ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಿಜವಾದ ವಿಜಯ

Last Updated 25 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಗುಣೈರುತ್ತಂಗತಾಂ ಯಾತಿ ನೋಚ್ಚೈರಾಸನಸಂಸ್ಥಿತಃ ।
ಪ್ರಾಸಾದಶಿಖರಸ್ಥೋಪಿ ಕಾಕಃ ಕಿಂ ಗರುಡಾಯತೇ ।।

ಇದರ ತಾತ್ಪರ್ಯ ಹೀಗೆ:

‘ಮಾನವನು ಗುಣದಿಂದ ಮೇಲಕ್ಕೆ ಏರಬೇಕು, ಆಸನದಿಂದ ಅಲ್ಲ; ಕಾಗೆಯು ಉಪ್ಪರಿಗೆಯ ಮೇಲೆ ಕುಳಿತಿದ್ದರೂ ಅದು ಗರುಡನಾಗುವುದಿಲ್ಲ.’

ಚುನಾವಣೆಯ ಕಾವು ಏರುತ್ತಿರುವ ಸಂದರ್ಭದಲ್ಲಿ ಈ ಸುಭಾಷಿತದ ಸೊಗಸು ಎದ್ದುಕಾಣುವಂತಿದೆ.

ಇಂದು ವಿಜಯದಶಮಿ. ಯಾರಿಗೆ ತಾನೆ ವಿಜಯ, ಎಂದರೆ ಗೆಲವು ಬೇಡ? ಎಲ್ಲರಿಗೂ ಬೇಕಷ್ಟೆ! ಅದರಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರಿಗೆ ವಿಜಯ ಬೇಕೆ ಬೇಕು ಎನ್ನುವಷ್ಟು ಹಠ. ಈ ಗೆಲವನ್ನು ಪಡೆಯಲು ಅವರು ಮಾಡುವ ಸಾಧನೆಯಾದರೂ ಏನು? ಬಹುಪಾಲು ರಾಜಕಾರಣಿಗಳಿಗೆ ಈ ಮಾತು ಅನ್ವಯವಾಗುತ್ತದೆಯೆನ್ನಿ! ತಮ್ಮದಲ್ಲದ ವ್ಯಕ್ತಿತ್ವವನ್ನು ತಮ್ಮದು ಎಂದು ಘೋಷಿಸಿಕೊಳ್ಳುವುದು. ಇದೇ ರಾಜಕಾರಣಿಗಳು ಗೆಲವಿಗಾಗಿ ನಡೆಸುವ ತಂತ್ರ.

ಚುನಾವಣೆಯಲ್ಲಿ ಗೆದ್ದರೆ ಜನರ ಸೇವೆಯನ್ನು ಮಾಡುವೆ; ಏಕೆಂದರೆ ಜನಸೇವೆಯೇ ನನ್ನ ಗುರಿ – ಹೀಗೆಲ್ಲ ರಾಜಕಾರಣಿಗಳು ತಮ್ಮ ವ್ಯಕ್ತಿತ್ವವನ್ನು ಹಿಗ್ಗಿಸಿಕೊಳ್ಳುತ್ತಾರೆ. ಇಲ್ಲೊಂದು ಪ್ರಶ್ನೆ ಏಳುತ್ತದೆ. ಜನಸೇವೆಯನ್ನು ಮಾಡಲು ಅಧಿಕಾರದ ಗದ್ದುಗೆಯ ಆಶ್ರಯ ಬೇಕೇ ಬೇಕೆ? ಎಷ್ಟೋ ಜನರು ಯಾವುದೇ ಅಧಿಕಾರ ಇಲ್ಲದಿದ್ದರೂ ಜನಸೇವೆಯನ್ನೂ ಸಮಾಜಸೇವೆಯನ್ನೂ ಮಾಡುತ್ತಿಲ್ಲವೆ?

ಹೋಗಲಿ, ಈ ರಾಜಕಾರಣಿಗಳು ಅಧಿಕಾರವನ್ನು ಹಿಡಿದ ಮೇಲಾದರೂ ಜನಸೇವೆಯನ್ನು ಮಾಡುತ್ತಿದ್ದಾರೆಯೇ? ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದಿರುವ, ನಡೆಯುತ್ತಿರುವ ಭ್ರಷ್ಟಾಚಾರದ ಪ್ರಮಾಣವನ್ನೂ ಪರಂಪರೆಯನ್ನೂ ನೋಡಿದರೆ ಈ ಮಾತಿಗೆ ಉತ್ತರ ಸಿಗುತ್ತದೆ. ಈ ಭ್ರಷ್ಟರ ಉದ್ದೇಶ ತಾವು ಅಧಿಕಾರದಲ್ಲಿ ಮೆರೆಯವುದು, ತಮ್ಮ ಸಂಪತ್ತನ್ನು ವೃದ್ಧಿಮಾಡಿಕೊಳ್ಳುವುದಷ್ಟೆ ಆಗಿದೆ. ಏಕೆಂದರೆ ಭ್ರಷ್ಟತೆಯೇ ಅವರ ನಿಜವಾದ ವ್ಯಕ್ತಿತ್ವ ಆಗಿರುವುದರಿಂದ. ಸುಭಾಷಿತ ಹೇಳುತ್ತಿರುವುದು ಇದನ್ನೇ: ನಾವು ಎತ್ತರದ ಸ್ಥಾನದಲ್ಲಿ ಕುಳಿತ ಮಾತ್ರಕ್ಕೆ ನಮ್ಮ ವ್ಯಕ್ತಿತ್ವವೂ ಉನ್ನತಿಯನ್ನು ಸಾಧಿಸುತ್ತದೆ ಎಂದೇನಿಲ್ಲ; ಕಾಗೆ ಮನೆಯ ಮೇಲೆ ಕುಳಿತ ಮಾತ್ರಕ್ಕೆ ಅದೇನೂ ಗರುಡ ಆಗುವುದಿಲ್ಲಷ್ಟೆ!

ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಅವರು ನಿಜವಾದ ವಿಜಯಿಗಳು ಆಗುವುದಿಲ್ಲ; ಸಜ್ಜನರೂ ಆಗುವುದಿಲ್ಲ. ಅವರಲ್ಲಿರುವ ದೌರ್ಬಲ್ಯಗಳ ಮೇಲೆ ಗೆಲವು ಸಾಧಿಸಿದಾಗಲೇ ದಿಟವಾದ ವಿಜಯ ಲಭಿಸಿದಂತೆ. ಇದು ಎಲ್ಲರಿಗೂ ಸಲ್ಲುವಂಥ ಮಾತು. ನಮಗೆ ಕಚೇರಿಯಲ್ಲಿ ಪ್ರಮೋಷನ್‌ ಸಿಕ್ಕಿದ ಮಾತ್ರಕ್ಕೋ, ನಾವು ಮಹಡಿಮನೆಯನ್ನೋ ಕಟ್ಟಿದ ಮಾತ್ರಕ್ಕೋ, ನಮ್ಮ ಬ್ಯಾಂಕ್‌ ಖಾತೆಯಲ್ಲಿ ಹಣದ ಮೊತ್ತ ಹೆಚ್ಚಾದ ಮಾತ್ರಕ್ಕೋ ನಾವು ದೊಡ್ಡ ವ್ಯಕ್ತಿಗಳು ಆದೆವು ಎಂದು ಅರ್ಥವಲ್ಲ; ನಮ್ಮಲ್ಲಿ ಸಕಾರಾತ್ಮಕ ಗುಣಗಳು ಹೆಚ್ಚಿದಾಗ ಮಾತ್ರವೇ ನಾವು ನಿಜವಾದ ಎತ್ತರದ ಸ್ಥಿತಿಯನ್ನು ಏರಿದ್ದೇವೆ ಎಂದು ಅರ್ಥ.

ನಮ್ಮ ಮೇಲೆ, ನಮ್ಮ ಸ್ವಾರ್ಥಗಳ ಮೇಲೆ, ನಮ್ಮ ಸಣ್ಣತನಗಳ ಮೇಲೆ ಜಯವನ್ನು ಪಡೆಯೋಣ; ನಿಜವಾದ ವಿಜಯದಶಮಿಯನ್ನು ಆಚರಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT