ಶನಿವಾರ, ಏಪ್ರಿಲ್ 1, 2023
23 °C

ದಿನದ ಸೂಕ್ತಿ: ಅಧ್ಯಯನಶೀಲರಾಗಿ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಬುದ್ಧಿವೃದ್ಧಿಕರಾಣ್ಯಾಶು ಧನ್ಯಾನಿ ಚ ಹಿತಾನಿ ಚ ।

ನಿತ್ಯಂ ಶಾಸ್ತ್ರಾಣ್ಯವೇಕ್ಷೇತ ನಿಗಮಾಂಶ್ಚೈವ ವೈದಿಕಾನ್‌ ।।

ಇದರ ತಾತ್ಪರ್ಯ ಹೀಗೆ:

‘ನಮ್ಮ ಬುದ್ಧಿಶಕ್ತಿಯನ್ನು ಬೆಳೆಸುವ ಗ್ರಂಥಗಳನ್ನೂ, ಹಣವನ್ನು ಸಂಪಾದಿಸಲು ನೆರವಾಗುವಂಥ ಕೃತಿಗಳನ್ನೂ, ಪರರ ಹಿತದಲ್ಲಿ ಉಪಯೋಗಕ್ಕೆ ಬರುವಂಥ ಶಾಸ್ತ್ರಗಳನ್ನೂ, ವೇದಗಳ ಅರ್ಥವನ್ನು ವಿವರಿಸುವ ಗ್ರಂಥಗಳನ್ನೂ ಯಾವಾಗಲೂ ಓದುತ್ತಿರಬೇಕು.’

ನಾವು ಜೀವನವನ್ನು ಚೆನ್ನಾಗಿ ನಡೆಸಲು ಬೇಕಾದ ಆವಶ್ಯಕ ಸಂಗತಿಗಳಲ್ಲಿ ಅರಿವು ಅತ್ಯಂತ ಮುಖ್ಯವಾದುದು. ಈ ಅರಿವನ್ನು ಪಡೆಯುವ ವಿಧಾನವೂ ಹತ್ತುಹಲವು; ಪ್ರಕೃತಿಯನ್ನು ನೋಡುತ್ತ ಸಂಪಾದಿಸುತ್ತೇವೆ; ಹಿರಿಯರ ಮಾತು–ನಡೆವಳಿಕೆಗಳಿಂದ ಸಂಪಾದಿಸುತ್ತೇವೆ; ಸ್ನೇಹಿತರಿಂದ ಸಂಪಾದಿಸುತ್ತೇವೆ. ಹೀಗೆ ಹಲವು ಮೂಲಗಳಿಂದ ತಿಳಿವಳಿಕೆಯನ್ನು ಸಂಚಯನ ಮಾಡುತ್ತಿರುತ್ತೇವೆ. ಈ ಸಂಗ್ರಹಕಾರ್ಯದಲ್ಲಿ ನಮಗೆ ನೆರವಾಗುವಂಥವು ಪುಸ್ತಕಗಳ ಓದು. ಪುಸ್ತಕಗಳಷ್ಟು ನಮ್ಮ ಅರಿವಿನ ವಿಸ್ತಾರವನ್ನು ಇನ್ನೊಂದು ಮಾಡಲಾರದು ಎಂದು ಹೇಳಿದರೆ ತಪ್ಪಾಗದು.

ಪುಸ್ತಕಗಳ ಅಧ್ಯಯನ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ ಎಂಬುದು ದಿಟ. ಆದರೆ ನಾವು ಎಂಥ ಪುಸ್ತಕಗಳನ್ನು ಆರಿಸಿಕೊಳ್ಳುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ನಾವು ಎಂಥ ಪುಸ್ತಕಗಳನ್ನು ಓದಿಗಾಗಿ ಆರಿಸಿಕೊಳ್ಳಬೇಕು ಎಂಬುದನ್ನು ಸುಭಾಷಿತ ಇಲ್ಲಿ ಸೂಚಿಸಿದೆ.

ಮೊದಲಿಗೆ ನಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸುವಂಥ ಪುಸ್ತಕಗಳನ್ನು ಓದಬೇಕು. ಕೇವಲ ಬುದ್ಧಿ ಇದ್ದರಷ್ಟೆ ಸಾಲದು, ಜೀವನಕ್ಕೆ ಹಣವೂ ಬೇಕು. ಹಣಸಂಪಾದನೆಯ ದಾರಿಗಳನ್ನು ತಿಳಿಸುವ ಪುಸ್ತಕಗಳನ್ನೂ ಓದಬೇಕು. ನಮ್ಮ ಜೀವನವಷ್ಟೆ ನನ್ನದು – ಎಂಬ ಸ್ವಾರ್ಥಚಿಂತನೆಯಿಂದ ನಮ್ಮ ಜೀವನವನ್ನು ರೂಪಿಸಿಕೊಂಡರೆ ಅಂಥ ಜೀವನಕ್ಕೆ ಅರ್ಥವೇ ಇರದು. ಹೀಗಾಗಿ ಸಮಾಜಕ್ಕೆ ಉಪಯೋಗವಾಗುವಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ನಮ್ಮನ್ನು ಸಮಾಜಮುಖಿಯನ್ನಾಗಿಸಿಕೊಳ್ಳಲು ನೆರವಾಗುವಂಥ ಪುಸ್ತಕಗಳ ಅಧ್ಯಯನವನ್ನು ಮಾಡಬೇಕು. ಕೊನೆಯಲ್ಲಿ ಸುಭಾಷಿತ ಹೇಳುತ್ತಿರುವುದು ವೇದಗಳ ಅರ್ಥವನ್ನು ತಿಳಿಸಿಕೊಡುವ ಗ್ರಂಥಗಳ ಅಧ್ಯಯನ. ನಮ್ಮ ಜೀವನ ಕೇವಲ ಲೌಕಿಕ ವಿವರಗಳಲ್ಲಿಯೇ ಮುಳುಗಬಿಡುವ ಸಾಧ್ಯತೆ ಇರುತ್ತದೆ. ಈ ಅಪಾಯದಿಂದ ನಮ್ಮನ್ನು ಪಾರುಮಾಡುವಂಥದ್ದು ವೇದಗಳು. ಆದರೆ ವೇದಗಳ ಅರ್ಥಾನುಸಂಧಾನ ಸುಲಭವಲ್ಲ. ಹೀಗಾಗಿ ವೇದಗಳನ್ನೂ, ಅವುಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವಂಥ ಗ್ರಂಥಗಳನ್ನೂ ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕಾಗುತ್ತದೆ.

ಈ ಗ್ರಂಥಗಳ ಆಯ್ಕೆ ನಮ್ಮ ವಯಸ್ಸು, ತಿಳಿವಳಿಕೆಯ ಮಟ್ಟ–ಅಗತ್ಯ – ಮುಂತಾದ ವಿವರಗಳನ್ನು ಅವಲಂಬಿಸಿಯೇ ನಡೆಯಬೇಕು. ಮಗ್ಗಿಪುಸ್ತಕವನ್ನು ಓದುವ ವಯಸ್ಸಿನಲ್ಲಿ ರೇಖಾಗಣಿತವನ್ನು ಓದಿದರೆ ಪ್ರಯೋಜವಿರದು. ಇತಿಹಾಸ ಬಗ್ಗೆ ಆಸಕ್ತಿ ಇದ್ದರೆ ಪಾಕಶಾಸ್ತ್ರದ ಪುಸ್ತಕಗಳನ್ನು ಓದಿದರೆ ಲಾಭವಾಗದು. ಹೀಗಾಗಿ ಪುಸ್ತಕಗಳ ಆಯ್ಕೆಯಲ್ಲೂ ಕುಶಲತೆ ಇರಬೇಕಾಗುತ್ತದೆ.

ಇಂದು ಸಮಾಜದಲ್ಲಿ ಅಧ್ಯಯನಶೀಲಪ್ರವೃತ್ತಿ ಕಡಿಮೆ ಆಗುತ್ತಿದೆ. ನಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಮಾತ್ರವಲ್ಲ, ಗಟ್ಟಿಯಾದ ಪ್ರಜಾಪ್ರಭುತ್ವ ಸ್ಥಾಪನೆಯಾಗಲೂ ನೆಮ್ಮದಿಯ ಸಮಾಜ ನೆಲೆಯಾಗಲೂ ಅರಿವಿನ ಅನುಸಂಧಾನ ಅನಿವಾರ್ಯವಿದೆ. ಹೀಗಾಗಿ ನಾವೆಲ್ಲರೂ ಅಧ್ಯಯನಶೀಲರಾಗೋಣ. ಸುಖಮಯವಾದ ಸಮಾಜವನ್ನು ಕಟ್ಟೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು