ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಮ್ಮ ಎರಡು ಕಣ್ಣುಗಳು

Last Updated 8 ಆಗಸ್ಟ್ 2021, 5:54 IST
ಅಕ್ಷರ ಗಾತ್ರ

ಏಕೋ ಹಿ ಚಕ್ಷುರಮಲಂ ಸಹಜೋ ವಿವೇಕಃ
ವಿದ್ವದ್ಭಿರೇವ ಸಹ ಸಂವಸನಂ ದ್ವಿತೀಯಮ್‌ ।
ಯಸ್ಯಾಸ್ತಿ ನ ದ್ವಯಮಿದಂ ಸ್ಫುಟಮೇವ ಸೋsಂಧಃ
ತಸ್ಯಾಪಮಾರ್ಗಚಲನೇ ವದ ಕೋsಪರಾಧಃ ।।

ಇದರ ತಾತ್ಪರ್ಯ ಹೀಗೆ:
‘ಸಹಜವಾದ ವಿವೇಕ ಎಂಬುದು ಸ್ಚಚ್ಚವಾದ ಒಂದು ಕಣ್ಣು ಇದ್ದಂತೆ. ವಿದ್ವಾಂಸರೊಡನೆ ವಾಸಿಸುವುದು ಎರಡನೆಯ ಕಣ್ಣು ಎನಿಸಿಕೊಳ್ಳುತ್ತದೆ. ಯಾರಿಗೆ ಇವೆರಡೂ ಇಲ್ಲವೋ ಅವನು ದಿಟವಾಗಿಯೂ ಕುರುಡನೇ ಸರಿ. ಅಂಥವನು ಕೆಟ್ಟ ಮಾರ್ಗದಲ್ಲಿ ನಡೆದರೆ ತಪ್ಪು ಯಾರದು?’

ನಮ್ಮ ನೋಟಕ್ಕೂ ವಿವೇಕಕ್ಕೂ ಇರುವ ಸಂಬಂಧವನ್ನು ಈ ಸುಭಾಷಿತ ಹೇಳುತ್ತಿದೆ.

ಕಣ್ಣಿನಿಂದ ನಾವು ಜಗತ್ತನ್ನು ನೋಡುತ್ತೇವೆ. ಜಗತ್ತು ನಮಗೆ ಕಾಣಬೇಕಾದರೆ ಕಣ್ಣಿನ ಆವಶ್ಯಕತೆ ಇದೆಯಷ್ಟೆ. ನಮಗಿರುವುದು ಎರಡು ಕಣ್ಣುಗಳು. ಈ ಎರಡು ಕಣ್ಣುಗಳೂ ನೋಡುವಂಥದ್ದು ಒಂದೇ ದೃಶ್ಯವನ್ನು. ನಾವು ನೋಡುತ್ತಿರುವ ದೃಶ್ಯ ಚೆನ್ನಾಗಿ ಕಾಣಬೇಕಾದರೆ ನಮ್ಮ ಎರಡು ಕಣ್ಣುಗಳೂ ಚೆನ್ನಾಗಿ ಕೆಲಸಮಾಡಬೇಕು, ಅವು ಸ್ಪಷ್ಟವಾದ ನೋಟವನ್ನು ನಮಗೆ ಒದಗಿಸಬೇಕು. ಹೀಗಿಲ್ಲವಾದಲ್ಲಿ ನಾವು ನೋಡುತ್ತಿರುವ ದೃಶ್ಯ ಮಸಕಾಗುತ್ತದೆ.

ಇಲ್ಲಿ ಸುಭಾಷಿತ ನಮ್ಮ ಕಣ್ಣುಗಳ ಬಗ್ಗೆಯೇ ಹೇಳುತ್ತಿದೆ. ಆದರೆ ಅದು ನಮ್ಮ ಚಾಕ್ಷುಷವೂ ಭೌತಿಕವೂ ಆದ ಕಣ್ಣುಗಳ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ಗಮನಾರ್ಹ. ವಿವೇಕ ಮತ್ತು ವಿದ್ವಾಂಸರ ಸಾಮೀಪ್ಯ – ಇವೆರಡನ್ನು ಅದು ಕಣ್ಣುಗಳು ಎಂದು ಹೇಳುತ್ತಿದೆ. ವಿವೇಕ ಎಂಬುದು ಒಂದು ಕಣ್ಣು; ಅದೂ ಸ್ಚಚ್ಛವಾದ ಕಣ್ಣು. ಎಂದರೆ ನಾವು ನೋಡುತ್ತಿರುವ ದಾರಿಯನ್ನು ಚೆನ್ನಾಗಿ ಕಾಣಿಸಬಲ್ಲದು ಎಂದು ಅರ್ಥ. ಈ ಒಂದು ಕಣ್ಣಿನ ಜೊತೆಗೆ ಇನ್ನೊಂದು ಕಣ್ಣಿನ ನೋಟವೂ ಸೇರಿಕೊಳ್ಳಬೇಕು. ಈ ಕಣ್ಣು ಎಂದರೆ ಅದು ಜ್ಞಾನಿಗಳ ಒಡನಾಟ. ಒಂದು ಕಣ್ಣು ನಮ್ಮ ಬುದ್ಧಿಶಕ್ತಿಯನ್ನು ಸೂಚಿಸಿದರೆ, ಇನ್ನೊಂದು ಕಣ್ಣು ಲೋಕಜ್ಞಾನವನ್ನು ಸೂಚಿಸುತ್ತದೆ. ಇವೆರಡೂ ನಮಗೆ ಬೇಕು. ಇಲ್ಲವಾದಲ್ಲಿ ನಮ್ಮ ಜೀವನಮಾರ್ಗ ಸ್ಪಷ್ಟವಾಗಿ ಕಾಣದು ಎನ್ನುತ್ತಿದೆ ಸುಭಾಷಿತ. ನಮಗೆ ಕೇವಲ ಭೌತಿಕ ಕಣ್ಣುಗಳು ಮಾತ್ರವೇ ಇದ್ದು, ವಿವೇಕನೇತ್ರಗಳು ಇಲ್ಲವಾದಲ್ಲಿ ಜೀವನದ ಹಾದಿ ಸುಗಮವಾಗಿರದು ಎಂಬುದು ಅದರ ಸಂದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT