ಶುಕ್ರವಾರ, ಜುಲೈ 30, 2021
23 °C

ದಿನದ ಸೂಕ್ತಿ | ಹಳತು ಹೊಸತುಗಳ ಚಕ್ರ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ತದಾತ್ವೇ ನೂತನಂ ಸರ್ವಂ ಆಯತ್ಯಾಂ ಚ ಪುರಾತನಮ್‌ ।

ನ ದೋಷಾಯೈತದುಭಯಂ ನ ಗುಣಾಯ ಚ ಕಲ್ಪತೇ ।।

ಇದರ ತಾತ್ಪರ್ಯ ಹೀಗೆ:

‘ಪ್ರತಿಯೊಂದೂ ಅದರ ಕಾಲಕ್ಕೆ ಹೊಸದು; ಕಾಲ ಕಳೆದರೆ ಹಳತು ಆಗುತ್ತದೆ. ಆದುದರಿಂದ ಹೊಸತನವಾಗಲೀ ಹಳೆತನವಾಗಲೀ – ಗುಣದೋಷಗಳಿಗೆ ಕಾರಣವಾಗುವುದಿಲ್ಲ.'

ನಮಗೆ ಯಾವಾಗಲೂ ಹೊಸದರ ಬಗ್ಗೆ ಆದರ; ಹೊಸ ಬಟ್ಟೆ, ಹೊಸ ಮೊಬೈಲ್‌, ಹೊಸ ಮನೆ, ಹೊಸ ಕಾರು – ಹೀಗೆ ದಿನವೂ ನಾವು ಉಪಯೋಗಿಸುವ ವಸ್ತುಗಳು ಹೊಸದಾಗಿರಬೇಕು ಎಂದು ಆಶಿಸುತ್ತೇವೆ. ಇದೇನೂ ತಪ್ಪಲ್ಲ; ಹೊಸತು ಎನ್ನುವುದನ್ನು ಶಕ್ತಿಗೂ ಸೊಗಸಿಗೂ ಸಂಕೇತವಾಗಿ ನೋಡುತ್ತೇವೆ. ಪ್ರಕೃತಿಯೇ ನಿರಂತವಾಗಿ ಹೊಸತಾಗುತ್ತಲೇ ಇರುತ್ತದೆ; ಹೀಗೆಯೇ ನಮ್ಮ ದೇಹವೂ ಕೂಡ. 

ನಾವು ಜೀವನದ ಎಲ್ಲ ವಿವರಗಳಲ್ಲೂ ಹೊಸತನವನ್ನು ಕಾಣಬೇಕೆಂಬುದು ನಮ್ಮ ಇರಾದೆಯಾಗಿರುತ್ತದೆ. ಹಳೆಯ ದೇವರನ್ನೇ ಬದಲಾಯಿಸಿಕೊಂಡು ಹೊಸ ಹೊಸ ದೇವರುಗಳನ್ನು ಸೃಷ್ಟಿಸಿಕೊಳ್ಳುತ್ತಿರುತ್ತೇವೆ. ಎಂದರೆ ನಮ್ಮಲ್ಲಿ ಹಳೆಯದರ ಬಗ್ಗೆ ಒಂದು ವಿಧದ ತಿರಸ್ಕಾರವೂ ಉಂಟಾಗುತ್ತಿರುತ್ತದೆ. ಇದೇಕೆ ಹೀಗೆ?

ಹಳೆಯದು ಎಂದರೆ ನಮಗೆ ಈಗಾಗಲೇ ಪರಿಚಿತವಾಗಿರುವಂಥದ್ದು; ಹೀಗಾಗಿ ಅದರ ಬಗ್ಗೆ ನಮಗೆ ಅಸಡ್ಡೆ ಸಹಜವಾಗಿರುತ್ತದೆ. ನಮ್ಮ ಬುದ್ಧಿಯನ್ನು, ಭಾವವನ್ನು ಕೆಣಕಿಸಬಲ್ಲ ಗುಣ ಹಳೆಯ ವಸ್ತು–ವಿವರಗಳಿಗೆ ಇರುವುದಿಲ್ಲ ಎಂದೇ ನಮಗೆ ಅವುಗಳ ಕಡೆಗೆ ಮನಸ್ಸು ಹೋಗುವುದಿಲ್ಲ.

ಹಾಗಾದರೆ ಸುಭಾಷಿತ ಏನನ್ನು ಹೇಳುತ್ತಿರುವುದು? ಯಾವುದನ್ನೂ ನಾವು ಹೊಸತು–ಹಳತು ಎಂಬ ಕಾರಣದಿಂದ ’ಅದು ಒಳ್ಳೆಯದು‘ ಎಂದೋ, ಅಥವಾ ’ಅದು ಕೆಟ್ಟದ್ದೋ‘ ಎಂದು ನಿರ್ಧಾರವಾಗುವುದಿಲ್ಲ ಎಂಬುದನ್ನು ಸುಭಾಷಿತ ಹೇಳುತ್ತಿದೆ. ಒಳಿತು–ಕೆಡಕುಗಳ ನಿರ್ಧಾರವಾಗುವುದು ಅದು ಹೊಸತು ಅಥವಾ ಹಳತು ಎಂಬ ಕಾರಣದಿಂದ ಅಲ್ಲ ಎನ್ನುವ ವಿವೇಕ ನಮ್ಮದಾಗಬೇಕು. ಉದಾಹರಣೆಗೆ, ಉಪ್ಪಿನಕಾಯಿ ರುಚಿಯಾಗಿರಬೇಕಾದರೆ ಸ್ವಲ್ಪ ಅದು ಹಳತಾಗಿರಬೇಕು. ಆದರೆ ಹಾಲನ್ನು ಹೆಚ್ಚು ಸಮಯ ಬಳಸದಿದ್ದರೆ ಅದು ಕೆಡುತ್ತದೆ. ಇಂಥ ವಿವೇಚನೆ ಎಲ್ಲ ವಿಷಯಗಳಿಗೂ ಸಲ್ಲುತ್ತದೆ.

ಇಷ್ಟು ಮಾತ್ರವಲ್ಲ, ಹೊಸತು–ಹಳತು ಎಂಬ ಕಾರಣದಿಂದ ಯಾವ ವಿಷಯದ ಬಗ್ಗೆಯೂ ನಾವು ಪ್ರೀತಿಯನ್ನಾಗಲೀ ದ್ವೇಷವನ್ನಾಗಲೀ, ಎಚ್ಚರವನ್ನಾಗಲೀ ಪ್ರಮಾದವನ್ನಾಗಲೀ ಮಾಡತಕ್ಕದ್ದಲ್ಲ; ವಿವೇಕ ಎನ್ನುವುದು ಸದಾ ಜಾಗರಿತವಾಗಿರಬೇಕು. ಉದಾಹರಣೆಗೆ, ಕೊರೊನಾ ವೈರಸ್‌ ಹೊಸದಾದ ವೈರಸ್‌ ಎಂದು ಅದನ್ನು ಉದಾಸೀನ ಮಾಡಲೂ ಆಗದು; ಅದರ ನಿಯಂತ್ರಣ ನಮ್ಮ ಕೈ ಮೀರಿದ್ದು ಎಂಬ ಉಡಾಫೆತನವೂ ಸಲ್ಲದು. ಸಮಸ್ಯೆಗಳ ನಿರ್ವಹಣೆಯಲ್ಲಿ ಅದು ಹಳೆಯದು–ಹೊಸದಾದುದು ಎಂಬುದು ಮಾನದಂಡವಾಗಿರಬಾರದು. 

ಕಾಳಿದಾಸನ ಮಾತೊಂದು ಇಲ್ಲಿ ಉಲ್ಲೇಖಾರ್ಹ; ಹೊಸತು–ಹಳತುಗಳನ್ನು ಕುರಿತು ಇನ್ನೊಂದು ಅತಿರೇಕವಾದದ ಕಡೆಗೆ ಅವನು ಗಮನವನ್ನು ಸೆಳೆಯುತ್ತಾನೆ, ಹೀಗೆ:

ಪುರಾಣಮಿತ್ಯೇವ ನ ಸಾಧು ಸರ್ವಂ

ನ ಚಾಪಿ ಕಾವ್ಯಂ ನವಮಿತ್ಯವದ್ಯಮ್ |

ಸಂತಃ ಪರೀಕ್ಷ್ಯಾನ್ಯತರದ್ಭಜಂತೇ

ಮೂಢಃ ಪರಪ್ರತ್ಯಯನೇಯಬುದ್ಧಿಃ ||

'ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಶ್ರೇಷ್ಠವಲ್ಲ; ಹೊಸದೆಂದ ಮಾತ್ರಕ್ಕೆ ಯಾವುದೂ ಕೆಟ್ಟದಲ್ಲ. ವಿಮರ್ಶಕರು ಪರೀಕ್ಷಿಸಿ ಒಳ್ಳೆಯದನ್ನು ಮಾತ್ರವೇ ಸ್ವೀಕರಿಸುತ್ತಾರೆ. ಮೂರ್ಖರು ಇತರರು ಹೇಳಿದ್ದನ್ನೇ ನಂಬಿ ನಡೆಯುತ್ತಾರೆ.'

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು