿ

Last Updated 8 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಅಜ್ಞೇಭ್ಯೋ ಗ್ರಂಥಿನಃ ಶ್ರೇಷ್ಠಾ ಗ್ರಂಥಿಭ್ಯೋ ಧಾರಿಣೋ ವರಾಃ ।
ಧಾರಿಭ್ಯೋ ಜ್ಞಾನಿನಃ ಶ್ರೇಷ್ಠಾ ಜ್ಞಾನಿಭ್ಯೋ ವ್ಯವಸಾಯಿನಃ ।।

ಇದರ ತಾತ್ಪರ್ಯ ಹೀಗೆ:

‘ಏನೂ ತಿಳಿಯದವರಿಗಿಂತ ಓದಿದವರು ಉತ್ತಮ; ಓದಿರುವವರಿಗಿಂತಲೂ ನೆನಪಿನಲ್ಲಿಟ್ಟುಕೊಂಡವರು ಉತ್ತಮ; ನೆನಪಿನಲ್ಲಿಟ್ಟುಕೊಂಡವರಿಗಿಂತಲೂ ಚೆನ್ನಾಗಿ ತಿಳಿದುಕೊಂಡವರು ಉತ್ತಮ; ತಿಳಿದುಕೊಳ್ಳುವವರಿಗಿಂತಲೂ ಅದನ್ನು ಆಚರಿಸುವವರು ಉತ್ತಮ.‘

ಪ್ರಯೋಜನ ಎಂದರೇನು? ನಮಗೆ ಒದಗುವಂಥದ್ದು, ನಮ್ಮ ಉದ್ದೇಶವನ್ನು ಈಡೇರಿಸುವಂಥದ್ದು, ಬಯಕೆಗಳನ್ನು ಪೂರೈಸುವಂಥದ್ದು – ಎಂದು ಹೇಳಬಹುದು.

ಈ ಪ್ರಯೋಜವನ್ನು ಪಡೆಯುವ ವಿಧಾನವಾದರೂ ಹೇಗೆ? ಯಾವುದೋ ಒಂದು ವಸ್ತು ನಮ್ಮ ಎಲ್ಲ ರೀತಿಯ ಪ್ರಯೋಜನಗಳನ್ನು ಪೂರೈಸಬಲ್ಲದೆ?

ಪ್ರಯೋಜನವನ್ನು ನಾವು ಸೋಪಾನಕ್ರಮದಲ್ಲಿಯೇ ಪಡೆಯುವಂಥದ್ದು. ಈ ಸೋಪಾನಕ್ರಮವೇ ಹೇಳುತ್ತಿದೆ, ಒಂದೇ ವಸ್ತುವಿನ ಮೂಲಕ ನಮ್ಮ ಎಲ್ಲ ಆವಶ್ಯಕತೆಗಳನ್ನೂ ಪೂರೈಸಿಕೊಳ್ಳಲು ಸಾಧ್ಯವಾಗದು. ನಾವು ಮಹಡಿಯನ್ನು ತಲಪಬೇಕು; ಇಪ್ಪತ್ತು ಮೆಟ್ಟಿಲುಗಳನ್ನು ಹತ್ತಿಹೋದಮೇಲಷ್ಟೆ ಅಲ್ಲಿಗೆ ತಲಪುತ್ತೇವೆ. ಹೀಗಲ್ಲದೆ, ಒಂದನೇ ಮೆಟ್ಟಿಲಿನಿಂದ ಇಪ್ಪತ್ತನೇ ಮೆಟ್ಟಿಲಿಗೆ ಹಾರಲು ಹೋದರೆ? ಕೈ ಕಾಲುಗಳನ್ನು ಮುರಿದುಕೊಳ್ಳಬೇಕಾಗುತ್ತದೆ, ಅಷ್ಟೆ.

ನಮ್ಮ ಜೀವನವಿಧಾನದಲ್ಲೇ ಈ ಸೋಪಾನಕ್ರಮ ಸಹಜವಾಗಿದೆ. ಮೊದಲಿಗೆ ಅಕ್ಷರಗಳನ್ನು ಕಲಿಯುತ್ತೇವೆ; ಬಳಿಕ ಕಾಗುಣಿತ; ಆಮೇಲೆ ಪದಗಳು, ವಾಕ್ಯಗಳು – ಹೀಗೆ ಹಂತಹಂತವಾಗಿ ಕಲಿಯುತ್ತ ಪುಸ್ತಕಗಳನ್ನು ಓದುವಷ್ಟು ಬೆಳೆಯುತ್ತೇವೆ. ಅಕ್ಷರಗಳನ್ನು ನಾವು ಕಲಿಯುವುದೇ ಪುಸ್ತಕಗಳನ್ನು ಓದಲು ಕಲಿಯುವುದಕ್ಕಾಗಿ. ಆದರೆ ನಾವು ಓದಬೇಕಾಗಿರುವುದು ಕೇವಲ ಓದುವಿಕೆಯನ್ನು ಸವಿಯಲು ಅಲ್ಲ, ಜೀವನಕ್ಕೆ ಪೂರಕವಾಗಿ. ಹೀಗೆಯೇ ಜೀವನದ ಪ್ರತಿ ಹಂತಕ್ಕೂ ಅದರದ್ದೇ ಆದ ಗಮ್ಯಸ್ಥಾನ ಎಂಬುದು ಇದ್ದೇ ಇರುತ್ತದೆ. ಅದನ್ನು ನಾವು ತಿಳಿದುಕೊಂಡು ಅದನ್ನು ತಲಪಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನಮ್ಮ ಜೀವನಕ್ಕೇ ಒಂದು ಗುರಿ ಇರುತ್ತದೆ. ಅದನ್ನು ನಾವು ಹಂತ ಹಂತವಾಗಿ ಮುಟ್ಟಲು ಪ್ರಯತ್ನಿಸಲೇ ಇರಬೇಕು.

ಯಾವುದಾದರೂ ವಸ್ತು ಅಥವಾ ವಿಷಯದಲ್ಲಿ ನಿಜವಾದ ಪ್ರಯೋಜನ ಇರುವುದು ಅದರ ಸಾರ್ಥಕತೆಯಲ್ಲಿ. ಅನ್ನದ ಸಾರ್ಥಕತೆ ಇರುವುದು ಹಸಿವನ್ನು ಹೋಗಲಾಡಿಸುವುದರಲ್ಲಿ. ಹೀಗೆಯೇ ಬೆಳಕಿನ ಸಾರ್ಥಕತೆ ಇರುವುದು ಅದು ಕತ್ತಲೆಯನ್ನು ಹೋಗಲಾಡಿಸುವುದರಲ್ಲಿ.

ಇಲ್ಲಿ ಸುಭಾಷಿತ ಹೇಳುತ್ತಿರುವುದು ಕೂಡ ಇಂಥದ್ದೇ – ಸಾರ್ಥಕತೆಯನ್ನು ಕಂಡುಕೊಳ್ಳುವ ವಿಧಾನವನ್ನು.

ಓದಿನ ಸಾರ್ಥಕತೆಯನ್ನು ಹುಡುಕಿಕೊಳ್ಳುವ ನೆಪದಲ್ಲಿ ನಮ್ಮ ಬದುಕಿನ ಸಾರ್ಥಕತೆಯನ್ನೂ ಕಂಡುಕೊಳ್ಳುವಂತೆ ಸುಭಾಷಿತ ಇಲ್ಲಿ ಸೂಚಿಸುತ್ತಿದೆ. ಓದಿಗೋಸ್ಕರ ಓದು – ಎನ್ನುವುದನ್ನು ಅದು ಇಲ್ಲಿ ಸಮರ್ಥಿಸುತ್ತಿಲ್ಲ; ಓದಿನ ದಿಟವಾದ ಸಾರ್ಥಕತೆ ಇರುವುದು ಅದು ನಮ್ಮ ಜೀವನಕ್ಕೆ ಒದಗಬೇಕು, ನಮ್ಮ ಜೀವನವನ್ನು ಸತ್ಯವೂ ಶಿವವೂ ಸುಂದರವೂ ಮಾಡುವುದರಲ್ಲಿಯೇ ಅದರ ಸಾರ್ಥಕತೆ ಇದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದೆ.

ಜೀವನಕ್ಕೆ ಬೇಕಾದ ತಿಳಿವಳಿಕೆಯನ್ನು ಒದಗಿಸುವಂಥದ್ದೇ ದಿಟವಾದ ಓದು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ಏನೂ ತಿಳಿವಳಿಕೆ ಇರುವುದಕ್ಕಿಂತಲೂ ಓದನ್ನು ತಿಳಿದಿರುವುದು ಉತ್ತಮ ಎಂದು. ಓದುತ್ತಲೇ ಇದ್ದರೆ ಪ್ರಯೋಜನವೇನು? ಓದಿದ್ದು ನೆನಪಿನಲ್ಲಿ ಉಳಿಯಬೇಕಷ್ಟೆ! ಓದಿದ್ದೆಲ್ಲವೂ ವ್ಯರ್ಥವಾಗಿ ನೆನಪಿನಲ್ಲಷ್ಟೆ ಉಳಿದರೆ ಪ್ರಯೋಜನವೇನು? ವಿಷಯವನ್ನು ಅರ್ಥಮಾಡಿಕೊಳ್ಳಬೇಕಲ್ಲವೆ? ಸರಿ, ಸುಮ್ಮನೆ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ ಏನು ಪ್ರಯೋಜನ? ಅದನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕಲ್ಲವೆ?

ನಾವು ಜೀವನದಲ್ಲಿ ಹಣ, ಅಧಿಕಾರ, ಅಂತಸ್ತು, ಅಧಿಕಾರ – ಹೀಗೆ ಹಲವು ಸಂಗತಿಗಳ ಹಿಂದೆ ಓಡುತ್ತಿರುತ್ತೇವೆ. ಈ ಓಟದಲ್ಲಿ ನಾವು ತಲಪಬೇಕಾದ ಗುರಿಯನ್ನು ನಾವೇ ಕಂಡುಕೊಳ್ಳಬೇಕು. ದಾರಿಗೂ ಗುರಿಗೂ ಇರುವ ನಂಟನ್ನು ಕಂಡುಕೊಳ್ಳುವುದರಲ್ಲಿಯೇ ಜೀವನದ ಸಾರ್ಥಕತೆ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT