ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಆಸೆಯ ಜಾಲ

Last Updated 27 ಜುಲೈ 2020, 19:30 IST
ಅಕ್ಷರ ಗಾತ್ರ

ಗಂಧಾಢ್ಯಾಂ ನವಮಲ್ಲಿಕಾಂ ಮಧುಕರಸ್ತ್ಯಕ್ತ್ವಾ ಗತೋ ಯೂಥಿಕಾಂ

ತಾಂ ದೃಷ್ಟ್ವಾಶು ಗತಃ ಸ ಚಂದನವನಂ ಪಶ್ಚಾತ್‌ ಸರೋಜಂ ಗತಃ ।

ಬದ್ಧಸ್ತತ್ರ ನಿಶಾಕರೇಣ ಸಹಸಾ ರೋದಿತ್ಯಸೌ ಮಂದಧೀಃ

ಸಂತೋಷೇಣ ವಿನಾ ಪರಾಭವಪದಂ ಪ್ರಾಪ್ನೋತಿ ಸರ್ವೋ ಜನಃ ।।

ಇದರ ತಾತ್ಪರ್ಯ ಹೀಗೆ:

’ಭ್ರಮರವೊಂದು ಆಗಷ್ಟೇ ಅರಳಿದ ಮಲ್ಲಿಗೆಯಲ್ಲಿ ಮಧುವನ್ನು ಹೀರುತ್ತಲ್ಲಿತ್ತು; ಅದನ್ನು ಬಿಟ್ಟು ಈಗ ಸೂಜಿಮಲ್ಲಿಗೆಯ ಕಡೆಗೆ ಹಾರಿಹೋಯಿತು; ಅಲ್ಲಿಂದ ಮುಂದೆ, ಶ್ರೀಗಂಧವನ್ನು ಕಂಡು ಅಲ್ಲಿಗೆ ಹಾರಿತು; ಆಮೇಲೆ ಕಮಲದ ಬಳಿಗೆ ಹಾರಿಹೋಯಿತು. ಅಷ್ಟು ಹೊತ್ತಿಗೆ ರಾತ್ರಿಯಾಗಿತ್ತು, ಅದು ಕಮಲದಲ್ಲಿಯೇ ಸಿಕ್ಕಿಕೊಂಡುಬಿಟ್ಟಿತು. ಆಗ ಅದು ಅಳಲು ತೊಡಗಿತು; ತೃಪ್ತಿಯಿಲ್ಲದಿದ್ದರೆ ಎಲ್ಲರಿಗೂ ಅದೇ ಗತಿ ಒದಗುತ್ತದೆ: ಪರಾಜಯ!‘

ನಾವೆಲ್ಲರೂ ಆ ಭ್ರಮರ, ಎಂದರೆ ದುಂಬಿಯನ್ನೇ, ಗುರುವಾಗಿ ಸ್ವೀಕರಿಸಿರುವಂಥವರು.

ನಮ್ಮ ಬಯಕೆ ಎನ್ನುವುದಕ್ಕೆ ನಿಲುಗಡೆ ಎನ್ನುವುದೇ ಇಲ್ಲ, ಒಂದಾದಮೇಲೆ ಇನ್ನೊಂದು, ಇನ್ನೊಂದರಮೇಲೆ ಮಗದೊಂದು – ಹೀಗೆ ಅದು ನಿಲ್ಲದೆ ಓಡುತ್ತಲೇ ಇರುತ್ತದೆ.

ದುಂಬಿಗೆ ಒಳ್ಳೆಯ ಮಲ್ಲಿಗೆಯ ಹೂವು ಸಿಕ್ಕಿತ್ತು; ಆದರೆ ಅದಕ್ಕೆ ತೃಪ್ತಿ ಸಿಗಲಿಲ್ಲ, ಸೂಜಿಮಲ್ಲಿಗೆಯತ್ತ ಹಾರಿತು. ಹೋಗಲಿ, ಅಲ್ಲಾದರೂ ತೃಪ್ತಿ ಸಿಕ್ಕಿತೋ, ಇಲ್ಲ! ಅಲ್ಲಿಂದ ಗಂಧ, ಅಲ್ಲಿಂದ ಕಮಲಕ್ಕೆ ಹಾರಿತು. ಕಮಲದಲ್ಲಿ ಕುಳಿತು ಮಕರಂದವನ್ನು ಹೀರಲು ತೊಡಗಿತು; ಅಷ್ಟರಲ್ಲಿ ರಾತ್ರಿಯಾಯಿತು. ಕಮಲಗಳು ರಾತ್ರಿ ಮುಚ್ಚಿಕೊಳ್ಳುತ್ತವೆ. ಹೀಗಾಗಿ ಅದು ಅಲ್ಲೇ ಬಂದಿಯಾಯಿತು! ತೃಪ್ತಿಯನ್ನೇ ಕಾಣದೆಬಯಕೆಗಳ ಹಿಂದೆಯೇ ಹಾರುವ ಎಲ್ಲರ ಗತಿಯೂ ಕೊನೆಗೆ ಇದೇ: ಎಲ್ಲೋ ಒಂದು ಸ್ಥಳದಲ್ಲಿ ಬಂದಿಗಳಾಗಬೇಕಾಗುತ್ತದೆ.

ಸರಳಜೀವನದ ಕಲ್ಪನೆಯೇ ನಮ್ಮಲ್ಲಿ ಈಗ ಮಾಯವಾಗುತ್ತಿದೆ. ದಿಟವಾದ ಸಂತೋಷಕ್ಕಿಂತಲೂ ನಮಗೆ ತೋರಿಕೆಯ ಸುಖ ಬೇಕಾಗಿದೆ. ಹೀಗಾಗಿ ನಮಗೆ ತೃಪ್ತಿಯೇ ಇಲ್ಲವಾಗುತ್ತಿದೆ. ನಮ್ಮ ಈಗಿನ ಸಂಸ್ಕೃತಿ ಎಂದರೆ ಕೊಳ್ಳುಬಾಕ ಸಂಸ್ಕೃತಿ. ನಮ್ಮ ಮನಸ್ಸನ್ನು ಕೆರಳಿಸುವ, ಕಣ್ಣನ್ನು ಕುಕ್ಕುವ ಅಸಂಖ್ಯ ವಸ್ತುಗಳು ಪ್ರತಿಕ್ಷಣವೂ ನಮ್ಮನ್ನು ಮೋಹಗೊಳಿಸುತ್ತಿವೆ. ನಾವು ಕೂಡ ಮೋಹಕ್ಕೆ ವಶರಾಗುತ್ತಿದ್ದೇವೆ. ನಮಗೆ ಇಂದು ಒಂದು ಮೊಬೈಲ್‌ ಸಾಕಾಗದು, ಒಂದು ಸಿಮ್‌ ಸಾಕಾಗದು; ಅದು ನೋಡುವುದಕ್ಕೆ ಚೆನ್ನಾಗಿದೆ – ಎಂದು ಒಂದನ್ನು ಕೊಳ್ಳುತ್ತೇವೆ; ಇನ್ನೊಂದು ಬೆಲೆ ಕಡಿಮೆ ಎಂದು ಕೊಳ್ಳುತ್ತೇವೆ; ಇನ್ನೊಂದನ್ನು ಹೊಸ ಮಾಡೆಲ್‌ ಎಂದು ಕೊಳ್ಳುತ್ತೇವೆ. ಪ್ರತಿ ದಿನವೂ ಒಂದೊಂದು ಮೊಬೈಲ್‌ ಕೊಂಡರೂ ನಮಗೆ ತೃಪ್ತಿ ಸಿಗದು. ಕೊನೆಗೆ ನಮಗೆ ಸಿಕ್ಕುವುದು ತಲೆನೋವು ಮಾತ್ರ!

ಇನ್ನೊಂದು ಪದ್ಯವನ್ನು ನೋಡಿ:

ನಿಃಸ್ವೋ ವಷ್ಟಿ ಶತಂ ಶತೀ ದಶಶತಂ ಲಕ್ಷಂ ಸಹಸ್ರಾಧಿಪೋ

ಲಕ್ಷೇಶಃ ಕ್ಷಿತಿಪಾಲತಾಂ ಕ್ಷಿತಿಪತಿಶ್ಚಕ್ರೇಶತಾಂ ವಾಂಛತಿ ।

ಚಕ್ರೇಶಃ ಸುರರಾಜತಾಂ ಸುರಪತಿರ್ಬ್ರಹ್ಪಾಸ್ಪದಂ ವಾಂಛತಿ

ಬ್ರಹ್ಮಾ ವಿಷ್ಣುಪದಂ ಹರಿಃ ಶಿವಪದಂ ತೃಷ್ಣಾವಧಿಂ ಕೋ ಗತಃ ।।

‘ಧನವಿಲ್ಲದವನು ನೂರು ಹೊನ್ನುಗಳನ್ನು ಬಯಸುತ್ತಾನೆ; ನೂರುಳ್ಳವನು ಸಾವಿರವನ್ನೂ, ಸಾವಿರವಿರುವವನು ಲಕ್ಷವನ್ನೂ ಬಯಸುತ್ತಾನೆ. ಲಕ್ಷ ಇರುವವನು ರಾಜನಾಬೇಕೆಂದೂ, ರಾಜನಾದವನು ಚಕ್ರಾಧಿಪತ್ಯವನ್ನೂ ಬಯಸುತ್ತಾನೆ; ಚಕ್ರಾಧಿಪತಿಯಾವನು ಇಂದ್ರಪದವಿಯನ್ನೂ, ಇಂದ್ರನು ಬ್ರಹ್ಮನ ಪದವಿಯನ್ನೂ, ಬ್ರಹ್ಮನು ವಿಷ್ಣುವಿನ ಪದವಿಯನ್ನೂ, ವಿಷ್ಣುವು ಶಿವನ ಪದವಿಯನ್ನೂ ಬಯಸುತ್ತಾನೆ; ಆಸೆಯ ಕೊನೆಯನ್ನು ಮುಟ್ಟಿರುವವರಾದರೂ ಯಾರಿದ್ದಾರೆ?‘

ಇಲ್ಲಿ ವಿಷ್ಣುವನ್ನೋ ಶಿವನನ್ನೋ ಬ್ರಹ್ಮನನ್ನೋ ಕಡಿಮೆಮಾಡಲಾಗಿದೆ – ಎಂದು ಆಕ್ರೋಶಕ್ಕೆ ತುತ್ತಾಗುಷ್ಟು ನಮ್ಮ ಸಂಸ್ಕೃತಿ ದುರ್ಬಲವಾಗಿಲ್ಲ ಎನ್ನುವುದು ನಮ್ಮ ಹೆಮ್ಮೆ; ನಮ್ಮ ದೇವತೆಗಳನ್ನೂ ವಿಡಂಬಿಸುವಂಥ ಎದೆಗಾರಿಕೆ ನಮ್ಮದು. ಇದು ಏಕೆ ಸಾಧ್ಯವಾಗುತ್ತದೆ ಎಂದರೆ ನಮ್ಮ ಪರಂಪರೆ ನಮಗೆ ಕಲಿಸಿರುವ ಪ್ರಬುದ್ಧತೆ; ಯಾವುದು ದಿಟ, ಯಾವುದು ಸಂಕೇತ, ಯಾವುದು ಚಿಹ್ನೆ, ಯಾವುದು ಕಾಣ್ಕೆ – ಎಂಬ ವಿಷಯಗಳಲ್ಲಿರುವ ಸ್ಪಷ್ಟತೆ.

ಇರಲಿ, ಈ ಸುಭಾಷಿತದ ಸಂವಾದಿಯಾಗಿನಮ್ಮ ಕಾಲದ ವಿದ್ಯಮಾನವೊಂದನ್ನು ನೋಡಬಹುದು:

ಮೊದಲಿಗೆ ಒಂದು ವಾರ್ಡಿನ ಕಾರ್ಯಕರ್ತನಾಗಬೇಕು ಎಂಬ ಬಯಕೆ ನಮ್ಮದು; ಅದಾದಮೇಲೆ ಕಾರ್ಪೋರೇಟರ್‌, ಆದಾದಮೇಲೆ ಎಂಎಲ್‌ಎ, ಅದಾದ ಮೇಲೆ ಮಂತ್ರಿ; ಮಂತ್ರಿಯಾದಮೇಲಾದರೂ ತೃಪ್ತಿ ಸಿಗುವುದೋ? ಇಲ್ಲ! ಮಂತ್ರಿಯಾದಮೇಲೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಚಿಗುರುತ್ತದೆ; ಮುಖ್ಯಮಂತ್ರಿ ಆದಮೇಲೆ, ಒಮ್ಮೆ ಏಕೆ ಪ್ರಧಾನಮಂತ್ರಿ ಆಗಬಾರದು – ಹೀಗೆ ಆಸೆಗಳ ಪರಂಪರೆಯೇ ಮುಂದುವರೆಯುತ್ತದೆ.

ಜನನಾಯಕನಾದವರು ಸದಾ ಅಧಿಕಾರದ ಲಾಲಸೆಯಿಂದ ಪದವಿಗಳ ಹಿಂದೆ ಓಡುತ್ತ, ತಂತ್ರಗಾರಿಕೆಯಲ್ಲಿಯೇ ಮುಳುಗಿದರೆ ಜನಸೇವೆಗೆ ಅವಕಾಶವಾದರೂ ಎಲ್ಲಿದ್ದೀತು? ಎಂದರೆ ರಾಜಕಾರಣಿಗಳ ಬಯಕೆಗಳ ದಾಹದಿಂದ ದಿಟವಾಗಿಯೂ ನರಳುವವರು ಜನರೇ ಎನ್ನುವುದು ಸ್ಪಷ್ಟ, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT