ಶುಕ್ರವಾರ, ಜೂನ್ 25, 2021
29 °C

ದಿನದ ಸೂಕ್ತಿ: ಶಿವ–ಶಕ್ತಿ ತತ್ತ್ವ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ
ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ |
ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಪಿ
ಪ್ರಣಂತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ।।

ಇದರ ತಾತ್ಪರ್ಯ ಹೀಗೆ:

’ಎಲೈ ತಾಯಿ! ಶಿವನು ಶಕ್ತಿಯೊಡನೆ ಜೊತೆಗೂಡಿನವನಾದರೆ ಮಾತ್ರ ಪ್ರಪಂಚದ ಸೃಷ್ಟಿಕಾರ್ಯದಲ್ಲಿ ಸಮರ್ಥನಾಗುತ್ತಾನೆ. ಹೀಗಲ್ಲದಿದ್ದರೆ, ಅವನು ಚಲಿಸಲು ಕೂಡ ಸಮರ್ಥನಾಗಲಾರನಷ್ಟೆ! ಬ್ರಹ್ಮ, ವಿಷ್ಣು, ರುದ್ರ ಮೊದಲಾದವರಿಂದ ಕೂಡ ನೀನು ಪೂಜಿತಳು. ಇಂಥ ನಿನ್ನನ್ನು ನಮಸ್ಕರಿಸಲಾಗಲೀ ಸ್ತುತಿಸಲಾಗಲೀ ಪೂರ್ವಜನ್ಮಗಳಲ್ಲಿ ಪುಣ್ಯಾಚರಣೆಯನ್ನು ಮಾಡದಿರುವವರಿಗೆ ಹೇಗೆ ತಾನೆ ಸಾಧ್ಯವಾದೀತು?‘

ಇಂದು ಸ್ವರ್ಣಗೌರೀವ್ರತ. ಹೀಗಾಗಿ ಜಗಜ್ಜನನಿಯ ತತ್ತ್ವವನ್ನು ಸ್ವಲ್ಪ ತಿಳಿದುಕೊಳ್ಳಲು ಪ್ರಯತ್ನಿಸಬಹುದು.

ಈ ಶ್ಲೋಕ ಶಂಕರಾಚಾರ್ಯರ ಹೆಸರಿನಲ್ಲಿರುವ ’ಸೌಂದರ್ಯಲಹರೀ‘ ಎಂಬ ಸ್ತುತಿಕಾವ್ಯದ ಮೊದಲನೆಯ ಪದ್ಯ.

ಜಗತ್ತಿನ ತಂದೆ–ತಾಯಿ ಎಂದರೆ ಪಾರ್ವತೀ–ಪರಮೇಶ್ವರರು ಎಂಬುದು ನಮ್ಮ ಪರಂಪರೆಯ ನಂಬಿಕೆಗಳಲ್ಲೊಂದು. ಅವರ ದಾಂಪತ್ಯವೇ ನಮಗೆ ಆದರ್ಶ. ಮಾತ್ರವಲ್ಲ, ಅವರ ಕುಟುಂಬವೂ ನಮಗೆ ದೊಡ್ಡ ಆದರ್ಶ. ಒಂದು ಕುಟುಂಬವಾಗಿ ಹೇಗೆ ಅನ್ಯೋನ್ಯವಾಗಿರಬೇಕೆಂಬುಕ್ಕೆ ಮೇಲ್ಪಂಕ್ತಿಯಾಗಿರುವುದೇ ಶಿವನ ಸಂಸಾರ. ಮನೆಯ ಯಜಮಾನ ಶಿವ, ಒಡತಿ ಪಾರ್ವತಿ, ಮಕ್ಕಳು ಗಣೇಶ–ಸುಬ್ರಹ್ಮಣ್ಯ; ಇರುವುದು ನಾಲ್ಕು ಮಂದಿಯಾದರೂ ಒಬ್ಬೊಬ್ಬರಲ್ಲೂ ಹಲವು ವಿಶಿಷ್ಟತೆಗಳು; ಜೊತೆಗೆ ಅಷ್ಟೇ ವೈರುದ್ಧ್ಯಗಳು! ಹೀಗಿದ್ದರೂ ಅದು ಅತ್ಯಂತ ಸೌಹಾರ್ದದ ಕುಟುಂಬ; ನೆಮ್ಮದಿಯ ಕುಟುಂಬ; ಆದರ್ಶ ಕುಟುಂಬ. 

ಸಂಸಾರವನ್ನು ನೆಮ್ಮದಿಯಾಗಿ ನಿರ್ವಹಿಸುವುದರಲ್ಲಿ ಮನೆಯ ಒಡತಿಯ ಭೂಮಿಕೆ ತುಂಬ ದೊಡ್ಡದು. ಈ ಮಾತು ಶಿವನ ಸಂಸಾರಕ್ಕೂ ಅನ್ವಯವಾಗುತ್ತದೆಯೆನ್ನಿ! ಅವಳು ಶಿವ ಸಂಸಾರದ ಶಕ್ತಿ; ಅವಳ ಮತ್ತು ಶಿವನ ತಾದಾತ್ಮ್ಯ ಎಷ್ಟೆಂದರೆ ಬೆಳದಿಂಗಳು ಮತ್ತು ಚಂದ್ರನ ಸಂಬಂಧದಂತೆ, ಮಾತು ಮತ್ತು ಅರ್ಥಗಳಂತೆ – ಒಂದು ಇನ್ನೊಂದನ್ನು ಬಿಟ್ಟು ಕ್ಷಣವಾದರೂ ಇರಲಾರದಂಥ ಏಕತೆ. ತಾಯಿಯಾಗಿಯೂ ಅವಳ ವಾತ್ಸಲ್ಯ ಅಪೂರ್ವ. ಅವಳ ಕರುಣೆ–ವಾತ್ಸಲ್ಯಗಳು ಎಷ್ಟು ವಿಶಾಲವಾದುದು ಎಂದರೆ ಇಡಿಯ ಲೋಕಕ್ಕೇ ತಾಯಿಯಾಗುವಷ್ಟು; ಅನ್ನಪೂರ್ಣೆಯಾಗುವಷ್ಟು.

ಈ ಶ್ಲೋಕದಲ್ಲಿ ಆಚಾರ್ಯರು ಜಗತ್ತಿನ ತಾಯಿಯಾದ ಪಾರ್ವತಿಯನ್ನು, ಎಂದರೆ ಶಕ್ತಿಯನ್ನು ವಿಶೇಷತೆಯನ್ನು ನಿರೂಪಿಸಿದ್ದಾರೆ. ಶಕ್ತಿಯಿಲ್ಲದಿದ್ದರೆ ಶಿವನೂ ಶವಕ್ಕೆ ಸಮ – ಎಂಬ ನಿಲವನ್ನು ಇಲ್ಲಿ ಕಾಣಬಹುದು.

ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣವಾಗಿರುವವರು ಬ್ರಹ್ಮ ವಿಷ್ಣು ಮಹೇಶ್ವರರು. ಇವರೂ ಕೂಡ ಶಕ್ತಿಯ ಬೆಂಬಲವಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಜಗಜ್ಜನನಿಯ ಪಾದದ ಧೂಳಿನ ಕಣವೊಂದರಿಂದ ಬ್ರಹ್ಮನು ಇಡಿಯ ಸೃಷ್ಟಿಕಾರ್ಯವನ್ನು ನೆರವೇರಿಸುತ್ತಾನೆ ಎಂದು ಸೌಂದರ್ಯಲಹರಿಯ ಮುಂದಿನ ಶ್ಲೋಕದಲ್ಲಿ ಹೇಳಲಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀತತ್ತ್ವಕ್ಕೆ ಎಂಥ ಉನ್ನತ ಸ್ಥಾನವನ್ನು ನೀಡಲಾಗಿದೆ ಎನ್ನುವುದು ಇಲ್ಲಿರುವ ತಾತ್ಪರ್ಯ.

ಶಿವನ ಸಂಸಾರ ನಮಗೆ ಹಲವು ವಿಧಗಳಲ್ಲಿ ಆದರ್ಶ, ಮಾರ್ಗದರ್ಶಕ. ಹಬ್ಬದ ದಿನ ಶಿವ–ಶಕ್ತಿತತ್ತ್ವಗಳ ಅನುಸಂಧಾನ ನಮ್ಮ ವಿವೇಕೋದಯಕ್ಕೆ ಕಾರಣವಾದೀತು. ಈ ಮೂಲಕ ನಮ್ಮ ಆಚರಣೆಗಳ ಹಿಂದಿರುವ ಸತ್ತ್ವ–ತತ್ತ್ವಗಳು ನಮ್ಮ ಜೀವನದ ಭಾಗವೂ ಆದೀತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.