ಶನಿವಾರ, ಜುಲೈ 31, 2021
26 °C

ದಿನದ ಸೂಕ್ತಿ| ಅಮೃತದ ಎರಡು ಹಣ್ಣುಗಳು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಸಂಸಾರವಿಷವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ ।

ಕಾವ್ಯಾಮೃತರಸಾಸ್ವಾದಃ ಸಂಗಮಃ ಸುಜನೈಃ ಸಹ ।।

ಇದರ ತಾತ್ಪರ್ಯ ಹೀಗೆ:

’ಸಂಸಾರ ಎಂಬ ವಿಷವೃಕ್ಷದಲ್ಲಿ ಅಮೃತದಂತಿರುವ ಫಲಗಳು ಎರಡೇ; ಒಂದು ಕಾವ್ಯಾಮೃತದ ರಸಾಸ್ವಾದ, ಮತ್ತೊಂದು ಸಜ್ಜನರ ಸಹವಾಸ.‘

ಸಂಸಾರ ದುಃಖಮಯ ಎಂದು ಸಾವಿರಾರು ವರ್ಷಗಳ ಹಿಂದೆಯೇ ಬುದ್ಧ ಭಗವಂತ ಹೇಳಿದ್ದಾನೆ. ಬುದ್ಧ ಹೇಳದಿದ್ದರೂ ದಿನವೂ ನಮಗೆ ಇದು ಅನುಭವವೈದ್ಯವೇ ಹೌದೆನ್ನಿ!

ಹಾಗಾದರೆ ಈ ದುಃಖದಿಂದ ಪಾರಾಗುವ ವಿಧಾನ ಹೇಗೆ? 

ಬುದ್ಧ ಇದಕ್ಕೆ ಎಂಟು ಆಯಾಮಗಳ ದಾರಿಯನ್ನು ಕಾಣಿಸಿದ, ದಿಟ. ಆದರೆ ಅದು ಸಾಧಕರಿಗೆ, ನಿರ್ವಾಣ – ಎಂದರೆ ಮೋಕ್ಷವನ್ನು ಬಯಸುವವರಿಗೆ ಸಲ್ಲುವಂಥದ್ದು. ನಮಗೆ, ಸಾಮಾನ್ಯರಿಗೆ ಈ ಕೂಡಲೇ ಒದಗುವಂಥ ದಾರಿ ಏನಾದರೂ ಇದೆಯೆ – ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಅಂಥವರಿಗೆ ಸುಭಾಷಿತ ಉತ್ತರವನ್ನು ಕೊಡುವಂತಿದೆ.

ಸಂಸಾರ ಎನ್ನುವುದು ವಿಷವೃಕ್ಷಕ್ಕೆ ಸಮ. ಮರವೇ ವಿಷಮಯವಾದರೆ ಅದರಲ್ಲಿ ಬಿಡುವ ಹಣ್ಣು ಕೂಡ ವಿಷಯುಕ್ತವೇ ಆಗಿರಬೇಕಲ್ಲವೆ? ಆದರೆ ಸುಭಾಷಿತ ಸೃಷ್ಟಿಯ ವೈಚಿತ್ರ್ಯವೊಂದನ್ನು ಗುರುತಿಸಿದೆ: ಈ ಸಂಸಾರವಿಷವೃಕ್ಷದಲ್ಲಿಯೂ ಎರಡು ಹಣ್ಣುಗಳು ಮಾತ್ರ ಅಮೃತಪ್ರಾಯವಾಗಿವೆಯಂತೆ. ಅವು ಯಾವುವು? ಒಂದು: ಕಾವ್ಯ ಎಂಬ ಅಮೃತದ ರಸಾಸ್ವಾದ; ಮತ್ತೊಂದು: ಸಜ್ಜನರ ಸಹವಾಸ.

ಇಲ್ಲಿ ಸಂಸಾರ ಎಂದರೆ ’ಕುಟುಂಬ‘ ಎಂಬ ಅರ್ಥ ಅಲ್ಲ, ಇಡಿಯ ಸೃಷ್ಟಿ ಎಂದು ಅರ್ಥ.

ಕಾವ್ಯವೇ ಈ ಸೃಷ್ಟಿಯಲ್ಲಿರುವ ಅಮೃತವಂತೆ. ಇಡಿಯ ಜಗತ್ತಿನ ಸಾರಸಾರ ವಿವೇಚನೆಯನ್ನು ಮಾಡಬಲ್ಲ ಸಾಹಿತ್ಯಕೃತಿಯೇ ದಿಟವಾದ ಕಾವ್ಯ. ರಾಮಾಯಣ, ಮಹಾಭಾರತ, ರಘುವಂಶ, ಕುಮಾರವ್ಯಾಸಭಾರತ, ಷೇಕ್‌ಸ್ಪಿಯರ್‌ ಕೃತಿಗಳು, ಹೋಮರ್‌, ಬ್ಲೇಕ್‌ – ಇಂಥವರ ಕೃತಿಗಳು ಬದುಕಿನ ದಿಟವಾದ ಅರ್ಥವಂತಿಕೆಯನ್ನು ಕಾಣಿಸಬಲ್ಲದು. ಇಂಥ ಕೃತಿಗಳ ಅನುಸಂಧಾನ ಜೀವನಕ್ಕೊಂದು ಸೊಗಸನ್ನೂ ಅರ್ಥವನ್ನೂ ಕೊಡಬಲ್ಲವು; ದುಃಖಮಯವಾದ ಸಂಸಾರದಲ್ಲೂ ಸುಖ ಇದೆ ಎಂಬುದನ್ನು ಕಾಣಿಸಬಲ್ಲದು.

ಈಗ ಎರಡನೆಯ ಅಮೃತಫಲದ ಬಗ್ಗೆ ನೋಡೋಣ. ಸಜ್ಜನರ ಸ್ನೇಹವೇ ಈ ಎರಡನೆಯ ಅಮೃತಫಲ. ನಮ್ಮ ಜೀವನದಲ್ಲಿ ಎದುರಾಗುವ ಕಷ್ಟದ ಸಮಯದಲ್ಲಿ ನಮಗೆ ಧೈರ್ಯವನ್ನೂ ಸಹಾಯವನ್ನೂ ಒದಗಿಸುವವರು ಈ ಸಜ್ಜನರು. ಇವರು ನಾವು ಕೆಳಕ್ಕೆ ಬಿದ್ದಾಗ ಕೈ ಹಿಡಿದು ನಮ್ಮನ್ನು ಮೇಲೆತ್ತುತ್ತಾರೆಯೇ ಹೊರತು ನಮ್ಮನ್ನು ಇನ್ನಷ್ಟು ಕೆಳಕ್ಕೆ ತಳ್ಳುವುದಿಲ್ಲ. ಇಂಥವರಿಂದ ದುಃಖಮಯವಾದ ಜೀವನವೂ ಸಹನೀಯ ಎಂದೆನಿಸುತ್ತದೆ.

ಇನ್ನೊಂದು ಸುಭಾಷಿತವನ್ನೂ ಇಲ್ಲಿ ನೋಡಬಹುದು: 

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್‌ ।

ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ ।।

’ಕಾವ್ಯ, ಶಾಸ್ತ್ರ – ಇವುಗಳನ್ನು ಓದಿ ಸಂತೋಷಪಡುವುದರಲ್ಲಿ ಬುದ್ಧಿವಂತರ ವೇಳೆ ಕಳೆಯುತ್ತದೆ; ಆದರೆ ಮೂರ್ಖರ ಸಮಯ ಜೂಜು ಮುಂತಾದ ವ್ಯಸನಗಳಲ್ಲಿ, ನಿದ್ರೆ ಅಥವಾ ಜಗಳದಲ್ಲಿಯೇ ಕಳೆದುಹೋಗುತ್ತದೆ.‘

ಪ್ರಸ್ತುತ ಸಂದರ್ಭಕ್ಕೂ ಸಲ್ಲುವ ಸುಭಾಷಿತ ಇದು.

ಇದನ್ನು ಪಾಡ್‌ಕಾಸ್ಟ್‌ನಲ್ಲಿ ಕೇಳಲು ಇಲ್ಲಿ ಕ್ಲಿಕ್‌ ಮಾಡಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು