ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕವಿಯಿಂದ ರಾಜ, ರಾಜನಿಂದ ಕವಿ

Last Updated 19 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಖ್ಯಾತಾ ನರಾಧಿಪತಯಃ ಕವಿಸಂಶ್ರಯೇಣ
ರಾಜಾಶ್ರಯೇಣ ಚ ಗತಾಃ ಕವಯಃ ಪ್ರಸಿದ್ಧಿಮ್‌ ।
ರಾಜ್ಞಾ ಸಮೋsಸ್ತಿ ನ ಕವೇಃ ಪರಮೋಪಕಾರೀ
ರಾಜ್ಞೋ ನ ಚಾಸ್ತಿಕವಿನಾ ಸದೃಶಃ ಸಹಾಯಃ ।।

ಇದರ ತಾತ್ಪರ್ಯ ಹೀಗೆ:‘ಕವಿಗಳು ಆಶ್ರಯಿಸಿರುವುದರಿಂದ ರಾಜರು ಪ್ರಖ್ಯಾತರಾದರು. ರಾಜನನ್ನು ಆಶ್ರಯಿಸಿರುವುದರಿಂದ ಕವಿಗಳು ಪ್ರಸಿದ್ಧರಾದರು. ರಾಜನಿಗೆ ಸಮನಾದ ಉಪಕಾರಿ ಕವಿಗೆ ಇನ್ನೊಬ್ಬನಿಲ್ಲ; ಕವಿಗೆ ಸಮಾನನಾದ ಸಹಾಯಕ ರಾಜನಿಗೆ ಇನ್ನೊಬ್ಬನಿಲ್ಲ.’

ಒಂದು ಕೈಯಿಂದ ಚಪ್ಪಾಳೆಯನ್ನು ತಟ್ಟಲು ಸಾಧ್ಯವೆ? ಸಾಧ್ಯವಿಲ್ಲವಷ್ಟೆ. ಹೀಗೆಯೇ ನಮ್ಮ ಜೀವನದಲ್ಲಿ ಪರಸ್ಪರ ಆಶ್ರಯದಿಂದಲೇ ಏಳಿಗೆ ಎನ್ನುವುದು ಸಾಧ್ಯವಾಗುವುದು. ಆದರೆ ನಾವು ನಮ್ಮ ಒಬ್ಬರ ಕಾರಣದಿಂದಲೇ ನಮಗೆ ಸಿದ್ಧಿ–‍ಪ್ರಸಿದ್ಧಿಗಳು ಲಭಿಸಿರುವುದು ಎಂದು ಅಂದುಕೊಳ್ಳುತ್ತೇವೆ. ಆದರೆ ಇದು ಸುಳ್ಳು. ಇದನ್ನೇ ಸುಭಾಷಿತ ಇನ್ನೊಂದು ವಿಧದಲ್ಲಿ ಹೇಳುತ್ತಿದೆ.

ಹಿಂದಿನ ಕಾಲದಲ್ಲಿ ರಾಜರ ಆಸ್ಥಾನದಲ್ಲಿ ಕವಿಗಳು ಇರುತ್ತಿದ್ದರು. ಅವರು ರಾಜನ ಗುಣಗಳನ್ನು ವರ್ಣಿಸಿ ಕಾವ್ಯಗಳನ್ನು ರಚಿಸುತ್ತಿದ್ದರು. ಈ ಕಾವ್ಯಗಳ ಕಾರಣದಿಂದಾಗಿ ಆ ರಾಜನ ಕೀರ್ತಿ ನಾಲ್ಕು ದಿಕ್ಕುಗಳಲ್ಲಿ ಹರಡುತ್ತಿತ್ತು. ಎಂದರೆ ರಾಜನ ಕೀರ್ತಿಯನ್ನು ಹರಡುವುದರಲ್ಲಿ ಕವಿಯ ಕೊಡುಗೆ ಇರುತ್ತಿತ್ತು. ಇದು ಸರಿ; ಆದರೆ ಕವಿಗೆ ರಾಜನ ಆಶ್ರಯವೇ ಸಿಗದೇ ಇರುತ್ತಿದ್ದರೆ? ಕವಿಗೆ ಆಗ ಕಾವ್ಯವನ್ನು ಬರೆಯುವ ಅವಕಾಶವೇ ಸಿಕ್ಕುತ್ತಿರಲಿಲ್ಲ; ಅವನು ಕವಿ ಎಂದು ಜಗತ್ತಿಗೆ ಗೊತ್ತಾಗುತ್ತಿರಲಿಲ್ಲ. ಎಂದರೆ ಏನಾಯಿತು? ಕವಿಗೆ ರಾಜನು ಆಶ್ರಯ ಕೊಟ್ಟಿದ್ದರಿಂದ ಅವನ ಪ್ರತಿಭೆಗೆ ಅವಕಾಶ ಸಿಕ್ಕಿತು. ರಾಜನ ಕೀರ್ತಿಯೂ ಹರಡಿತು. ರಾಜನಿಂದ ಕವಿಗೂ ಉಪಕಾರವಾಯಿತು; ಕವಿಯಿಂದ ರಾಜನಿಗೂ ಉಪಕಾರವಾಯಿತು. ಹೀಗೆ ಒಬ್ಬರು ಇನ್ನೊಬ್ಬರ ಏಳಿಗೆಯಲ್ಲಿ ಪಾಲ್ಗೊಂಡಿರುವುದು ಸ್ಪಷ್ಟ.

ಇನ್ನೊಂದು ಉದಾಹರಣೆಯನ್ನೂ ಇಲ್ಲಿ ನೋಡಬಹುದು. ಕಾಡಿನಿಂದ ಹುಲಿಗೆ ಆಶ್ರಯ; ಹುಲಿಯಂದ ಕಾಡಿನ ರಕ್ಷಣೆ.

ಹೀಗೆಯೇ ನಮ್ಮ ಜೀವನದಲ್ಲೂ ಹಲವು ಸಂಗತಿಗಳು ನಡೆಯುತ್ತಿರುತ್ತವೆ.

ಗಂಡ–ಹೆಂಡತಿ ಪರಸ್ಪರ ಪೂರಕವಾಗಿದ್ದರೆ ಮಾತ್ರವೇ ಸಂಸಾರ ನೆಮ್ಮದಿಯಾಗಿರಲು ಸಾಧ್ಯ. ಹೀಗಲ್ಲದೆ, ನನ್ನಿಂದಲೇ ಮನೆ – ಎಂಬ ಹಟವನ್ನು ಇಬ್ಬರಲ್ಲಿ ಯಾರೊಬ್ಬರೂ ಮಾಡಿದರೂ ಆ ಸಂಸಾರ ನೆಮ್ಮದಿಯನ್ನು ಕಳೆದುಕೊಳ್ಳುತ್ತದೆ. ಗಂಡನಿಂದ ಹೆಂಡತಿಗೂ, ಹೆಂಡತಿಯಿಂದ ಗಂಡನಿಗೂ ಪರಸ್ಪರ ಸಂತೋಷ, ಸಾಂತ್ವನ, ಗೌರವ, ಆಶ್ರಯ, ಬದುಕು ದೊರಕುತ್ತಿರುತ್ತದೆ ಎಂಬುದನ್ನು ಇಬ್ಬರೂ ಅರ್ಥಮಾಡಿಕೊಳ್ಳಬೇಕು.

ಮನೆಯಾಗಲೀ, ಸಂಸ್ಥೆಯಾಗಲೀ, ಸಮಾಜವಾಗಲೀ, ದೇಶವಾಗಲೀ – ಯಾವುದೂ ಕೂಡ ತನ್ನಷ್ಟಕ್ಕೆ ತಾನೇ ಸ್ಥಿರವಾಗಿರಲಾರದು. ಆಯಾ ಸಂಸ್ಥೆಗಳ ಸದಸ್ಯರ ಕೊಡುಗೆಯೂ ಅದಕ್ಕೆ ಕಾರಣವಾಗಿರುತ್ತದೆ. ಸಂಸ್ಥೆಯಿಂದ ನೌಕರರೂ, ನೌಕರರಿಂದ ಸಂಸ್ಥೆಯೂ ಏಳಿಗೆಯನ್ನು ಪಡೆಯುತ್ತಿರುತ್ತದೆ. ಹೀಗೆಯೇ ದೇಶದಿಂದ ಪ್ರಜೆಗಳ ರಕ್ಷೆಯೂ, ಪ್ರಜೆಗಳಿಂದ ದೇಶದ ಏಳಿಗೆಯೂ ನಡೆಯುತ್ತಿರುತ್ತದೆ.

ಎಲ್ಲವೂ ನನ್ನಿಂದಲೇ, ನನ್ನ ಒಬ್ಬನಿಂದಲೇ – ಎಂಬ ಮನೋಧರ್ಮ ನಮಗೆ ಮಾರಕ ಎನ್ನುವುದನ್ನು ನಾವು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT