ಶನಿವಾರ, ಜೂನ್ 25, 2022
24 °C

ದಿನದ ಸೂಕ್ತಿ: ಶಂಕರವಿವೇಕ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಅಷ್ಟವರ್ಷೇ ಚತುರ್ವೇದಿ
ದ್ವಾದಶೇ ಸರ್ವಶಾಸ್ತ್ರವಿತ್ |
ಷೋಡಶೇ ಕೃತವಾನ್ ಭಾಷ್ಯಂ
ದ್ವಾತ್ರಿಂಶೇ ಮುನಿರಭ್ಯಗಾತ್||

ಇದರ ತಾತ್ಪರ್ಯ ಹೀಗೆ:
'ಶಂಕರಾಚಾರ್ಯರು ಎಂಟು ವರ್ಷದವರಿದ್ದಾಗಲೇ ನಾಲ್ಕು ವೇದಗಳನ್ನೂ ಕಲಿತಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿ ಎಲ್ಲ ಶಾಸ್ತ್ರಗಳನ್ನೂ ಕಲಿತಿದ್ದರು. ಹದಿನಾರನೆಯ ವಯಸ್ಸಿನಲ್ಲಿ ಭಾಷ್ಯವನ್ನು ರಚಿಸಿದರು. ಮೂವತ್ತೆರಡನೆಯ ವಯಸ್ಸಿನಲ್ಲಿ ಶರೀರವನ್ನು ತೊರೆದರು.'

ಶಂಕರಾಚಾರ್ಯರ ಜೀವನ-ಸಾಧನೆಯನ್ನು ಪ್ರಶಂಸಿಸುತ್ತಿದೆ ಈ ಶ್ಲೋಕ.

ಇಡಿಯ ಜಗತ್ತಿಗೆ ಕೊರೊನಾ ಭೀತಿಯಿಂದ ಆತಂಕ ಎದುರಾಗಿದೆ. ಇದರಿಂದ ನಾವು ಬಿಡುಗಡೆಯನ್ನು ಪಡೆಯಬೇಕಾದರೆ ನಾವೆಲ್ಲರೂ ವೈರಸ್‌ ವಿರುದ್ಧ ಒಂದಾಗಿ ಹೋರಾಡಬೇಕಾಗಿದೆ. ಆದರೆ ದೇಶ ದೇಶಗಳ ನಡುವಿನ ವೈರ, ಮನುಷ್ಯ ಮನುಷ್ಯನ ನಡುವಿನ ದ್ವೇಷ ಈ ಸಂದರ್ಭದಲ್ಲೂ ಎದ್ದುಕಾಣುತ್ತಿರುವುದು ಸುಳ್ಳಲ್ಲ. ಒಗ್ಗಟ್ಟಿನಿಂದ ಇರಬೇಕಾದ ಸಮಯದಲ್ಲೂ ಮನುಷ್ಯರು ಪರಸ್ಪರ ಕಿತ್ತಾಡುತ್ತಿದ್ದಾರೆ; ಸಂಕಷ್ಟದಲ್ಲೂ ವಿವೇಕದಿಂದ ನಡೆದುಕೊಳ್ಳುತ್ತಿಲ್ಲ. ಈ ವಿಚಿತ್ರವೂ, ವಿಷಮತೆಯೂ ಆದ ಮಾನಸಿಕತೆಗೆ ಕಾರಣವೇ ‘ಅವಿದ್ಯೆ’.

ಅವಿದ್ಯೆ ಎಂದರೇನು? ಇದರ ಬಗ್ಗೆ ವಿವರವಾಗಿ ತಿಳಿಸಿಕೊಟ್ಟವರು ಆಚಾರ್ಯ ಶಂಕರ.

ಒಬ್ಬರು ಇನ್ನೊಬ್ಬರ ಬಗ್ಗೆ ದ್ವೇಷ–ಅಸೂಯೆಗಳನ್ನು ಏಕಾದರೂ ಪ್ರಕಟಿಸುತ್ತಾರೆ? ‘ಅವನು ನಾನಲ್ಲ’, ‘ಅವನು ಬೇರೆ, ನಾನು ಬೇರೆ’ – ಇದೇ ಭೇದಬುದ್ಧಿ ಅಲ್ಲವೆ?

ಆಚಾರ್ಯ ಶಂಕರರು ಈ ಭೇದಬುದ್ಧಿಯನ್ನೇ ಅವಿದ್ಯೆ ಎಂದರು. ಎಲ್ಲರಲ್ಲೂ ಒಂದೇ ಚೈತನ್ಯ ಇರುವಾಗ ‘ಅವನು ಬೇರೆ, ನಾನು ಬೇರೆ’ ಎಂಬ ತಿಳಿವಳಿಕೆಯೇ ತಪ್ಪು ಎಂದರು. ಈ ಚೈತನ್ಯವನ್ನೇ ಅವರು ‘ಬ್ರಹ್ಮ’ ಎಂದು ಕರೆದರು. ಬ್ರಹ್ಮ ಎಂದರೆ ಬೃಹತ್ತಾದುದು; ಎಷ್ಟು ಬೃಹತ್ತಾದುದು ಎಂದರೆ ಅದು ಸಮಸ್ತ ಸೃಷ್ಟಿಯನ್ನೂ ಒಳಗೊಂಡು, ಅದನ್ನೂ ಮೀರಿ ನಿಂತ ಚೈತನ್ಯವಸ್ತು.

ಒಂದೇ ಮಣ್ಣು ಮಡಕೆಯಾಗಿ, ತಟ್ಟೆಯಾಗಿ, ಮನೆಯಾಗಿ ಬೇರೆ ಬೇರೆ ರೂಪದಲ್ಲಿ ತೋರಿ
ಕೊಳ್ಳುತ್ತದೆ. ಆದರೆ ಮೂಲದಲ್ಲಿ ‘ಮಣ್ಣು’ ಒಂದೇ. ಅಂತೆಯೇ ಅವನು ಕರಿಯ, ಇವನು ಬಿಳಿಯ, ಅವನು ಎತ್ತರ, ಇವನು ಕುಳ್ಳ – ಹೀಗೆ ನಮ್ಮಲ್ಲಿ ಮೇಲ್ನೋಟಕ್ಕೆ ಪರಸ್ಪರ ಭೇದವಾಗಿ ಕಾಣಿಸಿದರೂ ಎಲ್ಲರಲ್ಲೂ ಸಮಾನವಾಗಿರುವುದು ಬ್ರಹ್ಮವಸ್ತು.’

ಭೇದಬುದ್ಧಿಯೇ ನಮ್ಮ ಇಂದಿನ ಹಲವು ಸಮಸ್ಯೆಗಳಿಗೆ ಮೂಲ. ಇದು ಅವಿವೇಕವೇ ಹೊರತು ವಿವೇಕವಲ್ಲ ಎಂದು ಪ್ರತಿಪಾದಿಸಿದವರು ಆಚಾರ್ಯ ಶಂಕರರು.

‘ಅವಿದ್ಯೆ’ ಎಂದರೆ ನಾವು ಈಗ ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುವಂತೆ ಶಾಲಾ ಶಿಕ್ಷಣವನ್ನು ಪಡೆಯದಿರುವುದು ಅಲ್ಲ; ಶಾಶ್ವತತತ್ತ್ವವನ್ನು ಅರ್ಥಮಾಡಿಕೊಳ್ಳದಿರುವುದು. ಜಗತ್ತಿನ ಎಲ್ಲ ಆಗುಹೋಗುಗಳಿಗೂ ಮೂಲವಾಗಿರುವ, ಅಷ್ಟೇಕೆ, ತಾನೇ ಇಡಿಯ ಸೃಷ್ಟಿಯಾಗಿರುವ ತತ್ತ್ವವನ್ನು ತಿಳಿದುಕೊಳ್ಳುವುದು ‘ವಿದ್ಯೆ’. ಇದನ್ನು ತಿಳಿದುಕೊಂಡ ಮೇಲೆ ನಮಗೆ ಜಗತ್ತು ಮೊದಲಿನಂತೆ ಕಾಣಿಸದು; ಇಲ್ಲಿಯ ಶೋಕ ಮೋಹ ಭಯಾದಿಗಳು ನಮ್ಮನ್ನು ಪೀಡಿಸದು. ಅವಿದ್ಯೆಯನ್ನು ಹೋಗಾಲಾಡಿಸಿಕೊಂಡರೆ ನಾವು ನೆಮ್ಮದಿಯಾಗಿರಬಹುದು ಎನ್ನುವುದು ಆಚಾರ್ಯ ಶಂಕರರ ದರ್ಶನದ ಮುಖ್ಯ ಪ್ರತಿಪಾದನೆಗಳಲ್ಲಿ ಒಂದು.

ವಿದ್ಯೆಯನ್ನು ಸಂಪಾದಿಸಲು ಅಡ್ಡಿಗಳೆಂದರೆ ಅಗ್ರಹಣ, ಸಂಶಯ, ಅನ್ಯಥಾಗ್ರಹಣ. ಅಗ್ರಹಣ ಎಂದರೆ ವಿಷಯವನ್ನು ತಿಳಿಯುವುದರಲ್ಲಿ ಅಸಮರ್ಥತೆ; ಸಂಶಯ ಎಂದರೆ ಗೊಂದಲ, ಸರಿಯೋ ತಪ್ಪೋ ಎಂಬುದರಲ್ಲಿ ಸ್ಪಷ್ಟವಿಲ್ಲದಿರುವುದು; ಅನ್ಯಥಾಗ್ರಹಣ ತಪ್ಪಾಗಿ ತಿಳಿಯು
ವುದು. ಈ ಮೂರರಿಂದ ನಮ್ಮನ್ನು ಬಿಡಿಸಿಕೊಂಡರೆ ಆಗ ನಮಗೆ ವಿದ್ಯೆ ಪ್ರಾಪ್ತವಾಗುತ್ತದೆ.

ಸದ್ಯದ ನಮ್ಮ ಸಮಸ್ಯೆಯನ್ನೇ ನೋಡಬಹುದು.ಕೊರೊನಾ ವಿಷಯದಲ್ಲಿ ಅಗ್ರಹಣ, ಸಂಶಯ ಮತ್ತು ಅನ್ಯಥಾಗ್ರಹಣ – ಇವು ಮೂರು ಕೂಡ ನಮಗೆ ತೊಂದರೆಯನ್ನು ಒಡ್ಡುತ್ತಿರುವುದು ಸ್ಪಷ್ಟ. ಇವು ಮೂರು ನಮ್ಮ ಇಂದಿನ ಅವಿದ್ಯೆಗೆ ಕಾರಣವಾಗಿದೆ. ಶಂಕರರು ದೃಢಗೊಳಿಸಿದ ಶಾಸ್ತ್ರಪದ್ಧತಿ ನಮ್ಮ ಲೌಕಿಕ ಮತ್ತು ಅಲೌಕಿಕ ‘ಅವಿದ್ಯೆ’ಗಳನ್ನು ಪರಿಹರಿಸಿಕೊಳ್ಳಲು ನೆರವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು