ಮಂಗಳವಾರ, ಸೆಪ್ಟೆಂಬರ್ 28, 2021
21 °C

ದಿನದ ಸೂಕ್ತಿ: ಧರ್ಮವೊಂದೇ ಶಾಶ್ವತ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಕ್ಷಣಂ ಚಿತ್ತಂ ಕ್ಷಣಂ ವಿತ್ತಂ ಕ್ಷಣಂ ಜೀವತಿ ಮಾನವಃ ।
ಯಮಸ್ಯ ಕರುಣಾ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ ।।

ಇದರ ತಾತ್ಪರ್ಯ ಹೀಗೆ: ‘ಮನಸ್ಸು ಚಂಚಲ, ಹಣವೂ ಅಸ್ಥಿರ; ಮನುಷ್ಯನ ಜೀವನವೂ ಶಾಶ್ವತವಲ್ಲ; ಯಮನಿಗೆ ಕರುಣೆ ಎಂಬುದೇ ಇಲ್ಲ. ಹೀಗಾಗಿ ಧರ್ಮವನ್ನು ಬೇಗ ಆಚರಿಸಬೇಕು.’

ನಮ್ಮ ಜೀವನದ ಕಟು ವಾಸ್ತವಗಳನ್ನು ತಿಳಿಸುತ್ತಲೇ, ಜೀವನದ ಉದ್ದೇಶದ ಬಗ್ಗೆಯೂ ತಿಳಿಸಿಕೊಡುತ್ತಿದೆ, ಈ ಸುಭಾಷಿತ.

ನಮ್ಮ ಜೀವನ ಶಾಶ್ವತವಾದುದಲ್ಲ; ಜೀವನದ ಯಾವ ಸಂಗತಿಯೂ ಶಾಶ್ವತವಲ್ಲ. ಅದನ್ನು ನಾವು ಮೊದಲು ತಿಳಿದುಕೊಳ್ಳಬೇಕು ಎಂದು ಆಶಿಸುತ್ತಿದೆ ಸುಭಾಷಿತ.

ಮೊದಲನೆಯದಾಗಿ ನಮ್ಮ ಮನಸ್ಸೇ ತುಂಬ ಚಂಚಲ; ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದಿಲ್ಲ. ಈಗ ಸರಿ ಎಂದು ಕಂಡಿದ್ದು ನಮಗೆ ಮುಂದಿನ ಕ್ಷಣವೇ ತಪ್ಪು ಎಂದು ಅನಿಸುತ್ತಿರುತ್ತದೆ. ಇನ್ನು ನಾವು ಕಷ್ಟ ಪಟ್ಟು ಅಥವಾ ಮೋಸದಿಂದ ಸಂಪಾದಿಸಿದ ಸಂಪತ್ತಾದರೂ ಸ್ಥಿರವಾಗಿ ಇರುತ್ತದೆಯೋ? ಅದು ನಮ್ಮ ಜೊತೆಯಲ್ಲಿಯೇ ಎಷ್ಟು ಕಾಲ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಹೋಗಲಿ, ಮನಸ್ಸು, ಹಣ – ಇವುಗಳನ್ನು ಬಿಟ್ಟುಬಿಡೋಣ; ನಮ್ಮ ಜೀವನವಾದರೂ ಶಾಶ್ವತವಾಗಿರುತ್ತದೆಯೆ? ಅದೂ ಇಲ್ಲ. ಸುಭಾಷಿತ ಚೆನ್ನಾಗಿ ಹೇಳುತ್ತಿದೆ – ಯಮನಿಗೆ ಕರುಣೆಯೇ ಇಲ್ಲವಂತೆ. ಎಂದರೆ ನಾವು ಕಷ್ಟದಲ್ಲಿದ್ದೇವೆಯೋ ಸುಖದಲ್ಲಿದ್ದೇವೆಯೋ, ಯುವಕರೋ ಮುದುಕರೋ – ಇಂಥ ಸಂಗತಿಗಳನ್ನು ಯಮನು ಗಮನಿಸುವುದಿಲ್ಲ; ಯಾವ ಕ್ಷಣ ಬೇಕಾದರೂ ಅವನು ನಮ್ಮ ಪ್ರಾಣವನ್ನು ಅಪಹರಿಸಬಹುದು.

ಸುಭಾಷಿತ ಹೇಳುತ್ತಿದೆ, ಇಷ್ಟು ನಶ್ವರವಾದ ಜೀವನ ನಮ್ಮದಾಗಿರುವಾಗ ನಾವು ನಿಜವಾಗಿಯೂ ಮಾಡಬೇಕಾದ ಕೆಲಸ ಏನು? ಧರ್ಮವನ್ನು ಆಚರಿಸಬೇಕು. ಯಾವುದರಿಂದ ನಮ್ಮ ಹಿತವೂ ಸಮಾಜದ ಹಿತವೂ ಜಗತ್ತಿನ ಹಿತವೂ ನೆಲೆಗೊಳ್ಳುತ್ತದೆಯೋ ಅದು ಧರ್ಮ. ಅಂಥ ಕೆಲಸಗಳಲ್ಲಿ ನಾವು ತೊಡಗಬೇಕು. ಇದೇ ಅಶಾಶ್ವತವಾದ ನಮ್ಮ ಜೀವನವನ್ನು ಶಾಶ್ವತವನ್ನಾಗಿಸಿಕೊಳ್ಳುವ ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು