ಭಾನುವಾರ, ಸೆಪ್ಟೆಂಬರ್ 20, 2020
23 °C

ದಿನದ ಸೂಕ್ತಿ: ಕಣ್ಣೂ ಬೇಕು, ಕಾಲೂ ಬೇಕು

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಹತಂ ಜ್ಞಾನಂ ಕ್ರಿಯಾಶೂನ್ಯಂ ಹತಾ ಚಾಜ್ಞಾನಿನಃ ಕ್ರಿಯಾ।
ಧಾವನ್ನಪ್ಯಂಧಕೋ ನಷ್ಟಃ ಪಶ್ಯನ್ನಪಿ ಚ ಪಂಗುಕಃ।।

ಇದರ ತಾತ್ಪರ್ಯ ಹೀಗೆ: ‘ಕ್ರಿಯೆಯಿಲ್ಲದ ತಿಳಿವು ನಷ್ಟವಾದಂತೆ ವ್ಯರ್ಥ. ತಿಳಿವಿಲ್ಲದವರ ಕ್ರಿಯೆಯೂ ವ್ಯರ್ಥವೇ ಹೌದು. ಕುರುಡನು ಓಡಿದರೂ ನಷ್ಟನಾಗುತ್ತಾನೆ; ಕುಂಟನು ನೋಡುತ್ತಿದ್ದರೂ ಫಲವಿಲ್ಲದೆ ನಷ್ಟನಾಗುತ್ತಾನೆ.‘

ಯಾವುದಾದರೂ ಕೆಲಸವೊಂದು ಯಶಸ್ಸನ್ನು ಪಡೆಯಬೇಕಾದರೆ ಕ್ರಿಯೆ ಮತ್ತು ಜ್ಞಾನ – ಎರಡೂ ಬೇಕು. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ನಮ್ಮಲ್ಲಿ ಕೆಲವರು ಇರುತ್ತಾರೆ; ಅವರಿಗೆ ವಿಷಯಜ್ಞಾನ ಚೆನ್ನಾಗಿರುತ್ತದೆ. ಹತ್ತಾರು ದಿಕ್ಕುಗಳಿಂದ ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲವರಾಗಿರುತ್ತಾರೆ. ಆದರೆ ನಿಷ್ಕ್ರಿಯರಾಗಿರುತ್ತಾರೆ; ಅವರು ಕಾರ್ಯಕ್ಕೆ ಕೈ ಹಾಕುವುದೇ ಇಲ್ಲ. ಹೀಗಾಗಿ ಅವರಿಗೆ ಎಷ್ಟೆಲ್ಲ ತಿಳಿವಳಿಕೆ ಇದ್ದರೂ ಅದು ಪ್ರಯೋಜನಕ್ಕೆ ಬರದೆ ವ್ಯರ್ಥವಾಗುತ್ತಿರುತ್ತದೆ. ಸುಭಾಷಿತ ಇಂಥವರನ್ನು ಕುಂಟನಿಗೆ ಹೋಲಿಸಿದೆ. ಕುಂಟನಿಗೆ ಕಣ್ಣು ಇದೆ; ಆದರೆ ಅವನು ಓಡಲಾರ. ಕಣ್ಣು ಎಂದರೆ ತಿಳಿವಳಿಕೆ; ಕಾಲಿಲ್ಲದಿರುವುದು ಜಡತೆಗೆ ಸಂಕೇತ.

ಇನ್ನು ಕೆಲವರು ಇರುತ್ತಾರೆ; ಅವರಿಗೆ ವಿಷಯದ ತಲೆಬುಡವೇ ಗೊತ್ತಿರುವುದಿಲ್ಲ. ಆದರೆ ಯಾವ ಕೆಲಸಕ್ಕೂ ಒಮ್ಮೆಲೇ ಹಾರುತ್ತಾರೆ. ತಿಳಿವಳಿಕೆಯೇ ಇರದ ಕಾರಣ ಇವರು ಮಾಡುವ ಕೆಲಸಗಳೆಲ್ಲವೂ ವ್ಯರ್ಥವೇ ಆಗುವುದು ಸಹಜ. ಇಂಥವರನ್ನು ಸುಭಾಷಿತ ಕುರುಡನಿಗೆ ಹೋಲಿಸುತ್ತಿದೆ. ಕುರುಡನಿಗೆ ಕಣ್ಣು ಇಲ್ಲ; ಆದರೆ ಅವನು ಓಡುತ್ತಿದ್ದಾನೆ. ಆಗ ಅವನಿಗೆ ಅಪಾಯ ಎದುರಾಗುವುದು ಸಹಜ. ಕಣ್ಣನ್ನು ಇಲ್ಲಿ ತಿಳಿವಳಿಕೆಗೆ ಸಂಕೇತವಾಗಿ ಸೂಚಿಸಿದೆ. ಓಡುವುದು ಅವನ ಉತ್ಸಾಹವನ್ನೂ ಕ್ರಿಯಾಶೀಲತೆಯನ್ನೂ ಸೂಚಿಸುತ್ತದೆ.

ಇಲ್ಲಿ ಸುಭಾಷಿತ ಕುರುಡನನ್ನೂ ಕುಂಟನನ್ನೂ ಬಳಸಿಕೊಂಡಿರುವುದು ವ್ಯಕ್ತಿಗಳ ಗುಣ–ಸ್ವಭಾವಗಳ ಫಲವನ್ನು ನಿರೂಪಿಸುವ ಸಂಕೇತಗಳನ್ನಾಗಿ ಮಾತ್ರ; ಯಾರನ್ನೂ ಹಂಗಿಸುವುದು ಅದರ ಉದ್ದೇಶ ಅಲ್ಲ ಎಂಬುದನ್ನು ಗಮನಿಸಬೇಕು.

ಅರಿವು ಮತ್ತು ಕ್ರಿಯಾಶೀಲತೆ – ಎರಡನ್ನೂ ದಕ್ಕಿಸಿಕೊಂಡಾಗ ಮಾತ್ರವೇ ವ್ಯಕ್ತಿತ್ವದ ಪರಿಪೂರ್ಣತೆ; ಯಾವುದೋ ಒಂದು ಮಾತ್ರವೇ ಇದ್ದರೆ ಪ್ರಯೋಜವಿಲ್ಲ. ಕಾಲುಗಳಷ್ಟೆ ಇದ್ದರೂ ಪ್ರಯೋಜನವಿಲ್ಲ; ಕಣ್ಣಗಳಷ್ಟೆ ಇದ್ದರೂ ಪ್ರಯೋಜವಿಲ್ಲ. ನಮಗೆ ಕಣ್ಣುಗಳೂ ಬೇಕು; ಕಾಲುಗಳೂ ಬೇಕು. ಆಗಷ್ಟೆ ನಮ್ಮ ಬಾಳಿನ ಪ್ರಯಾಣ ಸುಗಮವಾಗಿ ನಡೆಯುತ್ತದೆ. ಕಣ್ಣು–ಕಾಲುಗಳ ಜೊತೆಗೆ ಹೃದಯವೂ ಬೇಕೆನ್ನಿ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.