ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಭಕ್ತಿಯೇ ಪೂಜೆ

Last Updated 11 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಪತ್ತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।

ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ।।

ಇದರ ತಾತ್ಪರ್ಯ ಹೀಗೆ:

‘ಒಂದು ಎಲೆ, ಒಂದು ಹೂವು, ಒಂದು ಹಣ್ಣು, ಕಡೆಗೆ ಒಂದು ಬೊಗಸೆಯಷ್ಟು ನೀರು – ಇವುಗಳಲ್ಲಿ ಯಾವುದನ್ನಾದರೂ ಭಕ್ತಿಯಿಂದ ಅರ್ಪಿಸಿದರೆ, ಆ ಶುದ್ಧಚಿತ್ತನಾದವನು ಅದನ್ನು ಭಕ್ತಿಯಿಂದ ಅರ್ಪಿಸಿದ್ದಾನೆಂದು ತಿಳಿದು ನಾನು ಅದನ್ನು ಸ್ವೀಕರಿಸುವೆನು.‘

ದೇವರನ್ನು ಹಲವು ರೀತಿಗಳಲ್ಲಿ ಪೂಜಿಸಬೇಕೆಂಬುದು ಧಾರ್ಮಿಕ ಆಚರಣೆಗಳಲ್ಲಿ ತುಂಬ ಮುಖ್ಯವಾದ ವಿವರ. ಹದಿನಾರು ವಿಧದ ಆಚರಣೆಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದನ್ನೇ ಷೋಡಶೋಪಚಾರ ಪೂಜೆ ಎಂದು ಕರೆದಿರುವುದು. ಈ ಉಪಚಾರಗಳ ಸಮಯದಲ್ಲಿ ಹಲವು ರೀತಿಯ ಪೂಜಾಸಾಮಗ್ರಿಗಳನ್ನೂ ಬಳಸುತ್ತೇವೆ; ಇವೆಲ್ಲವನ್ನೂ ಸಂಪಾದಿಸಿಕೊಂಡು ದೇವರನ್ನು ಅರ್ಚಿಸುವುದು ಸುಲಭವೇನಲ್ಲ.

ಷೋಡಶೋಪಚಾರವಷ್ಟೆ ಅಲ್ಲ, ಇನ್ನೂ ಹಲವು ವಿಧದ ಪೂಜೆ–ಅರ್ಚನೆಗಳನ್ನು ಶಾಸ್ತ್ರಗಳು ಹೇಳಿವೆ; ಇವುಗಳ ಜೊತೆಗೆ ಹೋಮ–ಹವನ–ತೀರ್ಥಕ್ಷೇತ್ರಗಳಂಥವನ್ನೂ ಹೇಳಲಾಗಿದೆ.

ಹೌದು, ಇವುಗಳ ನಿರ್ವಹಣೆ ಸುಲಭವಲ್ಲ; ಆದರೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ತುಂಬ ಸರಳವಾದ ಪೂಜಾವಿಧಾನವನ್ನು ಹೇಳಿರುವುದು ಗಮನಾರ್ಹ. ಇದು ನಮ್ಮ ಪರಂಪರೆಯ ಔದಾರ್ಯಕ್ಕೂ ಸಾಕ್ಷಿಯಾಗಿದೆಯೆನ್ನಿ!

‘ಭಕ್ತಿಯಿಂದಒಂದು ಎಲೆ, ಒಂದು ಹೂವು, ಒಂದು ಹಣ್ಣು, ಕಡೆಗೆ ಒಂದು ಬೊಗಸೆಯಷ್ಟು ನೀರು – ಇವುಗಳಲ್ಲಿ ಯಾವುದನ್ನಾದರೂ ಅರ್ಪಿಸಿದರೂ ಸಾಕು, ನಾನು ಅದನ್ನು ಪ್ರೀತಿಯಿಂದ ಸ್ವೀಕರಿಸುವೆ, ಒಲಿಯುವೆ‘ – ಎಂದು ಶ್ರೀಕೃಷ್ಣ ಅಭಯವನ್ನು ಕೊಟ್ಟಿದ್ದಾನೆ.

ಇಲ್ಲಿ ನಾವು ಗಮನಿಸಬೇಕಾಗಿರುವುದು, ಹಲವು ಶಾಸ್ತ್ರೀಯ ಕಲಾಪಗಳನ್ನೊಳಗೊಂಡ, ವೈಭವಪೂರ್ಣ ಧಾರ್ಮಿಕ ವಿಧಿ–ವಿಧಾನಗಳಿರುವ ಪರಂಪರೆಯೇ ಇಂಥ ಸರಳವಾದ ಪುಜಾವಿಧಾನವನ್ನು ಹೇಳಿರುವುದು ಗಮನೀಯ. ಮಾತ್ರವಲ್ಲ, ಪೂಜೆ–ಅರ್ಚನೆಗಳ ದಿಟವಾದ ಲಕ್ಷಣ ಏನು ಎನ್ನುವುದನ್ನೂ ಈ ಮೂಲಕ ನಿರೂಪಿಸುತ್ತಿದೆ; ಭಕ್ತಿಯೇ ಮುಖ್ಯ, ಪೂಜಾಸಲಕರಣೆಗಳಲ್ಲ ಎನ್ನುವುದು ಇಲ್ಲಿಯ ನಿಲವು.

ಎಲೆ, ಹೂವು, ಹಣ್ಣು, ಬೊಗಸೆಯಷ್ಟು ನೀರು – ಇವು ಕೂಡ ದೇವರ ಪೂಜೆಗೆ ಅಷ್ಟು ಮುಖ್ಯವಲ್ಲ – ಎನ್ನುವುದನ್ನೂ ಪರಂಪರೆ ಪ್ರತಿಪಾದಿಸಿದೆ. ಅದಕ್ಕೊಂದು ಉದಾಹರಣೆಯನ್ನು ಶಂಕರಾಚಾರ್ಯರ ಈ ಪದ್ಯದಲ್ಲಿ ನೋಡಬಹುದು:

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನಿನೇ

ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ ।

ಸಮರ್ಪ್ಯೈಕಂ ಚೇತಃಸರಸಿಜಮುಮಾನಾಥ ಭವತೇ

ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ।।

‘ನಿನ್ನ ಪೂಜೆಗೆ ಹೂ ತರಲು ಆಳವಾದ ಸರೋವರವನ್ನೋ ನಿರ್ಜನವಾದ ಕಾಡನ್ನೋ ವಿಶಾಲವಾದ ಬೆಟ್ಟವನ್ನೋ ಹೊಕ್ಕು ತಿಳಿಗೇಡಿಗಳು ಅಲೆಯುತ್ತಾರೆ. ಎಲೈ, ಪಾರ್ವತೀಪತಿಯೇ! ತಮ್ಮ ಮನಸ್ಸು ಎಂಬ ಅದ್ವಿತೀಯವಾದ ಕಮಲವನ್ನು ನಿನಗೆ ಸಮರ್ಪಿಸಿ ಸುಖವಾಗಿರುವ ಮಾರ್ಗ ಇವರಿಗೆ ತಿಳಿಯುವುದಿಲ್ಲವಲ್ಲ, ಏನು ಆಶ್ಚರ್ಯ!!‘ – ಎಂದಿದ್ದಾರೆ, ಆಚಾರ್ಯ ಶಂಕರರು.

ಪೂಜೆಗೆ ಹೂವನ್ನು ತರಲು ನಾವು ಎಲ್ಲೆಲ್ಲೂ ಅಲೆಯಬೇಕು; ಕಾಡು, ಬೆಟ್ಟ, ಸರೋವರ – ಹೀಗೆ ಹಲವು ದೂರ ದೂರದ ಸ್ಥಳಗಳಲ್ಲಿ ಹುಡುಕಬೇಕು. ಆದರೆ ನಮ್ಮ ಅತ್ಯಂತ ಸನಿಹದಲ್ಲಿಯೇ ಇರುವ ಹೂವನ್ನು ನಾವು ಗಮನಿಸುವುದೇ ಇಲ್ಲ; ನಮ್ಮ ಹೃದಯಲ್ಲಿಯೇ ಇರುವ ಹೃದಯಕಮಲವನ್ನು ಅರ್ಪಿಸುವ ಮನಸ್ಸು ಮಾಡದೆ ಎಲ್ಲೆಲ್ಲೂ ಅಲೆಯುತ್ತಿದ್ದಾನಲ್ಲ ಎಂದು ಶಂಕರರು ಅಚ್ಚರಿಪಟ್ಟಿದ್ದಾರೆ. ಈ ಹೃದಯಕಮಲದ ಸೌರಭವೇ ಭಕ್ತಿ. ಇದೇ ಎಲ್ಲ ಪೂಜೆಗಳ, ವಿಧಿ–ವಿಧಾನಗಳ ದಿಟವಾದ ದ್ರವ್ಯ, ಶಕ್ತಿ, ಯುಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT