ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಭಕ್ತಿ ಸಾಮ್ರಾಜ್ಯ

Last Updated 16 ಮಾರ್ಚ್ 2021, 1:02 IST
ಅಕ್ಷರ ಗಾತ್ರ

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ

ಕವಿತ್ವಾದಿಗದ್ಯಂ ಸುಪದ್ಯಂ ಕರೋತಿ ।

ಯಶೋದಾಕಿಶೋರೇ ಮನೋ ವೈ ನ ಲಗ್ನಂ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್‌ ।।

ಇದರ ತಾತ್ಪರ್ಯ ಹೀಗೆ:

‘ಆರು ಅಂಗಗಳೊಡನೆ ವೇದವನ್ನೂ ಶಾಸ್ತ್ರಗಳನ್ನೂ ಆಳವಾಗಿ ಅಧ್ಯಯನ ಮಾಡಬಹುದು. ಸೊಗಸಾದ ಗದ್ಯದಿಂದಲೂ ಪದ್ಯದಿಂದಲೂ ಕಾವ್ಯರಚನೆಯನ್ನೂ ಮಾಡಬಹುದು. ಆದರೆ ಯಶೋದನೆಯ ಮಗನಾದ ಶ್ರೀಕೃಷ್ಣನಲ್ಲಿ ಮನಸ್ಸು ನೆಡದಿದ್ದರೆ ಅವುಗಳೆಲ್ಲದುದರಿಂದ ಏನು ತಾನೆ ಪ್ರಯೋಜನ?’

ನಿಜವಾದ ಸಂಪತ್ತು ಎಂದರೆ ಅದು ಶ್ರೀಕೃಷ್ಣಲ್ಲಿಯ ಭಕ್ತಿಯೇ ಹೌದು ಎಂದು ಇಲ್ಲಿಯ ಶ್ಲೋಕಗಳು ಹೇಳುತ್ತಿವೆ. ಆದುದರಿಂದಲೇ ನಾವು ಸಂಪತ್ತು ಎಂದು ಸಾಮಾನ್ಯವಾಗಿ ಪರಿಗಣಿಸುವ ಎಲ್ಲವನ್ನೂ ಈ ಪದ್ಯಗಳು ನಿರಾಕರಿಸುತ್ತಿವೆ.

ನಾವು ವಿದ್ಯೆಯನ್ನು ಸಂಪತ್ತು ಎಂದುಕೊಳ್ಳಬಹುದು; ವೇದಾಧ್ಯಯನ, ಶಾಸ್ತ್ರಗಳು, ಕಾವ್ಯಶಕ್ತಿ – ಇಂಥವನ್ನು ನಾವು ದೊಡ್ಡ ಸಾಧನೆ ಭಾವಿಸಿಕೊಳ್ಳುತ್ತೇವೆ; ಇಂಥ ವಿದ್ಯೆಯೇ ದೊಡ್ಡ ಆಸ್ತಿ ಎಂದೂ ಅಂದುಕೊಳ್ಳುತ್ತೇವೆ. ಆದರೆ ಶ್ರೀಕೃಷ್ಣನಲ್ಲಿ ಮನಸ್ಸನ್ನು ಏಕಾಗ್ರಗೊಳಿಸದ ವಿದ್ಯೆ ಅದು ವಿದ್ಯೆಯೇ ಅಲ್ಲ ಎಂಬುದು ಇಲ್ಲಿಯ ನಿಲವು.

ಹೀಗೆಯೇ ನಮ್ಮ ಶರೀರಸೌಂದರ್ಯ, ಶರೀರಸುಖ, ಆಸ್ತಿ–ಅಂತಸ್ತುಗಳು – ಹೀಗೆ ಎಲ್ಲ ಬಗೆಯ ಲೌಕಿಕ ಸುಖ–ಸಂತೋಷ–ಸಾಧನೆಗಳನ್ನೂ ಇಲ್ಲಿ ನಿರಾಕರಿಸಿ, ಕೇವಲ ಶ್ರೀಕೃಷ್ಣನ ಭಕ್ತಿಯೊಂದನ್ನೇ ಎತ್ತಿಹಿಡಿಯಲಾಗಿದೆ.

ನ ಭೋಗೇ ನ ಯೋಗೇ ನ ವಾ ವಾಜಿರಾಜೌ

ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್‌ ।

ಯಶೋದಾಕಿಶೋರೇ ಮನೋ ವೈ ನ ಲಗ್ನಂ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್‌ ।।

‘ಭೋಗದಲ್ಲಾಗಲೀ ಯೋಗದಲ್ಲಾಗಲೀ ಉತ್ತಮವಾದ ಅಶ್ವಗಳಲ್ಲಾಗಲೀ ಪ್ರಿಯತಮೆಯ ಸಾಮೀಪ್ಯದಲ್ಲಿಯಾಗಲೀ ಸಂಪತ್ತಿನಲ್ಲಾಗಲೀ ಮನಸ್ಸು ನೆಡದೆ ಇರಬಹುದು. ಆದರೆ ಯಶೋದೆಯ ಮಗನಾದ ಶ್ರೀಕೃಷ್ಣನಲ್ಲಿಯೂ ಮನಸ್ಸು ನೆಡದಿದ್ದರೆ ಅವುಗಳಿಂದ ಏನು ಪ್ರಯೋಜನ?’

ಶರೀರಂ ಸುರೂಪಂ ತತೋ ವೈ ಕಲತ್ರಂ

ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್‌ ।

ಯಶೋದಾಕಿಶೋರೇ ಮನೋ ವೈ ನ ಲಗ್ನಂ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್‌ ।।

‘ಸುಂದರವಾದ ಶರೀರ, ಸುಂದರಿಯಾದ ಹೆಂಡತಿ, ಅಪರಿಮಿತವಾದ ಕೀರ್ತಿ, ಮೇರುಪರ್ವತಕ್ಕೆ ಸಮನಾದ ಸಂಪತ್ತು – ಇವೆಲ್ಲವೂ ಇದ್ದರೂ ಯಶೋದೆಯ ಮಗನಾದ ಶ್ರೀಕೃಷ್ಣನಲ್ಲಿ ಮನಸ್ಸು ನೆಡದಿದ್ದರೆ ಅವುಗಳಿಂದ ಏನು ತಾನೆ ಪ್ರಯೋಜನ?‘

ಭಕ್ತಿಯೇ ನಿಜವಾದ ಸಾಮ್ರಾಜ್ಯ ಎಂಬುದನ್ನು ಸ್ಥಾಪಿಸುತ್ತಿವೆ, ಈ ಪದ್ಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT