ಶುಕ್ರವಾರ, ಜನವರಿ 22, 2021
19 °C

ದಿನದ ಸೂಕ್ತಿ: ಇಂದಿನ ಕೆಲಸ ಇಂದಿಗೆ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಶ್ವಃಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ಣಿಕಮ್‌ ।

ನ ಹಿ ಪ್ರತೀಕ್ಷತೇ ಮೃತ್ಯುಃ ಕೃತಮಸ್ಯ ನ ವಾ ಕೃತಮ್‌ ।।

ಇದರ ತಾತ್ಪರ್ಯ ಹೀಗೆ:

‘ನಾಳೆ ಮಾಡಬೇಕಾದ ಕೆಲಸವನ್ನು ಈ ದಿನವೇ ಮಾಡಬೇಕು. ಅಪರಾಹ್ಣದಲ್ಲಿ ಮಾಡಬೇಕಾದ್ದನ್ನು ಪೂರ್ವಾಹ್ಣದಲ್ಲಿ ಮಾಡಬೇಕು. ಏಕೆಂದರೆ, ಇವನು ಕೆಲಸವನ್ನು ಮಾಡಿ ಮುಗಿಸಿದನೇ ಇಲ್ಲವೆ – ಎಂದು ಮೃತ್ಯು ಕಾಯುವುದಿಲ್ಲ.’

ನಮ್ಮೆಲ್ಲರ ಸಹಜಸ್ವಭಾವ ಎಂದರೆ ಸೋಮಾರಿತನ. ಕೆಲಸವನ್ನು ಮಾಡಲು ಯಾರು ತಾನೆ ಇಷ್ಟಪಡುತ್ತಾರೆ? ನಮ್ಮೆಲ್ಲರ ದುರಂತಕ್ಕೂ ಅವನತಿಗೂ ಈ ಸೋಮಾರಿತನವೇ ಮೂಲವಾಗಿರುತ್ತದೆ. ಹೀಗಾಗಿಯೇ ‘ಉದ್ಯೋಗಂ ಪುರುಷಲಕ್ಷಣಮ್‌‘ ಎಂಬ ಮಾತು ಸಂದೇಶವಾಗಿ ಬಂದಿರುವುದು. ಇಲ್ಲಿ ಪುರುಷ ಎಂದರೆ ಗಂಡಸರು ಎಂದಷ್ಟೆ ಅಲ್ಲ, ಗಂಡು–ಹೆಣ್ಣು ಸೇರಿಯೇ ಪುರುಷ. ಹೀಗೆಯೇ ‘ಕಾಯಕವೇ ಕೈಲಾಸ‘ ಎಂಬ ಉಪದೇಶ ಕೂಡ ಪ್ರಾಮುಖ್ಯ ಪಡೆದುಕೊಂಡಿತು. ಕ್ರಿಯಾಶೀಲತೆಯೇ ನಮ್ಮ ಸುಖಕ್ಕೆ ಕಾರಣ ಎಂಬುದು ಇಲ್ಲಿರುವ ಧ್ವನಿ. ‘ಕೈ ಕೆಸರಾದರೆ ಬಾಯಿ ಮೊಸರು’, ‘ಹನಿಗೂಡಿದರೆ ಹಳ್ಳ, ತೆನೆಗೂಡಿದರೆ ಬಳ್ಳ‘ – ಇಂಥ ಹಲವು ನುಡಿಗಟ್ಟುಗಳು ನಮ್ಮ ಜೀವನಕ್ಕೂ ನಮ್ಮ ಕ್ರಿಯಾಶಕ್ತಿಗೂ ಇರುವ ನಂಟನ್ನು ಎತ್ತಿತೋರಿಸುತ್ತವೆ.

ಹೀಗಿದ್ದರೂ ನಾವು ಮಾತ್ರ ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತೇವೆ. ಶ್ರಮವನ್ನು ನಾವು ಜೀವನದ ಸಹಜಕ್ರಮ ಎಂದು ಭಾವಿಸದೆ ಅಕ್ರಮ ಎಂದೇ ನಾವು ಭಾವಿಸಿಕೊಳ್ಳುತ್ತಿರುತ್ತೇವೆ! ಸುಭಾಷಿತ ಇದನ್ನೇ ಇಲ್ಲಿ ಹೇಳುತ್ತಿರುವುದು; ಅದು ಹೇಳಿರುವುದು ಕೂಡ ಮಾರ್ಮಿಕವಾಗಿದೆ.

ಸೋಮಾರಿತನದ ಒಂದು ಮುಖ ಎಂದರೆ ನಾವು ಮಾಡಬೇಕಾಗಿರುವ ಕೆಲಸವನ್ನು ಮುಂದೂಡುತ್ತಹೋಗುವುದು. ಬೆಳಗ್ಗೆ ಮಾಡಬೇಕಾದ ಕೆಲಸವನ್ನು ಮಧ್ಯಾಹ್ನ ಮಾಡೋಣ ಬಿಡು ಎಂದು ಮುಂದೂಡುತ್ತೇವೆ; ಮಧ್ಯಾಹ್ನವೂ ಅದನ್ನು ಮಾಡುವುದಿಲ್ಲ; ಸಂಜೆಗೆ ಮಾಡೋಣ ಬಿಡು ಎನ್ನುತ್ತೇವೆ; ಅದು ಸಂಜೆಯೂ ಆಗುವುದಿಲ್ಲ; ರಾತ್ರಿಯೂ ಆಗುವುದಿಲ್ಲ; ಮರುದಿನವೂ ಆಗುವುದಿಲ್ಲ. ಹೀಗೆಯೇ ಮುಂದೂಡುತ್ತಹೋಗುತ್ತೇವೆ. ನಾವು ನಮ್ಮ ಕೆಲಸವನ್ನು ಮುಂದೂಡಬಹುದು. ಆದರೆ ಪ್ರಕೃತಿಯಲ್ಲಿ ಆಗುತ್ತಿರುವ ಕೆಲಸಗಳನ್ನು ನಾವು ನಿಲ್ಲಿಸಲು ಸಾಧ್ಯವೇ? ನಾವು ಬೆಳಗ್ಗೆ ಕೆಲಸ ಮಾಡಲಿಲ್ಲ ಎಂದು ಸೂರ್ಯ ತನ್ನ ಗತಿಯನ್ನು ನಿಲ್ಲಿಸುತ್ತಾನೆಯೆ? ಅವನು ತನ್ನ ಕೆಲಸವನ್ನು ತಾನು ಮಾಡುತ್ತಲೇ ಇರುತ್ತಾನೆ. ಹೀಗೆಯೇ ಪ್ರಕೃತಿ ಎನ್ನಿ, ದೈವ ಎನ್ನಿ – ಅದು ನಮ್ಮ ಆಯುಸ್ಸಿನ ಪ್ರಮಾಣವನ್ನು ಒಂದು ಕ್ಷಣವೂ ನಿಲ್ಲಿಸದೆ ಅದನ್ನು ಕಳೆಯುತ್ತಲೇ ಇರುತ್ತದೆ. ಇದನ್ನೇ ಸುಭಾಷಿತ ಹೇಳುತ್ತಿರುವುದು: ನಾವು ಕೆಲಸ ಮಾಡಲಿಲ್ಲ, ನಮ್ಮ ಕರ್ತವ್ಯವನ್ನು ಇನ್ನೂ ನಾವು ಮಾಡಿಲ್ಲ – ಎಂಬ ಕಾರಣದಿಂದ ಮೃತ್ಯುವೇನೂ ರಜೆಯನ್ನು ತೆಗೆದುಕೊಳ್ಳುವುದಿಲ್ಲ; ಅದು ಯಾವಾಗ ನಮ್ಮಲ್ಲಿಗೆ ಬರಬೇಕೋ ಆ ಸಮಯಕ್ಕೇ, ಒಂದೇ ಒಂದು ಕ್ಷಣವೂ ತಡಮಾಡದೆ ಬಂದೇ ಬರುತ್ತದೆ.

ಇಂದಿನ ಕೆಲಸವನ್ನು ಇಂದೇ ಮಾಡೋಣ; ಸಾಧ್ಯವಾದರೆ ನಾಳೆಯ ಕೆಲಸವನ್ನೂ ಇಂದೇ ಮಾಡೋಣ.

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.