ಬುಧವಾರ, ಸೆಪ್ಟೆಂಬರ್ 22, 2021
29 °C

ದಿನದ ಸೂಕ್ತಿ: ನಮ್ಮ ಆಯ್ಕೆಗಳು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವ್ಯಾಘ್ರಸ್ತುಷ್ಯತಿ ಕಾನನೇ ಸುಗಹನಾಂ ಸಿಂಹೋ ಗುಹಾಂ ಸೇವತೇ
ಹಂಸೋsಹ್ನಾಯ ಚ ಪದ್ಮಿನೀಂ ಕುಸಮಿತಾಂ ಗೃಧ್ರಃ ಶ್ಮಶಾನಸ್ಥಲೇ ।
ಸಾಧುಸತ್ಕೃತಸಾಧುಮೇವ ಭಜತೇ ನೀಚೋsಪಿ ನೀಚಂ ಜನಂ
ಯಾ ಯಸ್ಯ ಪ್ರಕೃತಿಃ ಸ್ವಭಾವಜನಿತಾ ಕೇನಾಪಿ ನ ತಜ್ಯತೇ ।।

ಇದರ ತಾತ್ಪರ್ಯ ಹೀಗೆ: ‘ಹುಲಿಯು ಗಹನವಾದ ಅರಣ್ಯವನ್ನೂ ಸಿಂಹವು ಗುಹೆಯನ್ನೂ ಹಂಸವು ಹೂವುಗಳಿಂದ ತುಂಬಿರುವ ತಾವರೆಯ ಕೊಳವನ್ನೂ ಹದ್ದು ಶ್ಮಶಾನವನ್ನೂ ಸಜ್ಜನರು ಸಜ್ಜನರನ್ನೂ ನೀಚರು ನೀಚರನ್ನೂ ಸೇರಲು ತವಕಿಸುತ್ತಾರೆ. ಎಲ್ಲರೂ ಅವರವರ ಸ್ವಭಾವಕ್ಕೆ ತಕ್ಕಂತೆ ವರ್ತಿಸುತ್ತಾರೆ; ಹುಟ್ಟುಗುಣಗಳನ್ನು ಬಿಡಲು ಆಗುವುದಿಲ್ಲವಷ್ಟೆ.’

ನಾವೆಲ್ಲರೂ ನಮ್ಮ ನಮ್ಮ ಸ್ವಭಾವಕ್ಕೆ ತಕ್ಕಂತೆಯೇ ನಡೆದುಕೊಳ್ಳುತ್ತೇವೆ. ನಮ್ಮ ಇಷ್ಟಾನಿಷ್ಟಗಳು ಕೂಡ ನಮ್ಮ ಸ್ವಭಾವವನ್ನೇ ಸೂಚಿಸುತ್ತವೆ. ನಾವು ತಿನ್ನುವುದು, ಕುಡಿಯುವುದು – ಇವು ಕೂಡ ನಮ್ಮ ಸ್ವಭಾವಕ್ಕೆ ತಕ್ಕ ರೀತಿಯಲ್ಲಿಯೇ ಇರುತ್ತವೆ. ನಮ್ಮ ಆಯ್ಕೆಗಳಿಗೂ ನಮ್ಮ ಸ್ವಭಾವಕ್ಕೂ ಇರುವ ಸಂಬಂಧಗಳ ಗಟ್ಟಿತನವನ್ನು ಎತ್ತಿತೋರಿಸಲು ಸುಭಾಷಿತ ಇಲ್ಲಿ ಕೆಲವು ಉದಾಹರಣೆಗಳನ್ನು ನೀಡಿವೆ.

ಹುಲಿಯು ಗಹನವಾದ ಅರಣ್ಯದಲ್ಲಿ ಸಂಚರಿಸುವುದನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಹೀಗೆಯೇ ಸಿಂಹವು ಕಾಡಿನ ಗುಹೆಯಲ್ಲಿ ವಾಸಿಸುತ್ತದೆ. ಹಂಸವು ಹೂವುಗಳಿಂದ ತುಂಬಿರುವ ತಾವರೆಯ ಕೊಳದಲ್ಲಿಯೇ ವಿಹರಿಸಲು ಬಯಸುತ್ತದೆ. ಹದ್ದು ಶ್ಮಶಾನದಲ್ಲಿಯೇ ಇರಲು ಬಯಸುತ್ತದೆ. ಈ ಆಯ್ಕೆಗಳ ಹಿಂದಿರುವುದು ಆಯಾ ಪ್ರಾಣಿ–ಪಕ್ಷಿಗಳ ಸ್ವಭಾವವೇ. ಸುಭಾಷಿತ ಇದನ್ನೇ ಹೇಳುತ್ತಿರುವುದು. ಇಷ್ಟೇ ಅಲ್ಲ, ಸುಭಾಷಿತಕ್ಕೆ ಇಷ್ಟನ್ನು ಮಾತ್ರವೇ ಹೇಳುವುದು ಉದ್ದೇಶವಲ್ಲ; ಈ ಉದಾಹರಣೆಗಳ ಮೂಲಕ ಅದು ಹೇಳಲು ಹೊರಟಿರುವುದು ಸಜ್ಜನರ ಮತ್ತು ದುರ್ಜನರ ಸ್ವಭಾವಗಳ ಬಗ್ಗೆ.

ನಮ್ಮ ಸ್ವಭಾವಕ್ಕೆ ತಕ್ಕ ರೀತಿಯ ಆಯ್ಕೆಯನ್ನೇ ನಾವು ಮಾಡಿಕೊಳ್ಳುವುದರಿಂದ, ನಮ್ಮ ವ್ಯಕ್ತಿತ್ವದಲ್ಲಿ ಒಳ್ಳೆಯತನ ಇದ್ದರೆ ನಾವು ಸಜ್ಜನರನ್ನೇ ನಮ್ಮ ಸ್ನೇಹಿತರನ್ನಾಗಿ ಆರಿಸಿಕೊಳ್ಳುತ್ತೇವೆ; ನಾವು ಅಯೋಗ್ಯರೇ ಆಗಿದ್ದರೆ ನಾವು ಬಯಸುವುದು ಕೂಡ ಅಯೋಗ್ಯರ ಸಾಮೀಪ್ಯ–ಸ್ನೇಹಗಳನ್ನೇ ಹೌದು. ಏಕೆಂದರೆ ಹುಟ್ಟುಗುಣ ಸುಟ್ಟರೂ ಹೋಗದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು