ಶುಕ್ರವಾರ, ಆಗಸ್ಟ್ 6, 2021
25 °C

ದಿನದ ಸೂಕ್ತಿ | ಹಂಸವಾಗಿ ನೀವು ಓದಿನಲ್ಲಿ!

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಅನೇಕಾನಿ ಚ ಶಾಸ್ತ್ರಾಣಿ ಸ್ವಲ್ಪಾಯುರ್ವಿಘ್ನಕೋಟಯಃ ।

ತಸ್ಮಾತ್ಸಾರಂ ವಿಜಾನೀಯಾತ್‌ ಕ್ಷೀರಂ ಹಂಸ ಇವಾಂಭಸಿ ।।

ಇದರ ತಾತ್ಪರ್ಯ ಹೀಗೆ:

‘ಶಾಸ್ತ್ರಗಳು ಅನೇಕ; ಆಯುಸ್ಸು ಸ್ವಲ್ಪ. ವಿಘ್ನಗಳು ಅನೇಕ. ಆದುದರಿಂದ ಹಂಸವು ನೀರನ್ನು ಬಿಟ್ಟು ಹಾಲನ್ನು ಮಾತ್ರ ಗ್ರಹಿಸುವಂತೆ ಸಾರವನ್ನು ತಿಳಿಯಬೇಕು.‘

ನಾವೆಲ್ಲರೂ ಅಕ್ಷರಮೋಹಿಗಳು; ಪದವಿಗಳ ಮೂಲಕ ಇಡಿಯ ಜಗತ್ತನ್ನು ತಿಳಿದುಕೊಳ್ಳಬಹುದೆಂಬ ನಂಬಿಕೆ ನಮ್ಮದು. ಆದರೆ ನಾವು ಯಾವುದಾದರೂ ವಿಷಯವನ್ನು ಎಷ್ಟರ ಮಟ್ಟಿಗೆ ತಿಳಿದುಕೊಳ್ಳಬಹುದು? ಜಗತ್ತಿನಲ್ಲಿ ತಿಳಿದುಕೊಳ್ಳಬೇಕಾದ ಸಾವಿರಾರು ವಿಷಯಗಳಿವೆ; ಆ ಸಾವಿರಾರು ವಿಷಯಗಳಲ್ಲೂ ಹತ್ತಾರು ಶಾಖೆಗಳು. ಒಂದೊಂದು ಶಾಖೆಯನ್ನು ಅಧ್ಯಯನ ಮಾಡಲು ಹತ್ತಾರು ವರ್ಷಗಳೇ ಬೇಕಾಗುತ್ತವೆ. ಹೀಗಿರುವಾಗ ನಾವು ಎಷ್ಟು ವಿಷಯಗಳಲ್ಲಿ ತಜ್ಞತೆಯನ್ನು ಸಂಪಾದಿಸಲು ಸಾಧ್ಯ? ಅದೂ ನಮಗಿರುವ ಅಲ್ಪ ಆಯುಸ್ಸಿನಲ್ಲಿ! 

ಸುಭಾಷಿತ ಹೇಳುತ್ತಿರುವುದು ಇದನ್ನೇ.

ಶಾಸ್ತ್ರಗಳು, ಎಂದರೆ ಜ್ಞಾನಶಾಖೆಗಳು ಹಲವು. ನಾವು ಎಷ್ಟು ಶಾಸ್ತ್ರಗಳನ್ನು ಅಧ್ಯಯನ ಮಾಡಲು ಸಾಧ್ಯ? ಈ ಪ್ರಶ್ನೆ ಏಕೆ ಉದ್ಧವವಾಗುತ್ತದೆ ಎಂದರೆ, ವಿದ್ಯೆಯನ್ನು ಸಂಪಾದಿಸುವುದು ಸುಲಭದ ಮಾತಲ್ಲ; ಈ ದಾರಿಯಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರ ಜೊತೆಗೆ ಇನ್ನೊಂದು ಸಮಸ್ಯೆಯೂ ನಮಗಿದೆ. ಅದೇ ನಮ್ಮ ಆಯುಸ್ಸು. ಇರುವ ಆಯುಸ್ಸಿನಲ್ಲಿ ಅನಾರೋಗ್ಯ, ನಿದ್ರೆ, ಅನಿವಾರ್ಯ ಕಾರ್ಯಗಳಿಗೆ ಮೀಸಲಾದ ಸಮಯ – ಇವೆಲ್ಲವನ್ನೂ ಕಳೆದು ನಮಗೆ ಉಳಿಯುವ ಸಮಯವಾದರೂ ಎಷ್ಟು? ಹೀಗೆ ಉಳಿಯುವ ಸಮಯದಲ್ಲಿ ನಮ್ಮ ಅಧ್ಯಯನಕ್ಕೆ ಎಷ್ಟು ಒದಗೀತು?

ಇಂದಿನ ವೈದ್ಯಕೀಯ ಜಗತ್ತನ್ನು ಉದಾಹರಣೆಯಾಗಿ ಇಲ್ಲಿ ನೋಡಬಹುದೆನಿಸುತ್ತದೆ. ಈಗ ವೈದ್ಯಶಾಸ್ತ್ರ ತುಂಬ ಬೆಳೆದಿದೆ; ಹತ್ತಾರು ಶಾಖೆಗಳು, ಒಂದೊಂದರಲ್ಲೂ ಮತ್ತೆ ಹಲವು ವಿಶೇಷ ತಜ್ಞತೆಯ ಕವಲುಗಳು. ಈ ತಜ್ಞತೆ ಎಷ್ಟರ ಮಟ್ಟಿಗೆ ಇರುತ್ತದೆ, ಎಂದರೆ ಎಡಗಣ್ಣಿಗೇ ಪ್ರತ್ಯೇಕ ಅಧ್ಯಯನ, ಬಲಗಣ್ಣಿಗೇ ಪ್ರತ್ಯೇಕ ಅಧ್ಯಯನ ಎಂಬಂಥ ’ಸ್ಪೆಶಲೈಸೇಷನ್‌‘ ಇಂದು ಆ ಕ್ಷೇತ್ರದಲ್ಲಿ ನೆಲೆಯಾಗಿದೆ ಎನ್ನುವುದು ಉತ್ಪ್ರೇಕ್ಷೆಯಾಗದು. ಹೀಗೆ ಒಂದೊಂದು ಅಧ್ಯಯನ ಕ್ಷೇತ್ರವೂ ಸೂಕ್ಷ್ಮವಾಗುತ್ತಹೋಗುತ್ತದೆ. ಹೀಗಿರುವಾಗ ಒಬ್ಬ ವ್ಯಕ್ತಿ ಎಷ್ಟು ಕ್ಷೇತ್ರದಲ್ಲಿ ಆಳವಾಗಿ ವಿಷಯವನ್ನು ತಿಳಿದುಕೊಳ್ಳಲು ಸಾಧ್ಯವಾದೀತು?

ಸಾಹಿತ್ಯವನ್ನೇ ತೆಗೆದುಕೊಳ್ಳಿ. ರಾಮಾಯಣ–ಮಹಾಭಾರತಗಳನ್ನು ಓದುವುದಕ್ಕೆ ನಾಲ್ಕಾರು ವರ್ಷಗಳ ಪರಿಶ್ರಮ ಬೇಕು; ವೇದಗಳ ಒಂದು ಶಾಖೆಯ ಅಧ್ಯಯನಕ್ಕೇ ಹನ್ನೆರಡು ವರ್ಷಗಳ ಕಾಲಾವಕಾಶ ಬೇಕು ಎಂಬ ಎಣಿಕೆ ಇದೆ. ಹೀಗಿರುವಾಗ ನಾಲ್ಕು ವೇದಗಳನ್ನು ಒಬ್ಬ ವ್ಯಕ್ತಿ ಜೀವನದಲ್ಲಿ ದಕ್ಕಿಸಿಕೊಳ್ಳಲಾದೀತೆ? ಷೇಕ್ಸ್‌ಪಿಯರ್‌ ಕೃತಿಗಳನ್ನು ಓದುವುದಕ್ಕೂ ನಾಲ್ಕಾರು ವರ್ಷಗಳ ಸಮಯ ಬೇಕು. ಷೇಕ್ಸ್‌ಪಿಯರ್‌ ಜೊತೆ ಮಿಲ್ಟನ್‌, ಬ್ಲೇಕ್‌ಗಳನ್ನೂ ಡಿಕನ್‌ಸನ್‌, ಡಾಂಟೆಗಳನ್ನೂ ಓದುವೆ – ಎಂದರೆ ಇದು ಕಾರ್ಯರೂಪಕ್ಕೆ ಬರಲು ಎಷ್ಟು ಸಮಯ ಬೇಕಾದೀತು?

ಕನ್ನಡದಲ್ಲಿಯೇ ವರ್ಷವೊಂದಕ್ಕೆ ಸುಮಾರು ಐದರಿಂದ ಆರು ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ – ಎಂಬ ಒಂದು ಅಂದಾಜಿದೆ. ಇದರಲ್ಲಿ ನಾವು ಎಷ್ಟನ್ನು ಓದಲು ಸಾಧ್ಯ?

ಹಾಗಾದರೆ ನಾವು ಏನು ಮಾಡಬೇಕು?

ಸುಭಾಷಿತ ಇಲ್ಲಿ ಸೊಗಸಾದ ಉದಾಹರಣೆಯ ಮೂಲಕ ನಮಗೆ ದಾರಿಯೊಂದನ್ನು ಸೂಚಿಸುತ್ತಿದೆ.

ಹಂಸಪಕ್ಷಿ ಹಾಲಿನಲ್ಲಿರುವ ನೀರನ್ನು ಬೇರ್ಪಡಿಸಿ, ಬರಿಯ ಹಾಲನ್ನು ಮಾತ್ರವೇ ಕುಡಿಯುತ್ತದೆಯಂತೆ. ಹೀಗೆಯೇ ನಾವು ಕೂಡ ಕಸಕಡ್ಡಿಗಳನ್ನೆಲ್ಲ ಓದಿ ಅಮೂಲ್ಯವಾದ ನಮ್ಮ ಆಯುಸ್ಸನ್ನು ಅಂಥ ಕಳಪೆ ಕೃತಿಗಳಿಗೆ ಆಹುತಿಯನ್ನು ಕೊಡದೆ, ದಿಟವಾಗಿಯೂ ಮೌಲ್ಯಯುತವಾದ, ನಮ್ಮ ಜೀವನಕ್ಕೆ ದಾರಿದೀಪವಾಗಬಲ್ಲ, ಶಾಶ್ವತ ಕೃತಿಗಳನ್ನೇ ಓದುವ ಸಂಕಲ್ಪಮಾಡಿ, ಅವುಗಳನ್ನೇ ಓದಬೇಕು. ಹಂಸಪಕ್ಷಿಯಂತೆ ನಾವು ಕೂಡ ಸತ್ತ್ವಶಾಲೀ ಸಾಹಿತ್ಯವನ್ನು ಜೊಳ್ಳು ಸಾಹಿತ್ಯದಿಂದ ಬೇರ್ಪಡಿಸಿಕೊಂಡು, ಒಳ್ಳೆಯ ಸಾಹಿತ್ಯವನ್ನೇ ಅನುಸಂಧಾನಮಾಡಬೇಕು.

ಇಂದಿನಿಂದಲೇ ನಿಮ್ಮ ಓದಿನ ಆಯ್ಕೆ ವಿವೇಕಯುತವಾಗಿರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು