ಭಾನುವಾರ, ಆಗಸ್ಟ್ 1, 2021
23 °C

ದಿನದ ಸೂಕ್ತಿ | ಧೂರ್ತರಿದ್ದಾರೆ ಎಚ್ಚರ!

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಮುಖಂ ಪದ್ಮದಲಾಕಾರಂ ವಾಣೀ ಚಂದನಶೀತಲಾ ।
ಹೃದಯಂ ಕರ್ತರೀತುಲ್ಯಂ ತ್ರಿವಿಧಂ ಧೂರ್ತಲಕ್ಷಣಮ್‌ ।।

ಇದರ ತಾತ್ಪರ್ಯ ಹೀಗೆ:

‘ಮುಖವು ಪದ್ಮದಳದಂತೆ ಸೊಗಸು, ಮಾತು ಚಂದನದಂತೆ ತಂಪು, ಹೃದಯವು ಕತ್ತರಿ ಇದ್ದಂತೆ – ಹೀಗೆ ಧೂರ್ತರ ಲಕ್ಷಣ ಮೂರು ಬಗೆಯಾಗಿರುತ್ತದೆ.‘

ಅಹಾ! ಧೂರ್ತರ ವರ್ಣನೆಯನ್ನು ಎಷ್ಟು ಚೆನ್ನಾಗಿ ಮಾಡಿದೆ ಸುಭಾಷಿತ!!

ನಾವು ಯಾರನ್ನಾದರೂ ನೋಡಿದರೆ ಮೊದಲಿಗೆ ಯಾವುದರಿಂದ ಆಕರ್ಷಿತರಾಗುತ್ತೇವೆ? ಮೊದಲಿಗೆ ಅವರ ರೂಪ. ಚೆನ್ನಾಗಿರುವವರ ಕಡೆಗೆ ನಮ್ಮ ಕಣ್ಣು ಸಹಜವಾಗಿಯೇ ತಿರುಗುತ್ತದೆ. ಆ ಆಕರ್ಷಕ ವ್ಯಕ್ತಿ ನಮ್ಮತ್ತ ತಿರುಗಿ ನಗೆಯನ್ನು ಚೆಲ್ಲಿದರೆ? ನಮ್ಮ ಕಥೆ ಮುಗಿಯಿತು, ಸ್ವರ್ಗಕ್ಕೆ ಮೂರೇ ಗೇಣು – ಎನ್ನುವಂತೆ ನಮ್ಮ ಮನಸ್ಸು ಒಳಗಡೆಯೇ ಕುಣಿದಾಡಿಬಿಡುತ್ತದೆ.

ಅವರು ನಮ್ಮ ನಗುನಗುತ್ತ ಹತ್ತಿರ ಬಂದರು; ಬಂದದ್ದಲ್ಲದೆ ಮಾತನ್ನೂ ಆಡಿದರು. ಅದೂ ಅವರ ಮಾತಿನ ವೈಖರಿ ಹೇಗಿತ್ತು? ಚಂದನ, ಎಂದರೆ ಗಂಧದಂತೆ ತಂಪಾದ ಮಾತು; ಎಂಥವರನ್ನೂ ತಣ್ಣಗಾಗಿ ಮಾಡುವುದಲ್ಲದೆ, ಆ ಮಾತಿನಲ್ಲಿರುವ ಸೌರಭವೇ ನಮಗೆ ಮತ್ತೇರಿಸುತ್ತಿದೆ. ಈಗ ನಮಗೆ ಸ್ವರ್ಗಕ್ಕೆ ಮೂರು ಗೇಣು ಇಲ್ಲ; ನಾವೇ ಸ್ವರ್ಗಕ್ಕಿಂತ ಆರು ಗೇಣು ಮೇಲಿದ್ದೇವೆ!

ಆ ಸ್ವರ್ಗಸುಖದ ಸಂತೋಷದಲ್ಲಿ ನಾವು ಅವರ ಸನಿಹಕ್ಕೆ ಹೋಗುವವರೆಗೂ ಗೊತ್ತಾಗುವುದಿಲ್ಲ, ಅವರ ಹೃದಯದಲ್ಲಿರುವುದು ಸ್ನೇಹದ ಕೋಮಲತೆಯಲ್ಲ, ಅದು ಧೂರ್ತತನದ ಖಡ್ಗ!

ಸುಭಾಷಿತ ಹೇಳುತ್ತಿರುವುದು ಇದನ್ನೇ. ಧೂರ್ತರ ಹೊರಗಿನ ರೂಪ–ವೈಯಾರಗಳಿಂದ ನಾವು ಮೋಸಹೋಗಿ, ಅವರ ಸನಿಹಕ್ಕೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ – ಬೆಂಕಿಯ ಜ್ವಾಲೆಯನ್ನು ತಪ್ಪಾಗಿ ಗ್ರಹಿಸಿ, ಕೊನೆಗೆ ಅದಕ್ಕೆ ಆಹುತಿಯಾಗುವ ಪತಂಗದಂತೆಯೇ ನಮ್ಮ ಸ್ಥಿತಿಯೂ ಆಗುತ್ತದೆ.

‘ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ದುರಾತ್ಮನಾಮ್‌‘ – ’ಮನಸ್ಸಿನಲ್ಲಿ ಒಂದು ವಿಧದಲ್ಲಿ, ಮಾತಿನಲ್ಲಿ ಇನ್ನೊಂದು ವಿಧದಲ್ಲಿ, ಕ್ರಿಯೆಗಳಲ್ಲಿ ಮಗದೊಂದು ರೀತಿಯಲ್ಲಿ ನಡೆದುಕೊಳ್ಳುವುದೇ ದುಷ್ಟರ ಲಕ್ಷಣ.‘

ತಕ್ಷಕಸ್ಯ ವಿಷಂ ದಂತೇ ಮಕ್ಷಿಕಾಯಾಶ್ಚ ಮಸ್ತಕೇ ।
ವೃಶ್ಚಿಕಸ್ಯ ವಿಷಂ ಪುಚ್ಛೇ ಸರ್ವಾಂಗೇ ದುರ್ಜನಸ್ಯ ತತ್‌ ।।

’ತಕ್ಷಕ, ಎಂದರೆ ಹಾವಿಗೆ ವಿಷ ಹಲ್ಲಿನಲ್ಲಿ; ನೊಣಕ್ಕೆ ತಲೆಯಲ್ಲಿ; ಚೇಳಿಗೆ ಬಾಲದಲ್ಲಿ ಇರುತ್ತದೆ. ಆದರೆ ದುಷ್ಟನ ಎಲ್ಲ ಅಂಗಗಳಲ್ಲಿಯೂ ವಿಷವೇ ತುಂಬಿರುತ್ತದೆ.‘

ಹೀಗಾಗಿ ದುಷ್ಟರ, ಧೂರ್ತರ ನೋಟ, ನಗೆ, ಮಾತುಗಳಿಗೆ ಮರುಳಾದೀರಿ, ಎಚ್ಚರ – ಎನ್ನುತ್ತಿದೆ ಸುಭಾಷಿತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು