ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಎಲ್ಲೆಲ್ಲೂ ಶಿವ

Last Updated 3 ಜನವರಿ 2021, 18:15 IST
ಅಕ್ಷರ ಗಾತ್ರ

ನಾರಾಯಣಪರಾಃ ಸರ್ವೇ ನ ಕುತಶ್ಚನ ನ ಭಿಭ್ಯತಿ ।

ಸ್ವರ್ಗಾಪವರ್ಗನರಕೇಷ್ವಪಿ ತುಲ್ಯಾರ್ಥದರ್ಶಿನಃ ।।

ಇದರ ತಾತ್ಪರ್ಯ ಹೀಗೆ:

‘ನಾರಾಯಣನ ಭಕ್ತರೆಲ್ಲರೂ ಯಾವುದರ ದೆಸೆಯಿಂದಲೂ ಹೆದರುವುದಿಲ್ಲ. ಸ್ವರ್ಗ, ಮೋಕ್ಷ, ನರಕಗಳಲ್ಲಿಯೂ ಸಮದೃಷ್ಟಿಯನ್ನು ಉಳ್ಳವರಾಗಿರುತ್ತಾರೆ.’

ಭಕ್ತಿಯ ವೈಶಾಲ್ಯ ಎಂಥದ್ದು ಎಂಬುದನ್ನು ಈ ಸುಭಾಷಿತ ಹೇಳುತ್ತಿದೆ.

ತಾರತಮ್ಯ ಎನ್ನುವಂಥದ್ದು ಎಲ್ಲೆಲ್ಲೂ ಇದೆ; ಹೊರಗಡೆ ಸಮಾಜದಲ್ಲಿ ಮಾತ್ರವಲ್ಲ, ನಮ್ಮ ಮನೆಗಳಲ್ಲಿಯೇ ಇರುತ್ತದೆ. ಮನೆಗಳಲ್ಲಿ ಮಾತ್ರವಲ್ಲ, ನಮ್ಮಲ್ಲಿಯೇ, ನಮ್ಮ ಬಗ್ಗೆಯೇ ತಾರತಮ್ಯ ಇದೆಯಲ್ಲವೆ? ಈ ತಾರತಮ್ಯಕ್ಕೆ ಕಾರಣಗಳೂ ಹಲವು. ಇಲ್ಲಿ ಸುಭಾಷಿತ ಅಂಥ ಒಂದು ಪ್ರಬಲ ಕಾರಣವನ್ನು ಹೇಳಿದೆ; ಅದೇ ಹೆದರಿಕೆ.

ಹೆದರಿಕೆಗೂ ಮೂಲಗಳು ಹಲವು. ನಮಗೆ ಏನಾದರೂ ತೊಂದರೆ ಆಗಬಹುದು ಎಂಬುದು ಈ ಹೆದರಿಕೆಯ ಮೂಲಕಾರಣಗಳಲ್ಲಿ ಒಂದು. ನನಗೆ ಸ್ವರ್ಗ ತಪ್ಪಿಹೋಗಬಹುದು ಎಂಬ ಹೆದರಿಕೆ ಇರಬಹುದು; ಮೋಕ್ಷ ಸಿಗಲಾರದು ಎಂಬ ಹೆದರಿಕೆ ಇರಬಹುದು; ಅಥವಾ ನರಕಕ್ಕೆ ಬೀಳಬೇಕಾಗಿ ಬರಬಹುದು ಎಂಬ ಹೆದರಿಕೆ ಇರಬಹುದು.

ಆದರೆ ಇಂಥ ಯಾವುದೇ ಹೆದರಿಕೆಗಳಿಗೂ ಹೆದರಿಬೇಕಿಲ್ಲ ಎಂದು ಸುಭಾಷಿತ ಆಶ್ವಾಸನೆ ಕೊಡುತ್ತಿದೆ. ಯಾವಾಗ ಈ ಎಲ್ಲ ಹೆದರಿಕೆಗಳೂ ಮಾಯವಾಗುತ್ತವೆ ಎಂಬುದನ್ನೂ ಅದು ಸೂಚಿಸಿದೆ. ನಾರಾಯಣನ ಭಕ್ತರು ಯಾವ ರೀತಿಯ ಹೆದರಿಕೆಗಳಿಗೂ ಬಗ್ಗುವವರಲ್ಲ ಎಂದು ಅದು ಘೋಷಿಸಿದೆ.

ನಾರಾಯಣ ಎಂದರೆ ವಿಷ್ಣು. ಆದರೆ ಇಲ್ಲಿ ಕೇವಲ ವಿಷ್ಣುಭಕ್ತರನ್ನು ಕುರಿತಷ್ಟೆ ಸುಭಾಷಿತ ಮಾತನಾಡುತ್ತಿಲ್ಲ; ಎಲ್ಲ ದೇವರ ಭಕ್ತರಿಗೂ ಸಲ್ಲುವಂಥ ಮಾತು ಇದು ಎಂಬುದನ್ನು ಮರೆಯಬಾರದು.

ಭಕ್ತಿಯ ಪಾರಮ್ಯ ಎಂಥದ್ದು ಎಂಬುದನ್ನು ಹೇಳುವುದು ಸುಭಾಷಿತದ ಉದ್ದೇಶ. ಭಕ್ತಿ ಎಂದರೆ ದೇವರಲ್ಲಿ ಅಚಲವಾದ ನಂಬಿಕೆ, ಶ್ರದ್ಧೆ; ಭಗವಂತನಲ್ಲಿ ನಾವು ಸಾಧಿಸುವ ನಿರಂತರ ತಾದತ್ಮ್ಯ. ನಮ್ಮ ಮನಸ್ಸಿನಲ್ಲೂ ಭಾವದಲ್ಲೂ ಬುದ್ಧಿಯಲ್ಲೂ ಭಗವಂತನೇ ತುಂಬಿಕೊಂಡಿರುವಾಗ ಅದು ಭಕ್ತಿ. ನಮ್ಮಲ್ಲಿ ದೇವರೊಬ್ಬನೇ ಇರುವಾಗ ಇನ್ನೊಂದು ವಸ್ತುವಿನಿಂದಲೋ ಸಂಗತಿಯಿಂದಲೋ ವ್ಯಕ್ತಿಯಿಂದಲೋ ಹೆದರಿಕೆಯಾದರೂ ಏಕೆ ಉಂಟಾದೀತು?

ಮಾತ್ರವಲ್ಲ, ನಮ್ಮ ಒಳಗೂ ಹೊರಗೂ ದೇವರೇ ತುಂಬಿಕೊಂಡಿರುವಾಗ ನಾವು ಇನ್ನೊಂದು ವಸ್ತುವನ್ನೋ ವ್ಯಕ್ತಿಯನ್ನೋ ನೋಡುತ್ತಿಲ್ಲ ಎಂದೇ ಅರ್ಥ ಅಲ್ಲವೆ? ಇನ್ನೊಬ್ಬ ವ್ಯಕ್ತಿಯೇ ನಮ್ಮ ದೃಷ್ಟಿಯಲ್ಲಿ ಇಲ್ಲದಿರುವಾಗ, ಕಾಣುವ ವಸ್ತು–ವ್ಯಕ್ತಿಗಳೆಲ್ಲರೂ ದೇವರೇ ಆಗಿರುವಾಗ ತಾರತಮ್ಯಕ್ಕೆ ಅವಕಾಶವಾದರೂ ಎಲ್ಲಿ? ಅಭಿನವಗುಪ್ತರ ಮಾತೊಂದು ಇಲ್ಲಿ ನೆನಪಾಗುತ್ತದೆ:

ವಸ್ತುತಃ ಶಿವಮಯೇ ಹೃದಿ ಸ್ಫುಟಂ

ಸರ್ವತಃ ಶಿವಮಯಂ ವಿರಾಜತೇ

(ದಿಟವಾಗಿ ಹೃದಯ ಶಿವಮಯವಾಗೆ, ಎತ್ತಲೂ ಸ್ಫುಟವಾಗಿ ಶಿವಮಯವೆ ಹೊಳೆಹೊಳೆವುದು!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT