ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ದೇವರು ಎಂಬ ವಿಸ್ಮಯ

Last Updated 21 ಮಾರ್ಚ್ 2021, 2:15 IST
ಅಕ್ಷರ ಗಾತ್ರ

ಅಂಭೋಧಿಃ ಸ್ಥಲತಾಂ ಸ್ಥಲಂ ಜಲಧಿತಾಂ ಧೂಲೀಲವಃ ಶೈಲತಾಂ

ಮೇರುರ್ಮೃತ್ಕಣತಾಂ ತೃಣಂ ಕುಲಿಶತಾಂ ವಜ್ರಂ ತೃಣಪ್ರಾಯತಾಮ್‌ ।

ವಹ್ನಿಃ ಶೀತಲತಾಂ ಹಿಮಂ ದಹನತಾಮಾಯಾತಿ ಯಸ್ಯೇಚ್ಛಯಾ

ಲೀಲಾದುರ್ಲಲಿತಾದ್ಭುತವ್ಯಸನಿನೇ ದೇವಾಯ ತಸ್ಮೈ ನಮಃ ।।

ಇದರ ತಾತ್ಪರ್ಯ ಹೀಗೆ:

‘ಯಾವ ಸಂಕಲ್ಪದಿಂದ ಸಮುದ್ರವು ನೆಲವಾಗಿ, ನೆಲವು ಸಮುದ್ರವಾಗುವುದೋ ಧೂಲಿನ ಕಣ ಬೆಟ್ಟವಾಗಿ ಮೇರುಪರ್ವತವು ಧೂಳಿಯ ಕಣವಾಗುವುದೋ ಹುಲ್ಲು ವಜ್ರಾಯುಧವಾಗಿ ವಜ್ರಾಯುಧವು ಹುಲ್ಲಿಗೆ ಸಮವಾಗುವುದೋ ಬೆಂಕಿಯು ಶೀತಲವಾಗಿ ಹಿಮವು ಬೆಂಕಿಯಾಗಿ ಸುಡುವುದೋ ಅಥ ಅದ್ಭುತವೂ ವಿಚಿತ್ರವೂ ಆದ ಲೀಲೆಯಲ್ಲಿ ನಲಿಯುವ ದೇವನಿಗೆ ನಮಸ್ಕಾರ.’

ನಮ್ಮ ಎಲ್ಲ ವಿಧದ ಎಣಿಕೆಗಳನ್ನೂ ಮೀರಿದ ಗಹನತತ್ತ್ವವೊಂದು ನಮ್ಮ ಸುತ್ತಮುತ್ತ ಕ್ರಿಯಾಶೀಲವಾಗಿದೆ. ಆ ತತ್ತ್ವವೇ ದೇವರು ಎಂಬುದನ್ನು ಧ್ವನಿಸುತ್ತಿದೆ ಈ ಸುಭಾಷಿತ.

ಮನುಕುಲದ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟವೂ ವಿಸ್ಮಯವೂ ಗಹನವೂ ರಹಸ್ಯವೂ ಸೂಕ್ಷ್ಮವೂ ಆದ ಕಲ್ಪನೆ ಎಂದರೆ ಅದು ದೇವರ ಕಲ್ಪನೆಯೇ ಹೌದು. ಸಾವಿರಾರು ವರ್ಷಗಳಿಂದ ಈ ಕಲ್ಪನೆಯ ಬಗ್ಗೆ ಚರ್ಚೆ, ವಾದ, ವಿವಾದಗಳು ನಡೆಯುತ್ತಲೇ ಬಂದಿವೆ. ದೇವರ ಕಲ್ಪನೆಯನ್ನು ನಂಬುವವರೂ ಇದ್ದಾರೆ, ನಂಬದವರೂ ಇದ್ದಾರೆ.

ಹೀಗಿದ್ದರೂ ದೇವರ ಅಸ್ತಿತ್ವವನ್ನು ನಮ್ಮ ವಿಚಾರಶಕ್ತಿಯಿಂದ ಸ್ಥಾಪಿಸುವುದಕ್ಕೂ ಆಗದು, ನಿರಾಕರಿಸುವುದಕ್ಕೂ ಆಗದು. ಏಕೆಂದರೆ ನಮ್ಮ ವಿಚಾರಶಕ್ತಿ ನಾವು ನಮಗೆ ಒದಗುವ ಪ್ರಮಾಣಗಳಿಂದ ದಕ್ಕಿಸಿಕೊಂಡ ಬುದ್ಧಿಶಕ್ತಿಯನ್ನು ಮಾತ್ರವೇ ಅವಲಂಬಿಸಿರುತ್ತದೆ. ಆದರೆ ದೈವತ್ವ ಎಂಬುದು ನಮ್ಮ ಸೀಮಿತವಾದ ಬುದ್ಧಿಶಕ್ತಿಯನ್ನು ಮೀರಿರುವಂಥದ್ದು. ಅದನ್ನೇ ಸುಭಾಷಿತ ಹೇಳುತ್ತಿರುವುದು.

‘ಯಾವ ಸಂಕಲ್ಪದಿಂದ ಸಮುದ್ರವು ನೆಲವಾಗಿ, ನೆಲವು ಸಮುದ್ರವಾಗುವುದೋ ಧೂಲಿನ ಕಣ ಬೆಟ್ಟವಾಗಿ ಮೇರುಪರ್ವತವು ಧೂಳಿಯ ಕಣವಾಗುವುದೋ ಹುಲ್ಲು ವಜ್ರಾಯುಧವಾಗಿ ವಜ್ರಾಯುಧವು ಹುಲ್ಲಿಗೆ ಸಮವಾಗುವುದೋ ಬೆಂಕಿಯು ಶೀತಲವಾಗಿ ಹಿಮವು ಬೆಂಕಿಯಾಗಿ ಸುಡುವುದೋ ಅಥ ಅದ್ಭುತವೂ ವಿಚಿತ್ರವೂ ಆದ ಲೀಲೆಯಲ್ಲಿ ನಲಿಯುವ ದೇವನಿಗೆ ನಮಸ್ಕಾರ.’

ಜಗತ್ತಿನಲ್ಲಿ ಪ್ರತಿಕ್ಷಣವೂ ಅನಂತಸಂಖ್ಯೆಯಲ್ಲಿ ಹಲವು ರೀತಿಯ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಇವಕ್ಕೆಲ್ಲ ಕಾರಣ ಯಾರು? ಹೇಳುವುದು ಕಷ್ಟ. ನಾಲ್ಕು ಜನರಷ್ಟೆ ಇರುವ ನಮ್ಮ ಮನೆಯಲ್ಲಿ, ನಮ್ಮ ಕಚೇರಿಯಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆಯೇ ನಮಗೆ ಸಂಪೂರ್ಣ ತಿಳಿವಳಿಕೆ ದಕ್ಕದು. ಇನ್ನು ಇಡಿಯ ಬ್ರಹ್ಮಾಂಡ ವಿದ್ಯಮಾನಗಳನ್ನು ಗ್ರಹಿಸುವುದು ಹೇಗೆ?

ಒಟ್ಟಿನಲ್ಲಿ ನಮ್ಮ ಎಲ್ಲ ಊಹೆ, ನಂಬಿಕೆ, ತಿಳವಳಿಕೆ, ಇಷ್ಟಾನಿಷ್ಟ, ಸರಿತಪ್ಪು, ಧರ್ಮಾಧರ್ಮಗಳನ್ನು ಮೀರಿದ ತತ್ತ್ವವೊಂದು ಸದಾ ಕ್ರಿಯಾಶೀಲವಾಗಿದೆ ಎನ್ನುವುದಂತೂ ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT