ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಜೀವನದ ಸಮಗ್ರತೆ

Last Updated 27 ಸೆಪ್ಟೆಂಬರ್ 2020, 0:52 IST
ಅಕ್ಷರ ಗಾತ್ರ

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾ

ಯೋ ಹ್ಯೇಕಭಕ್ತಃ ಸ ನರೋ ಜಘನ್ಯಃ ।

ತಯೋಸ್ತು ದಕ್ಷಂ ಪ್ರವದಂತಿ ಮಧ್ಯಂ

ಸ ಉತ್ತಮೋ ಯೋsಭಿರತಸ್ತ್ರಿವರ್ಗೇ ।।

ಇದರ ತಾತ್ಪರ್ಯ ಹೀಗೆ: ‘ಧರ್ಮ, ಅರ್ಥ ಮತ್ತು ಕಾಮ – ಇವು ಮೂರನ್ನು ಸಮವಾಗಿ ಸೇವಿಸಬೇಕು. ಇವುಗಳಲ್ಲಿ ಒಂದನ್ನು ಮಾತ್ರ ಸೇವಿಸತಕ್ಕವನು ಕನಿಷ್ಠ ದರ್ಜೆಯವನು; ಯಾವುದಾದರೂ ಎರಡರಲ್ಲಿ ಆಸಕ್ತನಾದವನು ಮಧ್ಯಮ; ಮೂರರಲ್ಲಿಯೂ ಆಸಕ್ತನಾದವನು ಶ್ರೇಷ್ಠ.’

ಜೀವನವನ್ನು ಸಮಗ್ರವಾಗಿ ಸ್ವೀಕರಿಸಬೇಕು ಎಂಬುದು ಸುಭಾಷಿತದ ಇಂಗಿತ.

ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಬಯಸುವ ಎಲ್ಲ ವಿಧದ ಬಯಕೆಗಳನ್ನು ನಮ್ಮ ಪರಂಪರೆಯಲ್ಲಿ ಒಂದೇ ಶಬ್ದದಿಂದ ನಿರ್ದೇಶಿಸಿದೆ; ಅದೇ ’ಪುರುಷಾರ್ಥ’.

ಧರ್ಮ, ಅರ್ಥ ಮತ್ತು ಕಾಮ – ಇವೇ ಪುರುಷಾರ್ಥಗಳು. ಇದರ ಜೊತೆಗೆ ಮೋಕ್ಷವನ್ನು ನಾಲ್ಕನೆಯ ಪುರುಷಾರ್ಥವನ್ನಾಗಿ ಸೇರಿಸುವುದುಂಟು.

ಆದರೆ ಧರ್ಮ, ಅರ್ಥ ಮತ್ತು ಕಾಮ ಇಲ್ಲಿಯ ಜೀವನಕ್ಕೆ ಸೇರಿರುವಂಥ ವಿವರಗಳು; ನಮ್ಮ ಜೀವನವನ್ನು ಆವರಿಸಿರುವಂಥವು.

ಕಾಮ ಎಂದರೆ ನಮ್ಮ ಎಲ್ಲ ಬಯಕೆಗಳು; ಕೇವಲ ಗಂಡು–ಹೆಣ್ಣುಗಳ ಆಕರ್ಷಣೆಯಷ್ಟೇ ಅಲ್ಲ. ಅರ್ಥ ಎಂದರೆ ಕಾಮವನ್ನು ಪೂರೈಸಿಕೊಳ್ಳಲು ಬೇಕಾದ ಎಲ್ಲ ಸಲಕರಣೆ–ಸಾಧನಗಳು; ಕೇವಲ ಹಣ ಮಾತ್ರವಷ್ಟೇ ಅಲ್ಲ. ನಮ್ಮ ಕಾಮವೂ ಅರ್ಥವೂ ಒಂದು ಗೊತ್ತಾದ ಕ್ರಮದಲ್ಲಿಯೇ ಪ್ರಕಟವಾಗಬೇಕು; ಅವುಗಳಿಂದ ನಮ್ಮ ಹಿತವೂ ಕೆಡಬಾರದು, ಸಮಾಜದ ಹಿತವೂ ಕೆಡಬಾರದು. ಹೀಗೆ ನಮ್ಮಿಂದ ನಮ್ಮನ್ನೂ ಸಮಾಜವನ್ನೂ ಅಪಾಯಗಳಿಂದ ಕಾಪಾಡಬಲ್ಲಂಥ ನೀತಿ–ನಿಯಮಗಳ ಕಟ್ಟುಗಳೇ ಧರ್ಮ ಎನಿಸಿಕೊಳ್ಳುತ್ತದೆ.

ಸುಭಾಷಿತ ಹೇಳುತ್ತಿರುವುದು ಮೂರು ಪುರುಷಾರ್ಥಗಳೂ ಸೇರಿಕೊಂಡೇ ನಮ್ಮ ಜೀವನಚಕ್ರ ಸುತ್ತುತ್ತಿರುತ್ತದೆ. ಆದುದರಿಂದ ನಾವು ಯಾವುದೋ ಒಂದನ್ನು ಮಾತ್ರವೇ ಆಯ್ದುಕೊಂಡರೆ ಜೀವನ ಪೂರ್ಣತೆಯನ್ನು ಪಡೆಯದು. ಹೀಗಾಗಿ ಎಲ್ಲ ಪುರುಷಾರ್ಥಗಳಿಗೂ ನಾವು ಮನ್ನಣೆಯನ್ನು ಕೊಡಬೇಕು. ಕೇವಲ ಅರ್ಥಸಂಪಾದನೆಯಲ್ಲೇ ಮುಳಗಬಾರದು; ಅಥವಾ ಕೇವಲ ಬಯಕೆ–ಆಸೆಗಳ ಹಿಂದೆಯೇ ಓಡಬಾರದು; ಅಥವಾ ಧರ್ಮದ ದಾರಿಯೆಂದು ಎಲ್ಲವನ್ನೂ ತ್ಯಾಗಮಾಡಿ ಬದುಕುವುದು ಕೂಡ ತಪ್ಪಾಗುತ್ತದೆ.

ನಮ್ಮ ಸಂಸ್ಕೃತಿಯ ಮಹಾದರ್ಶನವೇ ಜೀವನವನ್ನು ಸಮಗ್ರವಾಗಿ ಗ್ರಹಿಸಬೇಕೆಂಬುದು. ನಮ್ಮ ಆಸೆಗಳೂ ತಪ್ಪಲ್ಲ; ಆದರೆ ಅವುಗಳನ್ನು ಪೂರೈಸಿಕೊಳ್ಳಲು, ಅನುಭವಿಸಲು ಗೊತ್ತಾದ ದಾರಿಯಿರಬೇಕು, ಸರಿಯಾದ ದಾರಿ ಅದಾಗಿರಬೇಕು.

ಜೀವನವನ್ನು ಪೂರ್ಣವಾಗಿ ಸವಿಯೋಣ; ಆದರೆ ಈ ದಾರಿಯಲ್ಲಿ ನಮ್ಮ ಹಿತವನ್ನೂ ಸಮಾಜದ ಹಿತವನ್ನೂ ಮರೆಯದಿರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT