ಭಾನುವಾರ, ಜೂನ್ 20, 2021
30 °C

ದಿನದ ಸೂಕ್ತಿ | ಭ್ರಷ್ಟರೇ ಎಚ್ಚರ!

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ರಾಜಸೇವಾ ಮನುಷ್ಯಾಣಾಮಸಿಧಾರಾವಲೇಹನಮ್‌ ।

ಪಂಚಾನನಪರಿಷ್ವಂಗೋ ವ್ಯಾಲೀವದನಚುಂಬನಮ್‌ ।।

ಇದರ ತಾತ್ಪರ್ಯ ಹೀಗೆ:

’ಮನುಷ್ಯರಿಗೆ ರಾಜಸೇವೆ ಎಂಬುದು ಕತ್ತಿಯ ಅಲಗನ್ನು ನೆಕ್ಕಿದಂತೆ; ಸಿಂಹವನ್ನು ಅಪ್ಪಿಕೊಂಡಂತೆ; ಸರ್ಪದ ಮುಖವನ್ನು ಚುಂಬಿಸಿದಂತೆ.‘

ಇಲ್ಲಿ ರಾಜಸೇವೆ ಎಂದರೆ ಈಗಿನ ಸರ್ಕಾರಿ ಕೆಲಸ. ರಾಜನಿಗೆ ಅಪಥ್ಯವಾಗುವಂಥ ರೀತಿಯಲ್ಲಿ ಮಂತ್ರಿಯಾದವನು ನಡೆದುಕೊಂಡರೆ ಅವನು ರಾಜನ ಕೋಪಕ್ಕೆ ತುತ್ತಾಗುತ್ತಿದ್ದ. ರಾಜನಿಗೆ ಅಪಥ್ಯವಾಗುವುದು ಎಂದರೆ, ರಾಜನು ಧರ್ಮಮಾರ್ಗವನ್ನು ಬಿಟ್ಟು ನಡೆದಾಗ ಅದನ್ನು ಗಮನಿಸಿ ಅವನನ್ನು ಎಚ್ಚರಿಸುವುದು ಮಂತ್ರಿಯ ಕರ್ತವ್ಯ. ಅಂತೆಯೇ ಸರ್ಕಾರದ ಅಧಿಕಾರಿಗಳು ಕೂಡ ಸರ್ಕಾರದ ಜನವಿರೋಧಿಯಾದ ನಿರ್ಧಾರಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಬೇಕಾಗುತ್ತದೆ. ಹೀಗೆ ಧರ್ಮಮಾರ್ಗದಲ್ಲಿರುವ ರಾಜಸೇವಕರಿಗೂ ಸರ್ಕಾರಿ ಅಧಿಕಾರಿಗಳಿಗೂ ಸದಾ ತೊಂದರೆಗಳು ಎದುರಾಗುತ್ತಲೇ ಇರುತ್ತವೆ; ರಾಜಸೇವಕನಿಗೆ ಗಡಿಪಾರು, ಸರ್ಕಾರಿ ಅಧಿಕಾರಿಗೆ ವರ್ಗಾವಣೆಯ ಪಾಡು!

ಆದರೆ ಇಂದು ಸರ್ಕಾರದ ಅನೀತಿಗಳನ್ನೂ ಅನ್ಯಾಯವನ್ನೂ ಎತ್ತಿತೋರಿಸಬಲ್ಲ ಧೀಮಂತ ಅಧಿಕಾರಿಗಳು ಎಷ್ಟು ಮಂದಿ ಇದ್ದಾರು? ಅಂಥವರ ದನಿಯೇ ಕೇಳದಷ್ಟು ಅವರ ಸಂಖ್ಯೆ ಕುಗ್ಗಿರುವುದು ಸುಳ್ಳಲ್ಲ. ಇಂಥ ಸಂದರ್ಭದಲ್ಲಿ ’ಹಾವಿಗೆ ಮುತ್ತು ಕೊಡುವಂಥ‘, ‘ಸಿಂಹವನ್ನು ಅಪ್ಪಿಕೊಳ್ಳುವಂಥ‘ ಸನ್ನಿವೇಶವೇ ಎದುರಾಗದು. ಮಂತ್ರಿಗಳಲ್ಲೂ ಅಧಿಕಾರಿಗಳಲ್ಲೂ ಈಗ ಹೊಂದಾಣಿಕೆಯೇ ಹೆಚ್ಚು, ಭ್ರಷ್ಟಾಚಾರದ ವಿಷಯದಲ್ಲಿ! ಇದು ಈ ಸರ್ಕಾರದಲ್ಲಿ, ಆ ಸರ್ಕಾರದಲ್ಲಿ – ಎಂದು ಪ್ರತ್ಯೇಕಿಸುವಷ್ಟು ಏಕದೇಶೀಯವಾಗಿಲ್ಲ; ಎಲ್ಲ ಸರ್ಕಾರಗಳ ಹಣೆಬರಹ ಇಷ್ಟೇ – ಎನ್ನುವುದನ್ನು ನಾವು ಇತಿಹಾಸದುದ್ದಕ್ಕೂ ಸ್ಥಾಪನೆಯಾಗಿರುವ ಸತ್ಯ.

ರಾಜನಾದವನು ಧರ್ಮಿಷ್ಠನಾಗಿರತಕ್ಕದ್ದು – ಎಂಬುದನ್ನು ನಮ್ಮ ಪರಂಪರೆ ಮತ್ತೆ ಮತ್ತೆ ಒತ್ತಿಹೇಳುತ್ತಲೇ ಇದೆ, ದಿಟ. ಆದರೆ ನಮ್ಮ ದೇಶ ಜಗತ್ತಿನ ಭ್ರಷ್ಟಾಚಾರ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದೂ ಸುಳ್ಳಲ್ಲ. ಇದರಿಂದ ತಿಳಿದುಬರುವ ಸಂಗತಿ ಎಂದರೆ, ಆಚಾರಕ್ಕೂ ವಿಚಾರಕ್ಕೂ ಇರುವ ಅಂತರ. ಇದು ಕೇವಲ ನಮ್ಮ ಕಾಲದ ವಿದ್ಯಮಾನವಲ್ಲ, ಪ್ರಾಚೀನ ಕಾಲದಲ್ಲೂ ಭ್ರಷ್ಟರಾಜರೂ ಭ್ರಷ್ಟಮಂತ್ರಿಗಳೂ ಇದ್ದರು; ಇದರಲ್ಲಿ ಅನುಮಾನವೇ ಇಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರ–ಮಂತ್ರಿ–ಪ್ರಭುತ್ವದ ಭ್ರಷ್ಟಾಚಾರ ಕಡಿಮೆ ಆಗಬೇಕಿತ್ತು; ಆದರೆ ದುರಂತ ಎಂದರೆ ಹೆಚ್ಚೇ ಆಗಿದೆ. ಕೋವಿಡ್‌ ಮಹಾಮಾರಿಯ ಕಾಲದಲ್ಲಿ ಹಲವರು ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎಂದು ಹೇಳುವಷ್ಟು ವ್ಯವಸ್ಥೆ ಪಾರದರ್ಶಕವಾಗಿಲ್ಲ. ಮಂತ್ರಿಗಳೇ ಭ್ರಷ್ಟರಾದರೆ ವ್ಯವಸ್ಥೆಯನ್ನು ಸರಿಪಡಿಸುವವರು ಯಾರು? ಇಲ್ಲೊಂದು ಸುಭಾಷಿತವನ್ನು ಕೇಳಿ:

ರಾಜ್ಞಿ ಧರ್ಮಿಣಿ ಧರ್ಮಿಷ್ಠಾಃ ಪಾಪೇ ಪಾಪಪರಾಃ ಸದಾ ।

ರಾಜಾನಮನುವರ್ತಂತೇ ಯಥಾ ರಾಜಾ ತಥಾ ಪ್ರಜಾಃ ।।

‘ರಾಜನು ಧರ್ಮಿಷ್ಠನಾದರೆ ಪ್ರಜೆಗಳು ಧರ್ಮಿಷ್ಠರಾಗುತ್ತಾರೆ; ಅವನು ಪಾಪಿಯಾದರೆ ಇವರೂ ಪಾಪಿಗಳಾಗುತ್ತಾರೆ. ಪ್ರಜೆಗಳು ರಾಜನನ್ನು ಅನುಸರಿಸುತ್ತಾರೆ. ರಾಜನಿದ್ದಂತೆ ಪ್ರಜೆ.‘

ಇಡಿಯ ಸಮಾಜದ ಧರ್ಮ–ಅಧರ್ಮಗಳಿಗೆ ರಾಜನೇ ಕಾರಣ. ಅವನೇ ಅಧರ್ಮಿಯಾದರೆ ಪ್ರಜೆಗಳಿಗೆ ಧರ್ಮದ ಬಗ್ಗೆ ಎಚ್ಚರಿಸುವವರು ಯಾರು?

ರಾಜಾ ಧರ್ಮಶ್ಚ ಕಾಮಶ್ಚ ದ್ರವ್ಯಾಣಾಂ ಚೋತ್ತಮೋ ನಿಧಿಃ । 

ಧರ್ಮಃ ಶುಭಂ ವಾ ಪಾಪಂ ವಾ ರಾಜಮೂಲಂ ಪ್ರವರ್ತತೇ ।।

‘ರಾಜನೇ ಧರ್ಮ–ಕಾಮಗಳಿಗೆ ಪ್ರವರ್ತಕ. ಅವನೇ ಅರ್ಥಕ್ಕೆ ನಿಧಿ. ಧರ್ಮವಾಗಲಿ, ಒಳ್ಳೆಯದಾಗಲಿ, ಕೆಟ್ಟದಾಗಲಿ – ರಾಜನ ಪ್ರೇರಣೆಯಿಂದಲೇ ನಡೆಯುತ್ತದೆ.‘

ರಾಜ್ಯ, ದೇಶ, ಸಮಾಜ – ಇರುವುದೇ ನನ್ನ ಸ್ವಾರ್ಥಕ್ಕೆ ಎಂಬ ಧೋರಣೆಯೇ ಭ್ರಷ್ಟಾಚಾರದ ಮೂಲವಾಗಿರುತ್ತದೆ. ರಾಮಾಯಣದಲ್ಲಿ ಶ್ರೀರಾಮ ಹೇಳುವ ಈ ಮಾತುಗಳನ್ನು ನೋಡಿ:

 ಯಾನಿ ಮಿಥ್ಯಾಭಿಶಸ್ತಾನಾಂ ಪತಂತ್ಯಸ್ರಾಣಿ ರಾಘವ ।

ತಾನಿ ಪುತ್ರಪಶೂನ್‌ ಘ್ನಂತಿ ಪ್ರೀತ್ಯರ್ಥಮನುಶಾಸತಃ ।।

‘ಭರತ, ರಾಜನು ತನ್ನ ಸೌಖ್ಯಕ್ಕಾಗಿ ರಾಜ್ಯವನ್ನು ಆಳುತ್ತಿದ್ದರೆ ಪ್ರಜೆಗಳು ಅನ್ಯಾಯಕ್ಕೆ ಗುರಿಯಾಗಿ ಕಣ್ಣೀರು ಸುರಿಸುತ್ತಾರೆ. ಪ್ರಜೆಗಳ ಕಣ್ಣೀರು ರಾಜನ ಸಂತತಿಯನ್ನೂ ಪಶು ಮೊದಲಾದ ಸಂಪತ್ತನ್ನೂ ನಾಶ ಮಾಡುತ್ತದೆ.‘

ನಾವು ಎಷ್ಟು ಸಂಪತ್ತನ್ನು ಕೂಡಿಟ್ಟರೂ ಅದನ್ನು ಎಲ್ಲಿ ತನಕ ಅನುಭವಿಸಲು ಸಾಧ್ಯ, ಕಾಪಾಡಲು ಸಾಧ್ಯ, ಎಷ್ಟು ಶಾಶ್ವತ – ಎಂಬ ಆತ್ಮಾವಲೋಕ ನಡೆಯದ ಹೊರತು ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿಲ್ಲ. 

ಏಕಂ ವಿಷರಸೋ ಹಂತಿ ಶಸ್ತ್ರೇಣೈಕಶ್ಚ ಹನ್ಯತೇ ।

ಸಬಂಧುರಾಷ್ಟ್ರಂ ರಾಜಾನಂ ಹಂತ್ಯೇಕೋ ಮಂತ್ರವಿಪ್ಲವಃ ।।

‘ವಿಷವು ಒಬ್ಬನನ್ನು ಕೊಲ್ಲುತ್ತದೆ; ಆಯುಧದಿಂದ ಒಬ್ಬನು ಹತನಾಗುತ್ತಾನೆ. ದುಷ್ಟಮಂತ್ರಾಲೋಚನೆಯು ಬಂಧು–ರಾಷ್ಟ್ರಸಹಿತವಾಗಿ ರಾಜನನ್ನು ಕೊಲ್ಲುತ್ತದೆ.‘

ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು – ಈ ಶ್ಲೋಕ ಹೇಳುತ್ತಿರುವ ಎಚ್ಚರಿಕೆಯನ್ನು ಗಮನಿಸಬೇಕು. ಒಬ್ಬ ಮಂತ್ರಿ ಅಥವಾ ಒಬ್ಬ ಅಧಿಕಾರಿಯ ಭ್ರಷ್ಟಾಚಾರದ ಕಾರಣದಿಂದ ಇಡಿಯ ಸಮಾಜ, ಅಷ್ಟೇಕೆ ದೇಶವೇ ನಾಶವಾಗಬಲ್ಲದು. ಇದೇ ಸಮಾಜದಲ್ಲಿಯೇ, ಇದೇ ದೇಶದಲ್ಲಿಯೇ ಆ ಭ್ರಷ್ಟ ಮಂತ್ರಿ–ಅಧಿಕಾರಿಗಳೂ, ಅವರ ಕುಟುಂಬದವರೂ ಇದ್ದಾರೆ ಎನ್ನುವುದನ್ನು ಅವರು ಮರೆಯಬಾರದು. ಸಮಾಜ ನಾಶವಾದರೆ ಅವರೂ ನಾಶವಾಗುವುದೂ ನಿಶ್ಚಿತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು