ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ವ್ಯರ್ಥ ಉಪದೇಶ

Last Updated 7 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ನಿಷ್ಣಾತೋsಪಿ ಚ ವೇದಾಂತೇ ಸಾಧುತ್ವಂ ನೈತಿ ದುರ್ಜನಃ ।
ಚಿರಂ ಜಲನಿಧೌ ಮಗ್ನೋ ಮೈನಾಕ ಇವ ಮಾರ್ದವಮ್‌ ।।

ಇದರ ತಾತ್ಪರ್ಯ ಹೀಗೆ:

‘ಎಷ್ಟೇ ವೇದಾಂತಶಾಸ್ತ್ರದಲ್ಲಿ ನಿಪುಣನಾಗಿದ್ದರೂ ಕೆಟ್ಟ ಸ್ವಭಾವವುಳ್ಳವನು ಒಳ್ಳೆಯನಾಗುವುದಿಲ್ಲ; ಬಹಳ ಕಾಲ ಸಮುದ್ರದಲ್ಲಿ ಮುಳುಗಿದ್ದರೂ ಮೈನಾಕಪರ್ವತ ಮೆತ್ತಗಾಗಿಲ್ಲ!’

ಈ ಸುಭಾಷಿತವನ್ನು ಕೇಳಿದ ಕೂಡಲೇ ನೆನಪಾಗುವ ಮಾತು: ‘ಪುರಾಣ ಹೇಳೋಕ್ಕೆ, ಬದನೆಕಾಯಿ ತಿನ್ನೋಕೆ.‘

ವೇದಾಂತ – ಎಂದರೆ ವೇದದ ತಿರುಳು, ವೇದದ ಸಾರ. ಇರುವುದು ಒಂದೇ ಸತ್ಯ – ಎಂಬ ಅರಿವನ್ನು ನಾವು ವೇದಾಂತದ ಸಾರ ಎಂದು ಇಟ್ಟುಕೊಳ್ಳೋಣ. ಇದರ ಪ್ರಕಾರ ಇಡಿಯ ಜಗತ್ತೇ ಒಂದು, ಎಲ್ಲರೂ ಒಂದೇ – ಆಶಯ ಸಿದ್ಧವಾಗುತ್ತದೆ. ಆದರೆ ಇಂಥದೊಂದು ನಿಲವು ನಮ್ಮ ವ್ಯಕ್ತಿತ್ವದ ಭಾಗವಾಗಿದ್ದರೆ ಮಾತ್ರ ಆಗ ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ಕಾಣಲು ಸಾಧ್ಯ. ಇಲ್ಲವಾದಲ್ಲಿ ನಾವು ವೇದಾಂತದ ಮಾತುಗಳನ್ನು ನಾಲಗೆಯಲ್ಲಿ ನುಡಿಯುತ್ತಿರುತ್ತೇವೆಯೆ ಹೊರತು, ಆಚರಣೆಯಲ್ಲಿ ಅದನ್ನು ತರಲು ಸೋಲುತ್ತಿರುತ್ತೇವೆ. ಇದಕ್ಕೆ ಕಾರಣ ನಮ್ಮ ವಿಚಾರ ನಮ್ಮ ಆಚಾರದ ಭಾಗವಾಗದಿರುವುದು. ಇದಕ್ಕೆ ಕಾರಣ ಬದಲಾಗದ ನಮ್ಮ ವ್ಯಕ್ತಿತ್ವದ ಲೋಪ–ದೋಷಗಳು. ದೊಡ್ಡ ದೊಡ್ಡ ಮಾತುಗಳನ್ನು, ಸಂದೇಶಗಳನ್ನು ಕೊಡುವ ಮೊದಲು ಅದನ್ನು ಹೇಳುವ ಅರ್ಹತೆಯನ್ನು ನಾವು ಸಂಪಾದಿಸಿಕೊಳ್ಳಬೇಕು. ಬಳಿಕ ಅವನ್ನು ನಮ್ಮ ನಡೆ–ನುಡಿಯಲ್ಲಿ ಅವು ಪ್ರಾಮಾಣಿಕವಾಗಿ ಅಭಿವ್ಯಕ್ತವಾಗಬೇಕು. ಆಗಷ್ಟೇ ಅದು ದಿಟವಾದ ವಿಚಾರ, ವೇದಾಂತ ಎನಿಸಿಕೊಳ್ಳುತ್ತದೆ. ಹೀಗಲ್ಲದೆ ಸುಮ್ಮನೆ ಅವು ಘೋಷಣೆಯ ಮಾತುಗಳಾದರೆ ಪ್ರಯೋಜವಿರದು. ಮೊದಲು ನಮ್ಮ ವ್ಯಕ್ತಿತ್ವ ಬದಲಾಗಬೇಕು, ನಮ್ಮ ಅಂತರಂಗ ಪಾಕವಾಗಬೇಕು, ನಮ್ಮ ಕಲ್ಲು ಹೃದಯ ಕರಗಬೇಕು. ಆಮೇಲೆ ನಮಗೆ ಬೇರೊಬ್ಬರಿಗೆ ಉಪದೇಶ ಹೇಳುವ ಹಕ್ಕು ಬಂದೀತು; ನಾವು ಕಲಿತ ವಿದ್ಯೆಗೂ ಮೆರಗು ಬಂದೀತು. ಕಲ್ಲೊಂದು ಸಾವಿರ ವರ್ಷಗಳು ಸಮುದ್ರದಲ್ಲಿದ್ದರೂ ಅದೇನೂ ಬೆಣ್ಣೆಯಂತೆ ಮೆತ್ತಗಾಗಲಾರದಷ್ಟೆ! ಹೀಗೆಯೇ ನಮ್ಮ ಅಂತರಂಗಶುದ್ಧಿಯಾಗದೆ ಎಂಥ ನೀತಿಶಾಸ್ತ್ರಗಳನ್ನು ಓದಿದರೂ ನಮಗೂ ಪ್ರಯೋಜನವಿರದು, ಸಮಾಜಕ್ಕೂ ಪ್ರಯೋಜವಿರದು.

ಅಲ್ಲಮಪ್ರಭುಗಳ ವಚನವೊಂದು ಹೀಗಿದೆ:

ಕುರೂಪಿ
ಸುರೂಪಿಯ ನೆನೆದಡೆ
ಸುರೂಪಿಯಪ್ಪನೆ ?
ಆ ಸುರೂಪಿ
ಕುರೂಪಿಯ ನೆನದಡೆ
ಕುರೂಪಿಯಪ್ಪನೆ ?
ಧನವುಳ್ಳವರ ನೆನೆದಡೆ ದರಿದ್ರ ಹೋಹುದೇ ?
ಪುರಾತರ ನೆನೆದು ಕೃತಾರ್ಥರಾದೆವೆಂಬರು !
ತಮ್ಮಲ್ಲಿ ಭಕ್ತಿನಿಷ್ಠೆಯಿಲ್ಲದವರ ಕಂಡಡೆ
ಮೆಚ್ಚನು ಗುಹೇಶ್ವರನು

ನಾವು ನಮ್ಮ ಮಾತುಗಳಲ್ಲಿ ವೀರಾವೇಶದಿಂದ ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ, ಶಂಕರ, ರಾಮ, ಕೃಷ್ಣ, ನಾರಾಯಣಗುರು – ಹೀಗೆ ನೂರಾರು ಮಹಾತ್ಮರ, ಸಂತರ, ಸಾಧಕರ, ಜ್ಞಾನಿಗಳ – ಪುರಾತರ – ಮಾತುಗಳನ್ನು ಧಾರಾಳವಾಗಿ ಬಳಸಿಕೊಳ್ಳುತ್ತಲೇ ಇರುತ್ತೇವೆ. ಆದರೆ ದಿಟವಾಗಿಯೂ ನಮಗೆ ಅವರ ಮಾತುಗಳನ್ನು ಇರಲಿ, ಅವರ ಹೆಸರನ್ನು ಸ್ಮರಿಸುವ ಅರ್ಹತೆಯಾದರೂ ಒದಗಿದೆಯೇ ಎಂದು ಎಂದಾದರೂ ಯೋಚಿಸಿದ್ದೇವೆಯೆ? ಉದಾಹರಣೆಗೆ, ಬುದ್ಧನ ವೈಚಾರಿಕೆಯ ಬಗ್ಗೆ ಉಪನ್ಯಾಸ ಕೊಡುತ್ತೇವೆ, ಸರಿ; ಆದರೆ ಬುದ್ಧ ಭಗವಂತ ಹೇಳಿದ ಶೀಲಗಳನ್ನು, ಎಂದರೆ ನೀತಿ–ಮೌಲ್ಯಗಳನ್ನು ನಾವು ಜೀವನದಲ್ಲಿ ಎಷ್ಟು ಅನುಸರಿಸುತ್ತಿದ್ದೇವೆ ಎಂದು ಎಂದಾದರೂ ಆತ್ಮಾವಲೋಕನವನ್ನು ಮಾಡಿಕೊಂಡಿದ್ದೇವೆಯೆ? ಇದನ್ನು ಪ್ರಾಮಾಣಿಕವಾಗಿ ಆಲೋಚಿಸಬೇಕು. ಕುರೂಪಿಯಾದವನು ಸುರೂಪಿಯನ್ನು ನೆನೆದರೆ ಅದರಿಂದ ಅವನ ಕುರೂಪ ತೊಲಗುವುದೆ? ಹಣವೇ ಇಲ್ಲದವನು ಹಣವಂತನನ್ನು ನೆನೆದರೆ ಅವನು ಸಿರಿವಂತನಾಗುತ್ತಾನೆಯೆ? ಹಾಗೆಯೇ ನೀಚನಾದವನು ದೊಡ್ಡ ದೊಡ್ಡ ನೀತಿಯ ಮಾತುಗಳನ್ನು ಹೇಳಿದರೆ ಅದರಿಂದ ಅವನು ನೀತಿವಂತನಾಗುತ್ತಾನೆಯೆ? ಆಚರಣೆಗೆ ಬರದ ಮಾತುಗಳು, ಸಂದೇಶಗಳು, ಉಪದೇಶಗಳು, ವೇದಾಂತಗಳನ್ನು ಕಿವಿಗೆ ಎಷ್ಟು ಬಡಿಸಿದರೂ ಅವು ವ್ಯರ್ಥ, ವ್ಯರ್ಥ, ವ್ಯರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT