ಗುರುವಾರ , ಜನವರಿ 21, 2021
30 °C

ದಿನದ ಸೂಕ್ತಿ: ಕ್ಷಣವಾದರೂ ಸಾರ್ಥಕಜೀವನ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಯಜ್ಜೀವ್ಯತೇ ಕ್ಷಣಮಪಿ ಪ್ರಥಿತಂ ಮನುಷ್ಯೈಃ

ವಿಜ್ಞಾನಶೌರ್ಯವಿಭವಾರ್ಯಗುಣೈಃ ಸಮೇತಮ್‌ ।

ತನ್ನಾಮ ಜೀವಿತಮಿಹ ಪ್ರವದಂತಿ ತಜ್ಞಾಃ

ಕಾಕೋಪಿ ಜೀವತಿ ಚಿರಾಯ ಬಲಿಂ ಚ ಭುಂಕ್ತೇ ।।

ಇದರ ತಾತ್ಪರ್ಯ ಹೀಗೆ:

‘ಜ್ಞಾನ, ಪರಾಕ್ರಮ ಮತ್ತು ವೈಭವ – ಇಂಥ ಸದ್ಗುಣಗಳನ್ನು ಸಂಪಾದಿಸಿಕೊಂಡು ಕೀರ್ತವಂತರಾಗಿ ಒಂದೇ ಒಂದು ಕ್ಷಣ ಬದುಕಿದರೂ ಅದು ನಿಜವಾದ ಜೀವನ ಎಂದು ತಿಳಿದವರು ಹೇಳುತ್ತಾರೆ. ಆದರೆ ಕಾಗೆಯೂ ಬಹಳ ಕಾಲ ಬದುಕಿರುತ್ತದೆ – ಇತರರು ಇಟ್ಟ ಅನ್ನವನ್ನಷ್ಟೆ ಅದು ತಿನ್ನುತ್ತದೆ.’

ಈ ಸುಭಾಷಿತ ಇರುವುದು ಕಾಗೆಯ ಬಗ್ಗೆ ಅಲ್ಲ; ಇನ್ನೊಬ್ಬರ ಆಲಂಬನೆಯಲ್ಲಿ ತಿಂದು ಬದುಕುವವರ ಬಗ್ಗೆ.

ಜೀವನದಲ್ಲಿ ಸಾಧಿಸಬೇಕು. ಏನನ್ನು ಸಾಧಿಸಬೇಕು? ಕೀರ್ತಿಯನ್ನು ತಂದುಕೊಡುವಂಥದ್ದರಲ್ಲಿ ಸಾಧನೆ ಮಾಡಬೇಕು? ಹೇಗೆ ಸಾಧನೆಯನ್ನು ಮಾಡಬೇಕು? ನಮ್ಮ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಬೇಕು; ಇತರರ ಹೆಗಲಿನ ಮೇಲೆ ನಿಂತು ನಮ್ಮ ಬಾವುಟವನ್ನು ಹಾರಿಸಬಾರದು. ಇದು ಸುಭಾಷಿತದ ಸಂದೇಶ.

ಸುಭಾಷಿತವು ಹಲವಾರು ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಸೂಚಿಸಿದೆ; ಅವುಗಳಲ್ಲಿ ಮೂರನ್ನು ಸ್ಪಷ್ಟವಾಗಿಯೇ ಹೆಸರಿಸಿದೆ; ಜ್ಞಾನ, ಪರಾಕ್ರಮ ಮತ್ತು ವೈಭವ – ಇವು ಆ ಮೂರು ಗುಣಗಳು.

ಜ್ಞಾನ ಎಂದರೆ ತಿಳಿವಳಿಕೆ; ಇದು ನಮ್ಮ ಬುದ್ಧಿಶಕ್ತಿಗೆ ದ್ಯೋತಕ. ಪರಾಕ್ರಮ ಎಂದರೆ ಶರೀರದ ಸಾಮರ್ಥ್ಯ; ಇದು ನಮ್ಮ ದೈಹಿಕಶಕ್ತಿಗೆ ದ್ಯೋತಕ. ವೈಭವ ಎಂದರೆ ಸಂತೋಷ, ಸಂಭ್ರಮ; ಇದು ನಮ್ಮ ಮನಸ್ಸಿಗೆ, ಪರಿಸರಕ್ಕೆ ದ್ಯೋತಕ. ನಮ್ಮ ಜೀವನವು ಸಮಗ್ರವಾಗಿ ಅರಳಬೇಕು ಎಂಬುದು ಇಲ್ಲಿರುವ ಸಂದೇಶ. ಜೀವನವನ್ನು ಹೀಗೆ ಸಮಗ್ರವಾಗಿ ಕಟ್ಟಿಕೊಂಡು ಒಂದು ಕ್ಷಣ ಬದುಕಿದರೂ ಅದು ಸಾರ್ಥಕವಾದ ಜೀವನ ಎನ್ನುವುದನ್ನು ಸುಭಾಷಿತ ಸ್ಪಷ್ಟವಾಗಿ ಹೇಳಿದೆ.

ನಮ್ಮ ಜೀವನಕ್ಕೆ ಸ್ಪಷ್ಟವಾದ ಗುರಿಯಿರಬೇಕು; ಆ ಗುರಿಯನ್ನು ತಲಪುವಲ್ಲಿ ಆದರ್ಶವೂ ಇರಬೇಕು. ಗುರಿ ಮತ್ತು ಮಾರ್ಗ – ಎರಡೂ ಮುಖ್ಯ. ನಮ್ಮ ಬೆವರಿನ ಸುವಾಸನೆಯಲ್ಲಿ ನಮ್ಮ ಜೀವನದ ಸೌರಭವನ್ನು ನಾಲ್ಕು ದಿಕ್ಕುಗಳಲ್ಲಿ ಪಸರಿಸಬೇಕು. ಹೀಗಲ್ಲದೆ ಇನ್ನೊಬ್ಬರ ದುಡಿಮೆಯಲ್ಲಿ ಬದುಕುವುದೋ ಅಥವಾ ಇನ್ನೊಬ್ಬರ ಹೆಸರಿನ ಮರೆಯಲ್ಲಿ ನಮ್ಮ ಕೀರ್ತಿಪತಾಕೆಯನ್ನು ಹಾರಿಸುವುದೋ ಆಗಬಾರದು; ಹೀಗೆ ಬೇರೊಬ್ಬರ ಆಶ್ರಯದಲ್ಲಿ ಜೀವನವನ್ನು ರೂಪಿಸಿಕೊಳ್ಳುವುದು ಸಲ್ಲದು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.