ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಕಲಿಕೆಯ ಗುಟ್ಟು

Last Updated 8 ಜುಲೈ 2020, 1:47 IST
ಅಕ್ಷರ ಗಾತ್ರ

ಹೀಯತೇ ಹಿ ಮತಿಸ್ತಾತ ಹೀನೈಃ ಸಹ ಸಮಾಗಮಾತ್‌ ।
ಸಮೈಶ್ಚ ಸಮತಾಮೇತಿ ವಿಶಿಷ್ಟೈಶ್ಚ ವಿಶಿಷ್ಟತಾಮ್‌ ।।

ಇದರ ತಾತ್ಪರ್ಯ ಹೀಗೆ:

‘ತನಗಿಂತ ಹೀನರ ಜೊತೆ ಸಹವಾಸ ಮಾಡಿದರೆ ಬುದ್ಧಿ ಕುಂದುತ್ತದೆ; ತನಗೆ ಸಮರಾದವರೊಡನೆ ಸೇರುವುದರಿಂದ ಸಮವಾಗಿರುತ್ತದೆ. ಆದರೆ ಅಧಿಕರೊಡನೆ ಸೇರುವುದರಿಂದ ಬುದ್ಧಿ ಹೆಚ್ಚುತ್ತದೆ.‘

ಈ ಸುಭಾಷಿತವನ್ನು ಯಾವ ಸಂದರ್ಭದಲ್ಲಿಟ್ಟು ಅರ್ಥಮಾಡಿಕೊಳ್ಳಬೇಕು – ಎನ್ನುವುದನ್ನು ಮೊದಲಿಗೆ ತಿಳಿದುಕೊಳ್ಳಬೇಕು, ಇಲ್ಲವಾದಲ್ಲಿ ಅಪಾರ್ಥಕ್ಕೆ ಎಡೆಯಾಗುತ್ತದೆ. ಈ ಸುಭಾಷಿತವಷ್ಟೆ ಅಲ್ಲ, ಜಗತ್ತಿನ ಎಲ್ಲ ಧಾರ್ಮಿಕಕೃತಿಗಳಿಗೂ ಸಾಹಿತ್ಯಕೃತಿಗಳಿಗೂ ಈ ಮಾತು ಸಲ್ಲುತ್ತದೆ. ಆಯಾ ಕೃತಿ ಯಾವ ಹಿನ್ನೆಲೆಯಲ್ಲಿ ಮಾತನಾಡುತ್ತಿದೆ ಎಂದು ಮೊದಲಿಗೆ ಅರ್ಥಮಾಡಿಕೊಳ್ಳಬೇಕು; ಬಳಿಕ ಅದು ನಮ್ಮ ಸಂದರ್ಭಕ್ಕೆ ಎಷ್ಟು ಹೊಂದಿಕೆಯಾಗುತ್ತದೆ ಎನ್ನುವುದನ್ನು ಅನ್ವೇಷಿಸಬೇಕು.

ಈ ಶ್ಲೋಕ ನಮ್ಮ ಕಲಿಕೆಗೆ ಸಂಬಂಧಿಸಿದ್ದು. ನಾವು ಯಾವ ಯಾವ ವಾತಾವರಣದಲ್ಲಿದ್ದಾಗ ನಮ್ಮ ಕಲಿಕೆಯ ಸಾಮರ್ಥ್ಯ ಎಷ್ಟೆಷ್ಟು ಪ್ರಮಾಣದಲ್ಲಿ ಹೆಚ್ಚುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತಿದೆ.

ನಮಗಿಂತಲೂ ವಿಷಯಜ್ಞಾನ ಕಡಿಮೆ ಇದ್ದವರ ಜೊತೆಯಲ್ಲಿಯೇ ನಾವು ಇದ್ದರೆ ನಮ್ಮ ಅರಿವಿನ ಮಟ್ಟವೂ ಕುಸಿಯುತ್ತಹೋಗುವುದು ಖಂಡಿತ. ಏನೂ ಗೊತ್ತಿಲ್ಲದವರ ಮುಂದೆ ಅಲ್ಪಸ್ವಲ್ಪ ಗೊತ್ತಿರುವವರೇ ಬೃಹಸ್ಪತಿಗಳು ಎನಿಸಿಕೊಳ್ಳುತ್ತಾರಷ್ಟೆ! ಹೀಗಾಗಿ ನಮಗಿಂತ ಕಡಿಮೆ ತಿಳಿವಳಿಕೆಯವರ ಮುಂದೆ ನಾವು ಮಹಾಜ್ಞಾನಿಗಳು ಎಂಬ ಭಾವನೆ ಮೂಡುವುದು ಸಹಜ. ಈ ಮೇಲರಿಮೆ ನಮ್ಮ ಅಧ್ಯಯನದ ಮೇಲೂ ಪರಿಣಾಮ ಬೀರುತ್ತದೆ. ನಾವು ಹೆಚ್ಚೆಚ್ಚು ಕಲಿಯಬೇಕೆಂಬ ಉಮೇದನ್ನೇ ಈ ವಾತಾವರಣ ಹುಟ್ಟಿಸದು. ಹಂತಹಂತವಾಗಿ ನಾವೂ ನಮ್ಮ ಸ್ನೇಹಿತರ ಮಟ್ಟವನ್ನೇ ತಲುಪುತ್ತೇವೆ.

ಇನ್ನು, ನಮ್ಮಷ್ಟೆ ಗೊತ್ತಿರುವವರ ನಡುವೆ ಇದ್ದರೆ ನಮ್ಮ ಅರಿವಿನ ಮಟ್ಟ ‘ಮೂರಕ್ಕೆ ಇಳಿಯದು, ಆರಕ್ಕೆ ಏರದು‘ ಎನ್ನುವಂತಿರುತ್ತದೆ. ಈ ವಾತಾವರಣದಲ್ಲಿ ನಮಗೆ ಮೇಲರಿಮೆಯೂ ಇರದು, ಕೀಳರಿಮೆಯೂ ಇರದು; ಇದ್ದುದ್ದರಲ್ಲಿಯೇ ಸಂತೋಷವಾಗಿದ್ದುಬಿಡುತ್ತೇವೆ!

ನಮಗಿಂತಲೂ ಹೆಚ್ಚು ತಿಳಿದವರ ಮಧ್ಯೆ ನಾವಿದ್ದಾಗ ನಮಗೆ ಹೆಚ್ಚೆಚ್ಚು ಕಲಿಯುವ ಉಮೇದು ಹುಟ್ಟುವ ಸಾಧ್ಯತೆಯಿದೆ. ನಮ್ಮ ತಿಳಿವಳಿಕೆ ಅವರ ಒಡನಾಟದಲ್ಲಿ ನಿರಂತರವಾಗಿ ಸಹಜವಾಗಿಯೇ ನಿಕಷಕ್ಕೆ ಒಡುತ್ತಿರುತ್ತದೆ. ಹೀಗಾಗಿ ನಾವೂ ಅವರಂತೆ ಕಲಿಯಬೇಕು ಎಂಬ ಹಂಬಲ ಹುಟ್ಟುತ್ತದೆ. ಇದು ಕಾರ್ಯಸಾಧ್ಯವಾದಾಗ ನಮ್ಮ ತಿಳಿವಳಿಕೆ ಹೆಚ್ಚಾಗುತ್ತದೆ.

ಕಲಿಕೆಯಲ್ಲಿ ಪರಿಸರದ ಪಾತ್ರ ತುಂಬ ಮಹತ್ವದ್ದು. ನಾವು ಸುತ್ತಮುತ್ತಲಿನ ಜಗತ್ತಿನ ಜೊತೆಗೆ ನಡೆಸುವ ಸಂವಾದ–ಸಂವಹನ, ಮಾತು–ಕತೆ, ಆಟ–ಪಾಠ – ಎಲ್ಲವೂ ಪ್ರಧಾನ ಪಾತ್ರವನ್ನು ವಹಿಸುತ್ತವೆ. ಇಲ್ಲಿ ಇನ್ನೊಂದು ಶ್ಲೋಕವನ್ನು ನೋಡಬಹುದು:

ಆಚಾರ್ಯಾತ್‌ ಪಾದಮಾದತ್ತೇ ಪಾದಂ ಶಿಷ್ಯಃ ಸ್ವಮೇಧಯಾ ।
ಕಾಲೇನ ಪಾದಮಾದತ್ತೇ ಪಾದಂ ಸಬ್ರಹ್ಮಚಾರಿಭಿಃ ।।

‘ಶಿಷ್ಯನು ಆಚಾರ್ಯನಿಂದ ವಿದ್ಯೆಯ ಕಾಲುಭಾಗವನ್ನು ಗ್ರಹಿಸುತ್ತಾನೆ; ಕಾಲುಭಾಗವನ್ನು ತನ್ನ ಬುದ್ಧಿಶಕ್ತಿಯಿಂದಲೂ ಕಾಲುಭಾಗವನ್ನು ಜೊತೆಯ ವಿದ್ಯಾರ್ಥಿಗಳಿಂದಲೂ ಉಳಿದ ಕಾಲುಭಾಗವನ್ನು ಕಾಲಕ್ರಮದಿಂದಲೂ ತಿಳಿದುಕೊಳ್ಳುತ್ತಾನೆ’– ಎನ್ನುವುದು ಇದರ ತಾತ್ಪರ್ಯ.

ಎಂದರೆ, ನಮ್ಮ ಜ್ಞಾನಾರ್ಜನೆ ಕೇವಲ ನಮ್ಮ ಕಲಿಕೆಯ ಸಾಮರ್ಥ್ಯವನ್ನೇ ಅವಲಂಬಿಸಿಲ್ಲ; ಅದು ನಮ್ಮ ಪರಿಸರದ ನಾಲ್ಕು ದಿಕ್ಕುಗಳೊಂದಿಗೆ ನಾವು ನಡೆಸುವ ನಮ್ಮ ಸಹ ಅಧ್ಯಯನವನ್ನೂ ಅವಲಂಬಿಸಿರುತ್ತದೆ; ಈ ಲೋಕಶಿಕ್ಷಣವೇ ಮಹತ್ವದ ಭೂಮಿಕೆಯನ್ನು ವಹಿಸುತ್ತದೆ. ವಿಶ್ವವಿದ್ಯಾಲಯ – ಎನ್ನುವುದರ ದಿಟವಾದ ಕಲ್ಪನೆಯೂ ಇದೇ ಹೌದೆನ್ನಿ!

ಪ್ರಜಾವಾಣಿ Podcast:ದಿನದ ಸೂಕ್ತಿಯನ್ನು ಕೇಳಲು ಇಲ್ಲಿ ಕ್ಲಿಕ್‌ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT