ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ದಾನವೇ ಧರ್ಮ

Last Updated 9 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ತಪಃ ಪರಂ ಕೃತಯುಗೇ ತ್ರೇತಾಯಾಂ ಜ್ಞಾನಮುಚ್ಯತೇ ।

ದ್ವಾಪರೇ ಯಜ್ಞಮೇವಾಹುರ್ದಾನಮೇವ ಕಲೌ ಯುಗೇ ।।

ಇದರ ತಾತ್ಪರ್ಯ ಹೀಗೆ:

’ಕೃತಯುಗದಲ್ಲಿ ತಪಸ್ಸು ಶ್ರೇಷ್ಠವಾದ ಧರ್ಮವಾಗಿತ್ತು. ತ್ರೇತಾಯುಗದಲ್ಲಿ ಜ್ಞಾನವನ್ನೂ ದ್ವಾಪರಯುಗದಲ್ಲಿ ಯಜ್ಞನ್ನೂ ಶ್ರೇಷ್ಠವಾದ ಧರ್ಮ ಎಂದು ತಿಳಿದರು. ಆದರೆ ಕಲಿಯುಗದಲ್ಲಿ ದಾನವನ್ನೇ ಶ್ರೇಷ್ಠವಾದ ಧರ್ಮವೆಂದು ಹೇಳಿದ್ದಾರೆ.’

ನಮ್ಮ ಸಂಸ್ಕೃತಿಯಲ್ಲಿ ಧರ್ಮಕ್ಕೆ ತುಂಬ ಪ್ರಾಶಸ್ತ್ಯ ಇದೆ. ಹೀಗೆಂದು ಧರ್ಮದ ವ್ಯಾಖ್ಯೆಯೇನೂ ಸುಲಭವಲ್ಲ. ಧರ್ಮಕ್ಕೆ ಇರುವಂಥ ಅರ್ಥಪದರಗಳೂ ಹಲವು.

ನಮ್ಮ ಸಂಸ್ಕೃತಿಯಲ್ಲಿ ಇರುವ ಇನ್ನೊಂದು ಅಪೂರ್ವ ಕಲ್ಪನೆ ಎಂದರೆ ಯುಗಗಳ ಕಲ್ಪನೆ. ನಾಲ್ಕು ಯುಗಗಳು ಚಕ್ರದಂತೆ ಒಂದಾದಮೇಲೆ ಇನ್ನೊಂದು ಸುತ್ತುತ್ತಲೇ ಇರುತ್ತವೆ. ಈ ನಾಲ್ಕು ಯುಗಗಳಲ್ಲೂ ಸಾಮಾನ್ಯವಾಗಿರುವಂಥದ್ದು ಧರ್ಮ. ಎಂದರೆ ಎಲ್ಲ ಯುಗದಲ್ಲೂ ಇರುವಂಥ ಶಾಶ್ವತ ವಿವರವೇ ಧರ್ಮ. ಎಲ್ಲವನ್ನೂ ಧಾರಣೆ ಮಾಡುವಂಥದ್ದು, ಎಂದರೆ ಎತ್ತಿಹಿಡಿಯುವಂಥದ್ದೇ ಧರ್ಮ. ಹೀಗಾಗಿ ಎಲ್ಲ ಯುಗಗಳನ್ನೂ ಧರಿಸಿರುವಂಥದ್ದು, ಎತ್ತಿಹಿಡಿದಿರುವಂಥದ್ದು ಧರ್ಮವೇ ಹೌದು.

ಆದರೆ ಧರ್ಮದ ಆಯಾಮ ಯುಗದಿಂದ ಯುಗಕ್ಕೆ ಬದಲಾವಣೆ ಆಗುತ್ತದೆ. ಇದನ್ನೇ ಸುಭಾಷಿತ ಹೇಳುತ್ತಿರುವುದು.

ಮೊದಲನೆಯ ಯುಗವಾದ ಕೃತಯುಗದ ಧರ್ಮ ಯಾವುದೆಂದರೆ ಅದೇ ತಪಸ್ಸು. ಎರಡನೆಯ ಯುಗವಾದ ತ್ರೇತಾಯುಗದ ಧರ್ಮವೆಂದರೆ ಜ್ಞಾನ. ಯಜ್ಞವೇ ಮೂರನೆಯ ಯುಗವಾದ ದ್ವಾಪರಯುಗದ ಧರ್ಮ.

ನಮ್ಮದು ಕಲಿಯುಗ, ನಾಲ್ಕನೆಯ ಯುಗ. ನಮ್ಮ ಯುಗದ ಧರ್ಮ ಎಂದರೆ ದಾನವೇ ಸರಿ ಎನ್ನುತ್ತಿದೆ ಸುಭಾಷಿತ.

ಏಕಾದರೂ ಸುಭಾಷಿತ ಹೀಗೆ ಹೇಳುತ್ತಿದೆ?

ಕಲಿಯುಗದಲ್ಲಿರುವವರು ನರರು; ಮನುಷ್ಯರು. ಮನುಷ್ಯರಿಗೆ ಇರುವ ಹಲವು ದೋಷಗಳಲ್ಲಿ ಪ್ರಧಾನವಾದುದು ಲೋಭ; ಅದೇ ಸಂಗ್ರಹಬುದ್ಧಿ. ಜಗತ್ತಿನಲ್ಲಿರುವ ಎಲ್ಲವೂ ನನಗೇ ಸೇರಿದ್ದು – ಎನ್ನುವುದು ಮನುಷ್ಯರ ಸಹಜಸ್ವಭಾವ. ಆದರೆ ಮನುಷ್ಯನ ಬದುಕು ಸಾಗುವುದೇ ಪರಸ್ಪರ ಸಹಕಾರದಿಂದ. ಮನುಷ್ಯ–ಮನುಷ್ಯರ ನಡುವೆ ಕೊಟ್ಟು–ತೆಗೆದುಕೊಳ್ಳುವ ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ಮನುಷ್ಯರಲ್ಲಿರುವ ಸಂಗ್ರಹಬುದ್ಧಿ ಈ ಸರಪಳಿಗೆ ಮಾರಕವಾಗಬಹುದು. ಸಮಾಜದಲ್ಲಿ ಸಮತೋಲನ ತಪ್ಪಬಹುದು. ಆದುದರಿಂದ ಸಮಾಜದ ಸೌಹಾರ್ದ ಮತ್ತು ಸಮತೋಲನ ಗಟ್ಟಿಯಾಗಿ ನೆಲೆಗೊಳ್ಳಬೇಕಾದರೆ ದಾನ ಎನ್ನುವುದು ಎಲ್ಲರ ಸ್ವಭಾವ ಆಗಬೇಕು. ದಾನ ಎಂದರೆ ವಿತರಣ, ಎಂದರೆ ಇನ್ನೊಬ್ಬರಿಗೆ ಹಂಚುವುದು. ಇದು ಕೇವಲ ಹಣಕ್ಕೋ ಧಾನ್ಯಕ್ಕೋ ಸೀಮಿತವಾದ ದಾನ ಎಂದು ಅರ್ಥವಲ್ಲ. ಜ್ಞಾನದ ದಾನವೂ ಆಗಬಹುದು, ಶ್ರಮದ ದಾನವೂ ಆಗಬಹುದು. ನಮ್ಮಲ್ಲಿ ಹೆಚ್ಚು ಸಂಗ್ರಹವಾಗಿರುವ ಯಾವ ಒಳ್ಳೆಯ ವಸ್ತು ಅಥವಾ ಗುಣ ಇದೆಯೋ ಅದನ್ನು ಸಮಾಜಕ್ಕೆ ವಿನಿಯೋಗಿಸುವುದೇ ದಾನ ಎಂದೆನಿಸಿಕೊಳ್ಳುತ್ತದೆ.

ನಮ್ಮಲ್ಲಿ ದಾನಶೀಲಗುಣ ಇದ್ದರೆ ಆಗ ಸಂಗ್ರಹ ಎನ್ನುವುದು ಪಾಪವಾಗಲಾರದು, ಲೋಭವೂ ಎಂದೆನಿಸದು. ಅದು ಲೋಕಸಂಗ್ರಹವೇ ಆಗುತ್ತದೆ; ಸಮಾಜಕ್ಕೆ ಒದಗುವ ನಿಧಿಯೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT