ಬುಧವಾರ, ನವೆಂಬರ್ 25, 2020
21 °C

ದಿನದ ಸೂಕ್ತಿ: ಕಲಿಯುಗದ ಧರ್ಮ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಧರ್ಮಃ ಪ್ರವ್ರಜಿತಸ್ತಪಃ ಪ್ರಚಲಿತಂ ಸತ್ಯಂ ಚ ದೂರೇ ಗತಂ

ಪೃಥ್ವೀ ಮಂದಫಲಾ ನರಾಃ ಕಪಟಿನಶ್ಚಿತ್ತಂ ಚ ಶಾಠ್ಯೋರ್ಜಿತಮ್ ।

ರಾಜಾನೋsರ್ಥಪರಾ ನ ರಕ್ಷಣಪರಾಃ ಪುತ್ರಾಃ ಪಿತುರ್ದ್ವೇಷಿಣಃ

ಸಾಧುಃ ಸೀದತಿ ದುರ್ಜನಃ ಪ್ರಭವತಿ ಪ್ರಾಪ್ತೇ ಕಲೌ ದುರ್ಯುಗೇ ।।

ಇದರ ತಾತ್ಪರ್ಯ ಹೀಗೆ:

’ಕೆಟ್ಟದಾದ ಕಲಿಯುಗ ಆರಂಭವಾಗಲು ಧರ್ಮವು ಹಾಳಾಯಿತು. ತಪಸ್ಸು ಹೊರಟುಹೋಯಿತು. ಸತ್ಯವು ಮೂಲೆ ಸೇರಿತು. ಭೂಮಿಯು ಫಲವನ್ನು ಸರಿಯಾಗಿ ಕೊಡುತ್ತಿಲ್ಲ. ಜನರು ಕಪಟಿಗಳು. ಮನಸ್ಸು ಮೋಸವನ್ನೇ ಆಲೋಚಿಸುತ್ತದೆ. ಅರಸರು ಹಣದ ಹಿಂದೆ ಬಿದ್ದಿದ್ದಾರೆಯೇ ಹೊರತು ಜನರನ್ನು ರಕ್ಷಿಸುವುದರಲ್ಲಿ ಅವರಿಗೆ ಆಸಕ್ತಿ ಇಲ್ಲವಾಗಿದೆ. ಮಕ್ಕಳು ತಂದೆಯನ್ನು ನಿರ್ಲಕ್ಷಮಾಡುತ್ತಿದ್ದಾರೆ. ಒಳ್ಳೆಯವರು ಹಾಳಾಗುತ್ತಾರೆ; ಕೆಟ್ಟವರು ಚೆನ್ನಾಗಿರುತ್ತಾರೆ.’

ನಮ್ಮಲ್ಲಿ ಯುಗಗಳ ಕಲ್ಪನೆ ಉಂಟು. ಈ ಕಲ್ಪನೆಯಲ್ಲೂ ಹಲವು ಸ್ವಾರಸ್ಯಗಳುಂಟು. ಕಾಲದ ಗತಿಯನ್ನು ತಿಳಿದುಕೊಳ್ಳಲು ಈ ಕಲ್ಪನೆ ಸಹಾಯ ಮಾಡುತ್ತದೆ. ಕಾಲದ ಬಗ್ಗೆ ನಮ್ಮ ಸಂಸ್ಕೃತಿಯಲ್ಲಿ ತುಂಬ ಜಿಜ್ಞಾಸೆ ನಡೆದಿದೆ. 

ಕಾಲ ಎಂದರೇನು? ಉತ್ತರ ಕಷ್ಟ. ಈ ಪ್ರಶ್ನೆಗೆ ವಿಜ್ಞಾನದ ಉತ್ತರ ಒಂದು ರೀತಿಯಲ್ಲಿರಬಹುದು; ತತ್ತ್ವಶಾಸ್ತ್ರದ ಉತ್ತರ ಇನ್ನೊಂದು ರೀತಿಯಲ್ಲಿರಬಹುದು; ನಮ್ಮಂಥ ಸಾಮಾನ್ಯರ ಉತ್ತರ ಮಗದೊಂದು ವಿಧದಲ್ಲಿ ಇರಬಹುದು. ಆದರೆ ಉತ್ತರವಂತೂ ಕಷ್ಟ.

ಆದರೆ ಕಾಲದ ಒಂದು ಗುಣ ನಮ್ಮೆಲ್ಲರ ಗಮನಕ್ಕೆ ಬಂದಿರುತ್ತದೆ. ಕಾಲ ಎಲ್ಲವನ್ನೂ ಕೆಡಿಸುತ್ತಿರುತ್ತದೆ. ಇಂದು ನಾವು ತಂದಿಟ್ಟಿರುವ ತರಕಾರಿ ನಾಳೆಗೆ ಒಣಗಿಹೋಗುತ್ತದೆ; ಹಣ್ಣು ಕೊಳೆತುಹೋಗುತ್ತದೆ. ಹೀಗೆಯೇ ನಮ್ಮ ಜೀವನವು ಸಮೃದ್ಧವಾಗಿರುವುದು ದುರಂತದ ಕಡೆಗೆ ಹೊರಳಬಲ್ಲದು. ಇದನ್ನೇ ನಮ್ಮವರು ಯುಗಗಳ ಕಲ್ಪನೆಯಲ್ಲಿ ಹೇಳಲು ಹೊರಟದ್ದು. ಸೃಷ್ಟಿಯ ಮೊದಲ ಯುಗದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಈ ಒಳಿತು ಯುಗದಿಂದ ಯುಗಕ್ಕೆ ಹ್ರಾಸವಾಗುತ್ತಹೋಗುತ್ತದೆ. ಕೊನೆಯ ಯುಗವಾದ ಕಲಿಯುಗದಲ್ಲಿ ಎಲ್ಲವೂ ಕೆಡಕಿನ ಕಡೆಗೇ ಓಡುತ್ತಿರುತ್ತದೆ.

ನಾವಿರುವುದು ಕಲಿಯುಗದಲ್ಲಿ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ನೋಡಿದಾಗ ಯುಗದ ಕಲ್ಪನೆಯ ಹಿಂದಿರುವ ವಿಚಾರಸರಣಿಯನ್ನು ಸುಳ್ಳು ಎಂದು ನಿರಾಕರಿಸಲು ಖಂಡಿತ ಸಾಧ್ಯವಾಗದಲ್ಲವೆ? ಸುಭಾಷಿತ ಹೇಳಿರುವುದನ್ನೇ ಇನ್ನೊಮ್ಮೆ ಮೆಲುಕು ಹಾಕಿ:

’ಕೆಟ್ಟದಾದ ಕಲಿಯುಗ ಆರಂಭವಾಗಲು ಧರ್ಮವು ಹಾಳಾಯಿತು. ತಪಸ್ಸು ಹೊರಟುಹೋಯಿತು. ಸತ್ಯವು ಮೂಲೆ ಸೇರಿತು. ಭೂಮಿಯು ಫಲವನ್ನು ಸರಿಯಾಗಿ ಕೊಡುತ್ತಿಲ್ಲ. ಜನರು ಕಪಟಿಗಳು. ಮನಸ್ಸು ಮೋಸವನ್ನೇ ಆಲೋಚಿಸುತ್ತದೆ. ಅರಸರು ಹಣದ ಹಿಂದೆ ಬಿದ್ದಿದ್ದಾರೆಯೇ ಹೊರತು ಜನರನ್ನು ರಕ್ಷಿಸುವುದರಲ್ಲಿ ಅವರಿಗೆ ಆಸಕ್ತಿ ಇಲ್ಲವಾಗಿದೆ. ಮಕ್ಕಳು ತಂದೆಯನ್ನು ನಿರ್ಲಕ್ಷಮಾಡುತ್ತಿದ್ದಾರೆ. ಒಳ್ಳೆಯವರು ಹಾಳಾಗುತ್ತಾರೆ; ಕೆಟ್ಟವರು ಚೆನ್ನಾಗಿರುತ್ತಾರೆ.’

ಈ ಮಾತುಗಳಲ್ಲಿ ಸತ್ಯವಿಲ್ಲವೆ?

ಹಾಗಾದರೆ ಕಲಿಯುಗವನ್ನು ಮತ್ತೆ ಸತ್ಯಯುಗವನ್ನಾಗಿಸುವುದು ಹೇಗೆ? ನಾವು ಕಳೆದುಕೊಂಡಿರುವ ಸುಖ–ಸಂತೋಷ–ಮೌಲ್ಯಗಳು ಸ್ಥಾಪನೆಯಾದರೆ ಕಲಿಯುಗ ಸತ್ಯಯುಗ ಆದಂತೆಯೇ ಹೌದು. ಹಾಗಾದರೆ ಈ ಮೌಲ್ಯಗಳನ್ನು ಸ್ಥಾಪಿಸಬೇಕಾದವರು ಯಾರು? ನಾವೇ ಅಲ್ಲವೆ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.