ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ದೊಡ್ಡ ವಸ್ತುಗಳು

Last Updated 11 ಜನವರಿ 2021, 1:04 IST
ಅಕ್ಷರ ಗಾತ್ರ

ನಾಸ್ತಿ ವೇದಾತ್‌ ಪರಂ ಶಾಸ್ತ್ರಂ ನಾಸ್ತಿ ಮಾತುಃ ಪರೋ ಗುರುಃ ।

ನಾಸ್ತಿ ದಾನಾತ್‌ ಪರಂ ಮಿತ್ರಮಿಹಲೋಕೇ ಪರತ್ರ ಚ ।।

ಇದರ ತಾತ್ಪರ್ಯ ಹೀಗೆ:

‘ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ವೇದಕ್ಕಿಂತಲೂ ಶ್ರೇಷ್ಠವಾದ ಶಾಸ್ತ್ರವಿಲ್ಲ; ತಾಯಿಗಿಂತ ದೊಡ್ಡವರು ಯಾರೂ ಇಲ್ಲ; ದಾನಕ್ಕಿಂತಲೂ ಹೆಚ್ಚಿನ ಮಿತ್ರನಿಲ್ಲ.’

ವೇದ, ತಾಯಿ ಮತ್ತು ದಾನ – ಇವುಗಳ ಪ್ರಶಂಸೆಯನ್ನು ಮಾಡುತ್ತಿದೆ ಸುಭಾಷಿತ.

ವೇದಕ್ಕೆ ನಮ್ಮ ದೇಶದಲ್ಲಿ ತುಂಬ ದೊಡ್ಡ ಸ್ಥಾನವಿದೆ. ವೇದ ಎಂದರೆ ಅದು ಅಪೌರುಷೇಯ ಎಂಬ ಎಣಿಕೆ ನಮ್ಮದು. ಅಪೌರುಷೇಯ ಎಂದರೆ ಮನುಷ್ಯರು ಮಾಡಿದ್ದು ಆಲ್ಲ ಎಂದು. ವೇದವು ಅನಾದಿ, ಅನಂತ ಎಂಬ ಶ್ರದ್ಧೆಯೂ ನಮ್ಮದು. ನಮ್ಮ ಜೀವನಕ್ಕೆ ಬೇಕಾದ ವಿವೇಕವನ್ನು ವೇದ ಕಟ್ಟಿಕೊಡುತ್ತದೆ. ಮಾತ್ರವಲ್ಲ, ಇಡಿಯ ನಮ್ಮ ಸಂಸ್ಕೃತಿಯ ಮೇಲೆ ಅದರ ಪ್ರಭಾವವೂ ದೊಡ್ಡದು.

ಶಾಸ್ತ್ರ ಎಂದರೆ ನಮ್ಮ ಜೀವನದ ಒಳಿತಿಗಾಗಿರುವ ಜ್ಞಾನಭಂಡಾರ. ಒಂದೊಂದು ವಿಷಯಕ್ಕೂ ನಾಲ್ಕಾರು ಮಾದರಿಯ ಶಾಸ್ತ್ರಗಳು. ಒಂದೊಂದು ಶಾಸ್ತ್ರವನ್ನು ಅಧ್ಯಯನಮಾಡಿ ಜೀರ್ಣಿಸಿಕೊಳ್ಳವುದಕ್ಕೂ ಹತ್ತಾರು ವರ್ಷಗಳ ಪರಿಶ್ರಮ ಬೇಕು. ಇಲ್ಲಿ ಸುಭಾಷಿತ ಹೇಳುತ್ತಿರುವುದು ಎಲ್ಲ ಶಾಸ್ತ್ರಗಳಿಗಿಂತಲೂ ಶ್ರೇಷ್ಠ ಶಾಸ್ತ್ರ ಎಂದರೆ ಅದು ವೇದವೇ ಹೌದು ಎಂದು. ವೇದವಾಙ್ಮಯ ತುಂಬ ವಿಶಾಲವಾದುದು. ವೇದಮಂತ್ರಗಳನ್ನು ಅರ್ಥಮಾಡಿಕೊಳ್ಳುವುದೂ ಸುಲಭವಲ್ಲ. ವೇದದ ತುಂಬೆಲ್ಲ ತುಂಬಿರುವುದು ಸಾಂಕೇತಿಕತೆಯೇ ಹೌದು. ನಮ್ಮ ಜೀವನಕ್ಕೆ ಎಂದೆಂದಿಗೂ ಬೇಕಾಗಿರುವ ಸತ್ಯ ಶಿವ ಸುಂದರಗಳ ಸಮಾಹಾರವನ್ನು ವೇದದಲ್ಲಿ ನೋಡಬಹುದಾಗಿದೆ.

ತಾಯಿ ಇಲ್ಲ ಅಂದರೆ ನಮ್ಮ ಅಸ್ತಿತ್ವವೇ ಇರದು. ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ನಮ್ಮನ್ನು ಹೊತ್ತು, ಬಳಿಕ ಅವಳು ನಮಗೆ ಜನ್ಮವನ್ನು ನೀಡುತ್ತಾಳೆ. ನಮ್ಮ ಜನ್ಮಕ್ಕೂ ಮೊದಲೇ ನಮಗಾಗಿ ಅವಳ ತ್ಯಾಗಶೀಲಪರಂಪರೆ ಆರಂಭವಾಗುತ್ತದೆ. ಅವಳ ಶರೀರವೇ ನಮ್ಮ ಮೊದಲ ಮನೆ; ಅವಳ ಶರೀರವೇ ನಮ್ಮ ಮೊದಲ ಊಟದ ಮನೆ; ಅವಳೇ ನಮ್ಮ ಮೊದಲ ಗುರು; ಅವಳೇ ನಮ್ಮ ಮೊದಲ ಬಂಧು. ಮಕ್ಕಳ ಏಳಿಗೆಯನ್ನೇ ತನ್ನ ಜೀವನದ ಗುರಿಯನ್ನಾಗಿಮಾಡಿಕೊಂಡಿರುವವಳೇ ತಾಯಿ. ಅಂಥ ತಾಯಿಯನ್ನು ಸುಭಾಷಿತಕ್ಕೆ ಇಲ್ಲಿ ಇನ್ನೊಬ್ಬರೊಂದಿಗೆ ಹೋಲಿಸಲು ಮನಸ್ಸಾಗುತ್ತಿಲ್ಲ. ಆದುದರಿಂದಲೇ ಅದು ತಾಯಿ ಎಲ್ಲರಿಗಿಂತಲೂ ದೊಡ್ಡವಳು ಎಂದು ಘೋಷಿಸಿರುವುದು.

ದಾನವನ್ನು ನಮ್ಮ ಅತ್ಯಂತ ಮಹತ್ವದ ಮಿತ್ರ, ಸ್ನೇಹಿತ, ಗೆಳೆಯ ಎಂದೆಲ್ಲ ಸುಭಾಷಿತ ಹೇಳುತ್ತಿದೆ. ಸ್ನೇಹಿತರು ಎಂದರೆ ಯಾರು? ನಮ್ಮ ಜೊತೆ ಇರುವವರು; ನಮ್ಮ ಕಷ್ಟಕಾಲದಲ್ಲಿ ನಮ್ಮನ್ನು ಕಾ‍ಪಾಡುವವರು; ನಮ್ಮ ಒಳಿತಿನ ಬಗ್ಗೆಯೇ ಚಿಂತಿಸುವವರು; ನಮ್ಮ ಗುಣಗಳನ್ನೂ ದೋಷಗಳನ್ನೂ ಬಲ್ಲವರು, ಅವನ್ನು ಸಹಿಸಿಕೊಂಡೇ ನಮ್ಮ ಹಿತವನ್ನು ಎತ್ತಿಹಿಡಿಯುವವರು. ಸ್ನೇಹಿತರು ಮಾಡುವ ಈ ಎಲ್ಲ ಕೆಲಸಗಳನ್ನೂ ನಾವು ಮಾಡಿದ ದಾನವೇ ನಮಗೆ ಕೃತಜ್ಞಾಪೂರ್ವಕ ಮಾಡುತ್ತದೆ ಎಂದು ಸುಭಾಷಿತ ಇಲ್ಲಿ ಧ್ವನಿಸುತ್ತಿದೆ.

ನಮ್ಮ ಜೀವನದಲ್ಲಿ ನಮಗೆ ದಕ್ಕಿರುವ ದೊಡ್ಡದಾದ ಸಂಗತಿಗಳು ಯಾವುವು ಎಂಬುದನ್ನು ನಾವು ನಿರಂತರವಾಗಿ ಹುಡುಕುತ್ತಲೇ ಇರಬೇಕು; ಕಂಡುಕೊಂಡ ಬಳಿಕ ಅವುಗಳಿಗೆ ತಕ್ಕ ಗೌರವ–ಮರ್ಯಾದೆಗಳನ್ನೂ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT