ಶುಕ್ರವಾರ, ಡಿಸೆಂಬರ್ 4, 2020
22 °C

ದಿನದ ಸೂಕ್ತಿ: ಲಾಭದಲ್ಲಿರುವ ನಷ್ಟ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಲುಬ್ಧಸ್ಯ ನಶ್ಯತಿ ಯಶಃ ಪಿಶುನಸ್ಯ ಮೈತ್ರೀ

ನಷ್ಟಕ್ರಿಯಸ್ಯ ಕುಲಮರ್ಥಪರಸ್ಯ ಧರ್ಮಃ ।

ವಿದ್ಯಾಫಲಂ ವ್ಯಸನಿನಃ ಕೃಪಣಸ್ಯ ಸೌಖ್ಯಂ

ರಾಜ್ಯಂ ಪ್ರಮತ್ತಸಚಿವಸ್ಯ ನರಾಧಿಪಸ್ಯ ।।

ಇದರ ತಾತ್ಪರ್ಯ ಹೀಗೆ:

‘ಲೋಭಿಯ ಯಶಸ್ಸು ನಾಶವಾಗುತ್ತದೆ; ಚಾಡಿ ಹೇಳುವವನಿಗೆ ಸ್ನೇಹ ನಷ್ಟವಾಗುತ್ತದೆ; ಸರಿಯಾದ ಕೆಲಸಗಳನ್ನು ಮಾಡದವನ ಕುಲ ನಾಶವಾಗುತ್ತದೆ; ಹಣವನ್ನಷ್ಟೆ ಎಣಿಸುವವನಿಗೆ ಧರ್ಮನಾಶವಾಗುತ್ತದೆ; ಕೆಟ್ಟ ಹವ್ಯಾಸಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ನಷ್ಟವಾಗುತ್ತದೆ; ಜಿಪುಣನಿಗೆ ಸುಖ ಸಿಗುವುದಿಲ್ಲ; ಹೀಗೆಯೇ, ಮೈಮರೆತ ಮಂತ್ರಿಯನ್ನು ಹೊಂದಿರುವಂಥ ರಾಜನ ರಾಜ್ಯ ನಾಶವಾಗುತ್ತದೆ.’

ಈ ಸುಭಾಷಿತವನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟವೇನೂ ಇಲ್ಲ. ನಾವು ಯಾವುದೋ ಒಂದು ಗುರಿಯನ್ನು ಇಟ್ಟುಕೊಂಡು, ಅದೇ ಸರ್ವಶ್ರೇಷ್ಠ ಎಂದುಕೊಂಡು ಮುನ್ನಡೆಯುತ್ತಿರುತ್ತೇವೆ. ನಾವು ಆ ಗುರಿಯನ್ನೂ ಮುಟ್ಟಬಹುದು. ಆದರೆ ನಾವು ನಮ್ಮ ದಾರಿಯನ್ನು ಸರಿಯಾಗಿ ಗಮನಿಸದಿದ್ದರೆ ಆಗ ಹಲವು ಬೆಲೆಬಾಳುವ ವಿವರಗಳನ್ನು ನಮ್ಮ ಪ್ರಯಾಣದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಇದನ್ನೇ ಸುಭಾಷಿತ ಹೇಳುತ್ತಿರುವುದು.

ಮೊದಲಿಗೆ ಸುಭಾಷಿತದ ಕೊನೆಯ ಮಾತನ್ನು ನೋಡೋಣ: ’ಮೈಮರೆತ ಮಂತ್ರಿಯನ್ನು ಹೊಂದಿರುವ ರಾಜನ ರಾಜ್ಯ ನಾಶವಾಗುತ್ತದೆ.’

ಈ ಮಾತನ್ನು ಇಂದಿನ ಸಂದರ್ಭಕ್ಕೆ ಹೇಗೆ ಹೊಂದಿಸುವುದು? ಸುಲಭ. ನಮ್ಮ ಕಾಲದಲ್ಲಿ ರಾಜ ಯಾರು? ಪ್ರಜೆಗಳೇ ಪ್ರಭುಗಳು ಅಲ್ಲವೆ? ಹೀಗಾಗಿ ಮೈಮರೆತ ಮಂತ್ರಿಗಳನ್ನು ಪಡೆದಿರುವ ರಾಜರು ಎಂದರೆ ಪ್ರಭುಗಳೇ, ಎಂದರೆ ನಾವೇ. ಆದುದರಿಂದ ಇಂಥ ಮಂತ್ರಿಗಳಿರುವ ನಮ್ಮ ರಾಜ್ಯವೇ ನಾಶವಾಗುತ್ತದೆ – ಎಂದು ಸುಭಾಷಿತ ಹೇಳುತ್ತಿದೆ. ನಮ್ಮ ಕಾಲದ ಮಂತ್ರಿಗಳು ಎಂದರೆ ಕಾರ್ಪೊರೇಟರ್‌ಗಳು, ಎಂಎಲ್‌ಎಗಳು, ಎಂಪಿಗಳು, ರಾಜ್ಯ–ಕೇಂದ್ರ ಸರ್ಕಾರದ ಮಂತ್ರಿಗಳು – ಇವರಲ್ಲಿ ಬಹುಪಾಲು ಜನರು ಮೈಮರೆತಿದ್ದಾರೆಂದು ತಿಳಿಸಿಕೊಡಲು ಸುಭಾಷಿತವೇ ಬೇಕಾಗಿಲ್ಲವಷ್ಟೆ. ಈಗಾಗಲೇ ದಿಕ್ಕು ತಪ್ಪಿರುವರುವ ನಮ್ಮ ವ್ಯವಸ್ಥೆಯನ್ನು ಅನುಭವಿಸುತ್ತಿರುವ ನಮ್ಮೆಲ್ಲರಿಗೂ ಇದು ಸ್ವಯಂ ಅನುಭವವೇದ್ಯವೇ ಆಗಿದೆ.

ಲೋಭಿಯ ಯಶಸ್ಸು ನಾಶವಾಗುತ್ತದೆ; ಏಕೆಂದರೆ ಅವನಿಗೆ ಇನ್ನೊಬ್ಬರಿಗೆ ಕೊಡುವ ಗುಣವೇ ಇರುವುದಿಲ್ಲ. ಚಾಡಿ ಹೇಳುವವನಿಗೆ ಸ್ನೇಹ ನಷ್ಟವಾಗುತ್ತದೆ; ಏಕೆಂದರೆ ಇಂಥ ಅಪಯಕಾರಿ ವ್ಯಕ್ತಿಯ ಜೊತೆ ಯಾರು ತಾನೆ ಸ್ನೇಹವನ್ನು ಉಳಿಸಿಕೊಳ್ಳಲು ಬಯಸುತ್ತಾರೆ? ಸರಿಯಾದ ಕೆಲಸಗಳನ್ನು ಮಾಡದವನ ಕುಲ ನಾಶವಾಗುತ್ತದೆ; ಏಕೆಂದರೆ ಒಬ್ಬ ತಪ್ಪು ಮಾಡಿದರೂ ಅದರ ಫಲವನ್ನು ಇಡಿಯ ಕುಟುಂಬ ಅನುಭವಿಸಬೇಕಾಗುತ್ತದೆ. ಹಣವನ್ನಷ್ಟೆ ಎಣಿಸುವವನಿಗೆ ಧರ್ಮನಾಶವಾಗುತ್ತದೆ; ಏಕೆಂದರೆ ಹಣದ ಗಳಿಕೆಯೇ ಮುಖ್ಯವಾದವನಿಗೆ ಧರ್ಮ–ಅಧರ್ಮಗಳ ತಿಳಿವಳಿಕೆಯೇ ಬೇಡವಾಗಿರುತ್ತದೆ. ಕೆಟ್ಟ ಹವ್ಯಾಸಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ನಷ್ಟವಾಗುತ್ತದೆ; ಏಕೆಂದರೆ ನಾವು ಹೇಗೆ ಜೀವನದಲ್ಲಿ ನಡೆದುಕೊಳ್ಳುತ್ತೇವೆ ಎಂಬುದೇ ನಮ್ಮ ಸಾಧನೆಗೆ ಮುಖ್ಯ ದಾರಿಯಾಗಿರುತ್ತದೆ. ಜಿಪುಣನಿಗೆ ಸುಖ ಸಿಗುವುದಿಲ್ಲ; ಏಕೆಂದರೆ ಅವನು ತನ್ನ ಸಂಪತ್ತನ್ನು ಅವನೂ ಅನುಭವಿಸುವುದಿಲ್ಲ, ಇನ್ನೊಬ್ಬರಿಗೂ ಕೊಡುವುದಿಲ್ಲ.

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.