ಸೋಮವಾರ, ಅಕ್ಟೋಬರ್ 18, 2021
27 °C

ದಿನದ ಸೂಕ್ತಿ: ಅಸಾಧ್ಯ ಯಾವುದು?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಕಿಂ ದುಃಸಹಂ ನು ಸಾಧೂನಾಂ ವಿದುಷಾಂ ಕಿಮಪೇಕ್ಷಿತಮ್‌ ।

ಕಿಮಕಾರ್ಯಂ ಕದರ್ಯಾಣಾಂ ದುಸೃಜಂ ಕಿಂ ಧೃತಾತ್ಮನಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಸಾಧುಗಳಿಗೆ ಯಾವುದು ಸಹಿಸಲು ಕಷ್ಟವಾದುದು? ವಿದ್ವಾಂಸರಿಗೆ ಆಸೆ ಪಡುವಂಥದ್ದೇನಿದೆ? ನೀಚರಿಗೆ ಮಾಡಬಾರದ್ದು ಯಾವುದಿದೆ? ಆತ್ಮಜ್ಞಾನಿಗಳಿಗೆ ಬಿಡಲು ಅಸಾಧ್ಯವಾದುದು ಯಾವುದಿದೆ?’

ಕೆಲವೊಂದು ವ್ಯಕ್ತಿತ್ವಗಳಿಗೂ ಗುಣಗಳಿಗೂ ಅವಿನಾಭಾವ ಸಂಬಂಧವಿರುತ್ತದೆ; ಹೀಗೆಯೇ ವಸ್ತುಗಳಿಗೂ ಗುಣಗಳಿಗೂ ಸಂಬಂಧವಿರುತ್ತದೆ. ಹರಿಯುವುದು ನೀರಿನ ಸಹಜ ಗುಣ; ಅದನ್ನು ಎಂದಿಗೂ ತಪ್ಪಿಸಲು ಆಗದು. ಹೀಗೆಯೇ ಸುಡುವುದು ಬೆಂಕಿಯ ಗುಣ; ಬೆಂಕಿಯನ್ನೂ ಸುಡುವಿಕೆಯನ್ನೂ ಎಂದಿಗೂ ಬೇರೆ ಮಾಡಲು ಸಾಧ್ಯವಿಲ್ಲ. ಹೀಗೆಯೇ ಕೆಲವು ಗುಣಗಳನ್ನು ಕೆಲವರಿಂದ ಎಂದಿಗೂ ಬೇರೆ ಮಾಡಲು ಸಾಧ್ಯವಿಲ್ಲ. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ಸಾಧುಗಳಿಗೆ ಯಾವುದು ಸಹಿಸಲು ಕಷ್ಟವಾದುದು? ತಮಗೆ ಒದಗುವ ಕಷ್ಟಗಳನ್ನಾಗಲೀ ಸುಖಗಳನ್ನಾಗಲೀ ಸಹಜವಾಗಿಯೇ ಸ್ವೀಕರಿಸಬಲ್ಲವರೇ ಸಾಧುಗಳು. ಹೀಗೆ ಪ್ರತಿಯೊಂದನ್ನೂ ಸಹಿಸುವುದನ್ನೇ ಸ್ವಭಾವನ್ನಾಗಿಸಿಕೊಂಡಿರುತ್ತಾರೆ ಅವರು. ಹೀಗಾಗಿ ಅವರಿಗೆ ಯಾವುದನ್ನೂ ಸಹಿಸಬಲ್ಲ ಧೀರತೆ ಸಹಜವಾಗಿಯೇ ಸಿದ್ಧಿಸಿರುತ್ತದೆ.

ವಿದ್ವಾಂಸನ ಲೋಕ ನಮ್ಮ ಲೋಕಕ್ಕಿಂತಲೂ ಭಿನ್ನ. ಅವನಿಗೆ ವಿದ್ಯೆಯ ಮೇಲಿರುವ ಅಸೆ ಬೇರೆ ಯಾವುದರ ಮೇಲೂ ಇರಲು ಸಾಧ್ಯವಿಲ್ಲ. ಹೀಗಿರುವಾಗ ವಿದ್ವಾಂಸರಿಗೆ ಆಸೆ ಪಡುವಂಥದ್ದೇನಿರುತ್ತದೆ?

ನೀಚರು ಯಾವ ಕೆಲಸವನ್ನೂ ಮಾಡಲು ಹೇಸುವುದಿಲ್ಲವಷ್ಟೆ. ಹೀಗಾಗಿಯೇ ಸುಭಾಷಿತ ಕೇಳುತ್ತಿದೆ – ನೀಚರಿಗೆ ಮಾಡಬಾರದ್ದು ಯಾವುದಿದೆ?

ಜೀವನದಲ್ಲಿ ಎಲ್ಲವನ್ನೂ ಬಿಡಲು ಸಿದ್ಧನಾಗಿರುವವನೇ ಆತ್ಮಜ್ಞಾನಿ. ಎಲ್ಲವನ್ನೂ ತ್ಯಜಿಸಲು ಸಿದ್ಧನಿರುವ ಆತ್ಮಜ್ಞಾನಿಗೆ ಬಿಡಲು ಮತ್ತೇನೂ ಇಲ್ಲದಿರುವಾಗ ಯಾವುದೊಂದನ್ನೂ ಅವನು ‘ನಾನು ಬಿಡಲಾರೆ‘ ಎನ್ನಲಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು